Home ಅಂಕಣ ಮೀಸಲು ಕ್ಷೇತ್ರದಲ್ಲಿ ಗೆದ್ದ ಮಾತ್ರಕ್ಕೆ ದಲಿತ ಪ್ರತಿನಿಧಿಯಾಗಲಾರರು!! ಸಚಿವ ಬಸವಂತಪ್ಪ ಮತ್ತು ದಲಿತರ ಸ್ವಾಭಿಮಾನಿ ರಾಜಕಾರಣ

ಮೀಸಲು ಕ್ಷೇತ್ರದಲ್ಲಿ ಗೆದ್ದ ಮಾತ್ರಕ್ಕೆ ದಲಿತ ಪ್ರತಿನಿಧಿಯಾಗಲಾರರು!! ಸಚಿವ ಬಸವಂತಪ್ಪ ಮತ್ತು ದಲಿತರ ಸ್ವಾಭಿಮಾನಿ ರಾಜಕಾರಣ

0

“..ಕೆ.ಎಸ್ ಬಸವಂತಪ್ಪ ಅವರು ತಮಗೆ ಆಯೋಜಿಸಿದ್ದ ಅಭಿನಂದನಾ ಸಮರಂಭದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಲ್ಲಿ ದೀನವಾಗಿ ಬೇಡಿಕೊಂಡ ದೃಶ್ಯ ನೋಡಿದಾಗ ಅಂಬೇಡ್ಕರ್ ಅವರು ಹೇಳಿದ ಈ ಮೇಲಿನ ಮಾತುಗಳು ನೆನಪಾದವು..” ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್ ಅವರ ಬರಹದಲ್ಲಿ

ಅವತ್ತಿನ ಮದ್ರಾಸ್ ಅಸೆಂಬ್ಲಿಗೆ ದಲಿತರ ನೇತಾರ ಎಂ ಸಿ ರಾಜಾ ಅವರನ್ನು ದಲಿತರ ಪ್ರತಿನಿಧಿಯಾಗಿ ನೇಮಿಸಿಕೊಳ್ಳಲಾಗುತ್ತದೆ. ರಾಜಾ ಅವರು ಅಸೆಂಬ್ಲಿಯಲ್ಲಿ ಬಜೆಟ್ ಬಗ್ಗೆ ಮಾತನಾಡುವಾಗ ತಮ್ಮನ್ನು ಅಸೆಂಬ್ಲಿಗೆ ನೇಮಕ ಮಾಡಿಕೊಂಡಿದ್ದಕ್ಕಾಗಿ ಸರ್ಕಾರಕ್ಕೆ ವಿನಮ್ರವಾಗಿ ಅಭಿನಂದನೆ ಸಲ್ಲಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸುವ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಜಾ ಅವರು ಸರ್ಕಾರಕ್ಕೆ ಧನ್ಯವಾದಗಳನ್ನೇಕೆ ಸಲ್ಲಿಸುತ್ತಿದ್ದಾರೆ ಎನ್ನುವುದು ನನಗೆ ತಿಳಿಯಲಿಲ್ಲ. ಅಸೆಂಬ್ಲಿಯಲ್ಲಿ ೧೪೪ ಸದಸ್ಯರಿದ್ದಾರೆ. ಅದರಲ್ಲಿ ಒಂದೇ ಒಂದು ಜಾಗವನ್ನು ದಲಿತರಿಗೆ ಬಿಟ್ಟುಕೊಟ್ಟು ಸರ್ಕಾರ ಔದಾರ್ಯ ತೋರಿಸುತ್ತಿದೆ ಎಂದು ನನಗೇನೂ ಅನಿಸುವುದಿಲ್ಲ. ತುಲನೆ ಮಾಡಿದಾಗ ಸರ್ಕಾರ ನಮಗೇನೂ ಕೊಟ್ಟಿಲ್ಲ ಎನ್ನುವುದರ ಬಗ್ಗೆ ಯಾವುದೇ ದಲಿತರಿಗೆ ದುಃಖವಾಗದಿರದು. ನಮ್ಮ ಪ್ರತಿನಿಧಿಗಳು ದಲಿತರ ಹಕ್ಕು, ನ್ಯಾಯಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಸರ್ಕಾರಕ್ಕೆ ಅಭಾರ ವ್ಯಕ್ತಪಡಿಸುವುದರಲ್ಲಿ ಮುಳುಗಿ ಹೋದರೆ ಆಗುತ್ತಿರುವ ಅನ್ಯಾಯವನ್ನು ಯಾರಲ್ಲಿ ಹೇಳುವುದು?

ನಮ್ಮ ಪ್ರತಿನಿಧಿಗಳೇ ತಮ್ಮ ಹಕ್ಕಿಗಾಗಿ ಸರ್ಕಾರದೊಂದಿಗೆ ವಾದ ಮಾಡಬೇಕು. ನಮ್ಮವರ ಏಳಿಗೆಗೆ ನಾವು ಆರಿಸಲ್ಪಟ್ಟಿದ್ದೆವೆಯೇ ಹೊರತು ಸರ್ಕಾರವನ್ನು ಸಂತೋಷ ಪಡಿಸಲು ಅಲ್ಲ, ನಮ್ಮನ್ನು ಸರ್ಕಾರ ಆರಿಸಿ ಯಾವುದೇ ಉಪಕಾರ ಮಾಡಿಲ್ಲ. ಅದು ನಮ್ಮ ಹಕ್ಕು ಅನ್ನವು ಅರಿವು ಪ್ರತಿಯೊಬ್ಬ ಪ್ರತಿನಿಧಿಗೂ ಇರಬೇಕು ಎಂದು ಪ್ರತಿಪಾದಿಸುತ್ತಾರೆ.

ಇದೇ ಮೊದಲ ಬಾರಿಗೆ ಶಾಸಕರಾಗಿ ಸಚಿವರೂ ಆಗಿರುವ ಮಾಯಕೊಂಡ ದಲಿತ ಮೀಸಲು ಕ್ಷೇತ್ರದ ಕೆ.ಎಸ್ ಬಸವಂತಪ್ಪ ಅವರು ತಮಗೆ ಆಯೋಜಿಸಿದ್ದ ಅಭಿನಂದನಾ ಸಮರಂಭದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಲ್ಲಿ ದೀನವಾಗಿ ಬೇಡಿಕೊಂಡ ದೃಶ್ಯ ನೋಡಿದಾಗ ಅಂಬೇಡ್ಕರ್ ಅವರು ಹೇಳಿದ ಈ ಮೇಲಿನ ಮಾತುಗಳು ನೆನಪಾದವು.

ದಾವಣಗೆರೆಯಲ್ಲಿ ನನ್ನದೇನೂ ನಡೆಯುವುದಿಲ್ಲ. ನಿಮ್ಮ ಕೈ ಕಾಲು ಮುಗಿಯುತ್ತೇನೆ. ಸಾಯುವವೆರೆಗೂ ನಿಮ್ಮ ಜೊತೆ ಇರುತ್ತೇನೆ…..ಎಂದು ಅಂಗಲಾಚಿಕೊಳ್ಳುವುದನ್ನು ನೋಡಿದಾಗ ಸ್ವತಂತ್ರ ಭಾರತದಲ್ಲಿ ಜೀತಪಳೆಯುಳಿಕೆಯೊಂದರ ಪ್ರಲಾಪದಂತೆ ಕಂಡು ಬಂದಿತು.

ಬಸವಂತಪ್ಪ ನವರು ಸಂವಿಧಾನದ ಫಲವಾಗಿ ಸಚಿವರಾಗಿದ್ದಾರೆ. ಅದು ಅವರ( ದಲಿತರ) ಹಕ್ಕು . ಯಾರ ಮರ್ಜಿಯೂ ಅಲ್ಲ. ಅದಕ್ಕಾಗಿ ಬಸವಂತಪ್ಪ ಅವರು ಯಾರ ಅಡಿಯಾಳು ಆಗಿಯೂ ಇರಬೇಕಾಗಿಲ್ಲ. ರಾಜಕೀಯ ಅನಿವಾರ‍್ಯತೆಗಳು (Political Compulsion) ಏನೇ ಇದ್ದರೂ ದಲಿತರ ಪ್ರಾತಿನಿಧ್ಯ ಎನ್ನುವುದನ್ನು ಯಾರದ್ದೋ ಭಿಕ್ಷೆ ಎಂದು ಯಾಕಾಗಿ ಭಾವಿಸಬೇಕು. ? ಬಹುಶಃ ಬಸವಂತಪ್ಪ ಅವರಿಗೆ ಅಂಬೇಡ್ಕರ್ ಅರ್ಥವಾಗದಿರಬಹುದು ಅಥವಾ ಜಾತಿವ್ಯವಸ್ಥೆ ನೆಲೆಗೊಳಿಸಿರುವ ಜೀತ ಮನೋಭಾವದಿಂದ ಹೊರಬರಲಾಗದ ಅಸಹಾಯಕತೆಯೂ ಇರಬಹುದು. ಇದು ಅವರಿಗೆ ಮತ ಹಾಕಿದ ತನ್ನ ಜನರ ವಿಶ್ವಾಸವನ್ನು ಛಿದ್ರಗೊಳಿಸಿದಂತೆ. ಮತ್ತು ದಲಿತ ಸ್ವಾಭಿಮಾನದ ಮನಸ್ಥೈರ್ಯವನ್ನು ಕುಂದಿಸಿದಂತೆ.

ಅಂಬೇಡ್ಕರ್ ನಿರೂಪಿಸಿದ ದಲಿತ ರಾಜಕೀಯ ಪ್ರಾತಿನಿಧ್ಯ ಪೂನಾ ಒಪ್ಪಂದ ಎಂಬ ಮಹಾವಂಚನೆಯಲ್ಲಿ ಕೊಚ್ಚಿ ಹೋಗಿದ್ದು ನಿಜ, ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಇದ್ದಿದ್ದೇ ಅಗಿದ್ದರೆ ಬಸವಂತಪ್ಪ ಎಂಬ ದಲಿತಪ್ರತಿನಿಧಿ ಯಾವುದೇ ಬಲಾಢ್ಯ ಜಾತಿಯ ಮುಂದೆ ಹೀಗೆ ಗೋಗೆರೆಯ ಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ.

ದಲಿತರಿಗೆ ಪ್ರತ್ಯೇಕ ಮೀಸಲು ಕ್ಷೇತ್ರ ಹಿಂದೂ ಸಮಾಜದ ಒಗ್ಗಟ್ಟಿಗೆ ಅಡ್ಡವಾಗುತ್ತದೆ ಎಂದು ಅದನ್ನು ವಿರೋಧಿಸಿ ಜೈಲಿನಲ್ಲಿ ಉಪವಾಸ ಕುಳಿತಿದ್ದ ಗಾಂಧಿಯ ಕಣ್ಣಲ್ಲಿ ಕಣ್ಣಿಟ್ಟು ಅಂಬೇಡ್ಕರ್ ಅವರು ನನ್ನ ಜನರ ಜೀವಕ್ಕಿಂತ ನಿಮ್ಮ ಜೀವ ಈ ದೇಶಕ್ಕೆ ಅಮೂಲ್ಯವಾದದ್ದು ಎಂದು ತಮ್ಮ ನಿಲುವನ್ನು ಬಿಟ್ಟು ಗಾಂಧಿ ಎಂಬ ಮಹಾತ್ಮನ ಆತ್ಮ ಸಾಕ್ಷಿಗೆ ತಿವಿದಿದ್ದರು. ಅವತ್ತೇ ಬಲಾಢ್ಯ ಜಾತಿ ರಾಜಕಾರಣ ದಲಿತ ಸ್ವಾಭಿಮಾನಿ ರಾಜಕಾರಣವನ್ನು ಬಲಿ ತೆಗೆದುಕೊಂಡಿತ್ತು.

ಪೂನಾ ಒಪ್ಪಂದದ ಫಲವಾಗಿ ದಲಿತರಿಗೆ ಎಲ್ಲಾ ಜಾತಿಯರೂ ಮತ ನೀಡಬಹುದಾದ ಮೀಸಲು ಕ್ಷೇತ್ರಗಳು ನಿಗದಿಯಾದವು ನಿಜ, ಆದರೆ ಈ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗುವ ದಲಿತರು ವಾಸ್ತವವಾಗಿ ದಲಿತರ ಪ್ರತಿನಿಧಿಯಾಗಿ ಉಳಿದುಕೊಳ್ಳಲಾಗುವುದಿಲ್ಲ ಎಂದು ಅವತ್ತೇ ಅಂಬೇಡ್ಕರ್ ಗುರುತಿಸಿದ್ದರು. ಮೀಸಲು ಕ್ಷೇತ್ರದಲ್ಲಿ ಗೆದ್ದ ದಲಿತರ ಪಾಡು ಏನಾಗಿದೆ ಎನ್ನುವುದಕ್ಕೆ ಬಸವಂತಪ್ಪನವರು ತಾಜಾ ಉದಾಹರಣೆಯಾಗಿದ್ದಾರೆ.

ಎಂ. ಸಿ ರಾಜಾ ಅವರ ವರ್ತನೆ ಬಗ್ಗೆ ಅಂಬೇಡ್ಕರ್ ಅವತ್ತು ಹೇಳಿದ ಮಾತೆ ಇವತ್ತು ನಮ್ಮ ಸಚಿವ ಕೆ.ಎಸ್ ಬಸವಂತಪ್ಪ ಅವರಿಗೂ ಅನ್ವಯವಾಗುತ್ತದೆ. ಬಸವಂತಪ್ಪನವರ ಅಸಹಾಯಕತೆ ಈ ಜಾತಿಸಮಾಜಕ್ಕೆ ಅನೇಕ ಪ್ರಶ್ನೆಗಳನ್ನು ಎಸೆದಿದ್ದರೆ, ತನ್ನದೆ ದಲಿತ ಸಮುದಾಯದ ಆತ್ಮ ಸ್ಥೈರ್ಯವನ್ನು ಕದಡಿದಂತಿದೆ.

You cannot copy content of this page

Exit mobile version