Home ಅಂಕಣ ಕನ್ನಡನಾಡಿನಲ್ಲಿ ಜಿಲ್ಲೆಗೊಂದು ಬೇಕಿದೆ ಸಾರ್ವಜನಿಕ ಕಾನೂನು ಕಾಲೇಜುಗಳು

ಕನ್ನಡನಾಡಿನಲ್ಲಿ ಜಿಲ್ಲೆಗೊಂದು ಬೇಕಿದೆ ಸಾರ್ವಜನಿಕ ಕಾನೂನು ಕಾಲೇಜುಗಳು

0

“..ಸರ್ಕಾರದಿಂದ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಮಾತ್ರವಲ್ಲದೆ ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜುಗಳೂ ಮಂಜೂರಿಗುತ್ತಿದೆ, ಆದರೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಕಟ್ಟಲು ಯಾಕೆ ಮುಂದಾಗುತ್ತಿಲ್ಲ?” ಕಾನೂನು ವಿದ್ಯಾರ್ಥಿ ಸಚಿನ್ ಒಕ್ಕಲಿಗ ಅವರ ಬರಹದಲ್ಲಿ

ಹೌದು ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು (Government Medical Colleges) ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ ಜೊತೆಗೆ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಸಹ ಕಟ್ಟಿದ್ದಾರೆ ಕಟ್ಟುತ್ತಾ ಇದ್ದಾರೆ, ಆದರೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಕಟ್ಟಲು ಯಾಕೆ ಮುಂದಾಗುತ್ತಿಲ್ಲ ಕರ್ನಾಟಕ ಸರ್ಕಾರ ಇದರ ಒಳ ಗುಟ್ಟೇನು?

ಇನ್ನು ಕನ್ನಡನಾಡಿನ ಒಳಗೆ ಪ್ರಸ್ತುತ ಸುಮಾರು 108 ರಿಂದ 120 ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಇದರಲ್ಲಿ ಸರಿಸುಮಾರು 19 ಕ್ಕೂ ಹೆಚ್ಚು ಸರ್ಕಾರಿ/ಅನುದಾನಿತ ಕಾಲೇಜುಗಳು ಹಾಗೂ 100 ಕ್ಕೂ ಹೆಚ್ಚು ಖಾಸಗಿ ಕಾನೂನು ಕಾಲೇಜುಗಳು ಸೇರಿದ್ದು, ಜೊತೆಗೆ ಇಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ವ್ಯಾಪ್ತಿಯಗೆ ಬರುವ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಪ್ರಸ್ತುತ ಕಾನೂನು ವಿಷಯಗಳನ್ನು ಕಲಿತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 26,000 ಕ್ಕೂ ಹೆಚ್ಚು ಇದೆ. ಇನ್ನು ಇತರ ಪ್ರಮುಖ ರಾಷ್ಟ್ರೀಯ ಕಾನೂನು ಶಾಲೆಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಒಳಗೊಂಡರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಕನ್ನಡ ನಾಡಿನಲ್ಲಿ ಸಾರ್ವಜನಿಕ ಕಾನೂನು ಕಾಲೇಜುಗಳು ಯಾವ ಯಾವ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಅನ್ನೋದನ್ನ ನೋಡೋದಾದ್ರೆ, ಈಗಿರುವ 18 ರಿಂದ 20 ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಕೇವಲ 10 /12 ಜಿಲ್ಲೆಗಳಲ್ಲಿ ಇರಬಹುದೇನೋ ಆ ಜಿಲ್ಲೆಗಳು ಕೆಳಗಿನಂತಿವೆ.

  • ಬೆಂಗಳೂರು ನಗರ ಯೂನಿವರ್ಸಿಟಿ ಲಾ ಕಾಲೇಜು (University Law College – ULC): ಇದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿದೆ. ಇದು ರಾಜ್ಯದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸರ್ಕಾರಿ ಕಾನೂನು ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಬಹುದು ಜೊತೆಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಇದು ಭಾರತ ಸರ್ಕಾರದ ನೆರವಿನೊಂದಿಗೆ ಸ್ಥಾಪಿತವಾದ ದೇಶದ ನಂಬರ್ 1 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವಾಗಿದೆ ಎನ್ನಬಹುದು.
  • ಧಾರವಾಡ / ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆವರಣ (KSLU Campus): ಹುಬ್ಬಳ್ಳಿಯಲ್ಲಿರುವ ಈ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿಯೇ ಕಾನೂನು ಶಿಕ್ಷಣ ನೀಡಲಾಗುತ್ತದೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ (Karnatak University): ಧಾರವಾಡದಲ್ಲಿರುವ ಈ ಸರ್ಕಾರಿ ವಿಶ್ವವಿದ್ಯಾಲಯದ ಕಾನೂನು ವಿಭಾಗವೂ ಪ್ರಮುಖವಾಗಿದೆ ಎಂದು ಹೇಳಬಹುದು.
  • ಹಾಸನದಲ್ಲಿ ಸರ್ಕಾರಿ ಕಾನೂನು ಕಾಲೇಜು ಹಾಸನ, ಜೊತೆಗೆ ಸರ್ಕಾರಿ ಕಾನೂನು ಕಾಲೇಜು, ಹೊಳೆನರಸೀಪುರ ಮತ್ತು ಪಡುವಲಹಿಪ್ಪೆಯಲ್ಲೂ ಕಾಲೇಜ್ ಇದ್ದು ಕಾರ್ಯನಿರ್ವಹಿಸುತ್ತಿವೆ.
  • ಚಾಮರಾಜನಗರ ಸರ್ಕಾರಿ ಕಾನೂನು ಕಾಲೇಜು, ಚಾಮರಾಜನಗರದ ಸಂತೆಮರಹಳ್ಳಿ ರಸ್ತೆಯ ಬಳಿ ಈ ಕಾಲೇಜು ಕಾರ್ಯನಿರ್ವಹಿಸುತ್ತಿದೆ.
  • ಕೋಲಾರ ಸರ್ಕಾರಿ ಕಾನೂನು ಕಾಲೇಜು, ಕೋಲಾರ ಜಿಲ್ಲಾ ಕೇಂದ್ರದಲ್ಲೆ ಸರ್ಕಾರಿ ಕಾನೂನು ಕಾಲೇಜು ಲಭ್ಯವಿದೆ.
  • ರಾಮನಗರ ಸರ್ಕಾರಿ ಕಾನೂನು ಕಾಲೇಜು, ರಾಮನಗರ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ರಾಮನಗರದಲ್ಲೆ ಸರ್ಕಾರಿ ಕಾನೂನು ಕಾಲೇಜು ಇದೆ.
  • ಮೈಸೂರು ಮೈಸೂರು ವಿಶ್ವವಿದ್ಯಾಲಯ ಕಾನೂನು ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದ (University of Mysore) ಮಾನಸಗಂಗೋತ್ರಿ ಆವರಣದಲ್ಲಿ ಸರ್ಕಾರಿ ಸ್ವಾಮ್ಯದ ಕಾನೂನು ಅಧ್ಯಯನ ಕೇಂದ್ರವಿದೆ.
  • ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಕಲಬುರಗಿಯ ಜ್ಞಾನಗಂಗಾ ಆವರಣದಲ್ಲಿರುವ ಕಾನೂನು ವಿಭಾಗದ ಮೂಲಕ ಸರ್ಕಾರಿ ಸೀಟುಗಳ ಅಡಿಯಲ್ಲಿ ಕಾನೂನು ಶಿಕ್ಷಣ ನೀಡಲಾಗುತ್ತಿದೆ.

ಇಲ್ಲಿ ಗಮನಿಸಬೇಕು ಇವುಗಳ ಹೊರತಾಗಿ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ (ಉದಾಹರಣೆಗೆ ಮಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ ಇತ್ಯಾದಿ) ಸರ್ಕಾರಿ ಅನುದಾನಿತ (Government Aided) ಮತ್ತು ಖಾಸಗಿ ಕಾನೂನು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವೆಲ್ಲವೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (KSLU) ಸಂಯೋಜನೆಗೊಂಡು ಕಾಯನಿರ್ವಹಿಸುತ್ತಿವೆ.

ಇನ್ನು ರಾಜ್ಯದ ಎಲ್ಲಾ 18-19 ಸಾರ್ವಜನಿಕ ಕಾನೂನು ಸಂಸ್ಥೆಗಳಲ್ಲಿ (ಎಲ್ಲಾ ವರ್ಷಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ) ಪ್ರಸ್ತುತ ಅಂದಾಜು 5,000 ದಿಂದ 7, 000 ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕರ್ನಾಟಕದಲ್ಲಿ ಸಾರ್ವಜನಿಕ ವಲಯದ ಹೊರತಾಗಿ 100ಕ್ಕೂ ಹೆಚ್ಚು ಅನುದಾನಿತ (Aided) ಮತ್ತು ಖಾಸಗಿ (Private) ಕಾನೂನು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಬಹುಪಾಲು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಅಂದ್ರೆ ಸರಿ ಸುಮಾರು 20,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ.

ಯಾಕೆ ಹಿಂಗೇ ಕನ್ನಡನಾಡಿನಲ್ಲಿ ಸರ್ಕಾರಿ ಕಾನೂನು ಕಾಲೇಜುಗಳನ್ನು ಕಟ್ಟಲು ಯಾಕೆ ಹಿಂದೇಟು?? ಪ್ರಸ್ತುತ 3 ವರ್ಷದ ಎಲ್‌ಎಲ್‌ಬಿ (LLB) ಹಾಗೂ 5 ವರ್ಷದ ಇಂಟಿಗ್ರೇಟೆಡ್ ಕೋರ್ಸ್‌ಗಳಾದ (BA LLB, BBA LLB, BCom LLB) ಜೊತೆಗೆ LLM ಪದವಿಗಳನ್ನು ಪಡೆಯಲು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದು ಆದ್ರೆ ಸರ್ಕಾರ ಯಾಕೆ ಈ ಕಡೆ ಗಮನ ಹರಿಸುತ್ತಿಲ್ಲ.

ಗಮನಿಸಿ ಕರ್ನಾಟಕದಲ್ಲಿ ಕಾನೂನು ಕಾಲೇಜುಗಳು ಮತ್ತು ಕಾನೂನು ಶಿಕ್ಷಣವನ್ನು ನೇರವಾಗಿ ನಿಯಂತ್ರಿಸುವ ಮತ್ತು ಕಾರ್ಯನಿರ್ವಹಿಸುವ ಅಧಿಕಾರ “ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ” ಗೆ ಮಾತ್ರ ಇದ್ದು, ಉನ್ನತ ಶಿಕ್ಷಣ ಇಲಾಖೆ ಅಥವಾ ಬೇರೆ ಯಾವದೇ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವದಿಲ್ಲ. ಇನ್ನು ಇಂಡಿಯಾ ವಕೀಲರ ಪರಿಷತ್ತು (Bar Council of India – BCI) ಇದು ಒಕ್ಕೂಟ ಮಟ್ಟದಲ್ಲಿ ಕಾನೂನು ಶಿಕ್ಷಣದ ಗುಣಮಟ್ಟ ಮತ್ತು ಕಾಲೇಜುಗಳ ಮಾನ್ಯತೆಯನ್ನು ನಿರ್ಧರಿಸುವ ಅತ್ಯುನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ಇಂಡಿಯಾದಲ್ಲಿ ಅತಿ ಹೆಚ್ಚು ಸರ್ಕಾರಿ ಕಾನೂನು ಕಾಲೇಜುಗಳನ್ನು (Government Law Colleges) ಹೊಂದಿರುವ ರಾಜ್ಯ ಮಧ್ಯಪ್ರದೇಶ ಆಗಿದೆ. ಆದರೆ, ಕಾನೂನು ಶಿಕ್ಷಣವನ್ನು ವಿಕೇಂದ್ರೀಕರಿಸಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು ಅಥವಾ ಕಾನೂನು ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ತರ ಯೋಜನೆ ಕೈಗೊಂಡು ಜಾರಿಗೆ ತರುತ್ತಿರುವ ಪ್ರಮುಖ ರಾಜ್ಯಗಳೆಂದರೆ ತಮಿಳುನಾಡು ಮತ್ತು ರಾಜಸ್ಥಾನ. ತಮಿಳುನಾಡು ತನ್ನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಕಾನೂನು ಕಾಲೇಜುಗಳನ್ನು (Government Law Colleges) ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ಹೇಳಬಹುದು. ಆದ್ರೆ ಕನ್ನಡನಾಡಿನಲ್ಲಿ ನಮ್ಮ ಸರ್ಕಾರಗಳು ಯಾಕೆ ಮುಂದಾಗುತ್ತಿಲ್ಲ.

ಇನ್ನು ಸರ್ಕಾರಿ ಕಾನೂನು ಕಾಲೇಜು ದಾಖಲಾತಿ ಶುಲ್ಕ ನೋಡೂದಾದ್ರೆ 3 ವರ್ಷದ ಎಲ್‌ಎಲ್‌ಬಿ ಕೊರ್ಸ್ ಗೆ ಅಂದಾಜು ₹21,000 ರಿಂದ ₹30,000 ಇದೆ ಮತ್ತು 5 ವರ್ಷದ ಇಂಟಿಗ್ರೇಟೆಡ್ ಬಿ.ಎ. ಎಲ್‌ಎಲ್‌ಬಿ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಅನುಗುಣವಾಗಿ ಅಂದಾಜು ₹39,000 ದಿಂದ ₹50,000 ಮೊತ್ತದಷ್ಟು ಇದೆ. ಜೊತೆಗೆ ಎಸ್‌ಸಿ/ಎಸ್‌ಟಿ (SC/ST) ವಿದ್ಯಾರ್ಥಿಗಳು ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಸಂಪೂರ್ಣ ಶುಲ್ಕ ವಿನಾಯಿತಿ ಸೌಲಭ್ಯವಿರುತ್ತದೆ. ಆದ್ರೆ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ಶುಲ್ಕ ನೋಡೋದಾದ್ರೆ ಸರ್ಕಾರಿ ಕೋಟಾ (Government Quota)ದ ಸೀಟುಗಳನ್ನು ಪಡೆದರೆ ಮೆರಿಟ್ ಆಧಾರದ ಮೇಲೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದರೆ ವಾರ್ಷಿಕ 35,000 ರಿಂದ 1 ಲಕ್ಷದವರಿಗೂ ಇದೆ. ಇನ್ನು ಮ್ಯಾನೇಜ್‌ಮೆಂಟ್ ಕೋಟಾ (Management Quota)ದ ಸೀಟುಗಳನ್ನು ಪಡೆದರೆ ಅಂದ್ರೆ ನೇರವಾಗಿ ಕಾಲೇಜನ್ನು ಸಂಪರ್ಕಿಸಿ ಸೀಟು ಪಡೆದರೆ, ಕಾಲೇಜಿನ ಪ್ರತಿಷ್ಠೆಗೆ ಅನುಗುಣವಾಗಿ ವಾರ್ಷಿಕ ಶುಲ್ಕವು ₹1.5 ಲಕ್ಷದಿಂದ ₹ 3.5 ಲಕ್ಷದವರೆಗೆ ಇದೆ. (ಇದು ಪ್ರತಿಷ್ಠಿತ ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಅನುಗುಣವಾಗಿ ದಾಖಲಾತಿಯ ಶುಲ್ಕ ಇನ್ನೂ ಅತ್ಯಧಿಕವಾಗಿ ಇರುತ್ತದೆ ಎಂದು ಹೇಳಬಹುದು)

ಇನ್ನು ಮತ್ತೊಂದು ವಿವಿ ಯಾಕೆ ಬೇಕು? ಕರ್ನಾಟಕ ಸರ್ಕಾರ ಒಂದು ದೂರಾದೃಷ್ಟಿ ಇಲ್ಲದೆ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಕಾನೂನು ವಿಶ್ವವಿದ್ಯಾಲಯವನ್ನು (ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿಶ್ವವಿದ್ಯಾಲಯ) ಸ್ಥಾಪಿಸಲು ಪ್ರಸ್ತಾಪಿಸಿತ್ತು ಇದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ, ಉತ್ತರ ಕರ್ನಾಟಕದ ಕೆಲವು ಶಾಸಕರು ಇದನ್ನು ವಿರೋಧಿಸಿದ್ದು ಇದು ಒಳ್ಳೆಯ ನಡೆ. ಇನ್ನು 2009ರ ಕಾಯ್ದೆಯಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪಿತವಾಗಿರುವ ಕೆಎಸ್ಎಲ್‌ಯು ಇಡೀ ರಾಜ್ಯದ ಕಾನೂನು ಶಿಕ್ಷಣವನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಹೊಸ ವಿವಿ ತೆರೆಯುವ ಬದಲು, ಈಗಿರುವ ಕೆಎಸ್ಎಲ್‌ಯುಗೆ ಅಗತ್ಯ ಮೂಲಸೌಕರ್ಯ, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವುದರಿಂದ ಹೆಚ್ಚು ಅನುಕೂಲವಾಗುತ್ತದೆ ಜೊತೆಗೆ ​ವಿಕೇಂದ್ರೀಕರಣ ಮತ್ತು ನಂಜುಂಡಪ್ಪ ವರದಿಯನ್ವಯ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿ ಸ್ಥಾಪಿಸಿರುವುದು ಪ್ರಾದೇಶಿಕ ಅಸಮತೋಲನ ನಿವಾರಣೆಯ ನಂಜುಂಡಪ್ಪ ಸಮಿತಿಯ ಶಿಫಾರಸಿಗೆ ಪೂರಕವಾಗಿದೆ ಎಂದೇ ಹೇಳಬಹುದು. ಇನ್ನು ಬೆಂಗಳೂರಿನಲ್ಲಿ ಮತ್ತೊಂದು ವಿವಿ ಸ್ಥಾಪಿಸಿದರೆ ಶೈಕ್ಷಣಿಕ ಕೇಂದ್ರೀಕರಣ ಹೆಚ್ಚಾಗುವ ಜೊತೆಗೆ ಕಟ್ಟಡ, ಭೂಮಿ, ಸಿಬ್ಬಂದಿ ಹಾಗೂ ಆಡಳಿತಾತ್ಮಕ ವ್ಯವಸ್ಥೆಗೆ ಸರ್ಕಾರದ ಮೇಲೆ ಅನಗತ್ಯ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದೇ ಹೇಳಬಹುದು.

ಒಟ್ಟಾರೆಯಾಗಿ ನಾನು ಹೇಳೋದೇನಂದ್ರೆ ಇನ್ನೊಂದು ವಿವಿ ಕಟ್ಟುವ ಬದಲು ಅಥವಾ ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವುದನ್ನು ಬಿಟ್ಟು, ಕನ್ನಡನಾಡಿನ ಪ್ರತಿಯೊಂದು ಜಿಲ್ಲೆಗೆ ಒಂದೊಂದು ಸಾರ್ವಜನಿಕ ಕಾನೂನು ಕಾಲೇಜುಗಳನ್ನು ಕಟ್ಟಲು ಸರ್ಕಾರ ಮುಂದಾಗಬೇಕು, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕಾನೂನು ವಿಷಯಗಳನ್ನು ಅಭ್ಯಾಸಿಸಲು ವಿದ್ಯಾರ್ಥಿಗಳು ಹೆಚ್ಚು ಉತ್ಸಕವಾಗಿದ್ದು, ಹೆಚ್ಚೆಚ್ಚು ವಿದ್ಯಾರ್ಥಿಗಳು ಕಾನೂನು ವಿಷಯಗಳನ್ನು ಅಭ್ಯಾಸ ಮಾಡಲು ಮುಂದಾಗುತ್ತಿದ್ದಾರೆ ಆದರೆ ಆಕಾಂಕ್ಷಿಗಳಿಗೆ ಸರಿಯಾದ ಮತ್ತು ಸ್ಥಳೀಯವಾಗಿ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಕಾನೂನು ಕಾಲೇಜುಗಳಿಲ್ಲದೆ ಹಾಗೂ ಖಾಸಗಿ ಕಾಲೇಜುಗಳಿಗೆ ದುಬಾರಿ ಶುಲ್ಕವನ್ನು ಪಾವತಿ ಮಾಡಲು ಸಾಧ್ಯವಾಗದೇ ಎಷ್ಟೋ ಆಕಾಂಕ್ಷಿಗಳು ಕಾನೂನು ವಿಷಯಗಳನ್ನು ಕಲಿಯಲು ಹಿಂದೇಟು ಹಾಕಿ ಪರ್ಯಾಯ ಆಯ್ಕೆಗಳನ್ನು ಹುಡುಕಿಕೊಳ್ಳುತ್ತಿದ್ದಾರೆ, ಮುಂದುವರೆದು ಎಷ್ಟು ವಿದ್ಯಾರ್ಥಿಗಳು ಸರಿಯಾದ ಸಾರ್ವಜನಿಕ ಕಾನೂನು ಕಾಲೇಜುಗಳಿಲ್ಲದ ಕಾರಣದಿಂದ ಖಾಸಗಿ ಕಾನೂನು ಕಾಲೇಜುಗಳಿಗೆ ದಾಖಲಾತಿಯನ್ನು ಪಡೆದು, ಅಲ್ಲಿನ ದುಬಾರಿ ಶುಲ್ಕಗಳನ್ನು ಪಾವತಿಸದೆ ಅಥವಾ ಪಾವತಿ ಮಾಡಲು ಸಾಧ್ಯವಿಲ್ಲದ ಎಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಕಾನೂನು ಶಿಕ್ಷಣವನ್ನು ಸಹ ಮೆಡಿಕಲ್ ಶಿಕ್ಷಣದಂತೆಯೇ ಒಂದು ದೊಡ್ಡ ದುಡ್ಡಿನ ದಂಧೆಯಾಗಿ ಪರಿವರ್ತಿಸಿದ್ದಾರೆ, ಇದಕ್ಕೆ ಪೂರಕವಾಗಿ ನಮ್ಮ ರಾಜಕಾರಣಿಗಳ ಮತ್ತು ಸರ್ಕಾರಗಳು ಅವರುಗಳಿಗೆ ಬೆನ್ನೆಲುಬುವಾಗಿ ನಿಂತಿದ್ದಾರೆ. ಜೊತೆಗೆ ಹೆಚ್ಚಿನ ಖಾಸಗಿ ಕಾಲೇಜುಗಳು ರಾಜಕಾರಣಿಗಳು ಮತ್ತು ಅವರ ಸಂಬಂಧಿಗಳು ಮತ್ತು ತಮತಮ್ಮ ಪಕ್ಷದ ಕಾರ್ಯಕರ್ತರು ಎನ್ನುವ ಉದ್ಯಮಿಗಳ ಹೆಸರಿನಲ್ಲಿ ನಡೆಸಲ್ಪಡುತ್ತಿರುವ ಕಾರಣದಿಂದಲೇ ಸಾರ್ವಜನಿಕ ಕಾನೂನು ಕಾಲೇಜುಗಳನ್ನು ಹೆಚ್ಚೆಚ್ಚು ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 543 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು (BNS/IPC ಮತ್ತು ವಿಶೇಷ ಸ್ಥಳೀಯ ಕಾನೂನುಗಳ ಅಡಿಯಲ್ಲಿ) ದಾಖಲಾಗುತ್ತವೆ. ಇನ್ನು 2024 ರ ಪೂರ್ಣ ವರ್ಷದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು 1,98,331 ಪ್ರಕರಣಗಳು ದಾಖಲಾಗಿದ್ದವು ಇವು ದಿನ ದಿನ ಕಳೆದಂತೆ ಹೆಚ್ಚಾಗುತಿದ್ದು ಅದರಲ್ಲೂ ಹಿಂಸಾತ್ಮಕ ಅಪರಾಧಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ಮೇಲಿನ ಅಪರಾಧಗಳು, ಸೈಬರ್ ಕ್ರೈಮ್ ಹಾಗೂ ಇನ್ನಿತರ ಅಪರಾಧಗಳು ಹೆಚ್ಚಾಗುತ್ತಿದ್ದು, ಪ್ರಸ್ತುತ ಕಾನೂನು ವಿಷಯಗಳನ್ನು ಪೂರೈಸಿರುವ ವಕೀಲರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಅದ್ರಿಂದ ಸರ್ಕಾರ ಒಳ್ಳೆಯ ಮತ್ತು ಕಾನೂನಿನ ವಿಷಯಗಳಲ್ಲಿ ಹೆಚ್ಚು ಪರಿಣಿತಿ ಹೊಂದಿರುವ ವಕೀಲರನ್ನು ತಯಾರು ಮಾಡಲು ಅಥವಾ ಪಡೆಯಲು ಹೆಚ್ಚೆಚ್ಚು ಸ್ಥಳೀಯ ಮಟ್ಟದಲ್ಲಿ ಅಥವಾ ಜಿಲ್ಲಾ ಕೇಂದ್ರದಲ್ಲಾದರೂ ಸಾರ್ವಜನಿಕ ಕಾಲೇಜುಗಳನ್ನು ಕಟ್ಟುವ ಮೂಲಕ ಕಡಿಮೆ ದರದಲ್ಲಿ ಕಾನೂನು ವಿಷಯಗಳನ್ನು ಕಲಿಯಲು ಆಸಕ್ತಿ ತೋರುವ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ನಿರ್ಮಿಸಿ ಕೊಡಬೇಕಿದೆ.

ಇನ್ನು ಯಾಕೆ ಜಿಲ್ಲೆಗೊಂದು ಸಾರ್ವಜಿನಿಕ ಕಾನೂನು ಕಾಲೇಜು ಬೇಕು ಅಂದ್ರೆ ಸಾರ್ವಜನಿಕ ಕಾನೂನು ಕಾಲೇಜುಗಳಿಂದ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣವನ್ನು ಸುಲಭವಾಗಿ ತಲುಪಿಸಲು ಇದು ಅತ್ಯಗತ್ಯವಾಗಿರುತ್ತದೆ, ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶ ಸಿಗುತ್ತದೆ, ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆ ಆಗುವ ಮೂಲಕ ಸ್ಥಳೀಯ ಮಟ್ಟದಲ್ಲಿ ಕಾನೂನು ಪದವೀಧರರ ಸಂಖ್ಯೆ ಹೆಚ್ಚಾದಾಗ, ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಸಾರ್ವಜನಿಕರಿಗೆ ಸ್ಥಳೀಯ ಭಾಷೆಯಲ್ಲೇ ಸುಲಭವಾಗಿ ಕಾನೂನು ನೆರವು ದೊರೆಯುತ್ತದೆ. ಇದು ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ ಕಾನೂನು ಜಾಗೃತಿ ಮೂಡಿಸುವಿಕೆ ಕಾರ್ಯಕ್ರಮಗಳನ್ನು ಸರ್ಕಾರಿ ಕಾನೂನು ಕಾಲೇಜುಗಳು ಆಯಾ ಆಯಾ ಜಿಲ್ಲೆಗಳ ಮೂಲಕ ಹಳ್ಳಿಗಳ ಮಟ್ಟದಲ್ಲಿ ಜನರಿಗೆ ಕಾನೂನು ಹಕ್ಕುಗಳು, ಮಹಿಳಾ ಸುರಕ್ಷತೆ ಮತ್ತು ಗ್ರಾಹಕ ಹಕ್ಕುಗಳ ಸೇರಿದಂತೆ ಬೇರೆ ಕಾನೂನಿನ ಅರಿವು ಮೂಡಿಸಬಹುದು. ಇನ್ನು ಮಾತೃಭಾಷೆ(ತಾಯಿನುಡಿ)ಯಲ್ಲಿ ಕಾನೂನು ಶಿಕ್ಷಣಕ್ಕೆ ಉತ್ತೇಜನ ಸಿಗುತ್ತದೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಕಾಲೇಜುಗಳಿದ್ದರೆ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಾನೂನು ಕಲಿಯಲು ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದೇ ಹೇಳಬಹುದು.

ಒಟ್ಟಾರೆ ಕನ್ನಡನಾಡಲ್ಲಿ ಇನ್ನೊಂದು ಪ್ರತ್ಯೇಕ ವಿವಿ ಯಾಕೆ ಬೇಕು?? ಜಿಲ್ಲೆಗೊಂದು ಬೇಕು ಸಾರ್ವಜನಿಕ ಕಾನೂನು ಕಾಲೇಜು, ಅಷ್ಟೇ.

You cannot copy content of this page

Exit mobile version