Home Uncategorized ಇಂದು ಜೋಕ್ ಹೇಳುವ ದಿನವಂತೆ, ಬನ್ನಿ ಜೊತೆಯಾಗಿ ನಗೋಣ

ಇಂದು ಜೋಕ್ ಹೇಳುವ ದಿನವಂತೆ, ಬನ್ನಿ ಜೊತೆಯಾಗಿ ನಗೋಣ

0

ಬದುಕಿನ ಹಾದಿಯಲ್ಲಿ ಸಾವಿರಾರು ಚಿಂತೆಗಳು, ಕೆಲಸದ ಒತ್ತಡ ಮತ್ತು ಯಾಂತ್ರಿಕೃತ ಜೀವನಶೈಲಿಯಲ್ಲಿ ನಾವೆಲ್ಲರೂ ಸಿಲುಕಿ ಒದ್ದಾಡುತ್ತಿದ್ದೇವೆ. ಮುಖದಲ್ಲಿ ಮಂದಹಾಸ ಮಾಯವಾಗಿ, ಗಂಟೆ ಗಟ್ಟಲೆ ಮೊಬೈಲ್ ಪರದೆ ಉಜ್ಜುತ್ತಾ ನಿದ್ದೆಗೆ ಜಾರುವ ಈ ಕಾಲದಲ್ಲಿ ನಗುವಿಗೆ ಜಾಗವೆಲ್ಲಿದೆ ಅಲ್ವಾ? ಆದರೆ, ವರ್ಷದ ಎಲ್ಲಾ ದಿನಗಳೂ ಜಂಜಾಟದಲ್ಲೇ ಕಳೆದುಹೋದರೂ, ನಾವೆಲ್ಲರೂ ಒಂದಷ್ಟು ಹೊತ್ತು ಮನಬಿಚ್ಚಿ ನಗಲೆಂದೇ ಮೀಸಲಾದ ಒಂದು ವಿಶೇಷ ದಿನವಿದೆ. ಅದೇ ಇಂದು (ಆಗಸ್ಟ್ 16) ಆಚರಿಸಲ್ಪಡುವ ‘ನ್ಯಾಷನಲ್ ಟೆಲ್ ಎ ಜೋಕ್ ಡೇ’.

ಏನಿದು “ನ್ಯಾಷನಲ್ ಟೆಲ್ ಎ ಜೋಕ್ ಡೇ”? ಎಲ್ಲಿಂದ ಆರಂಭವಾಯಿತು? ಯಾವ ದೇಶದ ಜನರು ಹೆಚ್ಚಾಗಿ ಹಾಸ್ಯಕ್ಕೆ ಪ್ರಾಧಾನ್ಯತೆ ಕೊಡ್ತಾರೆ, ಯಾವ ದೇಶದಲ್ಲಿ ಹಾಸ್ಯಕ್ಕೆ ಜಾಗವೆ ಇಲ್ಲ? ಬನ್ನಿ ಜಗತ್ತಿನ ಹಾಸ್ಯ ಲೋಕದ ಬಗೆಗಿನ ಒಂದು ಸಣ್ಣ ಇಣುಕುನೋಟ ಮಾಡೋಣ.

” ನ್ಯಾಷನಲ್ ಟೆಲ್ ಎ ಜೋಕ್ ಡೇ” ಯಾವುದೇ ಸರ್ಕಾರಿ ಅಥವಾ ಅಧಿಕೃತ ರಜಾ ದಿನವಲ್ಲದಿದ್ದರೂ, ಜಗತ್ತಿನಾದ್ಯಂತ ಲಕ್ಷಾಂತರ ಜನರಿಂದ ಅತ್ಯಂತ ಉತ್ಸಾಹದಿಂದ ಆಚರಿಸಲ್ಪಡುವ ಒಂದು ವಿಶಿಷ್ಟ ದಿನ. ಅಮೆರಿಕದಲ್ಲಿ ಹುಟ್ಟಿಕೊಂಡ ಈ ದಿನ ಕ್ರಮೇಣ ಜಗತ್ತಿನ ಮೂಲೆ ಮೂಲೆಗೂ ಹಬ್ಬಿದೆ. ಇದರ ಮುಖ್ಯ ಉದ್ದೇಶ ಕೇವಲ ಜೋಕ್ ಹೇಳುವುದಷ್ಟೇ ಅಲ್ಲ; ದೈನಂದಿನ ಒತ್ತಡವನ್ನು ಮರೆತು, ಪರಸ್ಪರ ನಗುವನ್ನು ಹಂಚಿಕೊಳ್ಳುವುದು, ಸಂಬಂಧಗಳನ್ನು ಗಟ್ಟಿಗೊಳಿಸುವುದು ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು.

ಹಾಸ್ಯದ ಇತಿಹಾಸ ಮತ್ತು ಆರಂಭವನ್ನು ನೋಡುವುದಾದರೆ, ಹಾಸ್ಯ ಎನ್ನುವುದು ಮಾನವ ನಾಗರಿಕತೆಯಷ್ಟೇ ಹಳೆಯದು. ಆದಿಮಾನವರು ಗುಹೆಯ ಗೋಡೆಗಳ ಮೇಲೆ ಬರೆದ ಚಿತ್ರಗಳಲ್ಲೂ ವ್ಯಂಗ್ಯ ಹಾಗೂ ಹಾಸ್ಯದ ಛಾಯೆಗಳಿದ್ದವು ಎನ್ನಲಾಗುತ್ತದೆ. ಗ್ರೀಕ್ ಮತ್ತು ರೋಮನ್ ಇತಿಹಾಸದಲ್ಲೂ ರಾಜರು ತಮ್ಮ ದರ್ಬಾರ್‌ನಲ್ಲಿ ಕೋಡಂಗಿ ಅಥವಾ ವಿದೂಷಕರನ್ನು ನೇಮಿಸಿಕೊಳ್ಳುತ್ತಿದ್ದರು. ಇವರು ರಾಜನ ಗಂಭೀರ ಸಭೆಗಳಲ್ಲೂ ತಮ್ಮ ಚುಟುಕಾದ ಮಾತುಗಳು ಹಾಗೂ ಹಾಸ್ಯಗಳ ಮೂಲಕ ರಾಜನನ್ನು ನಗಿಸುತ್ತಾ, ಕೆಲವೊಮ್ಮೆ ಸತ್ಯವನ್ನೂ ಧೈರ್ಯವಾಗಿ ಹೇಳುತ್ತಿದ್ದರು. ಇದು ರಾಜನ ಆಡಳಿತದಲ್ಲಿ ಏನಾದರೂ ವೈಫಲ್ಯಗಳಿದ್ದರೆ ಅವನ್ನು ಸರಿ ಮಾಡಲು ಒಂದು ರೀತಿಯಲ್ಲಿ ಧನಾತ್ಮಕವಾಗಿ ಕೆಲಸ ಮಾಡುತ್ತಿತ್ತು ಎಂದು ಹೇಳಬಹುದು. ಆದರೆ, ಇಂದು ಭಾರತದಲ್ಲಿ ಅಥವಾ ಜಗತ್ತಿನ ಸರ್ವಾಧಿಕಾರಿ ಆಡಳಿತ ಹೊಂದಿರುವ ರಾಷ್ಟ್ರಗಳಲ್ಲಿ ಹಾಸ್ಯದ ಮೂಲಕ ದೇಶದ ವಾಸ್ತವತೆಯನ್ನು ತೆರೆದಿಟ್ಟರೆ ಒಂದು ಕಾಮಿಡಿಯನ್ ಯಾವ ರೀತಿಯ ಶಿಕ್ಷೆ, ಸವಾಲುಗಳನ್ನು ಎದುರಿಸಬೇಕು ಎಂಬುವುದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ ಎಂದನಿಸುತ್ತದೆ.

“ನ್ಯಾಷನಲ್ ಟೆಲ್ ಎ ಜೋಕ್ ಡೇ” ಹೇಗೆ ಆರಂಭವಾಯಿತು ಎಂಬುವುದಕ್ಕೆ ನಿಖರವಾದ ಐತಿಹಾಸಿಕ ದಾಖಲೆಗಳಿಲ್ಲದಿದ್ದರೂ, 20 ನೇ ಶತಮಾನದ ಉತ್ತರಾರ್ಧದಲ್ಲಿ ಅಮೆರಿಕದಲ್ಲಿ ಡಿಜಿಟಲ್ ಮಾಧ್ಯಮ ಹಾಗೂ ರೇಡಿಯೋ ಪ್ರಸಾರಗಳು ಹೆಚ್ಚಾದಾಗ ಈ ರೀತಿಯ ದಿನಗಳ ಆಚರಣೆ ಮುಂಚೂಣಿಗೆ ಬಂತು. ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಯುಗದಲ್ಲಿ ಈ ದಿನಕ್ಕೆ ಇನ್ನಿಲ್ಲದ ಮಹತ್ವ ಹೆಚ್ಚಾಗಿ ಜಾಗತಿಕ ಹಬ್ಬವಾಗಿ ರೂಪುಗೊಂಡಿದೆ.

ಇನ್ನು ಹಾಸ್ಯದ ಪಿತಾಮಹರು ಯಾರು ಎಂಬುವುದರ ಬಗ್ಗೆ ಗಮನಹರಿಸಿದಾಗ
ಸಾಹಿತ್ಯ ಮತ್ತು ನಾಟಕ ಲೋಕದಲ್ಲಿ ಹಾಸ್ಯಕ್ಕೆ ವಿಧ್ಯುಕ್ತವಾಗಿ ಬುನಾದಿ ಹಾಕಿದವರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೊಫೇನ್ಸ್ ಅವರನ್ನು ಪ್ರಾಚೀನ ಹಾಸ್ಯದ ಪಿತಾಮಹ ಎಂದು ಕರೆಯಲಾಗುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲೇ ಅವರು ರಚಿಸಿದ ವ್ಯಂಗ್ಯ ನಾಟಕಗಳು ಅಂದಿನ ರಾಜಕೀಯ ಮತ್ತು ಸಾಮಾಜಿಕ ಪಿಡುಗುಗಳನ್ನು ಹಾಸ್ಯದ ಮೂಲಕ ತರಾಟೆಗೆ ತೆಗೆದುಕೊಂಡಿದ್ದವು. ಸಾಹಿತ್ಯ ಲೋಕದಲ್ಲಿ ನೋಡುವುದಾದರೆ ಬ್ರಿಟಿಷ್ ಲೇಖಕ ಮಾರ್ಕ್ ಟ್ವೈನ್ ಮತ್ತು ವಿಲಿಯಮ್ ಶೇಕ್ಸ್‌ಪಿಯರ್ ತಮ್ಮ ನಾಟಕಗಳಲ್ಲಿ ಶ್ರೇಷ್ಠ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ಹಾಸ್ಯ ಸಾಹಿತ್ಯದ ದಿಗ್ಗಜರೆನಿಸಿದ್ದಾರೆ.

ಕೆಲವು ದೇಶಗಳು ಹಾಸ್ಯವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿವೆ, ಇನ್ನು ಹಾಸ್ಯವನ್ನು ಹತ್ತಿರಕ್ಕೆ ಬಿಟ್ಟು ಕೊಡದ ದೇಶಗಳೂ ಇವೆ. ಇವುಗಳ ಬಗ್ಗೆ ನೋಡುವುದಾದರೆ ಬ್ರಿಟಿಷ್ ಹ್ಯೂಮರ್ ಜಗತ್ತಿನಲ್ಲಿ ಅತ್ಯಂತ ಹೆಸರುವಾಸಿ. ಇವರ ವ್ಯಂಗ್ಯ (Sarcasm) ಮತ್ತು ಒಣ ಹಾಸ್ಯ (Deadpan humor) ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಎಷ್ಟೇ ಗಂಭೀರ ಪರಿಸ್ಥಿತಿಯಿದ್ದರೂ ಬ್ರಿಟಿಷರು ತಮಾಷೆ ಮಾಡುವುದನ್ನು ಬಿಡುವುದಿಲ್ಲ.

ಇನ್ನು, ಐರ್ಲೆಂಡ್ ದೇಶದ ಜನರು ತಮ್ಮ ಜಾನಪದ ಕಥೆಗಳಲ್ಲಿ ಮತ್ತು ದೈನಂದಿನ ಜೀವನದಲ್ಲಿ ವಿಡಂಬನೆ ಹಾಗೂ ಹಾಸ್ಯಕ್ಕೆ ಅತ್ಯಂತ ಹೆಚ್ಚಿನ ಒತ್ತು ನೀಡುತ್ತಾರೆ. ಇಲ್ಲಿನ ಜನರಿಗೆ ನಗಿಸುವುದು ಒಂದು ಕಲೆ.

ಹಾಗೆಯೇ ಭಾರತ ಕೂಡ ಹಾಸ್ಯದ ವಿಚಾರಕ್ಕೆ ಬಂದರೆ ಒಂದು ಕೈ ಮೇಲೆಯೇ ಇದೆ. ಇಲ್ಲಿನ ಸಾಹಿತ್ಯ, ಕಲೆ, ನಾಟಕ, ಸಿನಿಮಾ ಎಂದು ಬಂದಾಗ ಹಲವು ದಿಗ್ಗಜರನ್ನು ಹುಟ್ಟುಹಾಕಿ ಇತಿಹಾಸ ಬರೆದಿದೆ.

ಕೆಲವು ದೇಶಗಳ ಸಂಸ್ಕೃತಿಗಳು ಮತ್ತು ಸಾರ್ವಜನಿಕವಾಗಿ ಅಥವಾ ಔಪಚಾರಿಕ ಸಂದರ್ಭಗಳಲ್ಲಿ ಹೆಚ್ಚು ನಗುವುದನ್ನೊ ಅಥವಾ ಹಾಸ್ಯ ಮಾಡುವುದನ್ನೊ ಗಂಭೀರತೆಯ ಕೊರತೆ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಜರ್ಮನಿ ಮತ್ತು ಜಪಾನ್ ದೇಶಗಳ ಸಂಸ್ಕೃತಿಯಲ್ಲಿ ಶಿಸ್ತು, ವೃತ್ತಿಪರತೆ ಮತ್ತು ಸಮಯಪಾಲನೆಗೆ ಅತಿ ಹೆಚ್ಚು ಮಹತ್ವ ನೀಡಲಾಗುತ್ತದೆ. ಜರ್ಮನ್ ಪ್ರಜೆಗಳು ತಮ್ಮ ಕೆಲಸದಲ್ಲಿ ಅತ್ಯಂತ ಗಂಭೀರವಾಗಿದ್ದು, ಜರ್ಮನ್ ಹ್ಯೂಮರ್ ಸ್ವಲ್ಪ ವಿಭಿನ್ನವಾಗಿರುವುದರಿಂದ ಹೊರಗಿನವರಿಗೆ ಅದು ಗಂಭೀರವಾಗಿ ಕಾಣಿಸಬಹುದು. ಹಾಗೆಯೇ, ಜಪಾನಿನ ಸಾಂಪ್ರದಾಯಿಕ ಕಚೇರಿ ಸಂಸ್ಕೃತಿಯಲ್ಲಿ ಅತಿಯಾದ ನಗು ಅಥವಾ ಹಾಸ್ಯಗಳನ್ನು ಕೆಲಸದ ಸ್ಥಳದಲ್ಲಿ ಹೆಚ್ಚು ಪ್ರೋತ್ಸಾಹಿಸುವುದಿಲ್ಲ.

ಮೌನವಾಗಿಯೇ ಇಡೀ ಜಗತ್ತನ್ನು ನಗಿಸಿದ ಮತ್ತು ಅಳಿಸಿದ ಏಕೈಕ ಮಾಂತ್ರಿಕನೆಂದರೆ ಅದು ಚಾರ್ಲಿ ಚಾಪ್ಲಿನ್. 20 ನೇ ಶತಮಾನದ ಸಿನಿಮಾ ಲೋಕದ ಅತ್ಯಂತ ಪ್ರಭಾವಿ ವ್ಯಕ್ತಿ. ಮಾತೇ ಇಲ್ಲದೆ, ಕೇವಲ ಮುಖದ ಹಾವಭಾವಗಳು, ಬಾಗಿದ ನಡಿಗೆ, ದೊಡ್ಡ ಬೂಟುಗಳು, ಟೊಪ್ಪಿ, ಕೈಯಲ್ಲೊಂದು ಕೋಲು ಮತ್ತು ಮೀಸೆಯ ಮೂಲಕ ಆಳವಾದ ಸಾಮಾಜಿಕ ಸಂದೇಶಗಳನ್ನು ನೀಡುತ್ತಾ ನಗುವನ್ನು ಹಂಚಿದವರು. ಅವರೇ ಹೇಳುವಂತೆ “ಮಾತನಾಡದೆ ನಗಿಸುವುದು ದೊಡ್ಡ ಕಲೆ, ಮತ್ತು ನಗುವಿಲ್ಲದ ದಿನ ಅದು ವ್ಯರ್ಥ”. ಬಡತನ, ಹಸಿವು ಮತ್ತು ಕಷ್ಟಗಳ ನಡುವೆಯೂ ಕಲೆ ಮತ್ತು ಹಾಸ್ಯದ ಮೂಲಕ ಮನುಕುಲಕ್ಕೆ ಭರವಸೆ ನೀಡಿದ ಚಾಪ್ಲಿನ್, ಹಾಸ್ಯ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ನೋವನ್ನು ಮರೆಯಿಸುವ ರಾಮಬಾಣ ಎಂಬುದನ್ನು ಸಾಬೀತುಪಡಿಸಿದರು.

ಇಂದಿನ ಧಾವಂತದ ಬದುಕಿನಲ್ಲಿ ಕೆಲವರಿಗೆ ನಗು ಎಂಬುದು ಅತೀ ದುಬಾರಿಯಾಗಿದೆ. ಇನ್ನೂ ಕೆಲವರಿಗೆ ದಿನವಿಡೀ ರೀಲ್ಸ್, ಶಾರ್ಟ್ ವಿಡಿಯೋಗಳನ್ನು ನೋಡುತ್ತಾ ನಗುವುದೇ ಖಯಾಲಿಯಾಗಿದೆ. ಕೆಲವೊಮ್ಮೆ ನಗಲು ಯಾವುದೇ ಮಾನದಂಡಗಳು ಬೇಕಾಗಿರೋದಿಲ್ಲ, ಕಳೆದು ಹೋದ ಕಷ್ಟದ ಕ್ಷಣಗಳು ಮತ್ತೆ ಕಣ್ಮುಂದೆ ಬಂದಾಗ ಒಂದು ಸಣ್ಣ ಮಂದಹಾಸ ಬೀರುತ್ತೆ. ಅವನ್ನು ಹೇಗೆ ಎದುರಿಸಿದೆವು ಎಂದು ಯೋಚಿಸುವಾಗ ನಮ್ಮ ಬಗೆಗಿನ ಆತ್ಮ ವಿಶ್ವಾಸ ಹೆಚ್ಚಿಸುತ್ತೆ. ಅದೇ ರೀತಿ ಕಳೆದು‌ ಹೋದ ಸುಂದರ ಕ್ಷಣಗಳು ಮತ್ತೆ ನೆನಪಿಗೆ ಬಂದಾಗ ಒಂದು‌ ಸಣ್ಣ ನಿರಾಶೆಯೂ ಮೂಡಬಹುದು. ಅಥವಾ ಇನ್ಯಾವಾಗ ಅದು ಮರುಕಳಿಸುತ್ತೊ ಎಂಬ ಆಸೆಯೂ ಮೂಡಬಹುದು. ಇದನ್ನೆ ಅತಿ ಆಸೆ ದುಃಖಕ್ಕೆ ಮೂಲ ಎನ್ನುವುದು.

ಹೃದಯಪೂರ್ವಕವಾಗಿ ನಗುವುದು ಮತ್ತು ಮತ್ತೊಬ್ಬರ ಮುಖದಲ್ಲಿ ನಗು ತರಿಸುವುದು ಅತ್ಯಂತ ಶ್ರೇಷ್ಠ ಔಷಧಿಯಾಗಿದೆ ಎಂಬುವುದು ಜಗತ್ತಿನ ಹಲವು ತಜ್ಞರ ಅಭಿಪ್ರಾಯ. ಈ “ನ್ಯಾಷನಲ್ ಟೆಲ್ ಎ ಜೋಕ್ ಡೇ” ದಿನದಂದು ನಿಮ್ಮೆಲ್ಲಾ ಚಿಂತೆಗಳನ್ನು ಬದಿಗಿಟ್ಟು, ನಿಮ್ಮವರೊಂದಿಗೆ ಒಂದೊಳ್ಳೆ ಜೋಕ್ ಹಂಚಿಕೊಳ್ಳಿ, ನಗುನಗುತ್ತಾ ಬದುಕನ್ನು ಸ್ವಾಗತಿಸಿ. ಆದರೆ ನಿಮ್ಮ ಜೋಕ್ ಗೆ ಇನ್ನೊಬ್ಬರ ಬದುಕು, ಭಾವನೆ ಕಥಾ ವಸ್ತು ಆಗದೇ ಇರಲಿ, ಅಥವಾ ಯಾರನ್ನೇ ನೋಯಿಸದಿರಲಿ.

-ಆಝಾದ್ ಕಂಡಿಗ

You cannot copy content of this page

Exit mobile version