Thursday, June 20, 2024

ಸತ್ಯ | ನ್ಯಾಯ |ಧರ್ಮ

ಮಧ್ಯಪ್ರದೇಶದ 230 ಹೊಸ ಎಂಪಿಗಳಲ್ಲಿ 205 ಮಂದಿ ಕೋಟ್ಯಾಧಿಪಗಳು…ಬಿಜೆಪಿ ಶಾಸಕ ಟಾಪರ್!- ಎಡಿಆರ್ ವರದಿ

ಮಧ್ಯಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾಗಿರುವ 230 ಶಾಸಕರಲ್ಲಿ 205 ಮಂದಿ ಕೋಟ್ಯಾಧಿಪತಿಗಳಾಗಿದ್ದು, 134 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಮೂವರು ಶ್ರೀಮಂತ ಶಾಸಕರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಕೂಡಾ ಇದ್ದಾರೆ. ಎಲ್ಲಾ ಶಾಸಕರ ಸರಾಸರಿ ಆಸ್ತಿ 11.77 ಕೋಟಿ ರುಪಾಯಿ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್  (Association for Democratic Reforms – ADR) ವರದಿ ಪ್ರಕಾರ, ರತ್ಲಾಮ್ ಸಿಟಿಯಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ 296 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅವರ ಪಕ್ಷದ ಸಹೋದ್ಯೋಗಿ ಸಂಜಯ್ ಸತ್ಯೇಂದ್ರ ಪಾಠಕ್ (ವಿಜಯರಾಘವಗಢ) 242 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

1 ಕೋಟಿ ರುಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಶಾಸಕರ ಸಂಖ್ಯೆ 2018 ರಲ್ಲಿ 187 ಇತ್ತು, ಈಗ 2023 ರಲ್ಲಿ ಈ ಸಂಖ್ಯೆ 205 ಕ್ಕೆ ಏರಿದೆ ಎಂದು ಎಡಿಆರ್‌ ವರದಿ ತಿಳಿಸಿದೆ. ಈ ಕೋಟ್ಯಾಧಿಪತಿ ಶಾಸಕರಲ್ಲಿ 144 ಬಿಜೆಪಿ ಮತ್ತು 61 ಕಾಂಗ್ರೆಸ್‌ನವರು.

ಬಿಜೆಪಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 163 ಸ್ಥಾನಗಳನ್ನು ಗೆದ್ದಿದೆ. 2018 ರಲ್ಲಿ ಇದ್ದ 109 ಸ್ಥಾನಗಳ  ಸಂಖ್ಯೆಯನ್ನು ಈ ಬಾರಿ ಹೆಚ್ಚಿಸಿಕೊಂಡಿದೆ. ರಾಜ್ಯದಲ್ಲಿ 2018 ರಲ್ಲಿ 114 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 66 ಸ್ಥಾನಗಳಿಗೆ ಇಳಿದಿದೆ. ಮಧ್ಯಪ್ರದೇಶದ ರಾಜಕೀಯಕ್ಕೆ ಹೊಸದಾದ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತ್ ಆದಿವಾಸಿ ಪಕ್ಷದಿಂದ ಗೆದ್ದಿರುವ ಅಭ್ಯರ್ಥಿ ಕಮಲೇಶ್ ದೊಡಿಯಾರ್ ಅವರು ಕಡಿಮೆ ಆಸ್ತಿಯನ್ನು ಹೊಂದಿದ್ದು, 18 ಲಕ್ಷ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಕಡಿಮೆ ಆಸ್ತಿ ಹೊಂದಿರುವ ಇತರ ಇಬ್ಬರು ಅಭ್ಯರ್ಥಿಗಳಲ್ಲಿ ಬಿಜೆಪಿಯ ಸಂತೋಷ್ ವರ್ಕಡೆ (ಸಿಹೋರಾ) 25 ಲಕ್ಷ ಮೌಲ್ಯದ ಆಸ್ತಿ ಮತ್ತು ಅವರ ಬಿಜೆಪಿಯ ಕಾಂಚನ್ ಮುಖೇಶ್ ತನ್ವೆ (ಖಾಂಡ್ವಾ) ಒಟ್ಟು 26 ಲಕ್ಷ ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಅತಿ ಹೆಚ್ಚು ಲಯೇಬಿಲಿಟಿ ಹೊಂದಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿಯ ಮಾಜಿ ಸಚಿವ ಸುರೇಂದ್ರ ಪಟ್ವಾ (ಭೋಜ್‌ಪುರ್) 57 ಕೋಟಿ ರುಪಾಯಿ ಸಾಲವನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ ದಿನೇಶ್ ಜೈನ್ (ಮಹಿದ್‌ಪುರ) 30 ಕೋಟಿ  ರುಪಾಯಿ ಸಾಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು  23  ಕೋಟಿ ರುಪಾಯಿ ಸಾಲದೊಂದಿಗೆ ಬಿಜೆಪಿಯ ಭೂಪೇಂದ್ರ ಸಿಂಗ್ (ಖುರೈ) ಮೂರನೇ ಸ್ಥಾನದಲ್ಲಿದ್ದಾರೆ.

205 ಕೋಟ್ಯಾಧಿಪತಿಗಳ ಪೈಕಿ 102 ಶಾಸಕರು 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಸುಮಾರು 71 ಶಾಸಕರು 2 ಕೋಟಿಯಿಂದ 5 ಕೋಟಿ ರುಪಾಯಿಯವರೆಗೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಅಲ್ಲದೆ, 48 ಶಾಸಕರು 50 ಲಕ್ಷದಿಂದ 2 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರೆ, ಒಂಬತ್ತು ಚುನಾಯಿತ ಶಾಸಕರು 50 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ.

ಹೊಸದಾಗಿ ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 10.17 ಕೋಟಿಯಿಂದ  ಈ ವರ್ಷಕ್ಕೆ 11.77 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಎಡಿಆರ್ ವರದಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು