ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೆನಾ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕಾಂಗದ ನಾಯಕರು ಅತಿಶಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಬಳಿಕ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿಯ ಕೇಜ್ರಿವಾಲ್ ಸಂಪುಟದಲ್ಲಿ ಶಿಕ್ಷಣ, ಲೋಕೋಪಯೋಗಿ ಸೇರಿದಂತೆ ಹಲವು ಖಾತೆ ನಿಭಾಯಿಸಿರುವ ಅತಿಶಿ ಚಿಕ್ಕ ವಯಸ್ಸಿನವರಾದರೂ ಸಂಪುಟದಲ್ಲಿ ತನಗೆ ಸಿಕ್ಕ ಅವಕಾಶಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ದೆಹಲಿಯ ಶೈಕ್ಷಣಿಕ ಕ್ಷೇತ್ರದಲ್ಲಿ ಅತಿಶಿ ನಿಭಾಯಿಸಿದ ಜವಾಬ್ದಾರಿ ದೇಶಕ್ಕೇ ಮಾದರಿ ಎನ್ನುವಂತಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದೆ. 2025ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಕೇಜ್ರಿವಾಲ್ ಅವರು 2024ರ ನವೆಂಬರ್‌ನಲ್ಲೇ ಚುನಾವಣೆ ನಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪಕ್ಷ ಸಂಘಟನೆ ಹಾಗೂ ಚುನಾವಣಾ ತಂತ್ರಗಾರಿಕೆ ನಡೆಸುವ ಹಿನ್ನೆಲೆಯಲ್ಲಿ ಸಿಎಂ ಪಟ್ಟ ಅತಿಶಿ ಹೆಗಲಿಗೇರಿದೆ.