ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ತೀರ್ಥಹಳ್ಳಿ ಪೊಲೀಸರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿ ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವತ್ಥಗೌಡರಿಂದ ಹಲ್ಲೆ ಯತ್ನ ನಡೆದಿದೆ.
ತೀರ್ಥಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರರಾದ ವಿ.ನಿರಂಜನ್ ಪೊಲೀಸರ ವರ್ತನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಸಾರ್ವಜನಿಕರೊಂದಿಗೆ ಬಹಿರಂಗವಾಗಿ ಅಸಭ್ಯವಾಗಿ ವರ್ತಿಸಿ, ಅವಾಚ್ಯವಾಗಿ ನಿಂದಿಸಿದ್ದನ್ನು ಸೆರೆ ಹಿಡಿದ ಪತ್ರಕರ್ತ ನಿರಂಜನ್ ಮೇಲೆ ಇನ್ಸ್‌ಪೆಕ್ಟರ್ ಅಶ್ವತ್ಥಗೌಡರಿಂದ ಅವ್ಯಾಚ್ಯ ಶಬ್ದಗಳ ಬಳಕೆ ಮಾಡಿದ್ದಲ್ಲದೇ ಹಲ್ಲೆಗೂ ಮುಂದಾಗಿದ್ದಾರೆ.
ಪೊಲೀಸರ ವರ್ತನೆಯನ್ನು ಖಂಡಿಸಿದರೂ ಇದನ್ನು ಪರಿಗಣಿಸದೇ ವಿಡಿಯೋ ಡಿಲೀಟ್ ಮಾಡುವಂತೆ ಇನ್ಸ್‌ಪೆಕ್ಟರ್ ಮತ್ತು ಅವರ ಜೀಪು ಚಾಲಕ ಸಿಬ್ಬಂದಿಯಿಂದ ಬೆದರಿಕೆ ಬಂದಿದೆ. ಅಷ್ಟೇ ಅಲ್ಲದೆ ಪತ್ರಕರ್ತ ವಿ ನಿರಂಜನ್ ಅವರ ಮೊಬೈಲ್ ಕಸಿದುಕೊಂಡು ಮೊಬೈಲ್ ನಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಇನಿಸ್ಪೆಕ್ಟರ್ ಅಶ್ವತ್ಥಗೌಡರಿಂದ ಬೆದರಿಕೆ ಕೂಡ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ದೌರ್ಜನ್ಯ ಖಂಡಿಸಿದ ಪತ್ರಕರ್ತರ ಮೇಲೂ ದೈಹಿಕ ಹಲ್ಲೆಗೂ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಮುಂದಾಗಿದ್ದಾರೆ.
ಸದ್ಯ ಠಾಣೆಯ ಮುಂದೆ ತೀರ್ಥಹಳ್ಳಿ ಪತ್ರಕರ್ತರು ಧರಣಿಗೆ ಕೂತಿದ್ದು ಆದ ದೌರ್ಜನ್ಯಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.