ಮಂಗಳೂರು : ರಾಜ್ಯದಲ್ಲಿ ಬಾಂಗ್ಲಾದೇಶಿಗರು (Bangladeshi citizen) ಅಕ್ರಮವಾಗಿ ವಾಸ ಮಾಡುತ್ತಿರುವವರನ್ನು ಹುಡುಕಾಟ ನಡೆಸಲಾಗುತ್ತಿದ್ದು, ಇದೀಗ ಮಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದು ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ (Crime) ನಡೆಸಿದ ಘಟನೆ ನಡೆದಿದೆ.
ರಾಜ್ಯದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಬಾಂಗ್ಲಾರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಅದರಂತೆ ಎಲ್ಲಾ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಅದರಂತೆ ಮಂಗಳೂರಿನಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವನಿಗೆ ನೀನು ಬಾಂಗ್ಲಾದವನು ಎಂದು ಹೇಳಿ ಹಲ್ಲೆ ನಡೆಸಲಾಗಿದೆ.
ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಿಲ್ಜನ್ ಅನ್ಸಾರಿ ಎಂಬನ ಮೇಲೆ ನಾಲ್ವರು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಜಾರ್ಖಂಡ್ ಮೂಲದ ದಿಲ್ಜನ್ ಅನ್ಸಾರಿ ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ವರ್ಷದಲ್ಲಿ ನಾಲ್ಕರಿಂದ ಆರು ತಿಂಗಳುಗಳ ಕಾಲ ಮಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ ಭಾನುವಾರ ರಾತ್ರಿ ಸ್ಥಳೀಯ ನಾಲ್ವರು ಯುವಕರು ದಿಲ್ಜನ್ ಅನ್ಸಾರಿನನ್ನು ತಡೆದು, ನೀನು ಬಾಂಗ್ಲಾದೇಶದವನು ಎಂದು ಆರೋಪಿಸಿದ್ದಾರೆ. ಈ ವೇಳೆ ನಾನು ಬಾಂಗ್ಲಾದವನಲ್ಲ ಜಾರ್ಖಂಡ್ ನವನು ಎಂದು ಹೇಳಿದ್ದಾನೆ. ಆದರೂ ಕೇಳದ ಕಿಡಿಗೇಡಿಗಳು ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಕಿರುಕುಳ ಕೂಡ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ತಾನು ಭಾರತೀಯ ಪ್ರಜೆ ಎಂದು ಅನ್ಸಾರಿ ಸಮರ್ಥಿಸಿಕೊಂಡಾಗ ಆರೋಪಿಗಳು ಆಕ್ರೋಶಗೊಂಡು ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದಾರೆ.
ವಲಸೆ ಕಾರ್ಮಿಕನಾಗಿದ್ದ ಕಾರಣ ಭಯಗೊಂಡ ಅನ್ಸಾರಿ ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಘಟನೆ ಕುರಿತು ಸ್ಥಳೀಯ ನಾಯಕರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
