ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಮನಗರ ಮೂಲದ ಯಕ್ಷಿತ್ ರಾಜ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಫೋಟೋಗಳಿಗೆ ಆರೋಪಿಯು ನಿರಂತರವಾಗಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದನು. ವಿಶೇಷವಾಗಿ ಶಾಸಕಿಯವರ ಬಟ್ಟೆ ವಿಚಾರವಾಗಿ ಆಕ್ಷೇಪಾರ್ಹ ಮಾತುಗಳನ್ನಾಡಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅವಮಾನಿಸಲು ಯತ್ನಿಸಿದ್ದನು. ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಶಾಸಕಿಯವರ ಆಪ್ತ ಕಾರ್ಯದರ್ಶಿ ಸಂಸುದ್ದೀನ್ ಅವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದ ನಯನಾ ಮೋಟಮ್ಮ, “ಸ್ಲೀವ್ ಲೆಸ್ ಬಟ್ಟೆ ಧರಿಸಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ, ಕೆಲವರಂತೂ ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿಯುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದರು. ಇಂತಹ ಮಹಿಳಾ ವಿರೋಧಿ ಮನಸ್ಥಿತಿಯನ್ನು ತಾನು ಬಲವಾಗಿ ವಿರೋಧಿಸುವುದಾಗಿ ಅವರು ಹೇಳಿದ್ದರು.
ಪೊಲೀಸರು ತನಿಖೆ ನಡೆಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್‌ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಪಿ (DP) ಇಲ್ಲದ ನಕಲಿ ಪ್ರೊಫೈಲ್‌ಗಳ ಹಿಂದೆ ಅಡಗಿ ಕಾಮೆಂಟ್ ಮಾಡುವ ಕಿಡಿಗೇಡಿಗಳಿಗೆ ಈ ಬಂಧನವು ಒಂದು ಎಚ್ಚರಿಕೆಯ ಸಂದೇಶವಾಗಿದೆ.
