ಉತ್ತರ ಕನ್ನಡ: ವೈಯಕ್ತಿಕ ಜಗಳವನ್ನು ಕೋಮು ಗಲಭೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ ಇಬ್ಬರು ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಮುರುಡೇಶ್ವರ ಠಾಣೆ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿರಾಲಿಯ ನವೀನ್ ಸೋಮಯ್ಯ ನಾಯ್ಕ, ನವೀನ್ ವೆಂಕಟೇಶ ನಾಯ್ಕ ಬಂಧಿತ ಹಿಂದೂ ಕಾರ್ಯಕರ್ತರಾಗಿದ್ದಾರೆ. ಇಬ್ಬರೂ ವೈಯಕ್ತಿಕ ಕಾರಣಕ್ಕೆ ಪರಸ್ಪರ ಜಗಳವಾಡಿಕೊಂಡ ಸಂದರ್ಭದಲ್ಲಿ ನವೀನ್ ಸೋಮಯ್ಯ ನಾಯ್ಕನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನಿನಿಂದ ತಲೆಗೆ ಹಲ್ಲೆ ನಡೆಸಿ ಪೊಲೀಸ್ ಠಾಣೆಯಲ್ಲಿ ಅನ್ಯ ಕೋಮಿನವರು ಹಲ್ಲೆ ನಡೆಸಿರುವುದಾಗಿ ದೂರು ನೀಡಿರುತ್ತಾನೆ.
ನಂತರ ಪೊಲೀಸರು ಈ ಕುರಿತು ತನಿಖೆ ನಡೆಸಿದಾಗ ಸುಳ್ಳು ಪ್ರಕರಣ ದಾಖಲಿಸಿರುವುದು ಕಂಡುಬಂದಿರುತ್ತದೆ. ಭಟ್ಕಳ ಠಾಣೆಯ ಸಿಪಿಐ ಮಹಾಬಲೇಶ್ವರ ನಾಯಕ ತಂಡವು ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದಾಗ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಸಮಯೋಚಿತ ಪ್ರಜ್ಞೆಯಿಂದಾಗಿ ಭಟ್ಕಳದಲ್ಲಿ ಇನ್ನೊಂದು ಕೋಮು ಗಲಭೆ ನಡೆಯುವುದು ತಪ್ಪಿದಂತಾಗಿ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.