2002 ರಲ್ಲಿ ಗೋದ್ರಾ ರೈಲು ದುರಂತದ ನಂತರ ಗುಜರಾತ್ ನಲ್ಲಿ ದೊಡ್ಡ ಮಟ್ಟದ ಗಲಭೆ ಮತ್ತು ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ಬಿಲ್ಕಿಸ್ ಬಾನು ಎಂಬ ಮುಸ್ಲಿಂ ಕುಟುಂಬಕ್ಕೆ ಸೇರಿದ 3 ವರ್ಷದ ಪುಟ್ಟ ಮಗವನ್ನೂ ಸೇರಿದಂತೆ ಒಟ್ಟು 7 ಮಂದಿ ಸದಸ್ಯರನ್ನು ಹತ್ಯೆ ಮಾಡಿ, ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಹೆಣ್ಣು ಮಗಳ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವಾಗಿತ್ತು. ಈ ಅತ್ಯಾಚಾರ ಪ್ರಕರಣದ 11 ಆರೋಪಿಗಳಿಗೆ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇಂತಹ ಘನ ಘೋರ ಕೃತ್ಯ ಎಸಗಿದವರಿಗೆ ನಿನ್ನೆಯ ದಿನ ಗುಜರಾತ್ ಸರ್ಕಾರ ‘ಸನ್ನಡತೆಯ’ ಸರ್ಟಿಫಿಕೇಟ್ ಕೊಟ್ಟು ಜೈಲಿನಿಂದ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ನಿರ್ಧಾರಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಚಾರ ಮತ್ತು ಹಿಂಸಾಚಾರದ ಅಡಿಯಲ್ಲಿ ಸೆರೆವಾಸಕ್ಕೆ ಗುರಿಯಾಗಿದ್ದ ಅಪರಾಧಿಗಳನ್ನು ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಿಹಿ ತಿನ್ನಿಸಿ, ಹಾರ ತುರಾಯಿಗಳನ್ನ ಹಾಕಿ ಜೈಲಿನಿಂದ ಬರಮಾಡಿಕೊಂಡದ್ದು ಅತ್ಯಂತ ಹೀನ ನಡೆ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗರ್ಭಿಣಿ ಹೆಣ್ಣು ಮಗಳ ಮೇಲಾದ ಅತ್ಯಾಚಾರದ ಆರೋಪಿಗಳಿಗೆ ಸರ್ಕಾರವೇ ಕ್ಷಮಾಪಣೆ ನೀಡಿ ಬಿಡುಗಡೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ “ಬೇಟಿ ಬಚಾವ್, ಬೇಟಿ ಪಡಾವ್” ಕೇವಲ ಒಂದು ಬೂಟಾಟಿಕೆಯ ಸ್ಲೋಗನ್ ಎನ್ನುವಂತಾಗಿದೆ. ಈ ಪ್ರಕರಣದ ಮೂಲಕ ದೇಶದಲ್ಲಿ ನಿಜವಾಗಿಯೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಇವರ ಅಧಿಕಾರಾವಧಿಯಲ್ಲಿ ಹೇಳುವುದೊಂದು ಮಾಡುವುದೊಂದು ಎಂಬುದನ್ನು ಸರ್ಕಾರವೇ ಪರೋಕ್ಷವಾಗಿ ಸಾಬೀತುಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಹಿಂಸಾಚಾರ ನಡೆದಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರ ಕೂಡಾ ತಲೆತಗ್ಗಿಸುವಂತಾ ವಾತಾವರಣ ಗುಜರಾತ್ ನಲ್ಲಿ ತಲೆದೋರಿತ್ತು. ಆರೋಪಿಗಳಿಗೆ ಸರ್ಕಾರದ ಶ್ರೀರಕ್ಷೆ ಸಿಗಬಹುದು ಎಂಬ ಗಂಭೀರ ಮನವಿಯ ಮೇರೆಗೆ ಪ್ರಕರಣವನ್ನು ಗುಜರಾತ್ ಕೋರ್ಟಿನಿಂದ ಮಹಾರಾಷ್ಟ್ರದ ಕೋರ್ಟಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ಬಗ್ಗೆ ಮುಂಬೈ ವಿಶೇಷ ನ್ಯಾಯಾಲಯ 6 ವರ್ಷಗಳ ಸುಧೀರ್ಘ ವಿಚಾರಣೆ ನಂತರ 11 ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆರೋಪಿಗಳ ಹೆಸರುಗಳು : ಜಸ್ವಂತ್ ನೇಯ್, ಗೋವಿಂದ್ ನೇಯ್, ಶೈಲೇಶ್ ಭಟ್, ರಾಧೇ ಶ್ಯಾಮ್ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಬಾಯ್ ವಹೋನಿಯ, ಪ್ರದೀಪ್ ಮೋರ್ದಿಯಾ, ಬಕಾಬಾಯಿ ವಹೋನಿಯಾ, ರಾಜುಬಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
ಆ ನಂತರ ಈ ಎಲ್ಲಾ ಅಪರಾಧಿಗಳು ಇಲ್ಲಿಯವರೆಗೆ 15 ವರ್ಷಗಳ ಸೆರೆವಾಸ ಅನುಭವಿಸಿದ್ದಾರೆ. ಈಗ ಅಪರಾಧಿಗಳೆಲ್ಲರೂ ಕ್ಷಮಾಪಣಾ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ಅವರ ನಡವಳಿಕೆ ಮತ್ತು ಮುಂತಾದ ಇತರ ಅಂಶಗಳನ್ನು ಪರಿಗಣಿಸಿದೆ. ಹಾಗೂ ಕ್ಷಮಾಪಣೆಗಾಗಿ ಕೋರಿದ ಅರ್ಜಿಯ ಹಿನ್ನೆಲೆಯಲ್ಲಿ ಅಷ್ಟೂ ಹನ್ನೊಂದು ಅಪರಾಧಿಗಳನ್ನು ಸೋಮವಾರ ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಸಾಮೂಹಿಕ ಅತ್ಯಾಚಾರದ ಜೊತೆಗೆ, ಕೊಲೆ ಹಿಂಸಾಚಾರ ನಡೆಸಿದವರನ್ನು ನಮ್ಮ ಸಮಾಜ ಭಯೋತ್ಪಾದಕರಿಗೆ ಹೋಲಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆದ ಈ ಘಟನೆ ಮತ್ತು ಈ ಘಟನೆಯನ್ನೇ ಪ್ರೇರಣೆಯಾಗಿ ತಗೆದುಕೊಂಡು ದೇಶಾದ್ಯಂತ ಆದ ದೊಡ್ಡ ಕೋಮು ಗಲಭೆ ಬಗ್ಗೆ ಇಡೀ ದೇಶ ಇಂದಿಗೂ ಮರುಕ ಪಡುತ್ತಿದೆ. ಇನ್ನೆಷ್ಟು ವರ್ಷಗಳಾದರೂ ಇಂತಹದ್ದೊಂದು ಘಟನೆ ಮರುಕಳಿಸದಿರಲಿ ಮತ್ತು ಅಪರಾಧಿಗಳು ಸರಿಯಾದ ಶಿಕ್ಷೆ ಅನುಭವಿಸಲೆಂದೇ ಎಲ್ಲರೂ ಪ್ರಾರ್ಥಿಸಿದ್ದರು. ಆದರೆ ಸರ್ಕಾರವೇ ಮುಂದೆ ನಿಂತು ಆರೋಪಿಗಳ ಕ್ಷಮಾಪಣಾ ಅರ್ಜಿಯನ್ನು ಪರಿಗಣಿಸಿ ಬಿಡುಗಡೆ ಮಾಡಿದ್ದು ಭಾರತದ ಕರಾಳ ಭವಿಷ್ಯ ಕಣ್ಮುಂದೆ ಬಂದಂತಾಗಿದೆ. ಆ ಮೂಲಕ ಯಾರು ಎಂತಹ ಕುಕೃತ್ಯ ಎಸಗಿಯೂ ಒಂದಷ್ಟು ವರ್ಷಗಳ ಜೈಲುವಾಸ ಅನುಭವಿಸಿ ಹೊರಬರಬಹುದು ಎಂಬ ಧೈರ್ಯವನ್ನು ಸ್ವತಃ ಸರ್ಕಾರವೇ ಕೊಟ್ಟಂತಾಗಿದೆ.