ರಾಜ್ಯದ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಮಧ್ಯಾಹ್ನ 3:00 ಗಂಟೆಗೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https://karresults.nic.in ನಲ್ಲಿ ಪ್ರಕಟಿಸಲಾಗುವುದು.
ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶವನ್ನು ಪಡೆಯಲಿದ್ದಾರೆ. ತಾಂತ್ರಿಕ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿರುವ ಮಂಡಳಿ, ಅಂಕಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಸಜ್ಜಾಗಿದೆ.
ಇದೇ ವೇಳೆ, ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಲಿದ್ದು, ಫಲಿತಾಂಶದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ನಾಳೆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಈ ಸುದ್ದಿಗೋಷ್ಠಿ ನಡೆಯಲಿದೆ.
ಪರೀಕ್ಷೆಯ ಹಿನ್ನಲೆ:
2026ರ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ಸುಗಮವಾಗಿ ನಡೆದವು.
ಮರುಮೌಲ್ಯಮಾಪನಕ್ಕೆ ಅವಕಾಶ:
ಫಲಿತಾಂಶದಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಹಾಗೂ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಫಲಿತಾಂಶ ಪ್ರಕಟವಾದ ನಂತರ ಮಂಡಳಿ ಪ್ರಕಟಿಸಲಿದೆ.
ಫಲಿತಾಂಶ ವೀಕ್ಷಿಸುವ ವಿಧಾನ:
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆ ಹಾಗೂ ವಿಷಯ ಸಂಯೋಜನೆ ನಮೂದಿಸುವ ಮೂಲಕ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
