“..ಎದೆಯೊಳಗಿನ ಮಾತೆ ಜ್ಯೋತಿಯಾಗಿ ಆರದಂತೆ ಬೆಳಗಬೇಕು ಹೀಗೆ ನುಡಿದು ಜೀವನದ ಸಾರ್ಥಕತೆಯನ್ನು ಅರುಹಿದ ಆಯ್ದಕ್ಕಿ ಲಕ್ಕಮ್ಮ ಆಸೆಯನ್ನು ಬಡತನವನ್ನೂ ಮೀರಿ ನಿಲ್ಲುವ ಬಗೆಯನ್ನು ಮಾರ್ಮಿಕವಾಗಿ ತಿಳಿಸಿದ್ದಾಳೆ..” ಲೇಖಕರಾದ ಡಾ.ಲಲಿತಾ ಹೊಸಪ್ಯಾಟಿ ಅವರ ಬರಹದಲ್ಲಿ
**ಅಂಗಕ್ಕೆ ಬಡತನವಲ್ಲದೆ, ಮನಕ್ಕೆ ಬಡತನವುಂಟೆ?
ಬೆಟ್ಟ ಬಲ್ಲಿತೆಂದಡೆ ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ?....**
ಎಂಬ ಅನುಭಾವವನ್ನು ಗಟ್ಟಿ ಗಳಿಸಿಕೊಂಡು ಜೀವನ ನಡೆಸುವುದು ಸುಲಭವಲ್ಲ. ಅನುಭಾವಿಕ ಬದುಕಿಗಾಗಿ ಸ್ವಾರ್ಥ ಮತ್ತು ಸ್ವಂತ ಅಭಿಲಾಷೆಗಳನ್ನು, ಆಸೆ ಆಮಿಷಗಳನ್ನು ತೊರೆಯಬೇಕು. ಜೀವನ ನಡೆಸಬೇಕೆಂದರೆ ನುಡಿದಂತೆ ನಡೆಯಬೇಕು. ಇಲ್ಲಿ ನುಡಿಯೇ ಮೊದಲು. ನಂತರ ನಡೆಯ ದಾರಿ. ಅದು ಎದೆಯೊಳಗಿನ ಮಾತೆ ಜ್ಯೋತಿಯಾಗಿ ಆರದಂತೆ ಬೆಳಗಬೇಕು ಹೀಗೆ ನುಡಿದು ಜೀವನದ ಸಾರ್ಥಕತೆಯನ್ನು ಅರುಹಿದ ಆಯ್ದಕ್ಕಿ ಲಕ್ಕಮ್ಮ ಆಸೆಯನ್ನು ಬಡತನವನ್ನೂ ಮೀರಿ ನಿಲ್ಲುವ ಬಗೆಯನ್ನು ಮಾರ್ಮಿಕವಾಗಿ ತಿಳಿಸಿದ್ದಾಳೆ.
ಆಸೆಯನ್ನಾಗಲೀ ಬಡತನವನ್ನಾಗಲೀ ಮೀರಲು ಮನಸ್ಸು ಬಾಗಬೇಕು ಮಾಗಬೇಕು. ಬಾಗುವ ಔದಾರ್ಯ ವೆಂದರೆ ಹೆಣ್ಣು ಹೊನ್ನು ಮಣ್ಣಿನ ಆಚೆಗೆ ಆಸೆಯನ್ನು ತೊರೆಯುವುದು. ತಾನು ಬದುಕುವ ಜೊತೆಗೆ ಇತರರು ಬದುಕುವ ದಿಸೆಯಲ್ಲಿ ಒಡಲ ಹಸಿವಿಗೆ ಸಿಡಿಮಿಡಿಗೊಳ್ಳದೇ, ಅರಿವಿನ ಹಸಿವಿಗಾಗಿ ಒಡಲುಗೊಳ್ಳಬೇಕೆಂದು ತಿಳಿಸಿದ ಶಿವಶರಣೆ ಆಯ್ದಕ್ಕಿ ಲಕ್ಕಮ್ಮನ ವಚನಗಳು ನರ ಮನುಷ್ಯನ ನರಳಾಟದ ಬದುಕಿಗೊಂದು ತೃಪ್ತತೆಯ ಸಾಕಾರ ಒದಗಿಸುವಂತದ್ದು. ಆಸೆಯೆಂಬ ಪಾಶವನ್ನು ಮುಕ್ತಗೊಳಿಸುವಂತದ್ದು.
ಆಯ್ದಕ್ಕಿ ಲಕ್ಕಮ್ಮನ ಪತಿ ಆಯ್ದಕ್ಕಿ ಮಾರಯ್ಯನವರು. ಅನುಭಾವಿಕ, ಮತ್ತು ಕಾಯಕದೊಳಗೆ ನಿರತನಾದೊಡೆ ಲಿಂಗ ಮುಂದಿದ್ದರೂ ಕಾಯಕದೊಳಗು ಎಂದೇ ಕಾಯಕದಲ್ಲಿಯೇ ಶಿವನೊಲುಮೆ ಕಂಡವರು. ಭಕ್ತರಾದ ಸತಿಪತಿ ಅಮರೇಶ್ವರ ಲಿಂಗ ಭಕ್ತರು. ಇವರು ಬಡತನದ ಸಂಸಾರವನ್ನು ಗೋಳೆಂದು ತೋಡಿ ಕೊಂಡವರಲ್ಲ. ಲಿಂಗದ ಮುಂದೆ ಬೇಡಿಕೊಂಡವರಲ್ಲ. ಬಡತನವು ಅಮರೇಶ್ವರ ಲಿಂಗ ಪ್ರಸಾದವೆಂದೇ ಅನುಭವಿಸಿದವರು. ಅಣ್ಣ ಬಸವಣ್ಣನವರ ಕಾಯಕದ ಕರೆಗೆ ಓಗೊಟ್ಟು, ಶರಣ ಸಂಕುಲ ಸೇರುವ ಬಯಕೆಯಿಂದ ಬಂದು, ಕಲ್ಯಾಣದಲ್ಲಿಯೇ ನೆಲೆ ನಿಂತವರು. ಪತಿ ಆಯ್ದಕ್ಕಿ ಮಾರಯ್ಯನವರು ಆಯಗಾರ ಕಾಯಕದಲ್ಲಿ ನಿರತರಾದರೆ ಶರಣಿ ಲಕ್ಕಮ್ಮ ದಾಸೋಹ ಜಂಗಮ ಸೇವೆ ಮಾಡುತ್ತಾ ಶರಣೆಯರು ನಡೆಸುತ್ತಿದ್ದ ಅಕ್ಷರ ಶಾಲೆಯಲ್ಲಿ ಕಾಯಕ ಸೇವೆಯಲ್ಲಿದ್ದವರು.
ಕಾಯಕ ನಿರತ ಆಯ್ದಕ್ಕಿ ಲಕ್ಕಮ್ಮನವರ ಹಿರಿದಾದ ವಚನ ಇಂದಿನ ನಮ್ಮ ಸಂಗ್ರಹಿಸುವ ಗುಣಕ್ಕೆ ಚಾಟಿ ಏಟು ನೀಡುವಂತದ್ದು. ಬಡತನದ ಬಗ್ಗೆ ನಮಗೆಲ್ಲ ಬೇಸರವಿದೆ. ನೋವಿದೆ ದುಗುಡವಿದೆ. ಮನುಷ್ಯ ಸುಖವಾಗಿರಲು ಬಯಸುತ್ತಾನೇಯೇ ಹೊರತು ಕಷ್ಟವನ್ನು ಪಡೆಯಲು, ಪರಿಪಾಟಲದ ಜೀವನ ಸಾಗಿಸಲು ಬಯಸಲಾರನು. ದೇವರಲ್ಲಿಯೂ ಬಡತನ ತರಬೇಡವೆಂದೇ ಬೇಡಿಕೊಳ್ಳುವ ಮನೋಭಿಲಾಷೆಯಲ್ಲಿ ನಾವು ನಿರತರು. ದೇವರೇ ಯಾಕಪ್ಪ ಈ ಬಡತನ ?ಎಂದು ದೇವರಿಗೆ ಮೊರೆ ಹೋಗುವವರೇ ನಾವೆಲ್ಲ.
ಆದರೆ ಆಯ್ದಕ್ಕಿ ಲಕ್ಕಮ್ಮ ಬಡತನದ ವಿಶ್ಲೇಷಣೆಯನ್ನು ಮಾಡುವ ರೀತಿಯೇ ಅನನ್ಯ, ಅದು ಅನುಭಾವಿಕ ಸ್ಥರದ ಅರಿವಿನ ಬೆಳಕು. ದೇಹವಿದೆ, ದೇಹದೊಳಗೆ ಜೀವವಿದೆ. ಕಾಯಕ ಮಾಡುವ ಶಕ್ತಿಯಿದೆ. ಕಣ್ಣಿಂದ ನೋಡಬಲ್ಲೆವು, ಕಿವಿಯಿಂದ ಕೇಳಬಲ್ಲೆವು,ಕಾಲಿನಿಂದ ನಡೆಯಬಲ್ಲೆವು. ಅದರೆ ಇದ್ಯಾವುದು ನಮಗೆ ಸಿರಿವಂತಿಕೆಯದ್ದಲ್ಲ. ದೇಹ ಶ್ರೀಮಂತಿಕೆಯನ್ನು ಮರೆತು, ಸಿರಿಯ ಆಸೆಗೆ ಬಿದ್ದವರು ನಾವು.
ಆದರೆ ಆಯ್ದಕ್ಕಿ ಲಕ್ಕಮ್ಮನದು ಮಾರಯ್ಯಪ್ರಿಯ ಅಮರೇಶ್ವರ ಲಿಂಗವನ್ನೇ ಪೂಜಿಸುವ ನಮಗೆ ಬಡತನ ಎಲ್ಲಿಯದು? ಎನ್ನುವ ಮನೋನಿರ್ಧಾರ ಗಟ್ಟಿಯಾದುದು. ಬಾಳಿನಲ್ಲಿ ಒಂದು ಹೊತ್ತಿನ ಪ್ರಸಾದ ದೊರೆಯುವಂತೆ ಅನುಗ್ರಹಿಸಿದ ಅಮರೇಶ್ವರ ಪ್ರಸಾದ ಕೊಟ್ಟಿರುವುದು ಸುಕೃತ ಎಂದು ಭಾವಿಸಿದ ಶರಣೆ.
ಒಂದು ಸಂದರ್ಭದಲ್ಲಿ ಪತಿ ಆಯ್ದಕ್ಕಿ ಮಾರಯ್ಯನವರು ಆಯಗಾರ ಕಾಯಕ ಮುಗಿಸಿ ದಾಸೋಹದ ಮನೆಯಿಂದ ಬರುವಾಗ ದಿನಕ್ಕೆ ಬೇಕಾಗಿದ್ದಕ್ಕಿಂತ ಒಂದಿಷ್ಟು ಹೆಚ್ಚು ಅಕ್ಕಿಯನ್ನು ತಂದಿರುತ್ತಾರೆ. ನೋಡಿದ ಲಕ್ಕಮ್ಮ ಅವರು ಹೇಳುವ ವಚನ, ಮಾನವ ಆಸೆಯನ್ನು ತ್ಯಜಿಸಿ, ಹೇಗೆ ಬಾಳಬೇಕೆಂಬುದಕ್ಕೆ ಸಾಕ್ಷಿಯಾಗಿದೆ
ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ ಅಯ್ಯಾ? ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ ಎನ್ನುತ್ತಾಳೆ
ಸಂಗ್ರಹ ಬುದ್ಧಿ ಎಂಬುದು ಎಂದಿಗೂ ಸಲ್ಲ, ಎಂದರಿತ ಹಿರಿಯ ಶರಣರು ಆಯ್ದಕ್ಕಿ ಮಾರಯ್ಯನವರು. ಕಾಯಕ ನಿಷ್ಠರು. ಶರಣ ತತ್ವ ಪರಿಪಾಲಕರು. ಇಂತವರೇ ತತ್ವನಿಷ್ಠೆ ಯನ್ನು ಮೀರಿದ್ದಕ್ಕೆ ಪ್ರಶ್ನೆ ಕೇಳುವ ಲಕ್ಕಮ್ಮ ಪತಿಯಾದರೂ ವ್ರತಕ್ಕೆ ಭಂಗ ಬಂದಾಗ ಪ್ರಶ್ನಿಸಿ ಸರಿಪಡಿಸಬೇಕೆನ್ನುವ ವಿಚಾರಧಾರೆಯುಳ್ಳವಳು. ಅದೇ ರೀತಿ ಕುಟುಂಬದ ಜವಾಬ್ದಾರಿ ಹೊತ್ತ ಸತಿಪತಿಗಳು ಪಾಲಿಸುವುದು ಕೂಡಾ ಯೋಗ್ಯವೆ. ಇಲ್ಲಿ ಮಾರಯ್ಯನವರು ಇಂದು ತಂದ ಅಕ್ಕಿ ಹೆಚ್ಚಾಗಿದೆ, ಎಂದರೆ ಇನ್ನೊಬ್ಬರ ಹಸಿವಿಗೆ ಬೇಕಾದ ಅಕ್ಕಿಯನ್ನು ಕಸಿದುಕೊಂಡಂತೆ. ಇದು ಇನ್ನರಿಗೋ ಸಲ್ಲಬೇಕಿತ್ತು. ಸಲ್ಲಲಿಲ್ಲ ಎಂದರೆ ಅವರ ಪ್ರಸಾದಕ್ಕೆ ಕೊರತೆಯಾದಂತೆ. ಅಂತೆಯೇ ಇಂದಿನದ್ದನ್ನು ಇಂದೇ ಸಂಪಾದಿಸಿ ಕಾಯಕದಿಂದಲೇ ಸಂಗ್ರಹಿಸಿ ಪ್ರಸಾದ ಸೇವಿಸಬೇಕೆ ವಿನಃ, ಅದನ್ನು ನಾಳೆ ನಾಡಿದ್ದು ಮುಂದಿನ ದಿನಮಾನಕ್ಕೆ ಎತ್ತಿಡುವುದು ಶಿವ ಭಕ್ತರಿಗೆ ಸಲ್ಲ ಎನ್ನುತ್ತಾಳೆ.
ಆಸೆಗೆ,ಜಯಕ್ಕೆ, ತಲೆಯ ಮೇಲಿನ ರತ್ನದ ಕಿರೀಟಕ್ಕೆ ಆಸೆ ಪಟ್ಟು ಸಾಮ್ರಾಜ್ಯ ಕಟ್ಟಿ ಸಂತಸ ಪಡುವವರು ಅರಸರು. ರಾಜ್ಯದ ಮೇಲಿನ ಆಸೆಗೆ,ಮಣ್ಣಿನ ಮೇಲಿನ ಮೋಹಕ್ಕೆ, ಇರುವವರು ಅರಸರು. ಶಿವಶರಣರು ಅಲ್ಲ. ಯಾರ್ಯಾರಿಗೆ ಯಾವ ಗುಣ ಸಲ್ಲಬೇಕು ಆ ಗುಣಗಳಿಂದಲೇ ಅವರ ವ್ಯಕ್ತಿತ್ವ ಗುರುತಿಸುತ್ತದೆ. ಹಾಗೆ ಯಮದೂತರು ಅಂದರೆ ಸಾವನ್ನು ಕೈಯಲ್ಲಿ ಹಿಡಿದು ಬರುವವರು,ಅವರಿಗೆ ರೋಷವೇ ಮುಖ್ಯ ಹೊರತು ಅಂತಃಕರಣದಿಂದ ಸಾವಿಗಿ ಬಿದ್ದವರನ್ನು ಎತ್ತಿ ಪುನರ್ಜನ್ಮ ನೀಡಲಾರರು. ಆದರೆ ಶಿವಶರಣರು ಬಡತನವನ್ನೂ, ಸಾವನ್ನು ಮೀರಿ ನಿಂತವರು. ಅವರಿಗೆ ಯಾವ ಯಾರ ಭಯ ಇರಲಾರದು. ಶಿವಭಕ್ತರಿಗೂ ಒಂದು ಗುಣವಿದೆ. ಅದೂ ಆಸೆತೊರೆದ ಶರಣ ನಡೆ. ಆಸೆ ಪಟ್ಟು ತಂದ ಅಕ್ಕಿ, ದಾಸೋಹಕ್ಕು ಸಲ್ಲದು. ಪ್ರಸಾದಕ್ಕೂ ಸಲ್ಲದು. ತಂದ ಅಕ್ಕಿಯನ್ನು ಮತ್ತೇ ದಾಸೋಹದ ಮನೆಯಲ್ಲಿಯೇ ಸಲ್ಲಿಸಬೇಕೆಂದು ನಿರ್ಧಾಕ್ಷಿಣ್ಯವಾಗಿ ಮರಳಿ ದಾಸೋಹದ ಮನೆಗೆ ಕಳಿಸುವ ಲಕ್ಕಮ್ಮನ ವಿಚಾರಧಾರೆಯಿಂದ ನಾವೆಲ್ಲ ಹೆಣ್ಣುಮಕ್ಕಳು ಕಲಿಯಬೇಕಾದದ್ದು ಬಹಳಷ್ಟಿದೆ.
ಆಹಾರ ಪದಾರ್ಥಗಳು ಅಷ್ಟೇ ಅಲ್ಲ, ಬಟ್ಟೆ, ಕಾಳು, ಆಸ್ತಿ ಬಂಗಾರ, ಒಡವೆ, ಹಣ, ಮನೆ, ಹೊಲ ಎಲ್ಲವೂ ನಾಳೆಗಾಗಿಯೇ ಹೊರತು, ಇಂದು ತಿನ್ನುವುದು ಮಾತ್ರ ಒಂದು ಮುಷ್ಠಿ ಅನ್ನ ಎರಡು ರೊಟ್ಟಿ ಆದರೂ, ಮನೆಯಲ್ಲಿ ಚೀಲದ ನೆಟ್ಟು ಒಟ್ಟಿರಬೇಕು ಅಂದಾಗಲೇ ಮನುಷ್ಯ ಜನ್ಮಕ್ಕೆ ಸಮಾಧಾನ. ಒಂದು ತಗಡು ಬಿದ್ದರೂ, ನಾಳೆಗೆ ಬಂದಿತೆಂದು ಎತ್ತಿಟ್ಟುಕೊಳ್ಳುವ ನಮಗೆ ಆಯ್ದಕ್ಕಿ ಲಕ್ಕಮ್ಮ ಹೇಳುವ ಮಾತು ಬಡತನ ಎಂಬುದು ಹೊರಗಿನದು ಸಿರಿತನ ಎಂಬುದು ಒಳಗಿನದು ಎಂಬ ಮಾತು ಪ್ರಮಾಣವಾಗಬೇಕು. ಒಳಗಣ ಮನಸ್ಸು ಸಂತೃಪ್ತವಾಗಲು ಶ್ರೀಮಂತಿಕೆಯಿದ್ದರೆ ಸಾಲದು. ಹೃದಯ ಸಿರಿವಂತರಾಗಬೇಕು, ಜ್ಞಾನ ಶ್ರೀಮಂತರಾಗಬೇಕು, ಅರಿವಿನಿಂದ ಶ್ರೀಮಂತರಾಗಬೇಕೆನ್ನುತ್ತಾಳೆ. ಆಗ ಮಾತ್ರವೇ ಹೊರಗಿನ ಯಾವ ಬಡತನವು ಕಾಡಲಾರದು .
ಯಾರಿಗೆ ಆಗಲಿ ಚಿತ್ತದಲ್ಲಿ ಒಮ್ಮೆ ಬಡತನವನ್ನು ಹೋಗಲಾಡಿಸುವುದೇ ಆದ್ಯ ಎಂಬ ಭಾವ ಬಂದು ನಿಂತರೆ ಮುಗಿಯಿತು. ಶ್ರೀಮಂತಿಕೆಯನ್ನು ಪಡೆವ ಮಹದಾಸೆಯಲ್ಲಿ ಯಾವುದಾವುದೋ ದುಷ್ಕೃತ್ಯಗಳು ನಮ್ಮಿಂದ ಹೆಚ್ಚಾಗುತ್ತವೆ. . ಅದು ಯಾರಿಗೆ ಆಗಲಿ ಕಾಯಕದ ವ್ರತ, ಜೀವನ ವೃತ್ತ, ಸನ್ನಡತೆ ಮೀರಿದ ಭಾವ ಎಂಬುದನ್ನು ಪದೇ ಪದೇ ತಿಳಿಸುತ್ತಾಳೆ. ಶ್ರೀಮಂತಿಕೆ ಬಡತನ ಎಂಬ ಭೇದವನ್ನು ಹುಟ್ಟುಹಾಕಿದಂತೆ. ಎಂಬುದು ಲಕ್ಕಮ್ಮನ ಅರಿವಿನ ತಿಳಿವಿನ ನಡೆ. ಶರಣರು ತಿಳಿಸಿದಂತೆ ಇದ್ದುದರಲ್ಲಿಯೇ ತೃಪ್ತಿಯಿಂದ ಜೀವನ ನಡೆಸುವ ವಿಧಾನವನ್ನು ತಿಳಿಸುತ್ತಾಳೆ.
ಪತಿಯ ಚಿತ್ರ ಚಂಚಲವಾಯಿತು ಎಂದು ಭಾವಿಸಿದ ಲಕ್ಕಮ್ಮ ಸುಮ್ಮನಿರುವುದಿಲ್ಲ. ವರೆಗಚ್ಚುವ ಕಾರ್ಯವನ್ನೂ ಮಾಡುತ್ತಾಳೆ. ಅನುಮಾನಿಸಿ ನೋಡುವಳಲ್ಲದೆ, ಮತ್ತು ತಿಳಿಸಿ ಹೇಳುವ ಬಗ್ಗೆಯೂ ಹಿಂಜರಿಯುವುದಿಲ್ಲ.
ಒಮ್ಮನವ ಮೀರಿ ಇಮ್ಮನವ ತಂದಿರಯ್ಯ
ಇದು ನಿಮ್ಮ ಮನವೋ ಬಸವಣ್ಣನವರ
ಅನುಮಾನದ ಚಿತ್ತವೋ
ಈ ಮಾತು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ
ಸುರಿದು ಬನ್ನಿ ಎನ್ನುತ್ತಾಳೆ.
ಭಕ್ತರು ಕಾಯಕವೆಂದು ಪಡೆಯುವುದು ಒಮ್ಮನದಲ್ಲಿಯೇ ಇರಬೇಕೇ ಹೊರತು ಅದು ಇಮ್ಮನವಾಗಬಾರದು. ಇಮ್ಮನ ತಂದು ದಾಸೋಹ ಮಾಡಲಾಗದು ಎಂದು ನಿರಾಕರಿಸುತ್ತಾಳೆ. ಒಮ್ಮನವ ತಂದು ಬೋನವ ಮಾಡಿದಲ್ಲಿಯೇ ಮಾತ್ರ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲಲಿ ಇಮ್ಮನವಾಗುವ ಮುನ್ನವೇ ಎಚ್ಚರಗೊಳ್ಳಬೇಕೆನ್ನುವ ಅರಿವಿನ ಎಚ್ಚರಿಕೆಯಲ್ಲಿ ಸರ್ವರ ಸುಖ ಬಯಸುವ ಗುಣವೂ ಇದೆ. ಒಮ್ಮನ ಇರಬೇಕೆ ಹೊರತು ಇಮ್ಮನ ಇರಬಾರದು. ಮನಸ್ಸು ಯಾವ ಸಂದರ್ಭದಲ್ಲಿ ಅತ್ತ ಇತ್ತ ಹರಿದಾಡುವುದೋ ತಿಳಿಯದು. ಅಂತಹ ಏಕಾಗ್ರ ಮನವನ್ನು ಮೀರಬಾರದು. ಇಮ್ಮನ ಆಗುವುದೆಂದರೆ, ಮನಸ್ಸು ಚಂಚಲಗೊಂಡಂತೆ. ಸದಾ ಒಂದರಿಂದ ಇನ್ನೊಂದಕ್ಕೆ ಹರಿದಾಡಿಸುವ ಈ ಮನಸ್ಸು ದ್ವಂದ್ವದ್ದು. ಈ ದ್ವಂದ ಮನಸಿಜರಾಗಿ ಕಾಯಕವನ್ನೂ ಪ್ರಸಾದವನ್ನೂ, ದಾಸೋಹವನ್ನಾಗಲಿ ಕೈಗೊಳ್ಳಲಾಗದು.
ಅದಕ್ಕೆ ಮನಸ್ಸು ಜಾಗ್ರತೆಯನ್ನು ಮೀರಿ ಸಾಗುವ ಮೊದಲೇ ಎಚ್ಚರವಾಗಿರಬೇಕು. ಆಗ ಮಾತ್ರ ನಮ್ಮ ಲೌಕಿಕದ ಅಗತ್ಯತೆಗಳು ಪಡೆಯುವ ಹಂಬಲ ಕಡಿಮೆಯಾಗುತ್ತದೆ. ಈ ತೆರನಾದ ಮನಸ್ಸಿನ ಭಾವದಿಂದ ನಾವು ಒಂದೇ ಮನಸ್ಸಿನವರಾಗಿ ಬದುಕಲು ಸಾಧ್ಯವಾಗುತ್ತದೆ. ಯಾವ ಬಂಧನಗಳು ಯಾವ ಆಸೆಗಳು ಯಾವ ಆಕಾಂಕ್ಷೆಗಳು ಯಾವ ಬಯಕೆಗಳು ಹತ್ತಿರ ಸುಳಿಯುವುದಿಲ್ಲ. ಚಂಚಲ ಮನಸ್ಸಿನ ಹತೋಟಿಯನ್ನು ಮಾಡುವುದೂ ಅದೇ ಮನಸ್ಸಿನ ಶಕ್ತಿ. ಮನಸ್ಸು ಬಯಸಿದ್ದನ್ನು ತಾ ಪಡೆಯುತ್ತಾ ಹೋದರೆ ಕೊನೆಯೆಂಬುದಿಲ್ಲ. ಈ ಮನಸ್ಸು ಬಯಸುವ ಆಸೆಯಲ್ಲಿಯೇ ಸಾರ್ಥಕ ಜೀವನವಿದೆ ಎಂದು ಹೇಳುತ್ತಾಳೆ.
ಈ ಬಡತನವೆಂಬುದೇ ಈ ತೆರನಾದ ಇಮ್ಮನಸ್ಸಿನ ಹಾದಿಗೆ ಕೊರೆದೊಯ್ಯುತ್ತದೆ ಆದರೆ, ಬಡತನವೆಂದರೇನೆಂಬುದಕ್ಕೂ ವ್ಯಾಖ್ಯಾನ ನೀಡುತ್ತಾಳೆ. ಬಡತನವ ಮೀರುವ, ತಿಳಿವನು ಸಿದ್ಧಿಸಿಕೊಳ್ಳುವ ಬಗ್ಗೆ ಯೂ ತಿಳಿಸುತ್ತಾಳೆ
ತನ್ನ ಒಂದು ವಚನದಲ್ಲಿ
ಭಕ್ತಂಗೆ ಬಡತನ ಉಂಟೆ, ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದು ಕೊಟ್ಟಿಹೇನೆಂದಡೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ ಎನ್ನುವಲ್ಲಿ
ಅಮರೇಶ್ವರ ಲಿಂಗ ತಮ್ಮ ಬೆನ್ನ ಹಿಂದೆ ಇರುವವರೆಗೂ, ನಂಬಿದ ಲಿಂಗ ಎಂದಿಗೂ ಕೈ ಬಿಡುವುದಿಲ್ಲ. ನಂಬಿದವರಿಗೆ ಬಡತನದ ಚಿಂತೆಯೂ ಇಲ್ಲ. ಈಸಕ್ಕಿಯಾಸೆಯೂ ಸಲ್ಲ. ಎನ್ನುತ್ತ, ಲೌಕಿಕದ ಬಡತನವನ್ನೂ ಮೀರಿ ಸಾಧನೆಯ ಅರಿವೇ ಗುರುವಾಗಿ ಕಾಯುವುದೆಂಬ ಅವಳ ವಚನ ಈಸಕ್ಕಿಯಾಸೆ ಭ್ರಮೆಯನ್ನುಕಳೆದು, ಒಂದು ಸೈದಾಂತಿಕ ವಿಚಾರವನ್ನೇ ನೀಡುತ್ತದೆ.
