Monday, March 17, 2025

ಸತ್ಯ | ನ್ಯಾಯ |ಧರ್ಮ

ಇದು ಸೌಜನ್ಯ ಪ್ರಕರಣವನ್ನೇ ಹೋಲುವ ಸುದೀರ್ಘ ಹೋರಾಟದ ಕಥೆ..!

ಕೆಲ ದಿನಗಳ ಹಿಂದೆ ರಾಜ್ಯದ ಗೃಹ ಸಚಿವರು ಸೌಜನ್ಯ ಕೇಸ್ ಮುಗಿದ ಅಧ್ಯಾಯ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈಗ ಏನಿದ್ರೂ ಅದೊಂದು ಸೋಷಿಯಲ್ ಮೀಡಿಯಾ ವಾರ್ ಅಂತ ಹೇಳುವ ಮೂಲಕ ಇಷ್ಟೊಂದು ದೊಡ್ಡ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ. ಹಾಗಿದ್ರೆ ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ನಿರಾಪರಾಧಿಯಾಗಿದ್ರೆ ನೈಜ್ಯ ಆರೋಪಿ ಯಾರು ಅಂತ ಪತ್ತೆ ಮಾಡೋದು ಯಾರು ? ರಾಜ್ಯದ ಕೋಟ್ಯಾಂತರ ಜನ ಒಂದು ಪ್ರಭಾವಿ ಕುಟುಂಬವನ್ನು ಬೊಟ್ಟು ಮಾಡಿ ತೋರಿಸ್ತಾ ಇದ್ರೂ ಸರ್ಕಾರದ ಮೌನ ಯಾಕೆ ? ಇದಕ್ಕೂ ಉತ್ತರವನ್ನು ಗೃಹ ಸಚಿವರ ಪರಮೇಶ್ವರ್ ಅವರೇ ನೀಡಬೇಕು . ಇನ್ನು ಮನಸ್ಸು ಮಾಡಿದ್ರೆ ಕೇಸ್ ರೀ ಓಪನ್ ಮಾಡಬಹುದು ಅನ್ನೋದಿಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ. ಅದೂ ಕೂಡಾ ಸೌಜನ್ಯ ಪ್ರಕರಣದಂತೆ ಸೇಮ್ ಟು ಸೇಮ್ ಇದೆ.

ಇದು ಸೇಮ್ ಟು ಸೇಮ್ ಸೌಜನ್ಯಳದ್ದೇ ಕಥೆ ಆದರೆ ಯುವತಿ ಬೇರೆ..!
ಹೌದು ಹೈದರಾಬಾದ್ ನಲ್ಲಿ 2007 ರಲ್ಲಿ ನಡೆದ ಬಿ ಫಾರ್ಮ್ ವಿದ್ಯಾರ್ಥಿನಿ ಆಯೆಷಾ ಮೇರಿ ಹತ್ಯಾ ಪ್ರಕರಣ ಸೇಮ್ ಟು ಸೇಮ್ ಸೌಜನ್ಯ ಪ್ರಕರಣದಂತೆ ಇದೆ. ವಿಜಯವಾಡದ ಖಾಸಗಿ ಹಾಸ್ಟೆಲ್ ನಿಂದ 2007 ರ ಡಿಸೆಂಬರ್ 26 ರಂದು ನಾಪತ್ತೆಯಾಗಿದ್ದ ಆಯೆಷಾ ಮೇರಿ ಮರುದಿನ ಹಾಸ್ಟೆಲ್ ಬಾತ್ ರೂಮ್ ನಲ್ಲಿ ರಕ್ತದ ಮಡುವಿನಲ್ಲಿ ಬರ್ಬರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಸಾವು ಅದೆಷ್ಟು ಭೀಕರವಾಗಿತ್ತು ಅಂದ್ರೆ ಆಕೆಯ ಮೈಮೇಲೆ ಸಂಪೂರ್ಣ ಬ್ಲೇಡ್ ನಿಂದ ಗೀರಿದ ಗಾಯಗಳೇ ತುಂಬಿತ್ತು. ಇನ್ನು ಮೃತದೇಹದ ಪಕ್ಕದಲ್ಲೇ ಒಂದೆರಡು ಲವ್ ಲೆಟರ್ ಮಾದರಿಯ ಪತ್ರದ ತುಂಡುಗಳು ರಕ್ತಸಿಕ್ತವಾಗಿ ಬಿದ್ದಿತ್ತು. ಹೀಗಾಗಿ ಇದೊಂದು ಪಾಗಲ್ ಪ್ರೇಮಿ ಮಾಡಿದ ಕೃತ್ಯ ಮೇಲ್ನೋಟಕ್ಕೆ ಕಂಡು ಬಂದಿತ್ತು.
ಇಲ್ಲೂ ಆರಂಭದಲ್ಲೇ ಪೊಲೀಸರು ಸಾಕ್ಷ್ಯವನ್ನು ನಾಶ ಮಾಡಿದ್ದರು..!
ಸೌಜನ್ಯ ಪ್ರಕರಣದಲ್ಲಿ ಹೇಗೆ ಆರಂಭದಲ್ಲೇ ಸಾಕ್ಷ್ಯವನ್ನು ನಾಶ ಮಾಡಲಾಗಿತ್ತೋ ಅದೇ ರೀತಿ ಇಲ್ಲೂ ಕೂಡಾ ಪೊಲೀಸರು ಸಾಕ್ಷ್ಯ ನಾಶ ಮಾಡಿದ್ದಾರೆ. ನಾಪತ್ತೆಯಾಗಿದ್ದ ಆಯೇಷಾ ಮೇರಿ ಕೊಲೆಯಾದ ಸುದ್ದಿ ತಿಳಿದ ಎರಡು ಗಂಟೆಗಳ ಬಳಿಕ ಇಬ್ರಾಹಿಂ ಪಟ್ಟಣದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆಗಾಗಲೇ ಕೊಲೆಯಾದ ಸ್ಥಳದಲ್ಲಿ ಓಡಾಡಿದ ಜನರಿಂದ ಆರೋಪಿಯ ಸುಳಿವು ಸಿಗಬಹುದಾದ ಪ್ರಾಥಮಿಕ ಸಾಕ್ಷ್ಯಗಳು ನಾಶವಾಗಿತ್ತು. ಇದೊಂದು ಭೀಕರ ಘಟನೆಯಾಗಿದ್ರೂ ತನಿಖೆಯನ್ನೇ ನಡೆಸದೆ ಪೊಲೀಸರು ಸುಮ್ಮನಾಗಿದ್ದರು. ಒಂಬತ್ತು ತಿಂಗಳ ಬಳಿಕ ಮಾನವ ಹಕ್ಕುಗಳ ಹೋರಾಟಗಾರರು ಸಂತ್ರಸ್ತೆಯ ತಾಯಿಗೆ ನ್ಯಾಯ ಕೊಡಿಸಲು ಹೋರಾಟ ಆರಂಭಿಸಿದ ಬಳಿಕ ಮತ್ತೆ ತನಿಖೆ ಆರಂಭವಾಗಿತ್ತು.
ಅಪರಾಧಿಯಾಗಿ ಜೈಲು ಸೇರಿದ್ದ ನಿರಾಪರಾಧಿ ವಿಕಲಚೇತನ ಯುವಕ..!
ಆಯೇಷಾ ತಾಯಿ ಶಂಶಾದ್ ಬೇಗಂ ತನಿಖೆಗೆ ಒತ್ತಾಯಿಸಿದಾಗಲೆಲ್ಲಾ ಸುಮ್ಮನಿರುವಂತೆ ಹೇಳಿದ್ದ ಪೊಲೀಸರು ಮಾನವ ಹಕ್ಕುಗಳ ಹೋರಾಟಗಾರರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ತನಿಖೆಯ ನಾಟಕ ಮಾಡಿ ಓರ್ವ ಮೊಬೈಲ್ ಕಳ್ಳನನ್ನು ಆರೋಪಿ ಎಂದು ಸಾಕ್ಷ್ಯಗಳನ್ನು ಇಟ್ಟು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ವಿಜಯವಾಡದ ಮಹಿಳಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ 2010 ರ ತನಕವೂ ನಡೆದಿದೆ. ಅದೇ ವರ್ಷ ಸೆಪ್ಟಂಬರ್ 10 ರಂದು ನ್ಯಾಯಾಲಯ ಸತ್ಯಂ ಬಾಬು ಅಪರಾಧಿ ಎಂದು ಘೋಷಿಸಿ ಜೀವಾವದಿ ಶಿಕ್ಷೆ ಜಾರಿ ಮಾಡಿತ್ತು. ಆದ್ರೆ ಆತ ಅಪರಾಧಿ ಅಲ್ಲ ಅನ್ನೋದು ಆಯೇಷಾ ಮೇರಿ ತಾಯಿ ಶಂಶಾದ್ ಬೇಗಂ ವಾದವಾಗಿತ್ತು.

ಆಂದ್ರದ ಸಚಿವನ ಮೊಮ್ಮಗನ ಮೇಲೆ ಆರೋಪ..! ಎಸ್ ಐ ಟಿ ತನಿಖೆ ಆರಂಭ..!

ವಿಜಯವಾಡದವರೇ ಆಗಿದ್ದ ಆಂದ್ರಪ್ರದೇಶದ ಅಂದಿನ ಪೌರಾಡಳಿತ ಸಚಿವ ಕೊನೆರು ರಂಗರಾವ್ ಅವರ ಮೊಮ್ಮಗ ಕೊನೆರು ಸತೀಷ್ ವಿರುದ್ಧ ಈ ಪ್ರಕರಣ ಸುತ್ತಾಡಿತ್ತು. ಇದೇ ಕಾರಣದಿಂದ ತನಿಖೆ ನಡೆಸದ ಪೊಲೀಸರು ಅಮಾಯಕನೊಬ್ಬನನ್ನು ಬಂಧಿಸಿ ಆತನನ್ನೇ ಅಪರಾಧಿ ಅಂತ ಸಾಭೀತು ಮಾಡಿದ್ದರು. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸತ್ಯಂ ಬಾಬು ಪರ ಹೋರಾಟಗಾರರೇ ಹೈಕೋರ್ಟ್ನಲ್ಲಿ ವಕೀಲರನ್ನು ನೇಮಿಸಿ ಆತ ನಿರಾಪರಾಧಿ ಅಂತ ವಾದಿಸಿದ್ದರು. ಒಂಬತ್ತು ವರ್ಷಗಳ ಬಳಿಕ ಅಂದ್ರೆ 2017 ರಲ್ಲಿ ಹೈ ಕೋರ್ಟ್ ಸತ್ಯಂ ಬಾಬು ನಿರಾಪರಾಧಿ ಅಂತ ಆದೇಶ ನೀಡಿ ಆತನಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಹಾಗೂ ತನಿಖೆ ನಡೆಸಿದ ಪೊಲೀಸರ ವಿರುದ್ಧ ಕ್ರಮಕ್ಕೂ ಆದೇಶ ನೀಡಿತ್ತು.

ಸತ್ಯಂ ಬಾಬು ಅಲ್ಲದೇ ಇದ್ರೆ ಆರೋಪಿ ಯಾರು ? ಹ್ಯಾಷ್ ಟ್ಯಾಗ್ ಅಭಿಯಾನ..!
ಸತ್ಯಂ ಬಾಬು ಅಪರಾಧಿ ಅಂತ ಸಾಬೀತಾದ ಮೇಲೆ ಬಹುತೇಕರು ನ್ಯಾಯದ ಹೋರಾಟದಿಂದ ದೂರ ಸರಿದಿದ್ದರು. 9 ವರ್ಷಗಳಲ್ಲಿ ಜನರು ಆಯೇಷಾ ಮೇರಿ ಪ್ರಕರಣವನ್ನೇ ಮರೆತು ಹೋಗಿದ್ದರು. ಸತ್ಯಂ ಬಾಬು ನಿರಪರಾಧಿಯಾಗಿ ಹೊರ ಬಂದಾಗ ರೇವತಿ ಪೊಗಡದಂಡ ಎಂಬ ಸಾಮಾಜಿಕ ಹೋರಾಟಗಾರ್ತಿ ಈ ಹೋರಾಟಕ್ಕೆ ಮರು ಜೀವ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ ಅಭಿಯಾನ ನಡೆಸಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿದ್ದಾರೆ. ಇದು ಯಾವ ರೀತಿಯ ಪರಿಣಾಮ ಬೀರಿತ್ತು ಅಂದ್ರೆ ಆಂದ್ರ ಪ್ರದೇಶದ ಎಲ್ಲಾ ಮಾದ್ಯಮಗಳು ಕೂಡಾ ಈ ವಿಚಾರವನ್ನು ನಿರಂತರ ಬಿತ್ತರಿಸಲು ಆರಂಭಿಸಿತ್ತು. ಪೌರಾಡಳಿತ ಸಚಿವ ಕೊನೆರು ರಂಗರಾವ್ ಅವರ ಮೊಮ್ಮಗ ಕೊನೆರೂ ಸತೀಷ್ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದ್ದ ಕಾರಣ ಸರ್ಕಾರ ನ್ಯಾಯಾಲಯದ ಸುಪರ್ದಿಯಲ್ಲೇ ಎಸ್ ಐ ಟಿ ತನಿಖೆಗೆ ಒಪ್ಪಿಸಿತ್ತು. ಆದ್ರೆ ಎಸ್ ಐ ಟಿ ತನಿಖೆ ಆರಂಭಿಸುತ್ತಿದ್ದಂತೆ ವಿಚಾರಣಾ ನ್ಯಾಯಾಲಯದಲ್ಲಿದ್ದ ಎಲ್ಲಾ ದಾಖಲೆಗಳು ಕೂಡಾ ನಾಪತ್ತೆಯಾಗಿ ಹೋಗಿತ್ತು. ಹೀಗಾಗಿ ಹೈ ಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಿಸಿ ವಿಚಾರಣಾ ನ್ಯಾಯಾಲಯದಲ್ಲಿ ದಾಖಲೆ ನಾಪತ್ತೆಯ ಸಹಿತ ಆಯೇಷಾ ಪ್ರಕರಣದ ಮರು ತನಿಖೆಗೆ ಆದೇಶ ನೀಡಿತ್ತು.

ಸಿಬಿಐ ತನಿಖೆ ಆರಂಭ.. ಹನ್ನೆರಡು ವರ್ಷಗಳ ಬಳಿ ರೀ ಪೋಸ್ಟ್ ಮಾರ್ಟಂ

ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ ಕೊನೆರೂ ಸತೀಶ್ ಸೇರಿದಂತೆ ಹಾಸ್ಟೆಲ್ ವಾರ್ಡನ್, ಸಹಪಾಠಿಗಳು ಹಾಗೂ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿದೆ. ಅಷ್ಟೇ ಅಲ್ಲದೆ 12 ವರ್ಷದ ಬಳಿಕ ಅಂದ್ರೆ 2019 ರಲ್ಲಿ ಆಯೇಷಾ ಮೇರಿಯ ಮೃತದೇಹವನ್ನು ಹೊರತೆಗೆದು ರೀ ಪೋಸ್ಟ್ ಮಾರ್ಟಂ ಮಾಡಿದ್ದಾರೆ. ಮಗಳ ಸಾವಿನ ನ್ಯಾಯಕ್ಕಾಗಿ ಧಾರ್ಮಿಕ ಮುಖಂಡರ ವಿರೋಧದ ನಡುವೆಯೂ ಆಯೇಷಾ ತಾಯಿ ಪೋಸ್ಟ್ ಮಾರ್ಟಂ ಗೆ ಸಮ್ಮತಿ ಸೂಚಿಸಿದ್ದಾರೆ. ವಿಪರ್ಯಾಸ ಅಂದ್ರೆ ದೇಹದ ಮಾದರಿ ಸಂಗ್ರಹಿಸಿ ಅವಶೇಷವನ್ನು ವಾಪಾಸು ನೀಡುವುದಾಗಿ ಹೇಳಿದ್ದ ಸಿಬಿಐ ವರ್ಷಗಳು ಕಳೆದ್ರೂ ಅವಶೇಷ ಹಿಂತಿರುಗಿಸಿಲ್ಲ ಮಾತ್ರವಲ್ಲ ಅದರ ಬಳಿಕ ತನಿಖೆಯನ್ನೂ ಮುಂದುವರೆಸಿಲ್ಲ. ಅಂದಿನ ಸಿಜೆಐ ರಮಣ ಅವರು ಸಿಬಿಐ ಯನ್ನು ಇದೇ ಪ್ರಕರಣದ ವಿಚಾರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಶಂಕಿತ ಹಾಸ್ಟೆಲ್ ವಾರ್ಡನ್ , ಆಯೇಷಾ ಸಹಪಾಠಿಗಳ ನಾರ್ಕೋ ಪರೀಕ್ಷೆಗೆ ಸಿಬಿಐ ವಿಜಯವಾಡದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದ್ರೆ ವಿಜಯವಾಡ ನ್ಯಾಯಾಲಯ ಅರ್ಜಿ ತಿರಸ್ಕರಿಸುವುದರೊಂದಿಗೆ ಪ್ರಕರಣ ಮತ್ತೆ ಮೊದಲ ಹಂತಕ್ಕೆ ಬಂದು ನಿಂತಿದೆ.

ಆಯೇಷಾ ಮೇರಿ ಪ್ರಕರಣದಲ್ಲಿ ಹೋರಾಟಗಾರರ ಹೋರಾಟ, ಜವಾಬ್ದಾರಿ ನಿಭಾಯಿಸಿದ ಮಾಧ್ಯಮಗಳ ಕಾರಣದಿಂದ ಪ್ರಕರಣ ರಿ ಓಪನ್ ಆಗಿದ್ದು ಹೋರಾಟ ಇನ್ನೂ ಜೀವಂತವಾಗಿದೆ. ಹೀಗಿರುವಾಗ ಸೌಜನ್ಯ ಪ್ರಕರಣದ ಮರು ತನಿಖೆ ಯಾಕೆ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕಾಗಿದೆ.

ಬರಹ : ರಾಜೇಶ್ ರಾವ್ ಪುತ್ತೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page