15 ಸಾವಿರ ಸಂಬಳದ ರಾಮಮಂದಿರ ನೌಕರ ಅನುಕಲ್ಪ ಮಿಶ್ರಾ ಬಳಿ 65 ಲಕ್ಷದ ಮನೆ, ಫಾರ್ಮ್‌ಹೌಸ್, ಎಸ್‌ಯುವಿ ಕಾರು: ಆರೋಪಿಯ ಆಸ್ತಿ ಕಂಡು ಬೆಚ್ಚಿಬಿದ್ದ ತನಿಖಾಧಿಕಾರಿಗಳು!

ಲಕ್ನೋ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಹಗರಣದ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತೊಂದು ಶಾಕಿಂಗ್ ಸತ್ಯ ಹೊರಹಾಕಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ 22 ವರ್ಷದ ಆರೋಪಿ ಅನುಕಲ್ಪ್ ಮಿಶ್ರಾ ಎಂಬಾತನ ಬಳಿ ಆದಾಯಕ್ಕೂ ಮೀರಿದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಆಸ್ತಿಗಳು ಇರುವುದನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆಹಚ್ಚಿದ್ದಾರೆ.

ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಅಯೋಧ್ಯೆ ಮಂದಿರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಅನುಕಲ್ಪ್ ಮಿಶ್ರಾ ಎಂಬ ಈ ಯುವಕನ ಮಾಸಿಕ ವೇತನ ಕೇವಲ 15,000 ರೂಪಾಯಿ ಮಾತ್ರ. ಆದರೆ, ಇಷ್ಟು ಕಡಿಮೆ ಸಂಬಳದ ನಡುವೆಯೂ ಆತ ಇತ್ತೀಚೆಗೆ ಅಯೋಧ್ಯೆಯಲ್ಲಿ ಬರೋಬ್ಬರಿ 65 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ವಂತ ಗ್ರಾಮದಲ್ಲಿ ಅತ್ಯಂತ ಸುಸಜ್ಜಿತವಾದ ಫಾರ್ಮ್‌ಹೌಸ್ ಒಂದನ್ನು ನಿರ್ಮಿಸಿಕೊಂಡಿದ್ದಾನೆ.

ಈತನ ಬಳಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಮೌಲ್ಯದ ಬೈಕ್ ಇದ್ದು, ಇತ್ತೀಚೆಗಷ್ಟೇ ಹೊಸ ಮಹೀಂದ್ರಾ ಸ್ಕಾರ್ಪಿಯೋ (SUV) ಕಾರನ್ನು ಸಹ ಬುಕ್ ಮಾಡಿದ್ದ ಎನ್ನಲಾಗಿದೆ. ಇಷ್ಟು ಅತ್ಯಲ್ಪ ಅವಧಿಯಲ್ಲಿ ಈತ ಇಷ್ಟೊಂದು ವಿಲಾಸಿ ಜೀವನ ನಡೆಸಲು ಹೇಗೆ ಸಾಧ್ಯವಾಯಿತು ಎಂಬ ಕೋನದಲ್ಲಿ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಆರೋಪಿಯ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಆತನ ಕೌಶಲ್‌ಪುರಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಬ್ಯಾಂಕ್ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಇತರ ಹಣಕಾಸಿನ ವ್ಯವಹಾರಗಳ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆ ತನ್ನ ಸ್ವಂತ ಊರಿನಲ್ಲಿ ಏಳು ದಿನಗಳ ಕಾಲ ಅತ್ಯಂತ ದುಬಾರಿ ಮತ್ತು ವಿಲಾಸಿ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈತನ ಕುಟುಂಬದ ಆರ್ಥಿಕ ಸ್ಥಿತಿ ದಿಢೀರನೆ ತೀವ್ರವಾಗಿ ಸುಧಾರಿಸಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಣ ಹಗರಣದ ಮೂಲಕವೇ ಸಂಪಾದಿಸಿದ್ದೇ ಅಥವಾ ಬೇರೆ ಮಾರ್ಗಗಳಿವೆಯೇ ಎಂದು ಪರಿಶೀಲಿಸುತ್ತಿರುವ ಪೊಲೀಸರು, ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಇತರೆ ಎಲ್ಲಾ ಆರೋಪಿಗಳ ಆಸ್ತಿಪಾಸ್ತಿಗಳನ್ನೂ ಸಹ ಸಂಪೂರ್ಣವಾಗಿ ಪರೀಶೀಲನೆಗೆ ಒಳಪಡಿಸುವುದಾಗಿ ಪ್ರಕಟಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು