ಜಿಎಸ್‌ಟಿ ತೆರಿಗೆ ಪದ್ಧತಿ ಬಂದ ನಂತರ ತೆರಿಗೆಯ ವಿಷಯದಲ್ಲಿ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧದ ಕೂಗು ಇನ್ನಷ್ಟು ಗಟ್ಟಿಯಾಗಿದೆ.
ಕಳೆದ ಬಾರಿ ತೆರಿಗೆ ಹಂಚಿಕೆ ವಿಷಯದಲ್ಲಿ ದೊಡ್ಡ ಮಟ್ಟದಲ್ಲೇ ದನಿಯೆತ್ತಿದ್ದ ಮಾಜಿ ಡಿಕೆ ಸುರೇಶ್ ಅವರು ಈ ಅನ್ಯಾಯ ಹೀಗೆಯೇ ಮುಂದುವರೆದರೆ ದಕ್ಷಿಣದ ರಾಜ್ಯಗಳು ಪ್ರತ್ಯೇಕ ದೇಶ ಕಟ್ಟಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳುವ ಮೂಲಕ, ತೆರಿಗೆ ಕುರಿತಾಗಿ ದೇಶವ್ಯಾಪಿ ಚರ್ಚೆ ನಡೆಯುವಂತೆ ಮಾಡಿದ್ದರು.
ಟ್ವಿಟರ್ ರೀತಿಯ ವೇದಿಕೆಗಳಲ್ಲಿ ಕನ್ನಡ ಹೋರಾಟಗಾರರ ಜೊತೆಗೆ, ನೆರೆಯ ತಮಿಳುನಾಡು ಹಾಗೂ ಕೇರಳ ಕೂಡಾ ಈ ವಿಷಯದಲ್ಲಿ ದನಿಗೂಡಿಸಿದ್ದವು.
ಇದೀಗ ಪ್ರತಿ ವರ್ಷವೂ ತೆರಿಗೆ ಹಂಚಿಕೆ ವಿಷಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.
2014ರಿಂದ ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕದಿಂದ ಬಿಜೆಪಿ ಸಂಸದರು ಆಯ್ಕೆಯಾಗುತ್ತಿದ್ದಾರೆಯಾದರೂ ಅವರಿಂದ ಕರ್ನಾಟಕಕ್ಕೆ ದೊರಕಿದ ಲಾಭ ಏನೆಂದು ನೋಡಿದರೆ ನಮಗೆ ಎದುರಾಗುವುದು ದೊಡ್ಡ ಸೊನ್ನೆ ಮಾತ್ರ.
ಈ ತೆರಿಗೆ ಅನ್ಯಾಯಕ್ಕೆ ಸಂಬಂಧಿಸಿದಂತೆಯೂ ಈ ಸಂಸದರದು ದಿವ್ಯ ಮೌನ.
ನಿನ್ನೆ ಕೇಂದ್ರ ಸರ್ಕಾರ ಮತ್ತೆ ತೆರಿಗೆ ಕಂತನ್ನು ಬಿಡುಗಡೆ ಮಾಡಿದ್ದು, ಈ ಕುರಿತಾಗಿ ಕೇಂದ್ರಕ್ಕೆ ಧನ್ಯವಾದ ತಿಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. ಆದರೆ ಈ ಹಿಂದೆ ಈ ವಿಷಯದಲ್ಲಿ ಕೇಂದ್ರದ ಕುರಿತು ಕೇಳಿಬಂದಿದ್ದ ವಿಮರ್ಶೆಗಳಿಗೆ ಹೆದರಿ ಅವರು ತಮ್ಮ ಟ್ವೀಟಿಗೆ ಸಾರ್ವಜನಿಕರು ಕಮೆಂಟ್ ಮಾಡದಂತೆ ಆಫ್ ಮಾಡಿ ಕುಳಿತಿದ್ದಾರೆ.
ಅವರು ತಮ್ಮ ಟ್ವೀಟಿನಲ್ಲಿ ತೆರಿಗೆ ಕಂತು ಬಿಡುಗಡೆ ಮಾಡುವ ಮೂಲಕ ಕೇಂದ್ರ ಕರ್ನಾಟಕ್ಕೆ ಉಪಕಾರ ಮಾಡಿದೆ ಎನ್ನುವಂತೆ ಟ್ವೀಟ್ ಮಾಡಿದ್ದಾರೆ, ಆದರೆ ಅವರು ತೆರಿಗೆ ಅನ್ಯಾಯದ ಕುರಿತು ತುಟಿ ಬಿಚ್ಚಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ “ದೈರ್ಯದಿಂದ ಕನ್ನಡಿಗರನ್ನ ಎದುರಿಸಿ ಕಾಮೆಂಟ್ಸ್ ಯಾಕ್ ಆಫ್ ಮಾಡಿದ್ದೀರಿ?
ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದ್ರು ಪ್ರಶ್ನೆ ಮಾಡದೇ ಈ ರೀತಿ ಕೆಲಸ ಮಾಡಿಕೊಂಡು ಬಂದೆ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.
ವಿಜಯೇಂದ್ರ ಅವರೇ ನಿಮ್ಮ ಹೈ ಕಮಾಂಡ್ ಏನೆ ಮಾಡಿದ್ರು ಅವ್ರನ್ನ ಹೊಗಳುವ ಅಥವಾ ಮೆಚ್ಚಿಸೋ ಕೆಲಸ ನಿಮಗೆ ಕೊಟ್ಟಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.