ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ಕರೆದ ಸಭೆಗೆ ನಾನು ಹೋಗುವುದಿಲ್ಲ ಎಂದು ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿ.ಟಿ.ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ನಾನು ಸಭೆಯಲ್ಲಿ ಭಾಗಿಯಾಗಲ್ಲ ಎಂದೇ ಹೇಳಿದ್ದಾರೆ.
ಕುಟುಂಬ ರಾಜಕಾರಣದ ಅಪವಾದದ ಮೇಲೆಯೇ ಹೆಚ್ಚು ಸುದ್ದಿ ಆಗಿರುವ ದೇವೇಗೌಡರ ಕುಟುಂಬ ಮತ್ತದೇ ಹಾದಿ ತುಳಿಯುತ್ತಾ, ಕುಮಾರಸ್ವಾಮಿ ಅವರ ಮಗ ನಿಖಿಲ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನು ರಾಜ್ಯಾಧ್ಯಕ್ಷರ ಮಾಡಲು ಹೊರಟಿದೆ. ಸಹಜವಾಗಿಯೇ ಈ ಬೆಳವಣಿಗೆ ಜೆಡಿಎಸ್ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ‘ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ನಡೆಯುವ ಸಭೆಯಲ್ಲಿ ನಾನು ಭಾಗಿಯಾಗುವುದಿಲ್ಲ. ಹೆಚ್.ಡಿ ದೇವೇಗೌಡ ಅವರು 92 ವರ್ಷದ ಹಿರಿಯ ಮುತ್ಸದ್ಧಿಯಾಗಿದ್ದಾರೆ. ಅವರು ಜಯಪ್ರಕಾಶ್ ನಾರಾಯಣ ಅವರ ಜೊತೆಗೆ ಸೇರಿ ಕಟ್ಟಿದ ಪಕ್ಷ ಇದು. ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಅವರಿಬ್ಬರೇ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ.” ಎಂದು ಹೇಳಿದ್ದಾರೆ.
ನಾನು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ದಿಗೆ ಓಡಾಡುತ್ತಿದ್ದೇನೆ. ಆದ್ದರಿಂದ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ ಎಂದಿದ್ದಾರೆ.
ಸಧ್ಯ ರಾಜ್ಯಾಧ್ಯಕ್ಷನಾಗಿ ನಿಖಿಲ್ ಆಯ್ಕೆ ಬಗ್ಗೆ ಈಗಾಗಲೇ ಹಲವು ನಾಯಕರು ಅಪಸ್ವರ ಎತ್ತಿದ್ದು, ಒಂದು ಬಾರಿಯೂ ಗೆಲ್ಲದ ವ್ಯಕ್ತಿಯನ್ನು ರಾಜ್ಯಾಧ್ಯಕ್ಷನನ್ನಾಗಿ ಸ್ವೀಕರಿಹುವುದು ನಮಗೆ ಸೂಕ್ತ ಎನಿಸುವುದಿಲ್ಲ. ಅದಲ್ಲದೇ ಹಿರಿತನದ ಆಧಾರದಲ್ಲಿ ಹಲವು ನಾಯಕರು ಪಕ್ಷದಲ್ಲಿದ್ದರೂ ನಿಖಿಲ್ ನಂತಹ ತೀರಾ ಹೊಸಬ, ದೇವೇಗೌಡರ ಕುಟುಂಬದ ಕುಡಿ ಎಂಬ ಕಾರಣಕ್ಕೆ ಆಯ್ಕೆ ಮಾಡುವುದು ಸೂಕ್ತ ಅಲ್ಲ ಎಂದು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬಂದ ಮಾತಾಗಿದೆ.
ಈಗಾಗಲೇ ಜಿಟಿ ದೇವೇಗೌಡರು ಎಲ್ಲರಿಗೂ ತಿಳಿಯುವಂತೆ ತಮ್ಮ ಅಸಮಾಧಾನ ಹೊರ ಹಾಕಿದ್ದರೆ.. ಪಕ್ಷದ ಒಳಗೇ ಇನ್ನಷ್ಟು ಮಂದಿ ಮುಂದಿನ ದಿನಗಳಲ್ಲಿ ನಿಖಿಲ್ ಬಗ್ಗೆ ತಕರಾರು ತಗೆಯುವ ಸಾಧ್ಯತೆ ಇದೆ ಎನ್ನಲಾಗಿದೆ.