Home ಮೀಡಿಯಾ ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

0

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಶಿಕಾರಿಪುರದಲ್ಲಿ ಎದುರಾಗಿರುವ ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬದಲಾಯಿಸುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಒಪ್ಪಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ 81,810 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾದರು. ಆದರೆ ಆ ಗೆಲುವು ಸುಲಭವಾಗಿರಲಿಲ್ಲ ಎಂಬ ವಿಶ್ಲೇಷಣೆಗಳು ಈಗ ಮತ್ತೆ ಮುಂದಕ್ಕೆ ಬರುತ್ತಿವೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಸ್‌ಪಿ ನಾಗರಾಜ ಗೌಡ 70,802 ಮತಗಳನ್ನು ಪಡೆದು ವಿಜಯೇಂದ್ರಗೆ ಭಾರೀ ಪೈಪೋಟಿ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ 8,101 ಮತಗಳನ್ನು ಪಡೆದಿದ್ದರು. ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾಗರಾಜ್ ಗೌಡ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿದರೆ ಸಮೀಕರಣ ಬದಲಾಗಬಹುದು ಎಂಬ ಲೆಕ್ಕಾಚಾರಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿವೆ.

ಇದರಿಂದಲೇ ಶಿಕಾರಿಪುರದಲ್ಲಿ ಸೋಲಿನ ಭೀತಿ ಎದುರಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ವಿಜಯೇಂದ್ರ ಬೆಂಗಳೂರು ನಗರ ಅಥವಾ ತುಮಕೂರು ಭಾಗದತ್ತ ಮುಖ ಮಾಡಬಹುದು ಎಂಬ ರಾಜಕೀಯ ಅಂದಾಜುಗಳು ವ್ಯಕ್ತವಾಗುತ್ತಿವೆ. ರಾಜ್ಯಾಧ್ಯಕ್ಷರಾಗಿರುವ ಕಾರಣ, ನಗರ ಪ್ರದೇಶದಲ್ಲಿ ಸ್ಪರ್ಧಿಸಿದರೆ ಸಂಘಟನೆಗೆ ಬಲ ಸಿಗಬಹುದು ಎಂಬ ಕಾರಣವನ್ನೂ ಉಲ್ಲೇಖಿಸಲಾಗುತ್ತಿದೆ.

ಇತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ವಿಜಯೇಂದ್ರಗೆ ಶಿಕಾರಿಪುರ ಅಲ್ಲಾಡುತ್ತಿದೆ. ವರುಣಾ, ರಾಜಾಜಿನಗರ, ತುಮಕೂರು – ಎಲ್ಲಿ ನಿಲ್ಲುತ್ತಾರೆ ಎಂದು ಮೊದಲು ತೀರ್ಮಾನ ಮಾಡಲಿ” ಎಂದು ಟೀಕಿಸಿದ್ದಾರೆ. ಯತ್ನಾಳ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಇನ್ನಷ್ಟು ಬೆಂಕಿ ಹಚ್ಚಿದೆ.

2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಕ್ಷೇತ್ರ ಮಟ್ಟದಲ್ಲಿ ಈಗಾಗಲೇ ಚಟುವಟಿಕೆಗಳು ಆರಂಭವಾಗಿವೆ. ಶಿಕಾರಿಪುರದಲ್ಲಿ ಪ್ರತಿಸ್ಪರ್ಧಿಗಳ ಚಲನವಲನ, ಅಸಮಾಧಾನಗೊಂಡ ನಾಯಕರು ಹಾಗೂ ಮತದಾರರ ಮನೋಭಾವ ಎಲ್ಲವೂ ಸೇರಿ ಮುಂದಿನ ಚುನಾವಣೆಯಲ್ಲಿ ಕಠಿಣ ಪೈಪೋಟಿ ಎದುರಾಗುವ ಸೂಚನೆ ನೀಡುತ್ತಿದೆ.

You cannot copy content of this page

Exit mobile version