ರಾಜಣ್ಣ ಆಗಮನದಿಂದ ಮಧ್ಯ ಕರ್ನಾಟದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ: ಬಿವೈ ವಿಜಯೇಂದ್ರ

ಬೆಂಗಳೂರಿನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹಾಗೂ ‘ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ’ದ ರಾಜ್ಯಾಧ್ಯಕ್ಷ ರಾಜಣ್ಣ ಅವರ ಸೇರ್ಪಡೆಯಿಂದಾಗಿ ಕೇಂದ್ರ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಶಾವಾದ ವ್ಯಕ್ತಪಡಿಸಿದ್ದಾರೆ.

ಗುರುವಾರದಂದು ಬೆಂಗಳೂರಿನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮತ್ತು ಮಾಜಿ ಸಂಸದ ಎ. ನಾರಾಯಣಸ್ವಾಮಿ ಅವರ ಸಮ್ಮುಖದಲ್ಲಿ ರಾಜಣ್ಣ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಬಿಜೆಪಿಗೆ ವಿಜಯೇಂದ್ರ ಅವರು ಬರಮಾಡಿಕೊಂಡರು. “ಯಾವುದೇ ಅಧಿಕಾರ ಅಥವಾ ಹುದ್ದೆಯ ಆಕಾಂಕ್ಷೆಯಿಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಬಿಜೆಪಿಯ ಸಿದ್ಧಾಂತವನ್ನು ಒಪ್ಪಿ ರಾಜಣ್ಣ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ” ಎಂದು ವಿಜಯೇಂದ್ರ ಶ್ಲಾಘಿಸಿದರು.

ಇತ್ತೀಚೆಗಷ್ಟೇ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರ ನಿಧನದಿಂದಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರವು ತೆರವಾಗಿದ್ದು, ಈ ಸಂದರ್ಭದಲ್ಲಿ ರಾಜಣ್ಣ ಅವರ ಬಿಜೆಪಿ ಸೇರ್ಪಡೆ ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ. ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ. ಸುಧಾಕರ್ ಅವರು ಬಿಜೆಪಿಯ ಪೂರ್ಣಿಮಾ ಕೃಷ್ಣಪ್ಪ (ಶ್ರೀನಿವಾಸ್) ಅವರ ವಿರುದ್ಧ 30,322 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಅದೇ ವರ್ಷದಲ್ಲಿ ಪೂರ್ಣಿಮಾ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದರು.

ಹಿರಿಯೂರು ಕ್ಷೇತ್ರದಲ್ಲಿ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದ್ದು, ರಾಜಣ್ಣ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ‘ಕಾಡುಗೊಲ್ಲ’ ಸಮುದಾಯದ ಮತಗಳು ಅತ್ಯಂತ ನಿರ್ಣಾಯಕವಾಗಿದ್ದು, ಆ ಸಮುದಾಯದ ಪ್ರಭಾವಿ ನಾಯಕರಾಗಿರುವ ರಾಜಣ್ಣ ಅವರ ಎಂಟ್ರಿ ಬಿಜೆಪಿಗೆ ಉಪಚುನಾವಣೆಯಲ್ಲಿ ಭಾರಿ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು