Home ಬೆಂಗಳೂರು ಡಾ.ಬಾಬು ಜಗಜೀವನ ರಾಂ ದೇಶದ ಜನರಿಗೆ ಆಹಾರ ಭದ್ರತೆ ಒದಗಿಸಿದವರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಡಾ.ಬಾಬು ಜಗಜೀವನ ರಾಂ ದೇಶದ ಜನರಿಗೆ ಆಹಾರ ಭದ್ರತೆ ಒದಗಿಸಿದವರು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು, ಜು.05 : ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರಾಗಿರುವ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರು ದೇಶದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದ ಮಹಾನ್‌ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಶನಿವಾರ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ಆಹಾರದ ಕೊರತೆಯುಂಟಾಗಿ, ಬೇರೆ ದೇಶಗಳ ಮುಂದೆ ಬೇಡಬೇಕಾದ ಪರಿಸ್ಥಿತಿ ಇತ್ತು. ಹೊಸ ತಳಿಗಳ ಅಭಿವೃದ್ದಿ ಸೇರಿದಂತೆ ಹಲವು ಕ್ರಮಗಳ ಮೂಲಕ ಜಗಜೀವನರಾಂ ಅವರು ಆಹಾರ ಭದ್ರತೆಯನ್ನು ಒದಗಿಸಿದರು.

ಜಗಜೀವನರಾಂ ಅವರು ರಕ್ಷಣಾ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರೂ, ದಕ್ಷ ಆಡಳಿತ ನೀಡಿದ್ದಾರೆ. ಕಾರ್ಮಿಕರ ಪರವಾಗಿ ಅನೇಕ ಕಾಯ್ದೆಗಳನ್ನು ರಚಿಸಿದ ಕೀರ್ತಿ ಅವರದು. ಬಡವರು, ರೈತರು, ಕೂಲಿ ಕಾರ್ಮಿಕರ ಪರವಾಗಿ ನಿರಂತರವಾಗಿ ಅವರು ಹೋರಾಟ ನಡೆಸಿದ್ದಾರೆ. ಅವರು ತೋರಿದ ಹಾದಿಯಲ್ಲಿ ನಡೆಯುವ ಸಂಕಲ್ಪವನ್ನು ಈ ದಿನ ನಾವು ಮಾಡಬೇಕಾಗಿದೆ ಎಂದರು.

ಭವನ ಲೋಕಾರ್ಪಣೆ: ಸುಮಾರು 3ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ.ಬಾಬು ಜಗಜೀವನರಾಂ ಭವನವನ್ನು ಜುಲೈ 13ರಂದು ಲೋಕಾರ್ಪಣೆ ಮಾಡಲಾಗುವುದು. ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಅರ್ಹ ಅಭ್ಯರ್ಥಿಗಳಿಗೆ ವಿಜ್ಞಾನ, ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಸಹ ಈ ಭವನದಲ್ಲಿ ಒದಗಿಸಲಾಗುವುದು ಎಂದರು.
ಚುನಾವಣೆಗಾಗಿ ಭಾರತ್‌ ಅಕ್ಕಿ: ಸಿಎಂ ಟೀಕೆ
ಕೇಂದ್ರ ಸರ್ಕಾರ ಆರಂಭಿಸಿದ್ದ ʻಭಾರತ್‌ ಅಕ್ಕಿʼ ಯೋಜನೆ ಸ್ಥಗಿತಗೊಳಿಸಿರುವ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೋಸ್ಕರ ಈ ಯೋಜನೆ ಆರಂಭಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದಾಗ, ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನಿದ್ದರೂ ನೀಡಲಿಲ್ಲ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಕ್ಕಿ ನೀಡದ ಕಾರಣ ನಾವು ಜನರಿಗೆ ಹೆಚ್ವುವರಿಯಾಗಿ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದರು.

You cannot copy content of this page

Exit mobile version