Home ದೇಶ ಸಿಂಗ್ರೌಲಿ ಅದಾನಿ ಪವರ್ ಪ್ಲಾಂಟ್‌ನಲ್ಲಿ ಕಾರ್ಮಿಕನ ಸಾವಿನ ಹಿನ್ನೆಲೆ: ಆಕ್ರೋಶ ಭುಗಿಲೆದ್ದು ಹಿಂಸಾಚಾರ, ಪೊಲೀಸ್ ವಾಹನಗಳು...

ಸಿಂಗ್ರೌಲಿ ಅದಾನಿ ಪವರ್ ಪ್ಲಾಂಟ್‌ನಲ್ಲಿ ಕಾರ್ಮಿಕನ ಸಾವಿನ ಹಿನ್ನೆಲೆ: ಆಕ್ರೋಶ ಭುಗಿಲೆದ್ದು ಹಿಂಸಾಚಾರ, ಪೊಲೀಸ್ ವಾಹನಗಳು ಜಖಂ

0

ಮಧ್ಯಪ್ರದೇಶದ ಸಿಂಗ್ರೌಲಿ ಪ್ರದೇಶದಲ್ಲಿರುವ ಅದಾನಿ ಪವರ್ ಪ್ಲಾಂಟ್‌ನಲ್ಲಿ ಕಾರ್ಮಿಕನೊಬ್ಬ ಸಂಸ್ಥೆಯ ಬೇಜವಾಬ್ದಾರಿತನದ ಪರಿಣಾಮ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರಿ ಪ್ರತಿಭಟನೆ ಉಂಟಾಗಿ, ಪರಿಸ್ಥಿತಿ ಉದ್ವಿಗ್ನತೆಯತ್ತ ತಿರುಗಿದ ಘಟನೆ ವರದಿಯಾಗಿದೆ.

ಮೃತ ಕಾರ್ಮಿಕ ಲಲ್ಲನ್ ಸಿಂಗ್ ಅವರ ಸಾವಿಗೆ ಪ್ಲಾಂಟ್ ನಿರ್ವಹಣೆಯ ನಿರ್ಲಕ್ಷ್ಯ ಮತ್ತು ಭದ್ರತಾ ಕ್ರಮಗಳ ಕೊರತೆ ಕಾರಣವೆಂದು ಆರೋಪಿಸಿ, ಸಹೋದ್ಯೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದು, ಕೆಲವು ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ಹಲವು ವಾಹನಗಳಿಗೆ ಹಾನಿ ಮಾಡಿದ್ದಾರೆ. ಅದರ ಹಿಂದೆಯೇ ಕಚೇರಿ ಭಾಗಕ್ಕೆ ಬೆಂಕಿ ಹಚ್ಚಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪೊಲೀಸರು ಪವರ್ ಪ್ಲಾಂಟನ್ನು ಸುತ್ತುವರೆದಿದ್ದಾರೆ.

ಈ ನಡುವೆ, ಕಾರ್ಮಿಕರು ಪ್ಲಾಂಟ್‌ನಲ್ಲಿ ಶೋಷಣೆ, ಅಪಾಯಕಾರಿ ಕೆಲಸದ ಪರಿಸ್ಥಿತಿ ಮತ್ತು ಭದ್ರತಾ ನಿಯಮಗಳ ಉಲ್ಲಂಘನೆಗಳ ಬಗ್ಗೆ ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ. ಘಟನೆಯ ತೀವ್ರತೆಯನ್ನು ಗಮನಿಸಿದ ಜಿಲ್ಲಾಡಳಿತವು ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

ಇದೇ ರೀತಿಯ ಅಸಮಾಧಾನಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದು, ಗೊಡ್ಡಾ ಜಿಲ್ಲೆಯಲ್ಲಿಯೂ 2025ರಲ್ಲಿ ಉದ್ಯೋಗ ಭರವಸೆ ಈಡೇರದ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆ ವೇಳೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಶಮನಗೊಳಿಸಿದ್ದರು.

ಈ ಘಟನೆಯು ಮತ್ತೊಮ್ಮೆ ಅದಾನಿ ಕೈಗಾರಿಕಾ ಯೋಜನೆಗಳಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಹಕ್ಕುಗಳ ಕುರಿತ ಚರ್ಚೆಯನ್ನು ಮುಂದಿಟ್ಟಿದೆ.

You cannot copy content of this page

Exit mobile version