ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಇಲಾಖೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ಬಳಿಕ ಅವರು ಸಹಿ ಹಾಕಿದ್ದ ಮೊದಲ ಕಡತಕ್ಕೆ ಈಗ ಹಿನ್ನಡೆಯಾಗಿದೆ. ಅದರಂತೆ ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆ ನಡೆಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಲಿಖಿತವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದದ್ದು, ಗಣಿಗಾರಿಕೆ ಆರ್ಡರ್ ಕಾಪಿ ತಗೆದುಕೊಳ್ಳದಿರಲು ಹಾಗೂ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL)ಗೆ ಅರಣ್ಯ ತಿರುವಳಿಗೆ ಗುತ್ತಿಗೆ ಪತ್ರವನ್ನ ನೀಡದಂತೆ ಇಲಾಖೆಗೆ ಸೂಚಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯವರು ತಾವು ಅಧಿಕಾರ ವಹಿಸಿಕೊಂಡ ಮೊದಲ ಕಡತಕ್ಕೆ ಸಹಿಹಾಕಿದ್ದರು. ನಂತರ ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡು, ನನ್ನ ಸಚಿವಾಲಯದ ಮೊದಲ ಕಡತಕ್ಕೆ ಸಹಿ ಹಾಕಿದೆ, ಇದು ಕರ್ನಾಟಕಕ್ಕೆ ಸಂಬಂಧಿಸಿದ ಕಡತ ಎಂಬುದು ವಿಶೇಷ ಎಂದು ಬರೆದುಕೊಂಡಿದ್ದರು.
ಅಷ್ಟೇ ಅಲ್ಲದೇ, ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗಾಗಿ KIOCL ಲಿಮಿಟೆಡ್‌ನ ಮೊದಲ ಕಡತಕ್ಕೆ ಸಹಿ ಹಾಕಲಾಯಿತು. ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರ ನಾಥ್ ಸಿನ್ಹಾ ಉಪಸ್ಥಿತರಿದ್ದರು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.
ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪತ್ರದಲ್ಲಿ ಏನಿದೆ?
ʼಬೆಂಗಳೂರಿನ KIOCL(ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್) ಸಂಸ್ಥೆಯು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ, 401,5761 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಅರಣ್ಯ ತಿರುವಳಿ ಪಡೆದಿದೆ. ಅರಣ್ಯ ಇಲಾಖೆ ವತಿಯಿಂದ ಅರಣ್ಯ ತಿರುವಳಿ ಗುತ್ತಿಗೆ ಪತ್ರಕ್ಕೆ ಸಹಿ ಹಾಕುವುದು ಸೇರಿ, ಜಮೀನು ಹಸ್ತಾಂತರ ಬಾಕಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಸ್ಥೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ನಡೆದ ಗಣಿಗಾರಿಕೆಯ ಲೋಪದೋಷ/ಅರಣ್ಯ ಕಾಯ್ದೆ ಉಲ್ಲಂಘನೆಗಳಿಗಾಗಿ ಸಿಇಸಿಯು ನೀಡಿರುವ ನಿರ್ದೇಶನಗಳನ್ನ ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣವಾಗಿ ಜಾರಿಮಾಡಲು ಕಂಪನಿ ವಿಫಲವಾಗಿದೆ. ಈ ಬಗ್ಗೆ ಕೆಐಒಸಿಎಲ್ ಕಂಪನಿ ವಿರುದ್ಧ ದೂರುಗಳೂ ಕೇಳಿಬಂದಿವೆ. ಹೀಗಾಗಿ ಸಂಸ್ಥೆಯು ಸಿಇಸಿ ನಿರ್ದೇಶನಗಳನ್ನ ಅನುಷ್ಠಾನಗೊಳಿಸುವವರೆಗೆ, ಅದಕ್ಕೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿರುವಳಿಯನ್ನ ಅನುಷ್ಠಾನಗೊಳಿಸದಂತೆ (ಅರಣ್ಯ ತಿರುವಳಿ ಗುತ್ತಿಗೆ ಪತ್ರ ಕೊಡದಂತೆ) ಹಾಗೂ ಅರಣ್ಯ ಭೂಮಿಯನ್ನ ಹಸ್ತಾಂತರ ಮಾಡದಂತೆ ಸಂಬಂಧಪಟ್ಟವರಿಗೆ ತಕ್ಷಣವೇ ಸೂಚಿಸಲು ನಿರ್ದೇಶನ ನೀಡಲಾಗಿದೆʼ ಎಂಬ ಅಂಶಗಳನ್ನು ಸಚಿವ ಈಶ್ವರ್ ಖಂಡ್ರೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.
ಪರಿಸರವಾದಿಗಳ ತೀವ್ರ ವಿರೋಧ
ಗಣಿಗಾರಿಕೆಯನ್ನು ವಿರೋಧಿಸಿ ‘ಸೇವ್ ಸಂಡೂರು ಫಾರೆಸ್ಟ್’ ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಅದರಂತೆ ಗಣಿಗಾರಿಕೆ ಆರಂಭವಾದರೆ ಹಂತ ಹಂತವಾಗಿ 99 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪರಿಸರ ಪ್ರೇಮಿಗಳು ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಗಣಿಗಾರಿಕೆಯಿಂದ ಪರಿಸರ ನಾಶವಾಗಲಿದೆ. ಇದು ಜನ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಂಡೂರಿನಲ್ಲಿ ಉಳಿದಿರುವ ಅರಣ್ಯವನ್ನಾದರೂ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದರು.