ದೆಹಲಿ: ಕೇಂದ್ರದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಯುಕೆ ಮೂಲದ ರಕ್ಷಣಾ ಉತ್ಪನ್ನಗಳ ಡೀಲರ್ ಸಂಜಯ್ ಭಂಡಾರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ವಾದ್ರಾ ಈ ಪ್ರಕರಣದಲ್ಲಿ ಒಂಭತ್ತನೇ ಆರೋಪಿಯಾಗಿ ದಾಖಲಾಗಿದ್ದು, ದೆಹಲಿಯ ರೌಸ್ ಅವೆನ್ಯೂ ಕೋರ್ಟ್‌ಗೆ ಈ ಕುರಿತು ಆರೋಪಪಟ್ಟಿ ಸಲ್ಲಿಸಲಾಗಿದೆ.
ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಓಟ್ ಚೋರಿ ಆರೋಪದ ಹಿನ್ನೆಲೆಯಲ್ಲಿ ರಾಬರ್ಟ್ ವಾದ್ರಾ ಚುನಾವಣಾ ಆಯೋಗದ ಅಕ್ರಮದ ಬಗ್ಗೆ ಆರೋಪ ಮಾಡಿದ್ದರು. ಆ ಹೇಳಿಕೆ ಬೆನ್ನಲ್ಲೇ ಈಗ ರಾಬರ್ಟ್ ವಾದ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಕೇಸ್ ನಲ್ಲಿ ಸಂಜಯ್ ಭಂಡಾರಿ, ಸುಮಿತ್ ಚಡ್ಯಾ, ಸಂಜೀವ್ ಕಪೂರ್, ಅನಿರುದ್ಧ್ ವಾಧ್ವಾ, ಮತ್ತು ಹಲವು ಸಂಸ್ಥೆಗಳ ವಿರುದ್ಧವೂ ಆರೋಪಗಳನ್ನು ಹಾಕಲಾಗಿದೆ. ಸಂಜಯ್ ಭಂಡಾರಿ ಭಾರತದಲ್ಲಿ ಶಸ್ತ್ರಾಸ್ತ್ರಗಳ ದಲ್ಲಾಳಿಯಾಗಿದ್ದು, ದೇಶವನ್ನು ತೊರೆದು ಲಂಡನ್‌ನಲ್ಲಿದ್ದಾರೆ. ಆದಾಯ ತೆರಿಗೆ ಇಲಾಖೆ ಕೂಡ ಸಂಜಯ್‌ಗೆ ಸೇರಿದ ಆಸ್ತಿ ಮೇಲೆ ದಾಳಿ ನಡೆಸಿತ್ತು.
2017 ರಲ್ಲಿ ಕಪ್ಪು ಹಣ ವಿರೋಧಿ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಸಂಜಯ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.
ED ಅಧಿಕಾರಿಗಳು ಲಂಡನ್‌ನಲ್ಲಿರುವ ಜಾಗ ಮತ್ತು ಆಸ್ತಿಗಳ ವಿಷಯದಲ್ಲಿ ರಾಬರ್ಟ್ ವಾದ್ರಾ ಹಾಗೂ ಸಂಜಯ್ ಭಂಡಾರಿಗೆ ಈಗಾಗಲೇ ನೋಟೀಸ್ ನೀಡಿದ್ದಾರೆ. ಇತ್ತೀಚೆಗೆ ರಾಬರ್ಟ್ ವಾದ್ರಾ ಈ ಪ್ರಕರಣವನ್ನು ರಾಜಕೀಯ ಪ್ರೇರಿತ ಎಂದು ನಿರಾಕರಿಸಿದ್ದಾರೆ.
ಈ ತನಿಖೆಯಲ್ಲಿ ರಾಬರ್ಟ್ ವಾದ್ರಾ ಮತ್ತು ಸಂಬಂಧಿತರ ವಿರುದ್ಧ ಹೊಸ ಆರೋಪಿಗಳು ಬೆಳಕಿಗೆ ಬರುತಿವೆ. ಈ ಪ್ರಕರಣವು ಕಾಂಗ್ರೆಸ್ ಕುಟುಂಬ ಮತ್ತು ರಾಜಕೀಯ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
