“..ಹೊಸ ಇತಿಹಾಸದ ಪ್ರಕಾರ, ಪ್ರಾಚೀನ ಭಾರತದ ಜಾಗತಿಕ ಸಾಧನೆಗಳು ಭಯಂಕರ! ನಾವು ಇನ್ನೂ ಅವುಗಳನ್ನು ಕಂಡುಕೊಳ್ಳುತ್ತಿದ್ದೇವೆ! ಸಂಘಪರಿವಾರದ ಸೋಷಿಯಲ್ ಮೀಡಿಯಾ ಸ್ಟುಡಿಯೋ ಅಡ್ಡೆಗಳಲ್ಲಿ!..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಭಾರತದ ಹೊಸ ಇತಿಹಾಸಕ್ಕೆ ಸುಸ್ವಾಗತ! ನಿಮಗಾಗಿಯೇ ಇತಿಹಾಸ್ಯ ಪಾಕತಜ್ಞರಾದ ಕಪ್ಪಟ ಬ್ರಾಹ್ಮಣ ಅಮೃತ ಹಸ್ತದಿಂದ, ಶುದ್ಧ ದೇಶೀ ಹಸುವಿನ ಶುದ್ಧ ತುಪ್ಪವನ್ನೇ ಬಳಸಿ ತಯಾರಿಸಲಾದ, ಕೇಸರಿ ಬೆರೆಸಿದ ರುಚಿರುಚಿಯಾದ, ಇತಿಹಾಸ ಪಾಕವನ್ನು ಆಸ್ವಾದಿಸಿ. ಇಲ್ಲಿಯ ತನಕ ನೀವು ಹಿಂದಿನ ಬಗ್ಗೆ ತಿಳಿದಿದ್ದೇವೆ ಎಂದು ಭಾವಿಸಿದ್ದೆಲ್ಲವೂ ಕೇವಲ “ಜಾತ್ಯತೀತ” ಪಿತೂರಿ! ಈ ಅದ್ಭುತ ಹೊಸ ನಿರೂಪಣೆಯ ಪ್ರಕಾರ, ಪ್ರಾಚೀನ ಭಾರತವು ಜಾಗತಿಕ ಮಹಾಶಕ್ತಿಯಾಗಿತ್ತು, ವಿಜ್ಞಾನ ಸಮುದ್ರಯಾನ, ಬಾಹ್ಯಾಕಾಶ ಯಾನ ಮತ್ತು ವಾಸ್ತುಶಿಲ್ಪದಲ್ಲಿ ಮತ್ತು ನೀವು ವಾತ್ಸಾಯನನ ಕಾಮಸೂತ್ರದಿಂದ ಹಿಡಿದು, ಯಾವ ವಿಷಯ ಎತ್ತುತ್ತೀರೋ ಅದರಲ್ಲೆಲ್ಲಾ ಶ್ರೇಷ್ಠವಾಗಿತ್ತು! ಅದರ ಶ್ರೇಷ್ಠತೆಯನ್ನು ಮುಗ್ಧ ಭಾರತೀಯರ ಮೆದುಳಿಗೆ ತುರುಕಿ ಅಚ್ಚೊತ್ತುತ್ತಿರುವ ವಾಟ್ಸಪ್ ವಿಶ್ವವಿದ್ಯಾಲಯದ “ಸ್ವಯಂಘೋಷಿತ ಇತಿಹಾಸಕಾರ”ರಿಗೆ ಧನ್ಯವಾದಗಳನ್ನು ಹೇಳಲೇಬೇಕು!
ಆರೆಸ್ಸೆಸ್ ಮತ್ತು ಬಿಜೆಪಿ ಪರಿವಾರದ ಪ್ರಾಯೋಜಕತ್ವ ಇರುವ ಮಹಾನ್ “ಮರುಸಂಶೋಧನೆ” ಮತ್ತು”ಕೇಸರೀಕರಣ”ದ ಈ ಯೋಜನೆಯು – ಇಡೀ ಇತಿಹಾಸಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿ, ಒಂದು ನಿರ್ದಿಷ್ಟವಾದ, ಅದ್ಭುತವಾದ ಹಿಂದೂ-ಕೇಂದ್ರಿತ ಮಸೂರವನ್ನು ಜನರ ಮನಸ್ಸಿಗೇ ಅಳವಡಿಸುತ್ತದೆ. ಇದು ಅಸತ್ಯಗಳನ್ನು ಸರಿಪಡಿಸಿ ಸತ್ಯವಾಗಿಸುವುದಿಲ್ಲ! ಸತ್ಯಗಳನ್ನು ಮಾರ್ಪಡಿಸುತ್ತದೆ ಮತ್ತು ಹೊಸ ಸುಳ್ಳುಗಳನ್ನು ಉತ್ಪಾದಿಸುತ್ತದೆ. ಇದು “ಘಾಸಿಗೊಂಡ” “ಹಿಂದೂ ಭಾವನೆ”ಗಳಿಗೆ ಮುಲಾಮು ಹಚ್ಚಿ, ಅವರಿಗೆ ಅರವಳಿಕೆ ನೀಡುತ್ತದೆ. ಇನ್ನು ಅವರಿಗೆ ಮೆದುಳು ಉಪಯೋಗಿಸಿ ಚಿಂತನೆ ಮಾಡುವ ಅಗತ್ಯವೇ ಬೀಳಲಾರದು. ಇತಿಹಾಸದಲ್ಲಿದ್ದ ಆ ಎಲ್ಲಾ ಕಿರುಕುಳಕಾರಿ, ಕಿರಿಕಿರಿ ಬಹು-ಧಾರ್ಮಿಕವಾಗಿದ್ದ ಸಾವಿರಾರು ವರ್ಷಗಳನ್ನು ಸರಿದೂಗಿಸಲು ಸಾಕಷ್ಟು ಹಿಂದೂ ವೈಭವವನ್ನು ಎತ್ತಿಎತ್ತಿ ತೋರಿಸಲಾಗಿದೆ. ಎಲ್ಲರೂ, ಎಲ್ಲವೂ “ಛಂಗಾಸಿ” ಎಂದು ಕುಣಿದು ಕುಪ್ಪಳಿಸಬೇಕು! (ಅಂದಹಾಗೆ, ಮುಸಲ್ಮಾನರು, ಕ್ರೈಸ್ತರು ಈ ಪ್ರಕ್ರಿಯೆಯಲ್ಲಿ ಕೆಟ್ಟದಾಗಿ ಕಾಣುತ್ತಿದ್ದರೆ, ಅದಕ್ಕೆ ಕಾರಣ ಅವರೇ! ಬೌದ್ಧ, ಜೈನರನ್ನು ನಾವು ಹಿಂದೆಯೇ ಹಿಂದೂ ಧರ್ಮದ ಅಡಿಯಾಳುಗಳನ್ನಾಗಿ ಮಾಡಿ ಆಗಿದೆ!)
ಈಗ ಇತಿಹಾಸವನ್ನು ಬದಲಿಸುವುದು ಒಂದು ಸ್ವಿಚ್ ಒತ್ತಿದಷ್ಟೇ ಸುಲಭ! ಮಸೀದಿಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸುವುದು ಕೂಡಾ! ನೀವು ಪಿ.ಎನ್. ಓಕ್ ಬಗ್ಗೆ ಕೇಳಿರಬಹುದು. ನಾನೇ ಈ “ಇತಿಹಾಸ್ಯ”ಕೋರನ ಬಗ್ಗೆ ಬರೆದಿದ್ದೇನೆ! ಆತ ಅಸಾಂಪ್ರದಾಯಿಕವಾದ “ಸನಾತನ ಸಂಪ್ರದಾಯದ” ಇತಿಹಾಸಕಾರರು. ಅವರು “ಪುರಾವೆಗಳು” ಅಥವಾ “ಪೀರ್ ರಿವ್ಯೂ” (ಸಮಕಾಲೀನರ ವಿಮರ್ಶೆ)ನಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವರು ಇನ್ಸ್ಟಿಟ್ಯೂಟ್ ಫಾರ್ ರಿರೈಟಿಂಗ್ ಇಂಡಿಯನ್ ಹಿಸ್ಟರಿಯನ್ನು ಪ್ರಾರಂಭಿಸಿದರು. ಅಂದರೆ, ಇತಿಹಾಸವನ್ನು ಮರಳಿ ಬರೆಯುವ ಸಂಸ್ಥೆ! ನೀವು ಇತಿಹಾಸವನ್ನು ಪುನಃ ಬರೆಯಬಹುದಾದರೆ, ಅದು ಯಾವ ಸೀಮೆ ಇತಿಹಾಸ? ಅದನ್ನು ಯಾವ ಕರ್ಮಕ್ಕೆ ಓದಬೇಕು?!
ಅವರ ಅತ್ಯಂತ ಪ್ರಸಿದ್ಧ “ಆವಿಷ್ಕಾರ”? ತಾಜ್ ಮಹಲ್! ಆ ಭವ್ಯವಾದ ಮೊಘಲ್ ಸಮಾಧಿಯನ್ನು ಶಹಜಹಾನ್ ತನ್ನ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಲಿಲ್ಲ. ಇಲ್ಲ, ಇಲ್ಲ, ಇಲ್ಲ! ಅದು ನಕಲಿ ಸುದ್ದಿ. ಅದು ವಾಸ್ತವವಾಗಿ “ತೇಜೋ ಮಹಾಲಯ” ಎಂಬ ಪ್ರಾಚೀನ ಹಿಂದೂ ಶಿವ ದೇವಾಲಯವಾಗಿತ್ತು. ಸ್ಪಷ್ಟವಾಗಿ, ಶಹಜಹಾನ್ ಅಲ್ಲಿಗೆ ಬಂದು, ಅದರ ಮೇಲೆ ಹೊಸ ಫಲಕವನ್ನು ಹೊಡೆದು, ಇಡೀ ತಾನು ನಿರ್ಮಿಸಿದೆ ಎಂದು ಹೇಳಿಕೊಂಡನು. ಎಂತಾ ಉದ್ಧಟ ಹಿಂದೂ ವಿರೋಧಿ ಆ ಶಹಾಜಹಾನ್!
ಆದರೆ, ಈ ಓಕಣ್ಣ ಅಲ್ಲಿಗೆ ನಿಲ್ಲಲಿಲ್ಲ! ಮಕ್ಕಾದಲ್ಲಿರುವ ಕಾಬಾ, ರೋಮ್‌ನಲ್ಲಿರುವ ವ್ಯಾಟಿಕನ್ ಮತ್ತು ವೆಸ್ಟ್‌ಮಿನಿಸ್ಟರ್ ಅಬ್ಬೆ ಕೂಡ ರಹಸ್ಯವಾಗಿ ಪ್ರಾಚೀನ ಹಿಂದೂ ದೇವಾಲಯಗಳಾಗಿವೆ ಎಂದು ಅತ “ಕಂಡುಹಿಡಿದರು”. ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮವು ಹಿಂದೂ ಧರ್ಮದ ಸಣ್ಣ, ಸ್ವಲ್ಪ ವಿರೂಪಗೊಂಡ ಉಪವಿಭಾಗಗಳಾಗಿವೆ ಎಂದು ಓಕ್ ಕಂಡುಕೊಂಡರು. ಉಳಿದವರೆಲ್ಲರೂ ಬೆಂಕಿಯನ್ನು ಹೇಗೆ ತಯಾರಿಸಬೇಕೆಂದು ಲೆಕ್ಕಾಚಾರ ಮಾಡುತ್ತಿರುವ ಕಾಲಕ್ಕೆ, ವೈದಿಕ ಜನರು ಪ್ರಪಂಚದಾದ್ಯಂತ ದೇವಾಲಯಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆಂದು ತೋರುತ್ತದೆ. ಯಾಕೆಂದರೆ, ಈ ಹೊಸ ಇತಿಹಾಸದ ಪ್ರಕಾರ ಆ ಕಾಲದಷ್ಟು ಪುರಾತನ ದೇವಾಲಯಗಳಿವೆ! ನಿಜವಾಗಿಯೂ, “ಭಾರತದಲ್ಲಿ ಎಲ್ಲವೂ ಚೆನ್ನಾಗಿತ್ತು” ಗೊತ್ತಾಯ್ತಾ?! ಅಂದಹಾಗೆ, ಭಾರತದ ಹೊರಗೆ ಕೂಡಾ ಎಲ್ಲವೂ ಚೆನ್ನಾಗಿತ್ತು! ಯಾಕೆಂದರೆ, ಅದು ಕೂಡ ವಾಸ್ತವವಾಗಿ ಭಾರತೀಯವೇ! ನಾವೇ ಎಲ್ಲವನ್ನೂ ನಿರ್ಮಿಸಿದ್ದು! ನಮ್ಮದೇ ದೊಡ್ಡದು!
ಪಾರ್ಟಿಗೆ ತಡವಾಗಿ ಬಂದ ಕೊಲಂಬಸಪ್ಪ!
ಹೊಸ ಇತಿಹಾಸದ ಪ್ರಕಾರ, ಪ್ರಾಚೀನ ಭಾರತದ ಜಾಗತಿಕ ಸಾಧನೆಗಳು ಭಯಂಕರ! ನಾವು ಇನ್ನೂ ಅವುಗಳನ್ನು ಕಂಡುಕೊಳ್ಳುತ್ತಿದ್ದೇವೆ! ಸಂಘಪರಿವಾರದ ಸೋಷಿಯಲ್ ಮೀಡಿಯಾ ಸ್ಟುಡಿಯೋ ಅಡ್ಡೆಗಳಲ್ಲಿ! ಈ ಕಾರ್ಖಾನೆಗಳಲ್ಲಿ ಸಗಟು ಸಗಟಾಗಿ ಇದರ ವಿಡಿಯೋ ಮತ್ತು ಪೋಸ್ಟ್‌ಗಳನ್ನು ಉತ್ಪಾದಿಸಿ, ಕಾಸಿಗೊಂದು ಪೋಸ್ಟಿಗೆರಡು ರೂ. ದರದಲ್ಲಿ ಮಡ್ಡ ಹಿಂಬಾಲಕರ ಮೂಲಕ ಮನೆಮನೆಗೆ ತಲಪಿಸುತ್ತಿದ್ದೇವೆ
ಉದಾಹರಣೆಗೆ, ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕವನ್ನು ಕಂಡುಹಿಡಿಯಲಿಲ್ಲ ಎಂಬ ಇತ್ತೀಚಿನ, “ಭೂಮಿ ಕಂಪಿಸುವ” ಮಹಾನ್ ಸತ್ಯವನ್ನು ತೆಗೆದುಕೊಳ್ಳಿ. 2024ರಲ್ಲೇ ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವರಾಗಿದ್ದ ಇಂದರ್ ಸಿಂಗ್ ಪರ್ಮಾರ್ ಎಂಬ ಮಹಾನುಭಾವರು ಬಹಿರಂಗವಾಗಿ ಇದನ್ನು ಹೇಳಿದ್ದರು! ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸರಿ, ಮಹಾಜನರೇ! ವಾಸುಲುನ್ ಎಂಬ ಹಿಂದೂ ನಾವಿಕ 8ನೇ ಶತಮಾನದಲ್ಲೇ ಅದನ್ನು ಕಂಡುಹಿಡಿದಿದ್ದ! ವಾಸುಲುನ್ ಸ್ಪಷ್ಟವಾಗಿಯೇ ತುಂಬಾ ಮುಂದುವರಿದಿದ್ದ ಮನುಷ್ಯ! ಅವನು ಕ್ಯಾಲಿಫೋರ್ನಿಯಾದ ದಡದಲ್ಲಿ ಇಳಿದ ತಕ್ಷಣವೇ ಚಿಟಿಕೆ ಹೊಡೆಯುವುದರೊಳಗೆ ಅಲ್ಲಿನ ಸ್ಯಾನ್ ಡಿಯಾಗೋದಲ್ಲಿ ದೇವಾಲಯಗಳನ್ನು ನಿರ್ಮಿಸಿದ! ತವರಿಗೆ ಹಿಂತಿರುಗುವ ಮೊದಲು ಮಾಯನ್ ನಾಗರಿಕತೆಯನ್ನು ಅಭಿವೃದ್ಧಿಪಡಿಸಲು ವೈಯಕ್ತಿಕವಾಗಿ ಸಹಾಯ ಮಾಡಿದ. ಕೊಲಂಬಸ್ ಕೇವಲ ಆ ನಾಗರಿಕತೆಯ ಅವಶೇಷಗಳ ಮೇಲೆ ಎಡವಿ ಬಿದ್ದದ್ದು! ಸಾವಿರಾರು ಜಾಗತಿಕ ಇತಿಹಾಸಕಾರರು, ಪುರಾತತ್ತ್ವಜ್ಞರು ಮತ್ತು ಭೂಗೋಳಶಾಸ್ತ್ರಜ್ಞರಿಗೆ ಅದು ಹೇಗೆ ಕ್ಯಾಲಿಫೋರ್ನಿಯಾದಲ್ಲಿ ಸಂಸ್ಕೃತ ಶಾಸನಗಳು ಕಾಣಲಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ!
ಈ ವಿಷಯವು ವಿಜ್ಞಾನಕ್ಕೂ ವಿಸ್ತರಿಸುತ್ತದೆ. ನೀವು ವೇದಗಳನ್ನು ಓದಬಹುದಾದಾಗ ಸಂಶೋಧನೆ ಮತ್ತು ಪ್ರಯೋಗಾಲಯಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಿ? ಹಿಂದೆ ಶೂದ್ರರು, ಕೆಳಜಾತಿಯವರು ವೇದ ಕೇಳಿದರೂ, ಹೇಳಿದರೂ ಕಿವಿಗೆ ಸೀಸ ಹೊಯ್ಯಬೇಕು, ನಾಲಗೆ ಕತ್ತರಿಸಬೇಕು ಎಂದು ಹೇಳಿದ್ದ ನಾವೇ ಈಗ ಅವರ ಮೇಲೆ ದಯತೋರಿ, ಸಂಸ್ಕೃತ ಓದಿ ಎಂದು ಅಂಗಲಾಚುತ್ತಿಲ್ಲವೆ?! ಕೈಲಾಗದ ನಿಮಗೆ ವೇದ ಓದಿ ವ್ಯಾಖ್ಯಾನ ಹೇಳಲೆಂದೇ ನೂಲುಧಾರಿ ಜನ ಇಟ್ಟಿಲ್ಲವೆ!?
ಪ್ರಾಚೀನ ಭಾರತೀಯರು ಪ್ಲಾಸ್ಟಿಕ್ ಸರ್ಜರಿ,(ಗಣೇಶನಿಗೆ ಇದು ನಡೆದಿತ್ತು ಎಂದು ಪ್ರಧಾನಿಯವರೇ ಸಂಶೋಧನೆಯ ಮೂಲಕ ಖಚಿತಪಡಿಸಿ ಸಾರ್ವಜನಿಕವಾಗಿ ಹೇಳಿದ್ದಾರೆ!) ಅಂತರತಾರಾ ಪ್ರಯಾಣ, ವಿಮಾನ ಯಾನ (ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ರಾವಣ ಪುಷ್ಪಕ ವಿಮಾನ ಬಿಡುತ್ತಿದ್ದ), ಕೌರವರು, ದ್ರೋಣ ಮುಂತಾದ ಪ್ರಣಾಳ ಶಿಶುಗಳೂ ಇದ್ದರು! ಪರಮಾಣು ಶಸ್ತ್ರಾಸ್ತ್ರಗಳು (ಬ್ರಹ್ಮಾಸ್ತ್ರ) ಮತ್ತು ಸಾಪೇಕ್ಷತಾ ಸಿದ್ಧಾಂತವನ್ನು ಕೂಡಾ ಕಂಡುಹಿಡಿದಿದ್ದರು! ಐನ್‌ಸ್ಟೈನ್ ಯಾಕೆ ಪ್ರಸಿದ್ಧರಾಗಿದ್ದಾರೆ ಗೊತ್ತೆ? ಯಾಕೆಂದರೆ, ಅವರು ವೇದಗಳನ್ನು ಸಂಶಯಕ್ಕೆ ಎಡೆಯಿಲ್ಲದಂತೆ ಕೃತಿಚೌರ್ಯ ಮಾಡಿದ್ದಾರೆ!
ಈ ಹೊತ್ತಿನಲ್ಲಿ ನಾವು “ಭಾರತದಿಂದ ಹೊರಕ್ಕೆ ಸಿದ್ಧಾಂತ” (Out if India Theory- OIT)ವನ್ನು ನಾವು ಮರೆಯಬಾರದು. ಆ ಕಿರಿಕಿರಿ ತಳಿಶಾಸ್ತ್ರಜ್ಞರು ಮತ್ತು ಭಾಷಾಶಾಸ್ತ್ರಜ್ಞರು ಭಾರತಕ್ಕೆ ಚಿಕ್ಕಪುಟ್ಟ ವಲಸೆಯ ಬಗ್ಗೆ ಏನು ಹೇಳುತ್ತಾರೆಂದು ಮರೆತುಬಿಡಿ! ಸ್ಪಷ್ಟವಾಗಿ, ಇಡೀ ಪ್ರಪಂಚವು ವೈದಿಕ ಜನರಿಂದ ತುಂಬಿತ್ತು! ಅವರೇ ಭಾರತದಿಂದ ಹೊರಟು ಎಲ್ಲರಿಗೂ ಮಾತನಾಡುವುದು ಮತ್ತು ಕೃಷಿ ಮಾಡುವುದು ಹೇಗೆಂದು ಕಲಿಸಿ, ವಾಪಾಸು ಬಂದದ್ದು!
ಸುಳ್ಳಿನ ಈ ಅದ್ಭುತ ನಿರೂಪಣೆಯನ್ನು ಹೇಗೆ ರಚಿಸಲಾಗುತ್ತದೆ? ಇದು “ಇತಿಹಾಸದ ಕೇಸರಿಕರಣ” ಎಂದು ಕರೆಯಲ್ಪಡುವ ಬಹುಮುಖ ಕಾರ್ಯಾಚರಣೆಯಾಗಿದ್ದು, ಪ್ರಾಥಮಿಕವಾಗಿ ಇದರ ಗುರಿಗಳೇನು ಎಂಬುದನ್ನು ಮುಂದೆ ನೋಡೋಣ.
