“..ಕಾನೂನನ್ನು ದುರ್ಬಲರನ್ನು ರಕ್ಷಿಸಲು ಬಳಸಲಾಗುತ್ತಿದೆಯೇ ಅಥವಾ ಶಬ್ದಾರ್ಥ ಮತ್ತು ವ್ಯಾಖ್ಯಾನಗಳ ಲೋಪದೋಷಗಳ ಮೂಲಕ ಆರೋಪಿಗಳಿಗೆ ರಕ್ಷಣೆ ಒದಗಿಸಲು ಬಳಸಲಾಗುತ್ತಿದೆಯೇ ಎಂಬ ಅನುಮಾನ ಹೆಚ್ಚಾಗಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯವನ್ನು ಸಾಮಾನ್ಯವಾಗಿ “ಕುರುಡು” ಬಣ್ಣಿಸಲಾಗುತ್ತದೆ. ನ್ಯಾಯಾಲಯಗಳಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಗಳು ಇದ್ದವು. ನ್ಯಾಯವು ನಿಷ್ಪಕ್ಷಪಾತಿ ಎಂಬುದರ ಸಂಕೇತವಿದು. ಇತ್ತೀಚೆಗೆ ಅದಕ್ಕೆ ಸೀರೆ ಉಡಿಸಿ, ಕಣ್ಣುಪಟ್ಟಿ ತೆಗೆದು, ಕತ್ತಿಯ ಬದಲು ಪುಸ್ತಕ ನೀಡಿದರೂ ಕೆಲವು ನ್ಯಾಯಾಧೀಶರ “ನ್ಯಾಯದ ಕುರುಡುತನ” ಮುಂದುವರಿದಿದೆ. ಹೀಗಿದ್ದರೂ, ಲೈಂಗಿಕ ಹಿಂಸಾಚಾರದ ಪ್ರಕರಣಗಳಲ್ಲಿ, ಈ “ಕುರುಡುತನ”ವು ಕೆಲವೊಮ್ಮೆ ಅತ್ಯಾಚಾರ ಸಂತ್ರಸ್ತೆಯರ ಕುರಿತು ಆಘಾತಕಾರಿ ಅಸೂಕ್ಷತೆ ಮತ್ತು ಸಹಾನುಭೂತಿಯ ಕೊರತೆಯ ರೂಪದಲ್ಲಿ ಪ್ರಕಟವಾಗುತ್ತದೆ. ಅಲ್ಲಿ “ತಾಂತ್ರಿಕ ಸತ್ಯ”ದ (technical truth) ಅನ್ವೇಷಣೆಯು ಮಾನವ ಘನತೆಯ ಜೀವಂತ ವಾಸ್ತವವನ್ನು ಅಳಿಸಿಹಾಕುತ್ತದೆ. ದೇಶಾದ್ಯಂತದ ಹೈಕೋರ್ಟ್‌ಗಳ ಇತ್ತೀಚಿನ ತೀರ್ಪುಗಳು- ಕಾನೂನನ್ನು ದುರ್ಬಲರನ್ನು ರಕ್ಷಿಸಲು ಬಳಸಲಾಗುತ್ತಿದೆಯೇ ಅಥವಾ ಶಬ್ದಾರ್ಥ ಮತ್ತು ವ್ಯಾಖ್ಯಾನಗಳ ಲೋಪದೋಷಗಳ ಮೂಲಕ ಆರೋಪಿಗಳಿಗೆ ರಕ್ಷಣೆ ಒದಗಿಸಲು ಬಳಸಲಾಗುತ್ತಿದೆಯೇ ಎಂಬ ಕುರಿತು ತೀವ್ರವಾದ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿವೆ.
ಸಂತ್ರಸ್ತೆಗೆ ”ತಾಂತ್ರಿಕತೆ”ಯ ಬೋನು; ಅಪರಾಧಿಗೆ ಬಿಡುಗಡೆ
ಹೈಕೋರ್ಟುಗಳ ಮತ್ತು ಕೆಳ ನ್ಯಾಯಾಲಯಗಳ ಕೆಲವೊಂದು ನ್ಯಾಯಾಂಗ ವ್ಯಾಖ್ಯಾನಗಳು ಹೇಯವಾದ ಲೈಂಗಿಕ ದೌರ್ಜನ್ಯದ ಗಂಭೀರತೆಯನ್ನೇ ಹೇಗೆ ದುರ್ಬಲಗೊಳಿಸುತ್ತವೆ ಎಂಬುದನ್ನು ಇತ್ತೀಚಿನ ಎರಡು ಪ್ರಕರಣಗಳು ವಿವರಿಸುತ್ತವೆ. ಮಾರ್ಚ್ 2025ರಲ್ಲಿ, ಅಲಹಾಬಾದ್ ಹೈಕೋರ್ಟ್ ಇಬ್ಬರು ಪುರುಷರ ವಿರುದ್ಧ ಸಮನ್ಸ್ ಆದೇಶವನ್ನು ಮಾರ್ಪಡಿಸಿತು. ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿದು, ಅವಳ ಪೈಜಾಮಾ ಲಾಡಿಯನ್ನು ಎಳೆದು ತುಂಡುಮಾಡುವುದು “ಅತ್ಯಾಚಾರದ ಪ್ರಯತ್ನ”ವಲ್ಲ; ಬದಲಿಗೆ ಕೇವಲ “ಸಿದ್ಧತೆ” ಅಥವಾ “ಗೌರವಕ್ಕೆ ಧಕ್ಕೆತರುವ” ಕಡಿಮೆ ಗುರುತರವಾದ ಅಪರಾಧ ಎಂದು ತೀರ್ಪು ನೀಡಿತು. ಬಲಿಪಶು ಸಂಪೂರ್ಣವಾಗಿ “ವಿವಸ್ತ್ರಗೊಳ್ಳದ” ಕಾರಣ ಆರೋಪಿಗಳು ಅತ್ಯಾಚಾರ ಮಾಡಲು “ಹೆಚ್ಚಿನ ಮಟ್ಟದ ನಿರ್ಧಾರ” ಮಾಡಿರಲಿಲ್ಲ ಎಂದು ನ್ಯಾಯಾಲಯವು ತರ್ಕಿಸಿತು. ಈ ರೀತಿಯ ತರ್ಕವು ಮುಂದೆ ದುಷ್ಕರ್ಮಿಗಳಿಗೆ “ಬಾಲಕಿಯೊಬ್ಬಳ ಲಾಡಿ ಕಿತ್ತರೆ, ಸ್ತನ ಹಿಡಿದರೆ ಅಷ್ಟೊಂದು ದೊಡ್ಡ ಅಪರಾಧವಲ್ಲ” ಎಂಬ ಸಂದೇಶ, ಪ್ರೇರಣೆ ನೀಡುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ? “ಘನ” ನ್ಯಾಯಾಲಯಕ್ಕೆ ಹಾಗೆ ಅನಿಸಲೇ ಇಲ್ಲ!
ಫೆಬ್ರವರಿ 2026ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಆದೇಶವನ್ನು ಕೈಗೆತ್ತಿಕೊಂಡು, ಅದು “ಸೂಕ್ಷ್ಮತೆಯಿಲ್ಲದ, ಸಂವೇದನೆ ಇಲ್ಲದ ಅಮಾನವೀಯ ತೀರ್ಪು” ಎಂದು ಕಟುವಾಗಿ ಛೀಮಾರಿ ಹಾಕಿ ತಡೆಹಿಡಿದಿದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಪೀಠವು- ನ್ಯಾಯಾಧೀಶರ ಇಂತಾ ಅಭಿಪ್ರಾಯ ಪ್ರಕಟಣೆಯು ಆ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಾದ ಆಘಾತ ಅಥವಾ ಆಕೆಯ ಯಾತನೆಯ ಬಗ್ಗೆ ಸಂಪೂರ್ಣವಾಗಿ ವಿವೇಚನೆಯ ಕೊರತೆಯನ್ನು ತೋರಿಸುತ್ತದೆ ಎಂದು ಛೀಮಾರಿ ಹಾಕಿತು ಮತ್ತು ಆರೋಪಿಗಳ ವಿಚಾರಣೆ ಮುಂದುವರಿಸುವಂತೆ ತೀರ್ಪು ನೀಡಿತು. ಆದರೆ, ಇಡೀ ಪ್ರಕರಣವು ನ್ಯಾಯಾಂಗದ ಬಗ್ಗೆ ಯಾವ ರೀತಿಯ ಜನಾಭಿಪ್ರಾಯ ಉಂಟುಮಾಡಬಹುದು? ನ್ಯಾಯಾಂಗದ ಗೌರವಕ್ಕೆ ಚ್ಯುತಿ ತರುವ ನ್ಯಾಯಾಧೀಶರ ಮೇಲೆ ಯಾವ ಕ್ರಮ ಇದೆ?
ವಾಸುದೇವ್ ಗೊಂಡ್ ವರ್ಸಸ್ ಸ್ಟೇಟ್ ಆಫ್ ಛತ್ತೀಸ್‌ಗಢ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟಿನ ನ್ಯಾಯಾಧೀಶ ನರೇಂದ್ರ ಕುಮಾರ್ ವ್ಯಾಸ್ ಎಂಬವರು ಆರೋಪಿಗೆ ವಿಚಾರಣಾ ನ್ಯಾಯಾಲಯ 2005ರಲ್ಲಿ ವಿಧಿಸಿದ್ದ ಅತ್ಯಾಚಾರದ ಶಿಕ್ಷೆಯನ್ನು (ಐಪಿಸಿ ಸೆಕ್ಷನ್ 376) ರದ್ದುಗೊಳಿಸಿ, ಅತ್ಯಾಚಾರ ಯತ್ನಕ್ಕೆ ಮಾತ್ರ ಶಿಕ್ಷೆ ವಿಧಿಸಿದರು (ಐಪಿಸಿ ಸೆಕ್ಷನ್ 375ರ ಜೊತೆ ಓದಲಾದ ಸೆಕ್ಷನ್ 511).
ಇಲ್ಲಿ ನ್ಯಾಯಾಧೀಶರು ಬಳಸಿದ “ಸೂಕ್ಷ್ಮ ತಾಂತ್ರಿಕತೆ” ಏನು ಗೊತ್ತೆ? ಸಂತ್ರಸ್ತೆಯು ಪಾಟೀ ಸವಾಲಿನಲ್ಲಿ ಒಂದು ಕಡೆ- ಆರೋಪಿಯು “ತನ್ನ ಗುಪ್ತಾಂಗವನ್ನು ತನ್ನ ಯೋನಿಯ ಮೇಲೆ ಹತ್ತು ನಿಮಿಷಗಳ ಕಾಲ ಒಳನುಗ್ಗಿಸದೆ ಇಟ್ಟುಕೊಂಡಿದ್ದಾನೆ” ಎಂದು ಹೇಳಿದ್ದರು. ಇದನ್ನೇ ಹಿಡಿದುಕೊಂಡ ನ್ಯಾಯಾಧೀಶ, 2013ಕ್ಕೆ ಮೊದಲಿನ ಕಾನೂನಿನಡಿಯಲ್ಲಿ ಒಳನುಗ್ಗುವಿಕೆ (penetration)ಯು ಅತ್ಯಾಚಾರಕ್ಕೆ “ಅನಿವಾರ್ಯ ಸ್ಥಿತಿ” (sine qua non) ಆಗಿದೆ ಎಂದು ತೀರ್ಪು ನೀಡಿದರು. ವೈದ್ಯಕೀಯ ವರದಿಯು ಕನ್ಯಾಪೊರೆ ಸಂಪೂರ್ಣ ಹರಿದಿಲ್ಲ ಎಂದು ಹೇಳಿರುವುದರಿಂದ ಮತ್ತು ಸಂತ್ರಸ್ತೆಯ ಹೇಳಿಕೆಯನ್ನು “ನಿಜವಾದ “ಒಳಸೇರಿಸುವಿಕೆ”ಗೆ ಸಂಬಂಧಿಸಿದಂತೆ “ಅಸಂಗತ” ಎಂದು ನ್ಯಾಯಾಧೀಶರು ಪರಿಗಣಿಸಿದರು. ಒಳಸೇರಿಸದೆ ಸ್ಖಲನವು ಕೇವಲ “ಪ್ರಯತ್ನ”ವಾಗಿದೆ ಮತ್ತು ಪೂರ್ಣಗೊಂಡ ಅಪರಾಧವಲ್ಲ ಎಂದು ನ್ಯಾಯಾಧೀಶರು ತಮ್ಮ ಘನ ಅಭಿಪ್ರಾಯ ನೀಡಿದರು. ಪರಿಣಾಮವಾಗಿ ಅಪರಾಧಿಯ ಮೂಲ ಏಳು ವರ್ಷಗಳ ಶಿಕ್ಷೆಯನ್ನು ಮೂರು ವರ್ಷ ಮತ್ತು ಆರು ತಿಂಗಳುಗಳಿಗೆ ಕಡಿತಗೊಳಿಸಲಾಯಿತು.
ಛತ್ತೀಸ್‌ಗಢದ ಈ ನಿರ್ದಿಷ್ಟ ಆದೇಶ ಈಗಷ್ಟೇ ಹೊರಬಿದ್ದಿರುವುದರಿಂದ ಸುಪ್ರೀಂ ಕೋರ್ಟ್ ಇನ್ನೂ ಅದಕ್ಕೆ ತಡೆಯಾಜ್ಞೆ ನೀಡಿಲ್ಲವಾದರೂ, ಅಲಹಾಬಾದ್ ಹೈಕೋರ್ಟ್‌ನ ಪ್ರಕರಣಕ್ಕೆ ಅದರ ಪ್ರತಿಕ್ರಿಯೆಯು ಆ ಕುರಿತ ನಿಲುವನ್ನು ಸ್ಪಷ್ಟಪಡಿಸುತ್ತದೆ:
ಲೈಂಗಿಕ ದೌರ್ಜನ್ಯದ ವಿಚಾರಣೆಗಳು ಬಟ್ಟೆಯನ್ನು “ಸಂಪೂರ್ಣವಾಗಿ” ತೆಗೆದುಹಾಕಲಾಗಿದೆಯೇ, “ಸಂಪೂರ್ಣ ಅಥವಾ ಭಾಗಶಃ ಒಳಹೊಕ್ಕಿದೆಯೇ” ಎಂಬಂತಹ ತಾಂತ್ರಿಕ ಲೋಪದೋಷಗಳನ್ನು ಹುಡುಕುವ ಬದಲು ಮಾನವ ಘನತೆಯ ಉಲ್ಲಂಘನೆ ಮತ್ತು ಬಲಿಪಶುವಿನ ಮೇಲಾದ ಆಘಾತ ಮತ್ತು ಅನುಭವಿಸಿದ ಯಾತನೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ಪೂರ್ವ ನಿದರ್ಶನದಂತೆ ಹೇಳಿದೆ.
ನ್ಯಾಯಕ್ಕೆ ಅಡೆತಡೆಯ ಕಠಿಣ ಹಾದಿ
ಭಾರತದಲ್ಲಿ ಅತ್ಯಾಚಾರದಲ್ಲಿ ಸಂತ್ರಸ್ತರಿಗೆ ನ್ಯಾಯದ ಹಾದಿಯು ಹೆಚ್ಚಿನ ಸಲ ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ದುಃಸ್ವಪ್ನ ಮಾಡುತ್ತದೆ. ಈ ಕಠಿಣ ಹಾದಿಯು ಪೊಲೀಸ್ ಠಾಣೆಯಲ್ಲಿ ಆರಂಭವಾಗುತ್ತದೆ. ಅಲ್ಲಿ ಪೊಲೀಸರ ವರ್ತನೆ ಬಹಳಷ್ಟು ಸಲ ಅವರಿಗೆ ಕಲಿಸಲಾಗಿರುವ- ಬಲಿಪಶುವಿನ ಕುರಿತೇ ಸಂದೇಹದಿಂದ ಹಿಡಿದು, ಕೆಲವು ಸಲ ಸಾರಾಸಗಟು ಒರಟುತನ, ತುಚ್ಛೀಕರಣದಿಂದ ಕೂಡಿರುತ್ತದೆ. ಅನೇಕ ಸಲ ಸಂತ್ರಸ್ತರಿಗೆ “ಮಾನ”ದ ಭಯ ಒಡ್ಡಿ “ರಾಜಿ” ಮಾಡಿಕೊಳ್ಳಲು ಒತ್ತಾಯಿಸಲಾಗುತ್ತದೆ. ಅನೇಕ ಸಂತ್ರಸ್ತೆಯರು ಹೀಗೆ ಹೇಳಿದ್ದಾರೆ. ಅಥವಾ ಅವರು ಉಟ್ಟ ಬಟ್ಟೆಯನ್ನು, ಅತ್ಯಾಚಾರದ ಸಮಯವನ್ನು, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅವರ ಇರುವಿಕೆಯನ್ನೇ ದೂಷಿಸುವ ಅವಮಾನಕರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಹಲವಾರು ಪ್ರಕರಣಗಳು ಇಂತಾ ಭಯದಿಂದ ಮತ್ತು ಉಳ್ಳವರ ದೌರ್ಜನ್ಯದ ಭಯದಿಂದ ಠಾಣೆಗಳ ಮೆಟ್ಟಲೇರುವುದೇ ಇಲ್ಲ! ಲೆಕ್ಕಕ್ಕೂ ದಕ್ಕುವುದಿಲ್ಲ! ಎದುರಿಸಿ ದೂರು ನೀಡಿದರೆ ಏನೆಲ್ಲಾ ಆಗುತ್ತದೆ ಎಂದು ಉನಾವ್ ಪ್ರಕರಣ ಬಗ್ಗೆ ಕೆಲಸಮಯದ ಹಿಂದೆ ನಾನಿಲ್ಲಿಯೇ ಬರೆದಿದ್ದೆ.
ವೈದ್ಯಕೀಯ ಪರೀಕ್ಷೆ: ನಂತರವೂ ಅಡೆತಡೆಗಳ ಸರಣಿ ಮುಂದುವರಿಯುತ್ತದೆ. ವೈದ್ಯಕೀಯ ಪರೀಕ್ಷೆಯ ವೇಳೆ ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟಿದ್ದರೂ, “ಎರಡು ಬೆರಳು ಪರೀಕ್ಷೆ” ಮತ್ತು ಇತರ ಆಕ್ರಮಣಕಾರಿ (invasive), ಪುರಾತನ ವಿಧಿವಿಜ್ಞಾನ ವಿಧಾನಗಳು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವರಿದಿರುವ ಬಗ್ಗೆ ವರದಿಯಾಗುತ್ತಿದೆ. ಇದು ಸಂತ್ರಸ್ತೆಯ ಘನತೆಯನ್ನು ಮತ್ತಷ್ಟು ಹಾನಿಗೀಡು ಮಾಡುತ್ತದೆ..
ವ್ಯವಸ್ಥಿತ ವಿಳಂಬಗಳು: ನ್ಯಾಯಾಲಯಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ, ಅತ್ಯಾಚಾರ ವಿಚಾರಣೆಗಳು ಸುಮಾರು ಒಂದು ದಶಕದವರೆಗೂ ವಿಳಂಬವಾಗಬಹುದು. ಅತ್ಯಾಚಾರದ ಬಲಿಪಶುವಾದ ಬಾಲಕಿಯರಿಗೆ ಇದರ ಅರ್ಥ ಎಂದರೆ, ಅವರು ತಮ್ಮ ಬೆಳವಣಿಗೆಯ ವರ್ಷಗಳನ್ನು ಸಂಪೂರ್ಣವಾಗಿ ಕಾನೂನು ಪೇಚಾಟದ ಸ್ಥಿತಿಯಲ್ಲಿ ಕಳೆಯುವುದು. ಯುವತಿಯರು ಮಧ್ಯವಯಸ್ಕರಾಗುತ್ತಾರೆ, ಮಧ್ಯವಯಸ್ಕರು ಮುದುಕರಾಗುತ್ತಾರೆ, ಮುದುಕರು ಸಾಯಲೂ ಬಹುದು! ಅದರಿಂದ ಅವರ ಮೇಲೆ ಆಗಬಹುದಾದ ಮಾನಸಿಕ ಪರಿಣಾಮಗಳನ್ನು ಊಹಿಸಿ ನೋಡಿ.
”ಪ್ರತಿರೋಧದ ಹೊರೆ”: ಕೆಲವು ನ್ಯಾಯಾಲಯಗಳು ಇನ್ನೂ ಅತ್ಯಾಚಾರದ ವಿರುದ್ಧ ಸಂತ್ರಸ್ತೆಯ “ಹೋರಾಟದ ಚಿಹ್ನೆಗಳನ್ನು” ಹುಡುಕುತ್ತವೆ! ಅವು “ಸದ್ಗುಣಶೀಲ ಮಹಿಳೆ” ಸಾವಿನವರೆಗೆ ಹೋರಾಡುತ್ತಾಳೆ ಎಂಬ ಪಿತೃಪ್ರಧಾನ ಪುರಾಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ದೈಹಿಕ ಗಾಯವನ್ನು ತೋರಿಸಲು ವಿಫಲವಾದರೆ, ಹೆಚ್ಚಾಗಿ “ಪರೋಕ್ಷ ಒಪ್ಪಿಗೆ” ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಕೆಲವು ನ್ಯಾಯಾಲಯಗಳು, ಸಂಪ್ರದಾಯವಾದಿ ಧಾರ್ಮಿಕ, ಕೋಮುವಾದಿ ರಾಜಕೀಯ ನಾಯಕರ ತಾಲಿಬಾನೀ ಅಭಿಪ್ರಾಯಗಳು, ಮಹಿಳೆಯರಿಗೆ ಬುದ್ಧಿವಾದಗಳು, ಸಾಮಾಜಿಕ ಜಾಲತಾಣಗಳಲ್ಲಿ “ಮಾನವಂತ”ರ ಕೊಳಕು ಪ್ರತಿಕ್ರಿಯೆಗಳು ಇಂತಾ ಮನಸ್ಥಿತಿ ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದು ತೋರಿಸುತ್ತವೆ.
ದುರ್ಬಲತೆಯ ಜನಸಂಖ್ಯಾಶಾಸ್ತ್ರ
ಭಾರತದಲ್ಲಿ ಲೈಂಗಿಕ ಹಿಂಸೆ ಕೇವಲ ಲೈಂಗಿಕ ಅಥವಾ ಲಿಂಗತ್ವದ ಸಮಸ್ಯೆಯಲ್ಲ; ಅದು ಆಳವಾಗಿ ಛೇದಕವಾಗಿದೆ. ಎಲ್ಲಾ ಜಾತಿ ಧರ್ಮಗಳ, ವರ್ಗಗಳ ಮತ್ತು ವಯಸ್ಸುಗಳ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರಾದರೂ ಸಾಮಾಜಿಕ ಶ್ರೇಣೀಕರಣದ ಅಂಚಿನಲ್ಲಿರುವ ಮಹಿಳೆಯರು – ನಿರ್ದಿಷ್ಟವಾಗಿ ದಲಿತ, ಆದಿವಾಸಿ ಮತ್ತು ಕೆಳ ಸಾಮಾಜಿಕ ಆರ್ಥಿಕ ಹಿನ್ನೆಲೆಯಿಂದ ಬಂದವರು – ಅತ್ಯಾಚಾರಿಗಳ ಮುಖ್ಯ ಗುರಿಯಾಗಿದ್ದಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ. ಇವು ಬಹಳ ಸಲ ಸೇಡು ತೀರಿಸುವ, ಜಾತಿ ಮೇಲ್ಮೆ ತೋರಿಸುವ, ಪಾಠ ಕಲಿಸುವ ಅಸ್ತ್ರಗಳಾಗಿವೆ. ಈ ಬಲಿಪಶುಗಳಿಗೆ, ಅಡೆತಡೆಗಳು ಹಲವು ಪಟ್ಟು ಹೆಚ್ಚುತ್ತವೆ. ಅವರ ಪ್ರಕರಣಗಳು ಮಾಧ್ಯಮಗಳ ಗಮನ ಸೆಳೆಯುವ ಸಾಧ್ಯತೆ ಕಡಿಮೆ ಮತ್ತು ಸ್ಥಳೀಯ ರಾಜಕೀಯ ಪ್ರಭಾವ ಹೊಂದಿರುವ ಅಪರಾಧಿಗಳ ವಿರುದ್ಧ ದೀರ್ಘಕಾಲೀನ ಕಾನೂನು ಹೋರಾಟಗಳನ್ನು ನಡೆಸಲು ಅವರಿಗೆ ಹಣಕಾಸಿನ ಸಂಪನ್ಮೂಲಗಳ ಚೈತನ್ಯವೂ ಇರುವುದಿಲ್ಲ. ದೇಶದಲ್ಲಿ ದಿನಕ್ಕೆ ಎಂಟು ದಲಿತ ಮಹಿಳೆಯ ಅತ್ಯಾಚಾರ ನಡೆಯುತ್ತಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುತ್ತದೆ. ಹೀಗಿದ್ದರೂ ಅವು ಸುದ್ದಿಯಾಗದೇ ಬೆರಳೆಣಿಕೆಯ ಪ್ರಕರಣಗಳು ಮಾತ್ರವೇ ದೇಶದಾದ್ಯಂತ ಪ್ರತಿಭಟನಾ ಅಭಿಯಾನವಾಗಿ ಮಾರ್ಪಡುವುದು ಹೇಗೆ ಎಂಬುದರ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ನ್ಯಾಯಪೀಠಗಳ ಹಿನ್ನೆಲೆ ಮತ್ತು ಪಕ್ಷಪಾತ
ಕೆಲವು ನ್ಯಾಯಾಧೀಶರ ಸಾಮಾಜಿಕ ಹಿನ್ನೆಲೆ ಮತ್ತು ವೈಯಕ್ತಿಕ ನಿಲುವುಗಳು ಇಂತಾ ಪ್ರಕರಣಗಳ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಭಾರತೀಯ ನ್ಯಾಯಾಂಗವು ಪುರುಷ ಪ್ರಾಬಲ್ಯದಲ್ಲಿದೆ ಮತ್ತು ಅನೇಕ ನ್ಯಾಯಾಧೀಶರು ಬಾಲ್ಯದಿಂದಲೇ ತಲೆಗೆ ಮೊಳೆ ಹೊಡೆದಂತೆ ಕಲಿಸಲಾದ ಸಾಂಪ್ರದಾಯಿಕ ಮತ್ತು ಅಸಮಾನ ಸಾಮಾಜಿಕ ಕಟ್ಟುಪಾಡುಗಳ “ಪೆಟ್ಟಿಗೆ”ಯನ್ನೇ ಹೊತ್ತಿರುತ್ತಾರೆ. ನ್ಯಾಯಾಧೀಶರು ಅತ್ಯಾಚಾರವನ್ನು ಪ್ರಾಥಮಿಕವಾಗಿ ಮಾನವ ಘನತೆಯ ಮೇಲಿನ ದಾಳಿಗಿಂತ- ಕೇವಲ ಆಕ್ರಮಣಕಾರಿ ದೈಹಿಕ ಕ್ರಿಯೆ (ಗುಪ್ತಾಂಗದ ಒಳನುಗ್ಗುವಿಕೆ, ಸಂತ್ರಸ್ತೆಯ ಪ್ರತಿರೋಧ, ಗಾಯದ ಪುರಾವೆ) ಎಂದು ನೋಡಿದಾಗ, ಅವರು ಕಾನೂನಿನ ಉದ್ದೇಶ ಮತ್ತು ವಿವೇಕವನ್ನು ಎತ್ತಿಹಿಡಿಯಲು ವಿಫಲರಾಗುತ್ತಾರೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ನ್ಯಾಯಾಂಗ ಅಧಿಕಾರಿಗಳಿಗೆ (ನ್ಯಾಯಾಧೀಶರರು ಮತ್ತು ವಕೀಲರಿಗೆ) “ಸೂಕ್ಷ್ಮತೆಯನ್ನು ತುಂಬಲು” ಮಾರ್ಗಸೂಚಿಗಳನ್ನು ರಚಿಸುವಂತೆ ಆದೇಶಿಸುವ ಮೂಲಕ- ಈ ದೋಷವನ್ನು ಒಪ್ಪಿಕೊಂಡಿದೆ. ತೀರ್ಪು “ಹಾರ್ವರ್ಡ್-ಆಧಾರಿತ ತಾಂತ್ರಿಕತೆಗಳಲ್ಲಿ” ಅಲ್ಲ, ಸಹಾನುಭೂತಿಯಲ್ಲಿ ಬೇರೂರಿರಬೇಕು ಎಂದು ಅದು ಒತ್ತಿಹೇಳುತ್ತದೆ.
ಮಾನವ ಘನತೆಯ ಮೇಲಿನ ದಾಳಿಯಾಗಿ ಅತ್ಯಾಚಾರ
ಅಗತ್ಯವಿರುವ ಮೂಲಭೂತ ಬದಲಾವಣೆಯೆಂದರೆ, ಬಲಿಪಶುವಿನ “ನೈತಿಕತೆ”ಯಿಂದ ದೂರ ಸರಿದು ವ್ಯಕ್ತಿಯ ದೇಹ ಮತ್ತು ಮನಸ್ಸಿನ “ಸ್ವಾಯತ್ತತೆ”ಯ ಕಡೆಗೆ ಸಾಗುವುದು. ಸಂತ್ರಸ್ತೆ ತನ್ನ “ಮಾನ”ವನ್ನು ಕಳೆದುಕೊಂಡ “ನಾಚಿಕೆಪಡಬೇಕಾದ” ವ್ಯಕ್ತಿಯಲ್ಲ; ಆಕೆ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ, ಹಿಂಸಾಚಾರಕ್ಕೆ ಒಳಗಾದ ಪ್ರಜೆ ಎಂದು ನ್ಯಾಯಾಲಯವೂ, ಸಮಾಜವೂ ಒಪ್ಪಿಕೊಳ್ಳಬೇಕು. ಈ ಮನಸ್ಥಿತಿ ಇಲ್ಲದಿದ್ದರೆ, ಅವು ತೀರ್ಪು ನೀಡುವ ಅರ್ಹತೆಯನ್ನೇ ಹೊಂದಿರುವುದಿಲ್ಲ.
ಕಾನೂನು ವ್ಯವಸ್ಥೆಯು ಮಾನವ ಯಾತನೆಗಿಂತ, ಸಂವೇದನೆ ಇಲ್ಲದ ತಾಂತ್ರಿಕ ವ್ಯಾಖ್ಯಾನಗಳಿಗೆ ಆದ್ಯತೆ ನೀಡುವವರೆಗೆ ಭಾರತದಲ್ಲಿ ಅತ್ಯಾಚಾರದಿಂದ ಬದುಕುಳಿದವರಿಗೆ ನಿಜವಾದ ನ್ಯಾಯವು ಮರೀಚಿಕೆಯಾಗಿಯೇ ಉಳಿಯುತ್ತದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮಧ್ಯಪ್ರವೇಶಗಳು ಭರವಸೆಯ ಕಿಡಿ ಮೂಡಿಸಿವೆ. ಆದರೆ, ಮುಂದಿನ ಹಾದಿಗೆ ವ್ಯವಸ್ಥಿತ ಕೂಲಂಕಷ ವಿಮರ್ಶೆ ಮತ್ತು ಸುಧಾರಣೆಯ ಅಗತ್ಯವಿದೆ. ಪೊಲೀಸ್ ಮತ್ತು ನ್ಯಾಯಾಂಗವನ್ನು ಲಿಂಗತ್ವದ ಕುರಿತು ಸಂವೇದನಾಶೀಲಗೊಳಿಸುವುದರಿಂದ ಹಿಡಿದು, ಒಪ್ಪಿಗೆಯಿಲ್ಲದ ಪ್ರತಿಯೊಂದು ಬಲವಂತದ ಸ್ಪರ್ಶವನ್ನು “ಸಣ್ಣ ಆರೋಪ” ಎಂದು ನೋಡದೆ, ಘನತೆಯಿಂದ ಬದುಕುವ ಹಕ್ಕಿನ ಆಳವಾದ ಉಲ್ಲಂಘನೆ ಎಂದು ಪರಿಗಣಿಸುತ್ತೇವೆ ಎಂದು ನ್ಯಾಯಾಂಗವು ಖಾತರಿ ನೀಡುವ ಅಗತ್ಯವಿದೆ.
