“..ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಾಜಕೀಯ ಜೀವನವು ಗೋಸುಂಬೆ ರಾಜಕಾರಣ, ಕಪಟ ಸಿದ್ಧಾಂತ, ಅವಕಾಶವಾದ, ಕ್ರಿಮಿನಲ್ ಹಿನ್ನೆಲೆ ಮತ್ತು ಬಿಜೆಪಿಯ “ವಾಷಿಂಗ್ ಮೆಷಿನ್” ಪರಿಣಾಮದ ಝಗಮಗಿಸುವ ನಿದರ್ಶನ!..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಭಾರತೀಯ ರಾಜಕೀಯದ ಆಧುನಿಕ ರಂಗಭೂಮಿಯಲ್ಲಿ, ನರೇಂದ್ರ ಮೋದಿಯನ್ನು ಬಿಟ್ಟರೆ, ಕೆಲವೇ ನಟರು ಹಿಮಂತ ಬಿಸ್ವಾ ಶರ್ಮಾ (ಸರ್ಮ) ಅವರಷ್ಟು ಪರಿಣಾಮಕಾರಿಯಾಗಿ ಏಣಿಹತ್ತುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್‌ನ “ನೀಲಿ ಕಣ್ಣಿನ ಹುಡುಗ” (Blue eyed boy), ಈಗ ಈಶಾನ್ಯದಲ್ಲಿ ಬಿಜೆಪಿಯ ಕೇಸರಿ ಹೊದಿಕೆಯ ಮುಂಚೂಣಿಯಲ್ಲಿರುವ “ಬ್ರಾಹ್ಮಣ ಚತುರ” ಶರ್ಮಾ ಅವರ ವೃತ್ತಿಜೀವನವು- ಕಾನೂನು ದುರ್ಬಲತೆಗಳನ್ನು ರಾಜಕೀಯ ಏಳಿಗೆಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಹಿರಂಗ ಪ್ರದರ್ಶನವಾಗಿದೆ. ಬಿಜೆಪಿ ತನ್ನ “ವಾಷಿಂಗ್ ಮೆಷಿನ್” ಕುಖ್ಯಾತಿಯನ್ನು ಹೇಗೆ ಸಾಬೀತು ಮಾಡುತ್ತಿದೆ; ಆ ಪಕ್ಷಕ್ಕೆ ಸೇರಿದ ಕೂಡಲೇ- ಅದೇ ಮಾಡಿದ್ದ ಹಿಂದಿನ ಭಾರೀ ಆರೋಪಗಳ ಕಲೆಗಳೆಲ್ಲವೂ ಹೇಗೆ ಮಂಗಮಾಯವಾಗುತ್ತವೆ ಎಂಬುದಕ್ಕೆ ಈತ ದೊಡ್ಡ ನಿದರ್ಶನ. ಬಿಹಾರದಲ್ಲಿ ಸಾಮ್ರಾಟ್ ಚೌಧರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಯಂತಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ಒಳಗೊಂಡ ಬಿಜೆಪಿ ನಾಯಕತ್ವದ “ಹೊಸ ಯುಗ”ಕ್ಕೆ ಈ ಶರ್ಮಾ ಸರ್ವೋತ್ಕೃಷ್ಟ ಪೂರ್ವಮಾದರಿ!
“ಉಲ್ಫಾ”, “ಟಾಡಾ” ಮತ್ತು ಕಾಣೆಯಾದ ಫೈಲ್‌ಗಳು!
ಶರ್ಮಾ ಎಂಬ ಈ ವ್ಯಕ್ತಿಯ ರಾಜಕೀಯ ಮೂಲದ ಕಥೆಯು 1990ರ ಅಸ್ಸಾಂನಲ್ಲಿ ವ್ಯಾಪಕ ಪ್ರಕ್ಷುಬ್ಧತೆಯ ಜೊತೆಗೆ ಬೇರ್ಪಡಿಸಲಾಗದ ಸಂಬಂಧ ಹೊಂದಿದೆ. ಅಧಿಕಾರಕ್ಕೆ ಬರುವ ಬಹಳ ಹಿಂದೆಯೇ, ಆತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA) ಉಗ್ರಗಾಮಿ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದು, ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ್ದರು.
ಸುಲಿಗೆ ಮತ್ತು ಭಯೋತ್ಪಾದನಾ ಆರೋಪಗಳು: 1991ರಲ್ಲಿ, ಅವರ ವಿರುದ್ಧ ಎರಡು ಪ್ರಕರಣಗಳು (77/1991-ಚಾಂದ್‌ಮರಿ ಮತ್ತು 15/1991-ಪನ್‌ಬಜಾರ್) ದಾಖಲಾಗಿದ್ದವು. ಆತ “ಉಲ್ಫಾ”ಗಾಗಿ 10 ಲಕ್ಷ ರೂ. ಸಂಗ್ರಹಿಸುವಾಗ “ರೆಡ್ ಹ್ಯಾಂಡ್” ಆಗಿ ಸಿಕ್ಕಿಬಿದ್ದ ಆರೋಪವಿತ್ತು. ನಂತರ ಆತನ ಮೇಲೆ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಶಸ್ತ್ರಾಸ್ತ್ರ ಕಾಯ್ದೆ: ಗುವಾಹಟಿಯ ಕಾಟನ್ ಕಾಲೇಜು ಹಾಸ್ಟೆಲ್‌ನ ಅಡುಗೆಮನೆಯ ಹಿಂದೆ ಈತ ಅಡಗಿಸಿಟ್ಟಿದ್ದನೆನ್ನಲಾದ ರಿವಾಲ್ವರ್ ಮತ್ತು 25 ಸುತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಫೈಲುಗಳ ಕಣ್ಮರೆ ಪ್ರಕರಣ: ಬಹುಶಃ ಅತ್ಯಂತ ವಿವಾದಾತ್ಮಕವೆಂದರೆ, 2009ರ ಗುವಾಹಟಿ ಹೈಕೋರ್ಟ್‌ನ ಹಸ್ತಕ್ಷೇಪ. ಈ ಪ್ರಕರಣಗಳನ್ನು ಮತ್ತೆ ತೆರೆಯಲು ಪಿಐಎಲ್ ಅರ್ಜಿಯೊಂದು ಕೋರಿದಾಗ, ಪೊಲೀಸರ ಸುಪರ್ದಿಯಿಂದ ಪ್ರಕರಣದ ದಿನಚರಿ ಫೈಲುಗಳು ಕಾಣೆಯಾಗಿವೆ ಎಂಬುದು ಹೈಕೋರ್ಟ್ ವಿಚಾರಣೆ ವೇಳೆ ತಿಳಿದು ಬಂತು. ಆತನನ್ನು ಅಂತಿಮವಾಗಿ ಖುಲಾಸೆಗೊಳಿಸಲಾದರೂ, ಉನ್ನತ ಹುದ್ದೆಯ ಸಚಿವನಾಗಿದ್ದ ಅವಧಿಯಲ್ಲಿ ನಿರ್ಣಾಯಕ ಸಾಕ್ಷ್ಯಗಳ “ಕಣ್ಮರೆ” ಕೇವಲ ಕಾಕತಾಳೀಯವಲ್ಲ ಎಂಬ ಟೀಕೆ ಈತನನ್ನು ಹಿಂಬಾಲಿಸಿಕೊಂಡು ಬಂದಿದೆ.
ಕಾಂಗ್ರೆಸ್ ಒಳವಲಯದಿಂದ ಮೋದಿ ಕೂಟಕ್ಕೆ ನೆಗೆತ
ಪ್ರಸಿದ್ಧಿಗೇರಲು ಬಳಸಿದ್ದ “ಉಲ್ಫಾ” ಸಂಘಟನೆಗೆ ಕೈಕೊಟ್ಟ ಶರ್ಮಾ, ಕಾಂಗ್ರೆಸ್‌ನಲ್ಲಿ 22 ವರ್ಷಗಳ ಕಾಲ ಕಳೆದರು; ಪಕ್ಷದ ಹಿರಿಯ ನಾಯಕ ತರುಣ್ ಗೊಗೊಯ್‌ಗೆ ಪ್ರಬಲ ಬಲಗೈ ಬಂಟನಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಆತ ಕಾಂಗ್ರೆಸ್ ತೊರೆದುದಕ್ಕೆ ನಾಯಕತ್ವದ ಮಹತ್ವಾಕಾಂಕ್ಷೆ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ರಾಹುಲ್ ಗಾಂಧಿ ಜೊತೆಗೆ ಘರ್ಷಣೆ ಮುಖ್ಯ ಕಾರಣ. ರಾಹುಲ್ ಅಸ್ಸಾಂನ ರಾಜಕೀಯ ಬಿಕ್ಕಟ್ಟನ್ನು ಚರ್ಚಿಸುವುದಕ್ಕಿಂತ ತಮ್ಮ ನಾಯಿ ಪೀಡಿಗೆ ಆಹಾರ ನೀಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಶರ್ಮಾ ಬಹಿರಂಗವಾಗಿ ಟೀಕಿಸಿದ್ದರು. ರಾಹುಲ್ ಭ್ರಷ್ಟಾಚಾರ ಆರೋಪ ಹೊತ್ತ ಆತನನ್ನು ಉದ್ದೇಶಪೂರ್ವಕವಾಗಿ ಅವಗಣಿಸಿದ್ದರು.
ಆದರೆ, ಆತನ “ಸೈದ್ಧಾಂತಿಕ” ಜ್ಞಾನೋದಯದ ಸಮಯ ಮಾತ್ರ ತುಂಬಾ ಅನುಕೂಲಕರವಾಗಿತ್ತು. ಆತ ಕಾಂಗ್ರೆಸ್ ಬಿಡುವ ಸಮಯದಲ್ಲಿ, “ಲೂಯಿಸ್ ಬರ್ಗರ್ ನೀರಿನ ಹಗರಣ” ನಡೆದಿತ್ತು. 2015ರಲ್ಲಿ, ಯುಎಸ್ ಮೂಲದ ಸಂಸ್ಥೆ “ಲೂಯಿಸ್ ಬರ್ಗರ್”, ನೀರು ಸರಬರಾಜು ಯೋಜನೆಗಳನ್ನು ಪಡೆಯಲು ಅಸ್ಸಾಂನ “ಅಧಿಕಾರಿಗಳಿಗೆ” ಲಂಚ ನೀಡಿತ್ತು ಎಂದು ಯುಎಸ್ಎಯ ನ್ಯಾಯ ಇಲಾಖೆ (Department of Justice) ಪತ್ತೆ ಹಚ್ಚಿತ್ತು. ಈ ಹಗರಣದಲ್ಲಿ ಶರ್ಮಾ “ಪ್ರಮುಖ ಶಂಕಿತ” ಎಂದು ನಿರ್ದಿಷ್ಟವಾಗಿ ಹೆಸರಿಸುವ “ಗೋವಾ ಮತ್ತು ಅಸ್ಸಾಂನಲ್ಲಿ ನೀರಿನ ಹಗರಣ” ಎಂಬ ಕಿರುಪುಸ್ತಕವನ್ನು ಬಿಜೆಪಿ ಪ್ರಕಟಿಸಿತ್ತು. ಆದರೆ, ಆತ ಕೇಸರಿ ಶಾಲು ಧರಿಸಿದ ಕ್ಷಣ, ತನಿಖೆಗಳು ನಿಧಾನವಾದವು ಮತ್ತು ಬಿಜೆಪಿಯ ಸುಳ್ಳು ಕಥಾನಕವು ಆತನನ್ನು ಕೊಳಕಾದ “ಭ್ರಷ್ಟ ಕಾಂಗ್ರೆಸಿಗ”ನಿಂದ- ತೊಳೆದು ಬೆಳ್ಳಗೆ ಹೊಳೆಯುವ “ಕ್ರಿಯಾತ್ಮಕ ನಾಯಕ”ನನ್ನಾಗಿ ಬದಲಿಸಿತು! ಅಂದಿನಿಂದ ಕೇಂದ್ರ ತನಿಖಾ ಸಂಸ್ಥೆಗಳು ಆತನ ಮೇಲೆ ಔಪಚಾರಿಕವಾಗಿ ಯಾವುದೇ ಆರೋಪ ಹೊರಿಸಿಲ್ಲ ಎಂದರೆ, ಇಲ್ಲೇ ಕೆಲವು ಕಂತುಗಳಲ್ಲಿ ಹಿಂದೆ ವಿವರಿಸಿರುವ ಬಿಜೆಪಿ ಭ್ರಷ್ಟಾಚಾರದ ಮಾಫಿಯಾ ಅರ್ಥವಾಗಬಹುದು.
ಪಿಪಿಇ ಕಿಟ್ ವಿವಾದ (2022): “ದಿ ವೈರ್” ಮತ್ತು “ದಿ ಕ್ರಾಸ್‌ಕರೆಂಟ್”ನ ತನಿಖಾ ವರದಿಗಳು 2020ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಶರ್ಮಾ ನೇತೃತ್ವದ ಅಸ್ಸಾಂ ಆರೋಗ್ಯ ಇಲಾಖೆಯು- ಆತನ ಪತ್ನಿ ರಿನಿಕಿ ಭುಯಾನ್ ಶರ್ಮಾ ಮತ್ತು ಕುಟುಂಬ ವ್ಯವಹಾರದ ಸಹೋದ್ಯೋಗಿಗೆ ಸಂಬಂಧಿಸಿದ ಕಂಪನಿಗಳಿಗೆ ಪಿಪಿಇ ಕಿಟ್‌ಗಳಿಗಾಗಿ ತುರ್ತು ಗುತ್ತಿಗೆಗಳನ್ನು ನೀಡಿತ್ತು ಎಂದು ಆರೋಪಿಸಿತ್ತು. ಈ ಕಂಪನಿಗಳು ಇತರ ಪೂರೈಕೆದಾರರಿಗಿಂತ ಬಹಳಷ್ಟು ಹೆಚ್ಚಿನ ದರದಲ್ಲಿ ಕಿಟ್‌ಗಳನ್ನು ಪೂರೈಸಿವೆ ಮತ್ತು ಈ ಕಂಪನಿಗಳಿಗೆ ವೈದ್ಯಕೀಯ ಉಪಕರಣಗಳ ವ್ಯವಹಾರದಲ್ಲಿ ಯಾವುದೇ ಪೂರ್ವ ಅನುಭವವಿರಲಿಲ್ಲ ಎಂದು ಆರೋಪಗಳು ಸೂಚಿಸಿವೆ. ಶರ್ಮಾ ಇದನ್ನು ನಿರಾಕರಿಸಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆದರೆ, ಮೂಲ ಆರೋಪದ ಬಗ್ಗೆ ಮಾತ್ರ ತನಿಖಾ ಸಂಸ್ಥೆಗಳು ಯಾವುದೇ ತನಿಖೆ ನಡೆಸಿಲ್ಲ!
ಆದಾಯ ಮತ್ತು ಸಂಪತ್ತಿನ ವ್ಯತ್ಯಾಸಗಳು: ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಲಾದ ಶರ್ಮಾ ಅವರ ವೈಯಕ್ತಿಕ ಆಸ್ತಿಗಳು ಸ್ಥಿರವಾದ ದೊಡ್ಡ ಬೆಳವಣಿಗೆಯನ್ನು ತೋರಿಸುತ್ತವೆಯಾದರೂ, ಆತನ ಪತ್ನಿಯ ನಿಯಂತ್ರಣದಲ್ಲಿರುವ ವಂದ್ಯ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ಸ್ ಎಂಬ ಮಾಧ್ಯಮ ಸಾಮ್ರಾಜ್ಯದ ಹಣಕಾಸಿನ ವಿವರಗಳನ್ನು- ಅವು ಕುಟುಂಬದ ಮೂಲ ಆದಾಯದ ಭಾಗವಾಗಿದ್ದರೂ- ನೀಡಿಲ್ಲ. ಮೇಲಾಗಿ, ಈ ಉದ್ಯಮಗಳಿಗಾಗಿ ನಡೆದ ಭೂಸ್ವಾಧೀನವು ಹಲವಾರು ಆಡಳಿತಾತ್ಮಕ “ವೈಪರೀತ್ಯಗಳನ್ನು” ಒಳಗೊಂಡಿವೆ ಎಂದು ವಿರೋಧ ಪಕ್ಷದ ನಾಯಕರು ಮತ್ತೆ ಮತ್ತೆ ಆರೋಪಿಸಿದ್ದರೂ, ಯಾವದೇ ತನಿಖೆ ನಡೆಸಿಲ್ಲ; ಯಾರೂ ಕೇಳುವವರಿಲ್ಲ. ಇದರಲ್ಲಿ ಕೈಗಾರಿಕಾ ಅಥವಾ ಶೈಕ್ಷಣಿಕ ಬಳಕೆಗಾಗಿ ಕೃಷಿ ಭೂಮಿಯನ್ನು ದಾಖಲೆಯ ಸಮಯದಲ್ಲಿ ಪರಿವರ್ತಿಸಿರುವುದು ಸೇರಿದೆ.
ಆಡಳಿತದ ಮೂಲ ಸಾಧನವಾಗಿ ವಿವಾದ
ಬಿಜೆಪಿಯಲ್ಲಿ, ಶರ್ಮಾ ತಮ್ಮ ವರಸೆಯನ್ನು ತೆರೆಮರೆಯ ಕುತಂತ್ರದಿಂದ- ಬೊಬ್ಬೆ ಹೊಡೆಯುವ ಜನಮರುಳು ಕೋಮು ವಾಕ್ಚಾತುರ್ಯಕ್ಕೆ ಬದಲಾಯಿಸಿಕೊಂಡಿದ್ದಾರೆ. ಅವರು dog whistle (ನಾಯಿಗಳಿಗೆ ಮಾತ್ರ ಕೇಳಿಸುವ ನಾಯಿ-ಶಿಳ್ಳೆ) ರಾಜಕೀಯದಲ್ಲಿ ಪರಿಣಿತರಾಗಿದ್ದು, ಆಗಾಗ್ಗೆ ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಪರೋಕ್ಷ ದ್ವೇಷ ಭಾಷಣಗಳನ್ನು ಮಾಡಿದಾಗ ಈತನ ದ್ವೇಷ ಸಂದೇಶ ಏನು ಎಂದು ಹಿಂಬಾಲಕರಿಗೆ ಗೊತ್ತಾಗುತ್ತದೆ. ಅವರು ಅಲ್ಪಸಂಖ್ಯಾತರನ್ನು ಗುರಿಮಾಡುತ್ತಾರೆ.
”ಮಿಯಾ” ಅಣಕ: ಅವರು ಬಂಗಾಳಿ ಮಾತನಾಡುವ ಮುಸ್ಲಿಮರಿಗೆ (“ಮಿಯಾ”) “ಅಕ್ರಮ ಬಾಂಗ್ಲಾದೇಶಿಗಳು” ಎಂದು ಪದೇ ಪದೇ ಹಣೆಪಟ್ಟಿ ಕಟ್ಟಿದ್ದಾರೆ. ತಾನು ಮುಖ್ಯಮಂತ್ರಿಯಾಗಿರುವವರೆಗೆ ಅವರು “ಸಮಸ್ಯೆ” ಎದುರಿಸಬೇಕಾಗುತ್ತದೆ ಎಂದು ಆತ ಬಹಿರಂಗ ಬೆದರಿಕೆ ಹಾಕಿದ್ದಾರೆ. ಆದರೆ, ಅವರೆಲ್ಲಾ ಪಶ್ಚಿಮ ಬಂಗಾಳದ ಮುಸ್ಲಿಮರಲ್ಲದೆ, ಬಾಂಗ್ಲಾದೇಶದಿಂದ ಬಂದವರೆಂದು ಸಾಬೀತಾದ ಪ್ರಕರಣಗಳು ತೀರಾ ಕಡಿಮೆ. ವಾಸ್ತವದಲ್ಲಿ ಬಂಗಾಳದ ಹಿಂದೂಗಳೂ ದೊಡ್ಡ ಪ್ರಮಾಣದಲ್ಲಿ ಅಸ್ಸಾಮಿಗೆ ವಲಸೆ ಹೋಗಿದ್ದು, ಮೂಲತಃ ಆ ಕಾರಣದಿಂದಲೇ ಅಸ್ಸಾಂನಲ್ಲಿ ಮೂಲ ಅಸ್ಸಾಮಿಗರ ಪ್ರಕ್ಷೋಭೆ ಆರಂಭವಾಗಿತ್ತು.
ಕೋಮು ವಾಕ್ಚಾತುರ್ಯ: “ಹಿಂದೂಗಳು ಸಾಮಾನ್ಯವಾಗಿ ಗಲಭೆಗಳಲ್ಲಿ ತೊಡಗುವುದಿಲ್ಲ” ಎಂದು ಹೇಳಿಕೊಳ್ಳುವುದರಿಂದ ಹಿಡಿದು, ನಿರ್ದಿಷ್ಟ ಸಮುದಾಯದ ಜನರ ಮೇಲೆ ಅವರು ರೈಫಲ್ ಗುರಿಯಿಟ್ಟ ಇತ್ತೀಚಿನ ವೈರಲ್ ವೀಡಿಯೊದವರೆಗೆ (ಇದು ಪ್ರಸ್ತುತ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿರುವ ಪ್ರಕರಣ)- ಶರ್ಮಾ ತನ್ನ ನೆಲೆಯನ್ನು ಬಲಪಡಿಸಲು ಹಿಂದೂ ಮುಸ್ಲಿಂ, ಅಸ್ಸಾಂ ಅಸ್ಸಾಮೇತರ ಧ್ರುವೀಕರಣವನ್ನು ಯಾವುದೇ ಲಗಾಮಿಲ್ಲದೇ ಬಳಸುತ್ತಾರೆ.
ಬೇಜವಾಬ್ದಾರಿಯುತ ಹೇಳಿಕೆಗಳು: ಈತನ ಹೇಳಿಕೆಗಳು ಬಿಜೆಪಿಯ ಕೂಗುಮಾರಿ ಸಂಬಿತ್ ಪಾತ್ರನಂತೆ ತರ್ಕರಹಿತ, ಅವೈಜ್ಞಾನಿಕ ಮತ್ತು ಮಾನಗೇಡಿಯಾಗಿವೆ. ಕ್ಯಾನ್ಸರ್ ಎಂಬುದು ಹಿಂದಿನ ಪಾಪಗಳಿಗೆ ದೇವರು ನೀಡಿದ ಶಿಕ್ಷೆ ಎಂಬ ವಿವಾದಾತ್ಮಕ ಹೇಳಿಕೆ ಅಥವಾ “ರಸಗೊಬ್ಬರ ಜಿಹಾದ್” ಮತ್ತು ಹೊಸ ಹೊಸ ಜೆಹಾದ್ ಸಿದ್ಧಾಂತಗಳ ಲಗಾಮಿಲ್ಲದ ನಾಲಿಗೆ, ನಾಚಿಕೆಯಿಲ್ಲದ ವರ್ತನೆಯ ಮೂಲಕ ಶರ್ಮಾ ತನ್ನ ಹುದ್ದೆಯ ಸಾಂವಿಧಾನಿಕ ಗೌರವವನ್ನು ಚರಂಡಿಪಾಲು ಮಾಡುತ್ತಾರೆ. ಅಸ್ಸಾಮಿಗೆ ಸೀಮಿತವಾಗಿದ್ದರೂ, ದೇಶದಾದ್ಯಂತದ ಪ್ರತಿಪಕ್ಷಗಳ ನಾಯಕರ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ಉದುರಿಸಿ, ಪ್ರಚಾರದಲ್ಲಿರುತ್ತಾರೆ.
“ವಾಷಿಂಗ್ ಮೆಷಿನ್” ಮತ್ತು “ಹೊಸ” ನಾಯಕತ್ವ
ಬಹಿರಂಗವಾದ ಕೋಮುವಿಭಜನೆ ಮತ್ತು ದ್ವೇಷದ ರಾಜಕಾರಣವೇ ಅಧಿಕೃತವಾಗಿರುವಾಗ, ಶರ್ಮಾ ಇನ್ನು ಮುಂದೆ ಹೊರಗಿನವನಲ್ಲ; ಅವರೇ ಪಕ್ಷದ ಭವಿಷ್ಯದ ನಾಯಕರ ನೀಲನಕ್ಷೆ. ಆದರೆ ಆತ ಮೊದಲಿಗನಲ್ಲ! ಬಿಜೆಪಿಯ “ವಾಷಿಂಗ್ ಮೆಷಿನ್” ವಿದ್ಯಮಾನಕ್ಕೆ ಬಹುಶಃ ಯೋಗಿ ಆದಿತ್ಯನಾಥ್ ಎಂದು ಸಾರ್ವಜನಿಕರಿಗೆ ಪರಿಚಿತನಾಗಿರುವ ಅಜಯ್ ಸಿಂಗ್ ಬಿಶ್ತ್ ಉತ್ತಮ ಉದಾಹರಣೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕೆ ಬಹಳ ಹಿಂದೆಯೇ, ಬಿಶ್ತ್ “ಹಿಂದೂ ಯುವ ವಾಹಿನಿ”ಯ ಸ್ಥಾಪಕರಾಗಿದ್ದರು, ಇದು ಕೋಮು ಘರ್ಷಣೆಯನ್ನು ಪ್ರಚೋದಿಸುವ ಖಾಸಗಿ ಸೇನೆ. ಆತನ ಕ್ರಿಮಿನಲ್ ದಾಖಲೆಯು ಒಂದು ಕಾಲದಲ್ಲಿ ಭಯಾನಕವಾಗಿತ್ತು. ಅದರಲ್ಲಿ ಕೊಲೆ ಯತ್ನ, ಗಲಭೆ ಮತ್ತು ಮತೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಗಳು ಸೇರಿವೆ. 2007ರಲ್ಲಿ, ಗೋರಖ್‌ಪುರ ಗಲಭೆಯಲ್ಲಿ ಆತನ ಪಾತ್ರಕ್ಕಾಗಿ ಆತನನ್ನು ಜೈಲಿಗೆ ಹಾಕಲಾಯಿತು. ಹೀಗಿದ್ದರೂ, ಆತನ ರಾಜಕೀಯ “ಪುನಃಸ್ಥಾಪನೆ”ಯ ವಾಷಿಂಗ್ ಮೆಷಿನ್ ಪ್ರಕ್ರಿಯೆ 2017ರಲ್ಲಿ ಸಂಭವಿಸಿತು. ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ, ಆತನ ಸ್ವಂತ ಸರಕಾರವು ನಿಷೇಧಾಜ್ಞೆಗಳನ್ನು ಧಿಕ್ಕರಿಸಿದ್ದಕ್ಕಾಗಿ ಆತನ ವಿರುದ್ಧದ 22 ವರ್ಷಗಳ ಹಳೆಯ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಆದೇಶ ಹೊರಡಿಸಿತು. 2019ರ ಹೊತ್ತಿಗೆ, ಕೋಮು ಘಟನೆಗಳನ್ನು ಒಳಗೊಂಡಂತೆ ಹಲವಾರು ಇತರ ಗಂಭೀರ ಆರೋಪಗಳನ್ನು ವ್ಯವಸ್ಥಿತವಾಗಿ ವಜಾಗೊಳಿಸಲಾಯಿತು ಅಥವಾ ಹೂತು ಹಾಕಲಾಯಿತು. ಬಿಶ್ತ್ ಮಾದರಿಯಲ್ಲಿಯೇ ಶರ್ಮಾ “ಬುಲ್ಡೋಜರ್ ಜಸ್ಟೀಸ್” ಎಂಬ ಬ್ರ್ಯಾಂಡನ್ನು ಮಾಮೂಲಿ ಎಂಬಂತೆ ಬಳಸುತ್ತಿದ್ದಾರೆ. ಇದು ನಿರ್ದಿಷ್ಟ ಜನ ವಿಭಾಗವನ್ನು ಗುರಿಯಾಗಿಸಲು ನ್ಯಾಯಾಲಯಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ನ್ಯಾಯಬಾಹಿರ ಶಿಕ್ಷೆಯ ವಿಧಾನವಾಗಿದೆ. ಆದರೆ, ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನೂ ಬಿಜೆಪಿ ಆಡಳಿತದ ಸರಕಾರಗಳು ಅವಗಣಿಸುತ್ತಿವೆ.
ಹಿಂದಿನ ಕಾಲದ ಕ್ರಿಮಿನಲ್ ನಾಯಕರನ್ನು ಹೀರಿಕೊಳ್ಳುವ ಮತ್ತು “ಶುದ್ಧೀಕರಿಸುವ” ಬಿಜೆಪಿಯ ತಂತ್ರವು 2026ರಲ್ಲಿ ಉತ್ತುಂಗಕ್ಕೇರಿದೆ. ಯೋಗಿಯೊಬ್ಬ ತಿಳುವಳಿಕೆಯಿಲ್ಲದ ಒರಟ ಮತ್ತು ತೀವ್ರ ಹಿಂದೂವಾದಿ ಎಂದು ಗೊತ್ತಿದ್ದರೂ- ಎಲ್ಲರನ್ನೂ ಒಟ್ಟಿಗೆ ಒಯ್ಯುವ ಬಿಜೆಪಿಯ ಮೋದಿ ಮತ್ತು ಆರೆಸ್ಸೆಸ್ಸಿನ ಭಾಗವತರ ನಾಟಕದ ಹೊರತಾಗಿಯೂ ಯೋಗಿ, ಶರ್ಮಾರಂತ ಕ್ರಿಮಿನಲ್ ಹಿನ್ನೆಲೆಯವರನ್ನೇ ಬಿಜೆಪಿ ತೊಳೆದು ಶುದ್ಧ ಮಾಡಿ ಮುನ್ನೆಲೆಗೆ ತರುತ್ತಿದೆ. ಇವರಿಗೆಲ್ಲಾ ಮಾಜಿ ಜೈಲುವಾಸಿ, ಗೃಹ ಸಚಿವ ಅಮಿತ್ ಶಾ ಕುಲಗುರು. ಇತ್ತೀಚಿನ ಉದಾಹರಣೆಗಳನ್ನು ಗಮನಿಸಬಹುದು.
ಸಾಮ್ರಾಟ್ ಚೌಧರಿ (ಬಿಹಾರ): ಇತ್ತೀಚೆಗೆ ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ರಿಮಿನಲ್ ಹಿನ್ನೆಲೆಯ ಮೆಟ್ರಿಕ್ ಫೇಲ್ ಚೌಧರಿ – ಹಲವು ಪಕ್ಷಗಳ ನೀರು ಕುಡಿದ ಮತ್ತು ಹಲವಾರು ಕ್ರಿಮಿನಲ್ ಕೇಸು ಎದುರಿಸಿದ ವ್ಯಕ್ತಿ. ಅದೇ ಬ್ರಾಂಡಿನ ಉಗ್ರವಾದಿ, ಆಕ್ರಮಣಕಾರಿ, ಅವಕಾಶವಾದಿ ನಾಯಕತ್ವವನ್ನು ಪ್ರತಿನಿಧಿಸುತ್ತಾರೆ. ಈತನ ವಿವರಗಳನ್ನು ಮುಂದೊಮ್ಮೆ ಪರಿಶೀಲಿಸೋಣ.
ಸುವೇಂದು ಅಧಿಕಾರಿ (ಪಶ್ಚಿಮ ಬಂಗಾಳ): ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುತ್ತಿದ್ದಂತೆ, ಹೋಲಿಕೆಗಳು ಗಮನಾರ್ಹವಾಗಿವೆ. ಶರ್ಮಾನಂತೆಯೇ ಈ ಅಧಿಕಾರಿ ಟಿಎಂಸಿಯಲ್ಲಿದ್ದಾಗ “ನಾರದ ಸ್ಟಿಂಗ್ ಅಪರೇಷನ್” ಮತ್ತು ಮತ್ತು “ಶಾರದ ಚಿಟ್ ಫಂಡ್ ಹಗರಣ”ದ ತನಿಖೆಗಳ ಮುಖ್ಯ ಪಾತ್ರಧಾರಿ. ಸುವೇಂದು ಅಧಿಕಾರಿ ತನ್ನ ಕೊಳಕುಬಾಯಿ, ಪಾಳೇಗಾರಿ ವರ್ತನೆಗೆ ಕುಖ್ಯಾತ. ತೃಣಮೂಲ ಕಾಂಗ್ರೆಸ್‌ನಲ್ಲಿ ಇದ್ದಾಗಲೇ ಆತ ಗೂಂಡಾಗಿರಿಯ ಆರೋಪ ಹೊತ್ತಿದ್ದರು. (ಮರೆತಿರುವವರಿಗಾಗಿ: “ನಾರದ ನ್ಯೂಸ್” ಎಂಬ ಸುದ್ದಿ ಚಾನೆಲ್ ಬಿಡುಗಡೆ ಮಾಡಿದ್ದ ವೀಡಿಯೊ ತುಣುಕಿನಲ್ಲಿ, ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ಉನ್ನತ ಟಿಎಂಸಿ ನಾಯಕರು ರಾಜಕೀಯ ಲಾಭಕ್ಕಾಗಿ ಕಾಲ್ಪನಿಕ ಕಂಪನಿಯ ಪ್ರತಿನಿಧಿಯಿಂದ ಹಣ ಸ್ವೀಕರಿಸುತ್ತಿರುವುದನ್ನು ತೋರಿಸಲಾಗಿತ್ತು. ಮತ್ತು ಶಾರದಾ ಗ್ರೂಪ್‌ನ ಚಿಟ್ ಫಂಡ್ ಹಗರಣವು ಒಂದು ಪ್ರಮುಖ ಹಣಕಾಸು ವಂಚನೆಯಾಗಿದ್ದು, 2013ರಲ್ಲಿ ಅದು ಕುಸಿದು ಬಿದ್ದು ಲಕ್ಷಾಂತರ ಸಣ್ಣ ಹೂಡಿಕೆದಾರರ ಉಳಿತಾಯವನ್ನು ಅಳಿಸಿಹಾಕಿತ್ತು.) ಬಿಜೆಪಿಗೆ ಆತನ ಪಕ್ಷಾಂತರವು ಆತನಿಗೆ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಕಂಡುಬಂದ ಅದೇ “ನ್ಯಾಯಾಂಗ ವಿನಾಯಿತಿ” ಮತ್ತು ರಾಜಕೀಯ ಉನ್ನತಿಯನ್ನು ಪಶ್ಚಿಮ ಬಂಗಾಳದಲ್ಲಿ ಒದಗಿಸಿತು. ಈತಕ ಕುರಿತೂ ಮುಂದೆ ವಿವರವಾಗಿ ಪರಿಶೀಲಿಸೋಣ.
ಗೋಸುಂಬೆಯ ನೇತೃತ್ವದಲ್ಲಿ ಗೋಸುಂಬೆಗಳ ಆಡಳಿತ
ಹಿಮಂತ ಬಿಸ್ವಾ ಶರ್ಮಾ ಅವರ ಸಾರ್ವಜನಿಕ ಜೀವನದ ಹಾದಿಯು- ಪ್ರಸ್ತುತ ಬಿಜೆಪಿ ಆಡಳಿತದಲ್ಲಿ “ಅಪರಾಧ”ದ ಹಿನ್ನೆಲೆ ಅಥವಾ ಅವಕಾಶವಾದದ ಇತಿಹಾಸವು ಒಂದು ಹಿನ್ನಡೆಯಲ್ಲ; ಬದಲಾಗಿ ಅದೊಂದು ಅನುಕೂಲತೆ ಎಂದು ಸೂಚಿಸುತ್ತದೆ. ವಿವಾದಾತ್ಮಕ ಹೇಳಿಕೆಗಳ ಮೂಲಕ, “ಹಿಂದೂತ್ವ”ದ ನಿರೂಪಣೆಯ ಮೂಲಕ, ಕಾನೂನಿನ ದುರ್ಬಳಕೆ ಮತ್ತು ಹಿಂದಿನ ತನಿಖೆಗಳನ್ನು ಹೂತುಹಾಕಲು ಸರಕಾರಿ ಯಂತ್ರಗಳನ್ನು ಬಳಸುವ ಮೂಲಕ- ಶರ್ಮಾ ತಾನು ಬದುಕುಳಿಯುವು ಮಾತ್ರವೇ ತನ್ನ ಅಂತಿಮ ಸಿದ್ಧಾಂತ ಎಂದು ಸಾಬೀತುಪಡಿಸಿದ್ದಾರೆ. ಜನರು ಬೇಕಾದರೆ, ಹಾಳುಗುಂಡಿಗೆ ಬೀಳಲಿ!
ಮೋದಿ ಆಡಳಿತದಲ್ಲಿ “ವಾಷಿಂಗ್ ಮೆಷಿನ್” ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ- ಕಾನೂನು ರೂಪಿಸುವ “ಶಾಸಕ”, ಜನಪ್ರತಿನಿಧಿ ಮತ್ತು ಕಾನೂನು ಉಲ್ಲಂಘಿಸುವ “ಕ್ರಿಮಿನಲ್” ನಡುವಿನ ವ್ಯತ್ಯಾಸವು ಹೆಚ್ಚು ಹೆಚ್ಚು ಮಸುಕಾಗುತ್ತಿದೆ. ಸಾಮಾನ್ಯ ನಾಗರಿಕರ ನ್ಯಾಯದ ಗುರಾಣಿ ಹಿಂದೆಂದಿಗಿಂತಲೂ ತೆಳುವಾಗುತ್ತಿದೆ. ಶರ್ಮಾ, ಚೌಧರಿ ಮತ್ತು ಅಧಿಕಾರಿಗಳಿಗೆ, ತಮ್ಮ ಕರಾಳ ಭೂತಕಾಲವು ರಾಜಕೀಯ ಜೀವನದಲ್ಲಿ ಕೇವಲ ಒಂದು ಅಡಿಟಿಪ್ಪಣಿಯಾಗಿದೆ. ಈಗಿನ ರಾಜಕಾರಣದಲ್ಲಿ ಬೊಗಳಬಲ್ಲ, ಕಚ್ಚಬಲ್ಲ, ಬಣ್ಣಬದಲಿಸಬಲ್ಲ ಭ್ರಷ್ಟ, ವಂಚಕ ಗೋಸುಂಬೆಗಳಿಗೇ ಅಧಿಕಾರ, ಗೌರವ, ಸ್ಥಾನಮಾನ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ವ್ಯವಸ್ಥೆಯ ಪರಮೋಚ್ಚ “ಸ್ಯಾಂಪಲ್” ಈ ವಿದ್ಯಮಾನದ ನೇತೃತ್ವ ವಹಿಸಿದೆ.
