Home ಅಂಕಣ ಜನಪರರಿಗೆ ಜಾತಿಗಣತಿ, ಜನ ವಿರೋಧಿಗಳಿಗೆ ಮತಕ್ಷೇತ್ರ ವಿಂಗಡಣೆ

ಜನಪರರಿಗೆ ಜಾತಿಗಣತಿ, ಜನ ವಿರೋಧಿಗಳಿಗೆ ಮತಕ್ಷೇತ್ರ ವಿಂಗಡಣೆ

0

“..ಸೌತ್ ಇಂಡಿಯಾ ರಾಜ್ಯಗಳು ತಮ್ಮ ತಮ್ಮ ನೆಲದ ನುಡಿಯಲ್ಲಿ ಆಡಳಿತ ಮಾಡುವುದರ ಜೊತೆಗೆ ತಮ್ಮದೇ ಆದ ಮಾದರಿಗಳಲ್ಲಿ ಬೆಳೆಯುತ್ತಿವೆ. ಅಕ್ಕಪಕ್ಕದ ನಾಡಿನ ಕಾನೂನಿನಂತೆ ಕಾನೂನು ಮಾಡಿದರು ಸಂಪೂರ್ಣವಾಗಿ ಒಂದೇ ರೀತಿಯ ಕಾನೂನು ಮಾಡುವುದಿಲ್ಲ..” ನಾವು Dravida ಕನ್ನಡಿಗರು ಚಳುವಳಿ ಮುಂದಾಳು ಅಭಿ ಒಕ್ಕಲಿಗ ಅವರ ಬರಹದಲ್ಲಿ

ಜಾತಿ ಧರ್ಮ ಎರಡು ಕೂಡ ಒಂದೇ ಎಂಬುದು ಸರಿಯಾದ ತರ್ಕವಲ್ಲ. ಬಹುತೇಕ ನಾಸ್ತಿಕರು ದೇವರು ಇಲ್ಲ ಎಂಬ ಸ್ಪಷ್ಟ ತಿಳುವಳಿಕೆ ಜೊತೆಗೆ ಜಾತಿ ಧರ್ಮ ಕೂಡ ಇಲ್ಲ/ಇದೆ ಅನ್ನುವ ಬದಲು ಅದನ್ನು ಕಡೆಗಣಿಸಿ ಮಾತನಾಡಿ ಬಿಡುತ್ತಾರೆ. ಇಂಡಿಯಾ ಒಕ್ಕೂಟದ ಸಂವಿಧಾನವೆ ಜಾತಿ ಧರ್ಮಗಳಿಗೆ ಆರ್ಟಿಕಲ್ 26 ರಿಂದ ಆರ್ಟಿಕಲ್ 30ರ ವರೆಗೂ ಸ್ಥಾನಮಾನ ಕೊಟ್ಟಿದೆ. ಈ ಆರ್ಟಿಕಲ್ ಗಳು ಮಾತ್ರವಲ್ಲದೆ ಬಹುತೇಕ ಹಕ್ಕುಗಳು ನೀಡಿರುವ  ಆರ್ಟಿಕಲ್ ಗಳೆಲ್ಲ ಜಾತಿ ಧರ್ಮದ ಆಧಾರದಲ್ಲಿ ಇವೆ.

‘Atheist-ನಾಸ್ತಿಕ-ಜನಪರ’ ಇಂಗ್ಲಿಷ್ ನ Athiest ಗೆ ಸಂಸ್ಕೃತದ ನಾಸ್ತಿಕ ಎಂಬ ಪದವನ್ನು ಬಳಸಿ ಜನರಿಂದ ಕನ್ನಡದಿಂದ Athiest ಚಿಂತನೆ ದೂರ ಇಡುವ ಹುನ್ನಾರ ಅಡಗಿದೆ. ಇದರ ಸರಿಯಾದ ಕನ್ನಡ ಅನುವಾದ ‘ಜನಪರ’ ಎಂಬುದಾಗಿದೆ.ಯಾವುದೇ ಅನುವಾದದಲ್ಲಿ ಮೊದಲಿಗೆ ಪರಿಗಣಿಸಬೇಕಾದ ವಿಚಾರ ಏನೆಂದರೆ ಆ ಚಿಂತನೆಯ ಭಾವಾನುವಾದವೆ ಹೊರತು ಕೇವಲ ಪದಗಳ ಅನುವಾದವಲ್ಲ. Atheist ಎಂಬ ಚಿಂತನೆಯು ಕನ್ನಡ ಚಿಂತನೆಯಲ್ಲಿ ‘ಜನಪರ’ ಪದದಿಂದ ಗುರುತಿಸುವುದು ಸರಿಯಾದ ಭಾವಾನುವಾದ.

ಇಂಡಿಯಾ ಸಮಾಜದಲ್ಲಿ ವೇದಗಳ ಪರ ಇಲ್ಲದ ಜನರನ್ನು Athiest-ನಾಸ್ತಿಕ ಎಂದು ವ್ಯಾಖ್ಯಾನಿಸಿದ್ದಾರೆ. ಜಗತ್ತಿನ ಬೇರೆ ಸಮಾಜಕ್ಕೆ ಕೇವಲ ಚಿಂತನೆಗಳಲ್ಲಿ ಹೋಗುವುದರಿಂದ ಯಾವ ಉಪಯೋಗವೂ ಇರುವುದಿಲ್ಲ.ನಮ್ಮ ಸುತ್ತಮುತ್ತಲ ಸಮಾಜ ಅಂದರೆ ಇಂಡಿಯಾ ಸಮಾಜದಲ್ಲಿ ಏನಿದೆಯೋ ಅದರ ಬುಡದಲ್ಲಿಯೇ ನಮ್ಮ ಆಲೋಚನೆ ಇರುವುದು ಮತ್ತು ಅದನ್ನೇ ನಾವು ಬದಲಾಯಿಸಬೇಕಿರುವುದು. ಬದಲಾಯಿಸುವುದರಲ್ಲು ಎರಡು ಬಗೆ ಇದೆ ಒಂದು ‘ಜನಪರ’ ಮತ್ತೊಂದು ‘ಜನ ವಿರೋಧಿ’.

ವ್ಯಕ್ತಿ ಪರ, ವ್ಯವಸ್ಥೆ ಪರ, ದೇವರ ಪರ, ಅಧಿಕಾರದ ಪರ, ಸಂಪತ್ತಿನ ಪರ ಮತ್ತು ಜನಪ್ರಿಯತೆ ಪರ ಇರುವುದು ಅಥವಾ ಅದಕ್ಕಾಗಿ ನಡೆ ನುಡಿ ಇಡುವುದು ಜನ ವಿರೋಧಿಯಾಗಿದೆ. ಏಕೆಂದರೆ ಇದರಲ್ಲಿ ನಂಬಿಕೆ ಇಟ್ಟು ಮುಂದುವರೆಯುತ್ತಾರೆ. ನಂಬಿಕೆಗೂ ಮೂಡ ನಂಬಿಕೆಗೊ ಬಹಳ ವ್ಯತ್ಯಾಸವೇನು ಇಲ್ಲ. ನಂಬಿಕೆ ಪರ ಇರುವುದನ್ನೆ ‘Thiest’ ಅನ್ನುವುದರಿಂದ ‘ಆಸ್ತಿಕ’ ಎಂಬ ಸಂಸ್ಕೃತದ ಪದವನ್ನು ಕನ್ನಡ ಚಿಂತನೆಯಲ್ಲಿ ‘ಜನ ವಿರೋಧಿ’ ಎಂಬ ಪದದಿಂದ ಯಾವುದೇ ಅಳುಕಿಲ್ಲದೆ ಸಾರಬೇಕಿದೆ.

ಕೋವಿಡ್ 19 ನೆಪವೊಡ್ಡಿ 2021ರ ಜನಗಣತಿ ಮುಂದೂಡಿದ ಇಂಡಿಯಾ ಒಕ್ಕೂಟ ಸರ್ಕಾರ ಈಗ ನಡೆಸಲು ಮುಂದಾಗಿದೆ. ನಿಜವಾಗಲೂ ಇವರು ಇಷ್ಟು ವರ್ಷ ಮುಂದಕ್ಕೆ ತಳ್ಳಿದ್ದು 2026ರ ಮತ ಕ್ಷೇತ್ರಗಳ ಮರು ವಿಂಗಡಣೆಯನ್ನು ಮತ್ತಷ್ಟು ‘ಜನ ವಿರೋಧಿ’ ಮಾಡಲಷ್ಟೆ ವಿನಃ ಬೇರೆ ಯಾವ ಕಾರಣದಿಂದಲೂ ಅಲ್ಲ. ಈಗಾಗಲೇ ಇದಕ್ಕೆ ಇರುವ ಬಲವಾದ ಪುರಾವೆ ಅಂದರೆ ಸಾವಿರ ಸಂಸದರು ಕೂರುವಂತಹ ನೂತನ ಸಂಸತ್ ಭವನ ಕಟ್ಟಿ ಕೊಂಡಿರುವುದು. ಸಂವಿಧಾನ ಬದ್ಧವಾಗಿ 1971ರ ಜನಗಣತಿ ಆಧಾರದಲ್ಲಿಯೆ ಮತಕ್ಷೇತ್ರ ವಿಂಗಡಣೆ ಮಾಡಬೇಕೆಂದು 2001ರಲ್ಲಿ ಸಂಸತ್ತು ತೀರ್ಮಾನ ಮಾಡಿಕೊಂಡಿರುವುದರಿಂದ  ಆ ಅವದಿ 2026 ಕ್ಕೆ ಮುಗಿದ ನಂತರ ಸಂವಿಧಾನ ಬದ್ಧವಾಗಿಯೇ 2027ರಲ್ಲಿ ತೀರ್ಮಾನಿಸಿದ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ ವಿಂಗಡಣೆ ಮಾಡುತ್ತಾರೆ. ಸೌತ್ ಇಂಡಿಯಾ ರಾಜ್ಯಗಳ ಒಂದಷ್ಟು ರಾಜಕಾರಣಿಗಳು ನಮಗೆ ಶೇಕಡವಾರು ಕಡಿಮೆ ಆಯಿತು ಅಂತ 4-5 ದಿನ ಬಾಯಿ ಬಡೆದುಕೊಂಡರು ಪ್ರತೀ ರಾಜ್ಯಕ್ಕೆ ಹೆಚ್ಚಾಗುವ 6-7 ಎಂಪಿ ಸೀಟುಗಳು ಮತ್ತು 15-20 ಎಂ ಎಲ್ ಎ ಸೀಟುಗಳು ಅವರ ಕುಟುಂಬದ ಮತ್ತೊಂದು ಕುಡಿಯನ್ನು ಶಾಸಕ-ಸಂಸದ ಮಾಡಿಕೊಳ್ಳುವುದರಲ್ಲಿ ತಲೀನರನ್ನಾಗಿ ಮಾಡಿ ಬಿಡುತ್ತದೆ. ಒಟ್ಟಾರೆ ಜನ ಸಾಮಾನ್ಯರಾದ ನಾವುಗಳು ಇವರ ಆಡಂಬರದ ಕುಟುಂಬ ರಾಜಕಾರಣಗಳಿಗೆ ತೆರಿಗೆ ಕಟ್ಟಲು ಕತ್ತೆ ಹಂದಿಗಳಂತೆ ಬದುಕಬೇಕಾಗುತ್ತದೆ.

ಹೆಚ್ಚುವ ಶಾಸಕ ಸಂಸದ ಸೀಟುಗಳ ಬಗ್ಗೆ, ಸೌತ್ ರಾಜ್ಯಗಳಿಗೆ ಕಡಿಮೆಯಾಗುವ ಶೇಕಡವಾರು ಬಗ್ಗೆ, ಎಲ್ಲಾ ಪಕ್ಷಗಳ ಆಡಂಬರದ ಕುಟುಂಬ ರಾಜಕಾರಣದ ಬಗ್ಗೆ ಜನಸಾಮಾನ್ಯರು ಮಾತನಾಡದೆ ‘ಜಾತಿ-ಧರ್ಮ’ದ ಬಗ್ಗೆ ಮಾತನಾಡಿಕೊಂಡಿರಲಿ ಎಂದು ದಿಕ್ಕು ತಪ್ಪಿಸಲು ಇದೇ ಮೊದಲ ಬಾರಿಗೆ ಇಂಡಿಯಾ ಒಕ್ಕೂಟ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೇರೆ ಬೇರೆ ಕೋನದಲ್ಲಿ ನೋಡಿದರೆ ಜಾತಿಗಣತಿ ಮಾಡುವುದು ‘ಜನಪರ’ ಆಗಲಿದೆ. ಏಕೆಂದರೆ ಬ್ರಿಟಿಷ್ ಇಂಡಿಯಾ ಸಮಯ 1931ರಲ್ಲಿ ಬಿಟ್ಟರೆ ಈಗಲೆ ಈ ಜಾತಿ ಗಣತಿ ನಡೆಯುತ್ತಿರುವುದು. ಸಂವಿಧಾನ ಕೂಡ  ಗಣತಿ ಮಾಡುವುದು ಇಂಡಿಯಾ ಒಕ್ಕೂಟ ಸರ್ಕಾರದ ಕೆಲಸ ಎಂದಿದೆ. ಈ ಕಾರಣದಿಂದಲೇ ರಾಜ್ಯಗಳು ನಡೆಸುವ ಗಣತಿಗೆ ಸಾಮಾಜಿಕ ಶೈಕ್ಷಣಿಕ ಗಣತಿ ಎಂಬ ಹಿಂಬದಿಯ ರಾಜಕೀಯ ಆಯಾಮವಿರುವುದು. ರಾಜ್ಯಗಳು ನಡೆಸಿದ ಸಮೀಕ್ಷೆಯಲ್ಲಿಯೆ ದನಿ ಇಲ್ಲದ ಜಾತಿಯ ಜನರು ಜಾಗೃತರಾಗಿ ಮಾತನಾಡಲು ತಮ್ಮ ಹಕ್ಕುಗಳ ಕೇಳಲು ಬಾಯಿ ಬಿಟ್ಟಿರುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರುವುದರಿಂದ ಈ ಗಣತಿ ಜನಪರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇಂತಹ ಗಣತಿಯಲ್ಲಿ ‘ಜನಪರ’ ಇರೋರಿಗೆ ಒಂದು ಕಾಲಮ್ ಬೇಕಲ್ಲವೆ? ಕರ್ನಾಟಕ ರಾಜ್ಯ ಸರ್ಕಾರ ನೀಡಿತಲ್ಲ ಧರ್ಮ-religion ಜಾಗದಲ್ಲಿ 8ನೆ ಆಯ್ಕೆ ಆಗಿ ನಾಸ್ತಿಕ-Athiest ಇದು ಈಗ ಇಂಡಿಯಾ ಒಕ್ಕೂಟ ಸರ್ಕಾರ ನಡೆಸುವ ಜನ ಜಾತಿ ಗಣತಿಯಲ್ಲೂ ಇರಲೇಬೇಕು. ಅವರಾಗಿದ್ದು ಅವರೆ ಅಂತು ಕೊಡುವುದಿಲ್ಲ. ಇಲ್ಲೂ ಕೂಡ ಕೊಟ್ಟಿದ್ದು ನಮ್ಮಂತವರ ಪಟ್ಟಿನಿಂದಲೆ ಹೊರತು ಅವರಾಗಿದ್ದು ಅವರು ಕೊಡಲಿಲ್ಲ. ಈ ಗಣತಿ ನಡೆಸುವುದು ಇಂಡಿಯಾ ಒಕ್ಕೂಟ ಸರ್ಕಾರದ ministry of home affairs ಆಗಿರೋದ್ರಿಂದ ಎಲ್ಲ ರಾಜ್ಯಗಳಿಂದಲೂ ಒತ್ತಾಯ ಸೃಷ್ಟಿ ಮಾಡಬೇಕು. ನಾರ್ತ್ ಹಿಂದಿಯ ರಾಜ್ಯಗಳನ್ನು ಈ ವಿಚಾರಕ್ಕೆ ಟಚ್ ಮಾಡೋದು ಮೂರ್ಖತನ ಅದೇ ರೀತಿ ಸೌತ್ ಇಂಡಿಯಾದ ರಾಜ್ಯಗಳ ಟಚ್ ಮಾಡದೆ ಇದ್ದರೆ ಮೂರ್ಖತನ ಆಗುತ್ತದೆ. ಏಕೆಂದರೆ ನಾರ್ತ್ ಹಿಂದಿಯ ರಾಜ್ಯಗಳು ‘Thiest-ಆಸ್ತಿಕ-ಜನ ವಿರೋಧಿ’ ಕಾನೂನುಗಳಿಗೆ ಒತ್ತು ಕೊಡುತ್ತವೆ. ಸೌತ್ ಇಂಡಿಯಾ ರಾಜ್ಯಗಳು ‘Atheist-ನಾಸ್ತಿಕ-ಜನಪರ’ ಕಾನೂನುಗಳಿಗೆ ಒತ್ತು ಕೊಡುತ್ತವೆ. ನಾರ್ತ್ ಹಿಂದಿಯ ರಾಜ್ಯಗಳು ತಮ್ಮ ತಮ್ಮ ನೆಲದ ನುಡಿ ಆದ ಹರಿಯಾಣವಿ, ರಾಜಸ್ಥಾನಿ, ಮೈತಿಲಿ, ಭೋಜಪುರಿ, ಬಿಹಾರಿ ಇನ್ನು ಇತರೆ ನುಡಿಗಳ ಕೈ ಬಿಟ್ಟು  ಹಿಂದಿಯನ್ನು ಆಡಳಿತ ನುಡಿ ಮಾಡಿಕೊಂಡಿರುವುದೆ ಅವು ಜನ ವಿರೋಧಿ ನೀತಿ ಗೆ ಒತ್ತು ಕೊಡುತ್ತವೆ ಎಂಬುದಕ್ಕೆ ದೊಡ್ಡ ಉದಾಹರಣೆ.

ಸೌತ್ ಇಂಡಿಯಾ ರಾಜ್ಯಗಳು ತಮ್ಮ ತಮ್ಮ ನೆಲದ ನುಡಿಯಲ್ಲಿ ಆಡಳಿತ ಮಾಡುವುದರ ಜೊತೆಗೆ ತಮ್ಮದೇ ಆದ ಮಾದರಿಗಳಲ್ಲಿ ಬೆಳೆಯುತ್ತಿವೆ. ಅಕ್ಕಪಕ್ಕದ ನಾಡಿನ ಕಾನೂನಿನಂತೆ ಕಾನೂನು ಮಾಡಿದರು ಸಂಪೂರ್ಣವಾಗಿ ಒಂದೇ ರೀತಿಯ ಕಾನೂನು ಮಾಡುವುದಿಲ್ಲ. ಈಗ ಜನ ಜಾತಿಗಣತಿ ವಿಚಾರದಲ್ಲಿಯೇ ತೆಲುಗು ನಾಡದ ತೆಲಂಗಾಣದಲ್ಲಿ no religion, no caste ಆಯ್ಕೆ ನೀಡಿದ್ದರು , ಆಂಧ್ರದಲ್ಲಿ others and none, ತಮಿಳುನಾಡಿನಲ್ಲಿ no religion, ಮತ್ತೊಂದು ತಮಿಳು ನೆಲವಾದ ಪುದುಚೆರಿಯಲ್ಲಿ others ಆಯ್ಕೆ ನೀಡಿದ್ದರೆ ವಿನಃ ನೇರವಾಗಿ ‘Athiest-ನಾಸ್ತಿಕ’ ಆಯ್ಕೆ ನೀಡಿರಲಿಲ್ಲ. ಆದರೆ ಇಡೀ ಇಂಡಿಯ ಒಕ್ಕೂಟದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ನೇರವಾಗಿ  ‘Athiest-ನಾಸ್ತಿಕ’ ಆಯ್ಕೆ ನೀಡಿದ್ದರು. ಕರ್ನಾಟಕ ರಾಜ್ಯ ಸರ್ಕಾರ ಕೂಡ ಸಂವಿಧಾನ ಬದ್ಧ ಸರ್ಕಾರ ಆಗಿರುವುದರಿಂದ ಇಂಡಿಯಾ ಒಕ್ಕೂಟ ಸರ್ಕಾರಕ್ಕೆ ಈ ದಾಖಲೆಗಳನ್ನು ತೋರಿಸಿ ನೇರವಾಗಿ ‘Athiest-ನಾಸ್ತಿಕ’ ಆಯ್ಕೆ ಕೊಡಲೇಬೇಕು ಎಂದು ಒತ್ತಾಯಿಸಬೇಕು. ಜೊತೆಗೆ ಅಕ್ಕಪಕ್ಕದ ಇತರ ದ್ರಾವಿಡ ನುಡಿ ರಾಜ್ಯಗಳಾದ ಕೇರಳ,ತಮಿಳುನಾಡು,ತೆಲಂಗಾಣ,ಪುದುಚೆರಿ ಮತ್ತು ಆಂಧ್ರ ಪ್ರದೇಶದಿಂದಲೂ ನೇರವಾಗಿ ‘Athiest-ನಾಸ್ತಿಕ’ ಆಯ್ಕೆ  ಬೇಕು ಎಂದು ಒತ್ತಾಯಿಸುವಂತೆ ಅಲ್ಲಿರುವ ‘Athiest-ಜನಪರ’ ರನ್ನು ಮನವೊಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಹೆಜ್ಜೆ ಇಟ್ಟಿದ್ದೇವೆ ನಮ್ಮ ಜೊತೆಯಾಗುವವರು ಆಗಬಹುದು ಇಲ್ಲದಿದ್ದರೆ ನೀವೇ ನಿಮ್ಮ ಶೈಲಿಯಲ್ಲಿ ಒತ್ತಾಯಿಸಿ. ಏನು ಮಾಡದೆ ಸುಮ್ಮನೆ ಕೂತರೆ, ಇಡೀ ವ್ಯವಸ್ಥೆಯನ್ನ ಇನ್ನೂ ‘ಜನ ವಿರೋಧಿ’ ಮಾಡಿಬಿಡುತ್ತಾರೆ ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಪರ ಇರುವ ವ್ಯಕ್ತಿಗಳು.

You cannot copy content of this page

Exit mobile version