Home ಅಂಕಣ ಬೊಗಸೆಗೆ ದಕ್ಕಿದ್ದು-71 : “ಹಿಂದೂ ಒಂದು” ಸೋಗಿನಲ್ಲಿ ದಲಿತ ದಮನ!

ಬೊಗಸೆಗೆ ದಕ್ಕಿದ್ದು-71 : “ಹಿಂದೂ ಒಂದು” ಸೋಗಿನಲ್ಲಿ ದಲಿತ ದಮನ!

0

“..ದಲಿತರ ಮನೆಗಳಿಗೆ ಹೊಟೇಲು ಊಟ ತರಿಸಿ, “ಸಹಭೋಜನ”ವೆಂದು ಪ್ರಚಾರ ಪಡೆದರೆ ಸಾಕಾಗುವುದಿಲ್ಲ! ಭಾರತದಲ್ಲಿ ಜಾತಿ ಮತ್ತು ಧಾರ್ಮಿಕ ದೌರ್ಜನ್ಯದ ಅಂಕಿಅಂಶಗಳು ದಾಖಲಾಗುತ್ತಿರುವುದು ಸುಳ್ಳಲ್ಲ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಆರ್‌ಎಸ್‌ಎಸ್ ನಿರೂಪಣೆಯ “ಹಿಂದೂ ಒಂದು” ಘೋಷಣೆಯು ಒಂದು ರಾಜಕೀಯ ಮಂಕುಬೂದಿಯಾಗಿದ್ದು, ದೇಶಾದ್ಯಂತ ದಲಿತರ ವಿರುದ್ಧ ನಡೆಯುತ್ತಿರುವ ವ್ಯಾಪಕ ಹಿಂಸಾಚಾರವನ್ನು ಮರೆಮಾಚಲು ಮತ್ತು ಅವರೂ ಸೇರಿದಂತೆ ಹಿಂದೂತ್ವದ ಅಡಿಯಾಳುಗಳನ್ನು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಲೆಂದೇ ರೂಪಿಸಿದ ಮಾಯೆಯಾಗಿದೆ. ಇದರ ಪ್ರತಿಪಾದಕರು, ಜಾತಿ ತಾರತಮ್ಯವು ಒಂದು ಭೂತಕಾಲದ ಪಳೆಯುಳಿಕೆ ಮಾತ್ರ, ಕೆಲವೊಂದು ಘಟನೆಗಳು ನಡೆದಿರಬಹುದು; ಆದರೆ, ಅದನ್ನೇ ಇಡಿಯಾಗಿ ಅನ್ವಯಿಸುವುದು ಸರಿಯಲ್ಲ ಎಂದು ಸಾಮಾಜಿಕವಾಗಿಯೂ , ಮಾಧ್ಯಮಗಳಲ್ಲಿಯೂ ಹೇಳುತ್ತಾ ಇರುವುದನ್ನು ನಾವು ನಿರಂತರವಾಗಿ ಕಾಣುತ್ತೇವೆ. ಆದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಮತ್ತು 2024–2026ರ ಸಾಂಸ್ಥಿಕ ದತ್ತಾಂಶವು ದಲಿತರ ಮೇಲಿನ ದೌರ್ಜನ್ಯದ ರಕ್ತಸಿಕ್ತ ಮತ್ತು ನಿರಂತರ ವಾಸ್ತವವನ್ನು ಬಹಿರಂಗಪಡಿಸುತ್ತದೆ.

“ಹಿಂದೂ ರಕ್ಷಕ” ಮೋದಿ ಸರಕಾರ ಬಂದ ಮೇಲೆ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದು ಹೆಚ್ಚಾಗಿರುವುದನ್ನೂ ಅಂಕಿಅಂಶಗಳು ಹೇಳುತ್ತವೆ. ಹಾಗೆಂದು ಉಳಿದ ರಾಜ್ಯಗಳಲ್ಲಿ ಇದು ಇಲ್ಲವೆಂದಲ್ಲ. ಆದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಸರಕಾರ ಮತ್ತು ಪೊಲೀಸ್ ರಕ್ಷಣೆ ಸಿಗುತ್ತಿದೆ. ಹಲವು ಕಡೆ ನ್ಯಾಯ ಪ್ರಕ್ರಿಯೆಯೇ ಸಂಶಯಾಸ್ಪದವಾಗಿದೆ. ಹೀಗಿದ್ದರೂ, ಈ ಘಟನೆಗಳು ಕೇವಲ “ಅಪವಾದಗಳು, ವಿನಾಯಿತಿಗಳು” ಎಂದು ವಾದಿಸುವುದು ಸಾಮಾಜಿಕ ಜಾಣ ಕುರುಡುತನ. ಜಾತೀಯತೆಯಿಂದ ನಿಜಕ್ಕೂ ಕುರುಡಾಗಿರುವವರು ಮತ್ತು ತೋರಿಕೆಯ ಜನರು, ಅವಕಾಶವಾದಿಗಳು ಮಾತ್ರವೇ ಹೀಗೆ ಹೇಳಲು ಸಾಧ್ಯ. ಏಕೆಂದರೆ, ಈ ದೌರ್ಜನ್ಯಗಳು ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಪುನರಾವರ್ತನೆಯಾಗುವ ಉದ್ದೇಶಪೂರ್ವಕವಾದ ಮತ್ತು  ವ್ಯವಸ್ಥಿತವಾದ ಕೃತ್ಯಗಳೆಂದು ಅಂಕಿಅಂಶಗಳು ಸಾಬೀತುಪಡಿಸುತ್ತವೆ.

ಅಂಕಿಅಂಶಗಳು ನೀಡುವ ಕರಾಳ ಚಿತ್ರ
​”ಹಿಂದೂ ಒಂದು” ಘೋಷಣೆಯು ರಾಷ್ಟ್ರೀಯ ಅಪರಾಧ ಅಂಕಿಅಂಶಗಳ ಭಾರದ ಅಡಿಯಲ್ಲಿ ಕುಸಿಯುತ್ತದೆ. ದಲಿತರ ಮೇಲಿನ ಹಿಂಸಾಚಾರವು ಪ್ರತ್ಯೇಕ ಪ್ರತ್ಯೇಕ ಘಟನೆಗಳ ಸರಣಿಯಾಗಿರದೆ, ಉಲ್ಭಣಿಸುತ್ತಿರುವ ಗಂಭೀರ ರಾಷ್ಟ್ರೀಯ ಬಿಕ್ಕಟ್ಟಾಗಿದೆ. 2023ರ ಅಂತ್ಯದ ವೇಳೆಗೆ, ಎನ್‌ಸಿಆರ್‌ಬಿ ಪರಿಶಿಷ್ಟ ಜಾತಿಗಳ ವಿರುದ್ಧ 57,582ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು 2021ರಲ್ಲಿ ಇದ್ದ ಸರಿಸುಮಾರು 50,000ದಿಂದ ಸ್ಥಿರವಾಗಿ, ಆತಂಕಕಾರಿಯಾಗಿ ಏರುತ್ತಿದೆ. ಇದರರ್ಥ ಭಾರತದಲ್ಲಿ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ವಿರುದ್ಧ ಅಪರಾಧ ನಡೆಯುತ್ತದೆ. ಭಾರತದಲ್ಲಿ ಇಂತಾ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ಕ್ರಿಮಿನಲ್ ಮತ್ತು ಪೋಲೀಸ್ ಭಯ ಮತ್ತು ದಬ್ಬಾಳಿಕೆಯಿಂದ ಠಾಣೆಗಳ ಮೆಟ್ಟಲನ್ನೇ ಏರುವುದಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು.

ಹಿಂಸಾಚಾರವನ್ನು ಹೆಚ್ಚಾಗಿ ಸಾಮಾಜಿಕ ನಿಯಂತ್ರಣಕ್ಕೆ, ತಾರತಮ್ಯದ ಮರುಸ್ಥಾಪನೆಗೆ ಒಂದು ಸಾಧನವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಒಡಿಶಾದಲ್ಲಿ (ಜೂನ್ 2025), ಹಸು ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ದಲಿತ ಪುರುಷರನ್ನು ಬಲವಂತವಾಗಿ ಕೂದಲು ಬೋಳಿಸಿ ತೆವಳುವಂತೆ ಮಾಡಲಾಯಿತು. ಅದೇ ರೀತಿ, ಉತ್ತರ ಪ್ರದೇಶದಲ್ಲಿ (2024) 15 ವರ್ಷದ ದಲಿತ ಹುಡುಗನನ್ನು ಪ್ರಬಲ ಜಾತಿಯ ಯುವಕರು ಥಳಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದರು. ಇವು ಕೇವಲ “ಅಪರಾಧಗಳು” ಅಲ್ಲ; ಅವು ಜಾತಿ ಶ್ರೇಣೀಕರಣದ “ಧಾರ್ಮಿಕ  ಕಾನೂನು”ಗಳ ಬಲವಂತದ ಜಾರಿಗಳಾಗಿವೆ. ರಾಷ್ಟ್ರೀಯ ಮಟ್ಟದಲ್ಲಿ, ಪ್ರತಿದಿನ ಸರಾಸರಿಯಾಗಿ 10 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ. ಇದು ಪ್ರಬಲ ಜಾತಿಗಳ ಕಾಲ್ಪನಿಕ “ಶುದ್ಧತೆ” ಮತ್ತು ಸ್ವಯಂ ಆರೋಪಿತ “ಶ್ರೇಷ್ಟತೆ”ಯನ್ನು ಹೇರಲು ಮತ್ತು ಘನತೆಯ ಜೀವನ ಬಯಸುವ ದಲಿತ ಕುಟುಂಬಗಳನ್ನು “ಶಿಕ್ಷಿಸಲು” ಲೈಂಗಿಕ ಹಿಂಸೆಯನ್ನು ಹೇಗೆ ಅಸ್ತ್ರವಾಗಿ ಬಳಸಲಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಪ್ರಮುಖ ಘಟನೆಗಳು
ಇಲ್ಲಿ ನಾವು ಭಾರತದಲ್ಲಿ ನಡೆದ ದಲಿತ ವಿರೋಧಿ ಕ್ರೂರ ಕೃತ್ಯಗಳಲ್ಲಿ ಕೆಲವೇ ಕೆಲವು ಘಟನೆಗಳನ್ನಾದರೂ ನೆನಪಿಸಿಕೊಳ್ಳುವ ಅಗತ್ಯವಿದೆ.

ಕರಂಚೇಡು ಹತ್ಯಾಕಾಂಡ (1985, ಆಂಧ್ರಪ್ರದೇಶ): ಇಲ್ಲಿ ನೀರಿನ ವಿವಾದದ ನಂತರ ಪ್ರಬಲ ಜಾತಿಯ ಭೂಮಾಲೀಕರಿಂದ ದಲಿತರ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆದಿತ್ತು. ಈ ಘಟನೆಯು ದಲಿತ ಮಹಾಸಭಾದ ರಚನೆಗೆ ಪ್ರಮುಖ ಕಾರಣವಾಯಿತು.

ಸುಂಡೂರು (ಚುಂಡೂರು) ಹತ್ಯಾಕಾಂಡ (1991, ಆಂಧ್ರಪ್ರದೇಶ): ಎಂಟು ದಲಿತ ಪುರುಷರನ್ನು ಕೊಲೆ ಮಾಡಿ ಅವರ ಶವಗಳನ್ನು ಕಾಲುವೆಗೆ ಎಸೆಯಲಾಗಿತ್ತು. ಸಿನಿಮಾ ಮಂದಿರದಲ್ಲಿ ದಲಿತ ವ್ಯಕ್ತಿಯೊಬ್ಬರು ಪ್ರಬಲ ಜಾತಿಯ ಮಹಿಳೆಯ ಕಾಲು ಮೆಟ್ಟಿದ ಎಂಬ ಕಾರಣಕ್ಕೆ ಈ ಘಟನೆ ಸಂಭವಿಸಿತು ಎಂದು ವರದಿಗಳು ಹೇಳುತ್ತವೆ.

ಮೇಲವಲವು ಹತ್ಯಾಕಾಂಡ (1997, ತಮಿಳುನಾಡು): ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ದಲಿತ ವ್ಯಕ್ತಿ ಮುರುಗೇಶನ್ ಮತ್ತು ಇತರ ಐವರನ್ನು ಹಾಡಹಗಲೇ ಹತ್ಯೆ ಮಾಡಲಾಗಿತ್ತು.

ಕಂಬಾಲಪಲ್ಲಿ ಘಟನೆ (2000, ಕರ್ನಾಟಕ): ಕೋಲಾರ ಜಿಲ್ಲೆಯಲ್ಲಿ ಜಾತಿ ಆಧಾರಿತ ಉದ್ವಿಗ್ನತೆಯ ನಂತರ ಏಳು ದಲಿತರನ್ನು ಮನೆಯೊಂದರಲ್ಲಿ ಕೂಡಿಹಾಕಿ ಗುಂಪೊಂದು ಜೀವಂತವಾಗಿ ಸುಟ್ಟುಹಾಕಿದ ಘಟನೆ ಎಂದೂ ಮಾಸುವಂತದ್ದಲ್ಲ. ಆದರೆ 2006ರಲ್ಲಿ ಮೃತಪಟ್ಟವರ ಮನೆಯವರೂ ಸೇರಿದಂತೆ ಪ್ರತ್ಯಕ್ಷದರ್ಶಿ ಸಾಕ್ಷಿಗಳು ತಿರುಗಿಬಿದ್ದುದರಿಂದ ಎಲ್ಲಾ 46 ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಹೈಕೋರ್ಟ್ ಕೂಡಾ ನಂತರ ಈ ತೀರ್ಪನ್ನು ಎತ್ತಿ ಹಿಡಿಯಿತು. ಇದು ದಲಿತ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಒಂದು ಕಾನೂನು ದುರಂತವಾಗಿದೆ. ಇದರ ಹಿಂದಿನ ಸಾಮಾಜಿಕ ಕಾರಣಗಳು ದೇಶದ ಎಲ್ಲಡೆ ನಡೆಯುತ್ತಿರುವ ದಲಿತ ದಮನದ ಗಂಭೀರತೆಯನ್ನು ಎತ್ತಿತೋರಿಸುತ್ತವೆ.

ಖೈರ್ಲಾಂಜಿ ಹತ್ಯಾಕಾಂಡ (2006, ಮಹಾರಾಷ್ಟ್ರ): ಭೋತ್ಮಾಂಗೆ ಕುಟುಂಬದ ನಾಲ್ವರು ಸದಸ್ಯರನ್ನು ಗುಂಪೊಂದು ಕ್ರೂರವಾಗಿ ಹೊಡೆದು ಕೊಂದಿತ್ತು. ಈ ಪ್ರಕರಣವು ವ್ಯವಸ್ಥೆಯ ವೈಫಲ್ಯಕ್ಕೆ ಒಂದು ಸಂಕೇತವಾಯಿತು ಮತ್ತು ಭಾರತದಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾಯಿತು.

ಮಿರ್ಚ್‌ಪುರ ಹಿಂಸಾಚಾರ (2010, ಹರಿಯಾಣ): ಹಲವಾರು ದಲಿತ ಮನೆಗಳಿಗೆ ಗುಂಪೊಂದು ಬೆಂಕಿ ಹಚ್ಚಿದ ನಂತರ, ವೃದ್ಧ ದಲಿತ ವ್ಯಕ್ತಿ ಮತ್ತು ಆತನ ದೈಹಿಕವಾಗಿ ಅಸ್ವಸ್ಥ ಮಗಳನ್ನು ಜೀವಂತವಾಗಿ ಸುಟ್ಟುಹಾಕಲಾಯಿತ್ತು.

​ಉನಾದ ಘಟನೆ (2016, ಗುಜರಾತ್): ಸತ್ತ ಹಸುವಿನ ಚರ್ಮ ಸುಲಿದಿದ್ದಕ್ಕಾಗಿ ನಾಲ್ವರು ದಲಿತ ಪುರುಷರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಥಳಿಸಲಾಗಿತ್ತು. ಈ ವೀಡಿಯೊ ವೈರಲ್ ಆಗಿದ್ದು, ಇದು ಭಾರಿ ದಂಗೆ ಮತ್ತು “ಚಲೋ ಉನಾ” ಚಳುವಳಿಗೆ ಕಾರಣವಾಗಿತ್ತು.

​ಹತ್ರಾಸ್ ಪ್ರಕರಣ (2020, ಉತ್ತರ ಪ್ರದೇಶ): 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ನಂತರ ಆಕೆ ತನಗಾದ ಗಾಯಗಳಿಂದ ಮೃತಪಟ್ಟಿದ್ದರು. ಕುಟುಂಬದ ಒಪ್ಪಿಗೆಯಿಲ್ಲದೆ ಪೊಲೀಸರು ಆಕೆಯ ಶವವನ್ನು ಆತುರದಿಂದ ರಾತೋರಾತ್ರಿ ಅಂತ್ಯಕ್ರಿಯೆ ಮಾಡಿದ್ದು, ಪ್ರತಿಪಕ್ಷಗಳ ನಾಯಕರು ಆಕೆಯ ಮನೆಗೆ ಭೇಟಿ ನೀಡದಂತೆ ತಡೆದುದು ರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿತ್ತು.

“ಪ್ರಗತಿಪರ” ಕರ್ನಾಟಕವೂ ಹೊರತಲ್ಲ
​ತಾರತಮ್ಯವು “ಉತ್ತರ ಭಾರತದಲ್ಲಿ” ಅಥವಾ “ಗ್ರಾಮೀಣ ಪ್ರದೇಶಗಳಲ್ಲಿ” ಮಾತ್ರ ನಡೆಯುವ ವಿಷಯವಾಗಿದೆ ಎಂಬ ಕಥಾನಕವು ಕರ್ನಾಟಕದ ಸ್ವಂತ ದಾಖಲೆಯೇ ನಿರಾಕರಿಸುವಂತ ಒಂದು ಸುಳ್ಳು. ಈ ಪ್ರಗತಿಪರ ಎಂದು ಹೇಳಲಾಗುವ ರಾಜ್ಯದಲ್ಲಿಯೂ  “ಹಿಂದೂ ಒಂದು” ಘೋಷಣೆಯು, ದಲಿತರು ತಮ್ಮ ಹಕ್ಕುಗಳ ಕುರಿತು ಧ್ವನಿ ಎತ್ತಿದ ತಕ್ಷಣ ಟುಸ್ಸೆನ್ನುತ್ತದೆ.

2014ರಲ್ಲಿ ಕೊಪ್ಪಳದಲ್ಲಿ ನಡೆದ ಮರಕುಂಬಿ ಘಟನೆಯಲ್ಲಿ, 100ಕ್ಕೂ ಹೆಚ್ಚು ಪ್ರಬಲ ಜಾತಿಯ ವ್ಯಕ್ತಿಗಳ ಹಿಂಸಾತ್ಮಕ ಗುಂಪು ಒಂದು ದಲಿತ ಕಾಲೋನಿಯ ಮೇಲೆ ದಾಳಿ ಮಾಡಿ, ಮಹಿಳೆಯರು ಮಕ್ಕಳೆನ್ನದೇ ಹಲವರನ್ನು ಥಳಿಸಿ, ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿತ್ತು. ಗಂಗಾವತಿಯ ಸಿನಿಮಾ ಮಂದಿರವೊಂದರಲ್ಲಿ ದಲಿತ ಯುವಕ ಮತ್ತು “ಮೇಲ್ಜಾತಿ”ಯ ಕೆಲವರ ನಡುವಿನ ಘರ್ಷಣೆ ಇದಕ್ಕೆ ನೆಪವಾಗಿತ್ತು. ನಂತರ ಈ ಪ್ರಕರಣದ ಮುಖ್ಯ ಸಾಕ್ಷಿ ಹಾಗೂ ದಲಿತ ಕಾರ್ಯಕರ್ತ ವೀರೇಶಪ್ಪ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಕೊನೆಗೂ 2024ರಲ್ಲಿ 101 ಅಪರಾಧಿಗಳ ಅಪರಾಧ ಸಾಬೀತಾಗಿ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ಬಂತು.

“ಹಿಂದೂ ಒಂದು” ಪ್ರಯೋಗಶಾಲೆಯಾದ ಕರಾವಳಿಯಲ್ಲಿ ಮೇಲ್ನೋಟದ ಅಸ್ಪೃಶ್ಯತೆ ಬಹುತೇಕ ಇಲ್ಲವಾದರೂ, ತಾರತಮ್ಯ ಒಳಗೊಳಗೇ ಮುಂದುವರಿದಿದೆ. ಜಾತಿಯ ಕಾರಣಕ್ಕೆ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ಉದಾಹಣೆಗೆ ಆಗಸ್ಟ್ 2024ರಲ್ಲಿ, ದಕ್ಷಿಣ ಕನ್ನಡದ ಬೆಳ್ತಂಗಡಿ ಬಳಿಯ ಕೊಕ್ಕಡದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಒಳಗೆ ಬಂದದ್ದಕ್ಕಾಗಿ ಅಂಗಡಿಯವನೊಬ್ಬ 67 ವರ್ಷದ ಮಂಚ ಮೊಗೇರ ಎಂಬವರ ಮೇಲೆ ಮರದ ಕೋಲಿನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದ. ಇಲ್ಲಿ ಕೇವಲ ಉದಾಹರಣೆಗಳನ್ನು ಮಾತ್ರವೇ ನೀಡಲಾಗಿದೆ.

ಸಾಂಸ್ಥಿಕ “ಜಾತಿ ತಾರತಮ್ಯ” ಮತ್ತು ದೈನಂದಿನ ಅವಮಾನ
​ತಾರತಮ್ಯವು ಯಾವಾಗಲೂ ಹತ್ಯಾಕಾಂಡ ಅಥವಾ ನಿರ್ದಯ ಹಲ್ಲೆ, ಅತ್ಯಾಚಾರಗಳಾಗಿರಬೇಕಾಗಿಲ್ಲ. ಇದು ಸಾಮಾನ್ಯವಾಗಿ ಶಾಂತವಾದ, ಉಸಿರುಗಟ್ಟಿಸುವ ಅವಕಾಶ ನಿರಾಕರಣೆಯಾಗಿದೆ. ತಣ್ಣಗಿನ ಮಾನಸಿಕ ಕ್ರೌರ್ಯವೂ ಆಗಿರುತ್ತದೆ. ಅರ್ಹತೆಯು ದಲಿತರ ಯಶಸ್ಸಿಗೆ ಏಕೈಕ ಅಡಚಣೆ ಎಂದು “ಹಿಂದೂ ಒಂದು” ನಿರೂಪಣೆಯು ಸೂಚಿಸುತ್ತದೆ, ಆದರೆ ಜನವರಿ 2025ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ದತ್ತಾಂಶವೇ ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯದ ದೂರುಗಳು ಶೇಕಡಾ 118.4ರಷ್ಟು ಹೆಚ್ಚಾಗಿದೆ ಎಂದು ಬಹಿರಂಗಪಡಿಸುತ್ತದೆ. ರೋಹಿತ್ ವೇಮುಲಾ ಅವರ ಆತ್ಮಹತ್ಯೆಯಿಂದ ಪ್ರಸಿದ್ಧವಾದ ಈ “ಸಾಂಸ್ಥಿಕ ಕೊಲೆ”ಗಳು ಮುಂದುವರೆದಿವೆ ಮತ್ತು ದಲಿತ ವಿದ್ಯಾರ್ಥಿಗಳನ್ನು ಪ್ರಮುಖ ಸಂಸ್ಥೆಗಳಿಂದ ಹೊರಗೆ ಹಾಕಲಾಗುತ್ತಿದೆ. ಇದಕ್ಕೆ ಹಲವು ನಿದರ್ಶನಗಳನ್ನು ಕೊಡಬಹುದು. ಆದರೆ, ಪೂರ್ವಗ್ರಹ ಪೀಡಿತ ಸಿದ್ಧ ಚಿಂತನೆಯ “ಹಿಂದೂ ಒಂದು”ಗಳಿಗೆ ಇದು ಬೇಕಾಗಿಲ್ಲ.

​ಈ ಹೊರಗಿಡುವಿಕೆಯು ದೈಹಿಕ, ಮಾನಸಿಕ ಮತ್ತು ದೈನಂದಿನ ವಿಷಯವಾಗಿದೆ.  ಗ್ರಾಮೀಣ ಕರ್ನಾಟಕದಲ್ಲಿ, ಬೆಳಗಾವಿ ಮತ್ತು ಬಾಗಲಕೋಟೆಯಂತಹ ಜಿಲ್ಲೆಗಳ ಟೀ ಅಂಗಡಿಗಳಲ್ಲಿ “ಎರಡು ಗ್ಲಾಸ್” ವ್ಯವಸ್ಥೆ ಇನ್ನೂ ಮುಂದುವರೆದಿದೆ ಅಲ್ಲಿ “ಮಾಲಿನ್ಯ” ತಡೆಗಟ್ಟಲು ದಲಿತರಿಗೆ ಪ್ರತ್ಯೇಕ ಕಪ್‌ಗಳನ್ನು ಇಡಲಾಗುತ್ತದೆ. ಒಂದು ಮಗು ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ಒಂದು ಕುಟುಂಬಕ್ಕೆ 60,000 ರೂ. ದಂಡ ವಿಧಿಸಲಾದ ಕುಷ್ಟಗಿ ದೇವಾಲಯದ ಘಟನೆ (2022)ಯು ಹೇಳುವುದೇನೆಂದರೆ: ದಲಿತನೊಬ್ಬ “ಪವಿತ್ರ” ಸ್ಥಳಕ್ಕೆ ಪ್ರವೇಶಿಸದಿರುವ ತನಕ ಮಾತ್ರವೇ “ಹಿಂದೂ ಒಂದು”. ಕಾಲಿಟ್ಟ ತಕ್ಷಣವೇ ಆತ ಬೇರೆ; ಆತ ಕೀಳು. ಇನ್ನು “ಆಕೆ”ಯ ಬಗ್ಗೆ ಕೇಳುವುದೇ ಬೇಡ! ಮಧ್ಯಾಹ್ನದ ಊಟದ ಯೋಜನೆಯೂ ಸಹ ಜಾತಿ ಸೋಂಕಿಗೆ ಒಳಗಾಗಿದೆ; ಕುಂಪಲದಲ್ಲಿ (2023) ಪ್ರಬಲ ಜಾತಿಯ ಪೋಷಕರು ದಲಿತ ಅಡುಗೆಯವರ ವಿರುದ್ಧ ಪ್ರತಿಭಟಿಸಿದರು; “ಶುದ್ಧತೆ”ಯ ಮುಂದೆ “ಏಕತೆ” ಗೌಣ ಎಂಬ ಪಾಠವನ್ನು ಮಕ್ಕಳಿಗೆ ಮಾಡಿದರು!​ ಇದು ಅಲ್ಲಲ್ಲಿ, ಆಗಾಗ ನಡೆಯುತ್ತಿದೆ.

​”ಹಿಂದೂ ಒಂದು” ಘೋಷಣೆಯು ವಾಸ್ತವಿಕತೆಗೆ ಹಾಕಿರುವ ಮುಖವಾಡವಾಗಿದೆ.  ಸಾಮಾನ್ಯ, ಸಾರ್ವಜನಿಕ ನೀರಿನ ಮೂಲಗಳಿಂದಲೇ ದಲಿತರನ್ನು ನಿರ್ಬಂಧಿಸುವಾಗ, ದೇವಾಲಯಗಳಿಗೆ ಪ್ರವೇಶವನ್ನು ನಿರಾಕರಿಸುವಾಗ, “ಮೇಲ್ಜಾತಿ”ಯವರನ್ನು ಮದುವೆಯಾದಕ್ಕಾಗಿ ಕೊಲ್ಲುವಾಗ- ಒಂದು ಸಮುದಾಯವು “ಹಿಂದೂ ಒಂದು” ಎಂದು ಹೇಳಿಕೊಳ್ಳಲು ಹೇಗೆ ಸಾಧ್ಯ? ದಲಿತರ ಮನೆಗಳಿಗೆ ಹೊಟೇಲು ಊಟ ತರಿಸಿ, “ಸಹಭೋಜನ”ವೆಂದು ಪ್ರಚಾರ ಪಡೆದರೆ ಸಾಕಾಗುವುದಿಲ್ಲ! ಅಂಕಿಅಂಶಗಳು ಸುಳ್ಳಲ್ಲ: ವರ್ಷಕ್ಕೆ 57,000ಕ್ಕೂ ಹೆಚ್ಚಿನ ದಾಖಲಾದ ದೌರ್ಜನ್ಯಗಳು ಮತ್ತು ಕ್ಯಾಂಪಸ್ ತಾರತಮ್ಯದ ಪ್ರಕರಣಗಳಲ್ಲಿ 118 ಶೇಕಡಾ ಹೆಚ್ಚಳವು “ಅಪವಾದಗಳು” ಅಲ್ಲ. ಇವು ಆರ್‌ಎಸ್‌ಎಸ್ ಗುಣಪಡಿಸುವ ಬದಲು, ಮರೆಮಾಚಲು ಯತ್ನಿಸುತ್ತಿರುವ ಜಾತಿ ತಾರತಮ್ಯದ ಪುನರಾವರ್ತಿತ ಲಕ್ಷಣಗಳಾಗಿವೆ.

ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ 30 ಶೇಕಡಾಕ್ಕೂ ಕಡಿಮೆಯಿದ್ದಾಗ, ದಲಿತರ ವಿರುದ್ಧ ಅಪರಾಧ ನಡೆಸುವವರಿಗೆ “ ಹೆದರಬೇಡಿ, ಹಿಂದೂ ಬಂಧು”ಗಳು ನಿಮಗೆ ರಕ್ಷಣೆ ಒದಗಿಸುತ್ತಾರೆ” ಎಂದು ವ್ಯವಸ್ಥೆಯೇ ಹೇಳಿದಂತಾಗುತ್ತದೆ. “ಹಿಂದೂ ಒಂದು, ಹಿಂದೂ ಬಂಧು” ಎಂಬುದು ಮತಯಂತ್ರಕ್ಕೆ ಅಗತ್ಯವಾದ ಒಂದು ವೈರಸ್‌ಯುಕ್ತ ಸಾಪ್ಟ್ವೇರ್ ಮಾತ್ರ. ಅದು ಒಂದು ಆತ್ಮವಂಚನೆಯ ಘೋಷಣೆ. ಅದು ಬಹಳಷ್ಟು ಕಡೆ ಊರಿನ ಕೆರೆ, ಬಾವಿ, ನಳ್ಳಿಗಳ ಬಳಿ, ದೇವಾಲಯದ ಬಾಗಿಲಲ್ಲಿ ಕೊನೆಗೊಳ್ಳುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳು ಸುಳ್ಳು ಹೇಳುತ್ತಿಲ್ಲ! ಆರೆಸ್ಸೆಸ್ ಮುಚ್ಚಿಡಲು ಯತ್ನಿಸುತ್ತಿರುವ ಸತ್ಯವನ್ನು ಅದು ಚೀರಿ ಹೇಳುತ್ತಿದೆ. ಆದರೆ, ಬೇರೆಯವರಿಗೆ ಬಿಡಿ! ಸ್ವತಃ ಮಾರಿಕೊಂಡ ಕೆಲವು ದಲಿತ ನಾಯಕರಿಗೆ, ದಲಿತ ಮೀಸಲು ಕ್ಷೇತ್ರಗಳಿಂದ ಕೋಮುಪಕ್ಷದ ಅಡಿಯಲ್ಲಿ ಆಯ್ಕೆಯಾದ ಸಂಸದರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೂ ಅದು ಕೇಳಿಸುತ್ತಿಲ್ಲ; ಕಾಣುತ್ತಿಲ್ಲ ಎಂಬುದೇ ದೊಡ್ಡ ದುರಂತ.

You cannot copy content of this page

Exit mobile version