“..ಕೋಮುವಾದ ಎಂಬುದು ಯಡಿಯೂರಪ್ಪ ಸರ್ಕಾರಕ್ಕೆ ಹೇಗೆಲ್ಲಾ ತೊಂದರೆ ಕೊಟ್ಟಿತ್ತು ಎಂಬುದನ್ನು ವಿಜಯೇಂದ್ರ ಮರೆತಿದ್ದಾರೆ. ಬಿಜೆಪಿ ಕಾಲದಲ್ಲಿನ ನಿರಂತರ ಹಿಂದುತ್ವ ದಾಳಿಗಳು ಯಡಿಯೂರಪ್ಪರನ್ನು ನೆಮ್ಮದಿಯಿಂದ ಆಡಳಿತ ನಡೆಸಲು ಬಿಡಲಿಲ್ಲ..” ಪತ್ರಕರ್ತ ನವೀನ್ ಸೂರಿಂಜೆ ಅವರ ಬರಹದಲ್ಲಿ
ದೇಶದ ಇತಿಹಾಸದಲ್ಲೇ ಮೊದಲ ಬಾರಿ ಮಾರಲ್ ಪೊಲೀಸಿಂಗ್ ನಡೆಸಿದ ಹಿಂದುತ್ವವಾದಿ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದು ಕರ್ನಾಟಕದ ಬಿಜೆಪಿ ಸರ್ಕಾರ !. ಅಲ್ಲಿಯವರೆಗೂ ದೇಶದ ಇತಿಹಾಸದಲ್ಲೇ ಯಾವುದೇ ಸರ್ಕಾರಗಳು ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ವಿರುದ್ದ ಗೂಂಡಾ ಕಾಯ್ದೆ ಹಾಕಿದ ಉದಾಹರಣೆ ಇರಲಿಲ್ಲ. ಈ ರೀತಿ ಹಿಂದುತ್ವವಾದಿಗಳ ವಿರುದ್ದ ಮೊದಲ ಬಾರಿ ಗೂಂಡಾ ಕಾಯ್ದೆ ಹಾಕಿದ್ದು ವಿಜಯೇಂದ್ರ ಅವರ ತಂದೆಯವರಾದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ! ಅದಕ್ಕೆ ಕಾರಣ ಉದ್ಯಮಗಳ ‘ಬಂಡವಾಳ ಹೂಡಿಕೆ’ ಕುಸಿತದ ಭಯ!
ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಲವು ಕಾಲಾಳು ಸಂಘಟನೆಯ ಕಾರ್ಯಕರ್ತರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಜೀವಾಳ. ಇಂತಹ ಕಾರ್ಯಕರ್ತರ ಮೇಲೆಯೇ ಆರ್ ಎಸ್ ಎಸ್ ನ ರಾಜಕೀಯ ವಿಂಗ್ ಆಗಿರುವ ಬಿಜೆಪಿಯ ರಾಜ್ಯಾದ್ಯಕ್ಷ ವಿಜಯೇಂದ್ರ ಅವರ ತಂದೆಯವರಾದ ಬಿ ಎಸ್ ಯಡಿಯೂರಪ್ಪರ ಸರ್ಕಾರ ಗೂಂಡಾ ಕಾಯ್ದೆ ದಾಖಲಿಸಿತ್ತು. ಅದಕ್ಕೆ ಕಾರಣವೇನು ಎಂದರೆ, ಈ ರೀತಿ ಹಿಂದುತ್ವದ ದಾಳಿ ಮುಂದುವರೆದರೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ನಿಂತು ಬಿಡುತ್ತದೆ ಎಂಬ ಭಯ!
‘ಕೋಮುವಾದಿ ಸಂಘಟನೆಗಳ ದಾಳಿ ಮಂಗಳೂರಿನ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಾರಲ್ ಪೊಲೀಸಿಂಗ್ ಮಾಡಿದ ಹಿಂದುತ್ವ ಸಂಘಟನೆಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಿಡಿ’ ಎಂದು ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಆದೇಶ ನೀಡಿದವರು ಕೇಂದ್ರದ ಮಾಜಿ ಫೈನಾನ್ಸ್ ಮತ್ತು ಕಾಮರ್ಸ್ ಮಿನಿಸ್ಟರ್ ಅರುಣ್ ಜೇಟ್ಲಿಯವರು !. ಮಾರಲ್ ಪೊಲೀಸಿಂಗ್ ಘಟನೆಗಳು ವಾಣಿಜ್ಯ ವ್ಯವಹಾರಗಳ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಣಿಜ್ಯ ವ್ಯವಹಾರಗಳ ಕೇಂದ್ರ ಸಚಿವರಾಗಿದ್ದವರಿಗಿಂತ ಹೆಚ್ಚು ಯಾರು ತಾನೇ ಅರ್ಥ ಮಾಡಿಕೊಳ್ಳಬಲ್ಲರು ? ಹಾಗಾಗಿಯೇ ಜೇಟ್ಲಿಯವರು ಬಿಜೆಪಿ ಸರ್ಕಾರಕ್ಕೆ ಇಂತಹ ಆದೇಶ ನೀಡಿದರು.
ಕೋಮುವಾದಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದ ಬಗ್ಗೆ ಖುದ್ದು ಅಂದಿನ ಗೃಹ ಸಚಿವ ಆರ್ ಅಶೋಕ್ ಅವರು ವಿಪಕ್ಷ ನಾಯಕನಾಗಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. “ನಾನು ಗೃಹ ಸಚಿವನಾಗಿದ್ದಾಗ ಭಜರಂಗದಳದವರು ಪಬ್ ಗೆ ನುಗ್ಗಿ ಮೋರಲ್ ಪೊಲೀಸಿಂಗ್ ಮಾಡಿದ್ದರು. ನಾನು ಯಾವ ಮುಲಾಜೂ ಇಲ್ಲದೇ ಭಜರಂಗದಳದ ಅಷ್ಟೂ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಿದ್ದೆ. ಗೂಂಡಾ ಕಾಯ್ದೆ ಹಾಕದಂತೆ ನನಗೆ ತುಂಬಾ ಒತ್ತಡ ಬಂತು. ಫೋನ್ ಕಾಲ್ ಗಳು ಬಂತು. ನಾನು ಕೇರ್ ಮಾಡದೇ ಗೂಂಡಾ ಕಾಯ್ದೆ ಹಾಕಿದೆ. ಬಿಡಬೇಡಿ, ಗೂಂಡಾ ಕಾಯ್ದೆ ಹಾಕಿ ಅಂತ ನನಗೆ ಅರುಣ್ ಜೇಟ್ಲಿ ಆದೇಶ ನೀಡಿದ್ದರು” ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು.
2008 ರಲ್ಲಿ ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ಭಜರಂಗದಳ ದಾಳಿ ನಡೆಸಿದಾಗಲೂ ಬಿಜೆಪಿ ಸರ್ಕಾರದೊಳಗೆ ‘ಬಂಡವಾಳ ಹೂಡಿಕೆ’ ಚರ್ಚೆ ನಡೆದಿತ್ತು. ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದ್ದರಿಂದ ಕರ್ನಾಟಕಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಬರುವುದಿಲ್ಲ ಎಂಬ ಆತಂಕ ಎದುರಾಗಿತ್ತು. ಹಾಗಾಗಿಯೇ ಅಂದಿನ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು, ದಾಳಿ ಸ್ಥಳದಲ್ಲಿ ಇರದೇ ಇದ್ದ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ರನ್ನು ಬಂಧಿಸಿ ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿತ್ತು. ಆ ಮೂಲಕ ಕರ್ನಾಟಕ ಸರ್ಕಾರವು ಕೋಮುವಾದಿಗಳ ದಾಳಿಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಉದ್ಯಮಿಗಳಿಗೆ ನೀಡಿತ್ತು.
ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಕ್ರಿಶ್ಚಿಯನ್ ರಾಷ್ಟ್ರದ್ದೋ, ಕ್ರಿಶ್ಚಿಯನ್ ಧರ್ಮಿಯರದ್ದೋ ಆಗಿರುವುದರಿಂದ ಚರ್ಚ್ ದಾಳಿಯಿಂದಾದ ಇಮೇಜ್ ಡ್ಯಾಮೇಜನ್ನು ಬಿಜೆಪಿ ಸರ್ಕಾರ ಸರಿಪಡಿಸಿಕೊಳ್ಳಬೇಕಿತ್ತು. ಹಾಗಾಗಿಯೇ ಕರ್ನಾಟಕದಲ್ಲಿ ಜನಸಂಘ/ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಸಚಿವ ಡಾ ವಿ ಎಸ್ ಆಚಾರ್ಯರು ಫೀಲ್ಡಿಗಿಳಿದಿದ್ದರು. ಜೀವಮಾನ ಪೂರ್ತಿ ಕ್ರಿಶ್ಚಿಯನ್ನರ ಮತಾಂತರ ವಿರುದ್ದ ಮಾತನಾಡಿದ್ದ ವಿ ಎಸ್ ಆಚಾರ್ಯರು ಚರ್ಚ್ ದಾಳಿ ಬಳಿಕ ಕ್ರಿಶ್ಚಿಯನ್ ಧಾರ್ಮಿಕ ವೇದಿಕೆಗಳಿಗೆ ಹೋಗಲಾರಂಭಿಸಿದರು. ಚರ್ಚ್ ನಲ್ಲಿ ಮತಾಂತರವಾಗುತ್ತಿದೆ ಎಂದು ಆರೋಪಿಸಿ ಚರ್ಚ್ ಮೇಲೆ ದಾಳಿ ನಡೆಸಿದ್ದ ಭಜರಂಗದಳದ ಕಾರ್ಯಕರ್ತರು ಮತ್ತು ಅದರ ಸಂಚಾಲಕರು ಜೈಲಿನಲ್ಲಿ ಕೊಳೆಯುತ್ತಿದ್ದಾಗ 2009 ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರ್ನಾಟಕ ಕ್ರಿಶ್ಚಿಯನ್ ಅಸೋಶಿಯೇಶನ್ ಭವನಕ್ಕೆ ಬೆಂಗಳೂರಿನಲ್ಲಿ ಒಂದು ಎಕರೆ ಸರಕಾರಿ ಭೂಮಿಯನ್ನು ನೀಡಿದರು. ಕ್ರಿಶ್ಚಿಯನ್ ಉದ್ಯಮಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ಕ್ರಿಶ್ಚಿಯನ್ ಅಸೋಶಿಯೇಶನ್ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಸಚಿವ ವಿ ಎಸ್ ಆಚಾರ್ಯ ಭಾಗಿಯಾಗಿದ್ದರು. ವಿ ಎಸ್ ಆಚಾರ‍್ಯರಂತೂ ‘ಏಸು ಕೂಡಾ ವಿಷ್ಣುವಿನ ಹನ್ನೊಂದನೇ ಅವತಾರ. ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಪ್ರತ್ಯೇಕವಲ್ಲ. ನಾವು ಒಟ್ಟಾಗಿ ಹೋಗಬೇಕಾದ ದಿನಗಳಿವು’ ಅಂದರು. ಇದೆಲ್ಲದರ ಹಿಂದೆ ಇದ್ದಿದ್ದು ಸರ್ವಧರ್ಮ ಸಮಭಾವವಲ್ಲ, ಬದಲಾಗಿ ಬಂಡವಾಳ ಹೂಡಿಕೆ ಕುಸಿತದ ಭಯ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ !
“ಕೋಮುವಾದದ ಕಾರಣಕ್ಕಾಗಿ ಮಂಗಳೂರಿನಲ್ಲಿ ಐಟಿ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಿಲ್ಲ” ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರು ಮುಗಿಬಿದ್ದು ವಿರೋಧಿಸುತ್ತಿದ್ದಾರೆ. ಆದರೆ ಅದೇ ಕೋಮುವಾದ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಹೇಗೆಲ್ಲಾ ತೊಂದರೆ ಕೊಟ್ಟಿತ್ತು ಎಂಬುದನ್ನು ಅವರು ಮರೆತಿದ್ದಾರೆ. ಬಿಜೆಪಿ ಕಾಲದಲ್ಲಿ ನಿತ್ಯ ನಿರಂತರ ಹಿಂದುತ್ವದ ದಾಳಿಗಳು ಬಿ ಎಸ್ ಯಡಿಯೂರಪ್ಪರನ್ನು ನೆಮ್ಮದಿಯಿಂದ ಆಡಳಿತ ನಡೆಸಲು ಬಿಡಲಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಬಂದ ಬಿಜೆಪಿ ಸರ್ಕಾರವು ಕೋಮುವಾದದ ಕಾರಣಕ್ಕಾಗಿ ಬಂಡವಾಳ ಹೂಡಿಕೆ ನಡೆಯದೇ ಪರದಾಡಬೇಕಾಯಿತು. ಹಾಗಾಗಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚಿನ ಹಿಂದುತ್ವವಾದಿಗಳ ಬಂಧನ ನಡೆಯಿತು. ಬಿಜೆಪಿ ಸರ್ಕಾರದ ಐದು ವರ್ಷದಲ್ಲಿ ನೂರಕ್ಕೂ ಹೆಚ್ಚು ಹಿಂದುತ್ವವಾದಿಗಳು ಜೈಲು ಸೇರಿದ್ದರು. ರಾಜ್ಯದಲ್ಲಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೊಂದರೆಯಾಗದ ವಾತಾವರಣ ಇದೆ ಎಂದು ಬಿಂಬಿಸಲು ಬಿಜೆಪಿಯು ನೂರಾರು ಹಿಂದುತ್ವ ಕಾರ್ಯಕರ್ತರನ್ನು ಜೈಲಿಗಟ್ಟಿ ಗೂಂಡಾ ಕಾಯ್ದೆ ದಾಖಲಿಸಿತ್ತು. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯನ್ನು ವಿರೋಧಿಸುವ ಮುನ್ನ ತನ್ನ ತಂದೆ ಯಡಿಯೂರಪ್ಪನವರ ಆಡಳಿತದ ಕಾಲದಲ್ಲಿ ಏನಾಗಿತ್ತು ಎಂಬ ಇತಿಹಾಸವನ್ನು ವಿಜಯೇಂದ್ರರವರು ಅರಿತುಕೊಳ್ಳಬೇಕಿದೆ.
