“ಪುರಾಣ- ಕಟ್ಟುಕತೆಗಳನ್ನೇ ಇತಿಹಾಸ ಮಾಡಿ, ನಮ್ಮ ಭ್ರಮೆಗಳ ಸಮರ್ಥನೆಗಾಗಿ- ಅವುಗಳು ಸುಳ್ಳೆಂದು ಒಳಗೊಳಗೇ ಗೊತ್ತಿದ್ದರೂ ನಿಜವೆಂದು ಜೋತು ಬೀಳುವವರು ನಾವು. ಅದನ್ನೇ ಚತುರ, ದುಷ್ಟ ರಾಜಕಾರಣಿಗಳು ಬಳಸಿಕೊಂಡು ಸರ್ವಾಧಿಕಾರಿಗಳಾಗುತ್ತಾರೆ…” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಇತಿಹಾಸದಿಂದ ಪಾಠ ಕಲಿಯಬೇಕೆಂಬ ವಿವೇಕದಿಂದ ಜನರು ಯಾವತ್ತೂ ದೂರ. ಸದಾ ಭ್ರಮಾಲೋಕದಲ್ಲೇ ತೇಲಾಡಬಯಸುವ, ಸದಾ ಮಹಾರಾಜ, ಸುಪ್ರೀಂ ಲೀಡರ್, ವಿಶ್ವಗುರು, ಮಹಾನಾಯಕ, ಸೂಪರ್ ಮ್ಯಾನ್, ಸೂಪರ್ ಹೀರೋಗಳ ಅಡಿಯಲ್ಲಿ ಬದುಕಬಯಸುವ, ವ್ಯಕ್ತಿಪೂಜೆ ಮಾಡುವ ಮಾನಸಿಕ ಗುಲಾಮರು ನಾವು. ನಮ್ಮ ಭ್ರಮೆಗಳಿಗೆ ಕೇವಲ ತೆರೆಗಳಲ್ಲಿ ಅಭಿವ್ಯಕ್ತಿ ನೀಡಿ ಕೋಟಿಗಟ್ಟಲೆ ಸಂಪಾದಿಸುವ ಯಕಶ್ಚಿತ್ ಸಿನಿಮಾ ನಟರನ್ನೇ- ನಮ್ಮ ನಿಮ್ಮಂತಾ ಸಾಮಾನ್ಯ ಮನುಷ್ಯರಿಂದ- ದೈವತ್ವಕ್ಕೇರಿಸಿ ಆರಾಧಿಸುವುದು ನಮ್ಮ ಜಾಯಮಾನ! ಮೇಲಾಗಿ ನಾವು ಪುರಾಣ- ಕಟ್ಟುಕತೆಗಳನ್ನೇ ಇತಿಹಾಸ ಮಾಡಿ, ನಮ್ಮ ಭ್ರಮೆಗಳ ಸಮರ್ಥನೆಗಾಗಿ- ಅವುಗಳು ಸುಳ್ಳೆಂದು ಒಳಗೊಳಗೇ ಗೊತ್ತಿದ್ದರೂ ನಿಜವೆಂದು ಜೋತು ಬೀಳುವವರು. ಅದನ್ನೇ ಚತುರ, ದುಷ್ಟ ರಾಜಕಾರಣಿಗಳು ಬಳಸಿಕೊಂಡು ಸರ್ವಾಧಿಕಾರಿಗಳಾಗುತ್ತಾರೆ.
ಮೇಲಾಗಿ, ವಿಶ್ವದ ಬಹುತೇಕ ಜನರಿಗೆ ತಮ್ಮ ದೇಶದಲ್ಲೇ ಏನಾಗುತ್ತಿದೆ ಎಂದು ಗೊತ್ತಿಲ್ಲದಾಗ, ಯುಎಸ್ಎ, ರಷ್ಯಾ, ಚೀನಾ, ಕೆಲವು ಯುರೋಪ್ ಮತ್ತು ಕೊಲ್ಲಿ ರಾಷ್ಟ್ರಗಳ ಬಗ್ಗೆ ಅಲ್ಪಸ್ವಲ್ಪ ಅಲ್ಲಿ ಇಲ್ಲಿ ಕೇಳಿದ ಅಲ್ಪಸ್ವಲ್ಪ ಸುಳ್ಳು, ಸತ್ಯಗಳು, ಕಟ್ಟುಕತೆಗಳು ಗೊತ್ತೇ ಹೊರತು ಜಗತ್ತಿನ ಬಹುಸಂಖ್ಯಾತ ಜನರು ಬದುಕುವ ಹಿಂಸೆಯ, ಕ್ರೌರ್ಯದ, ಕೇವಲ ಉಳಿವಿನ- ಸಾಮಾಜಿಕ, ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲ. ಆದರೂ, ಇತಿಹಾಸದ ಉದ್ದಕ್ಕೂ ಹಲವಾರು ದೇಶಗಳು ಸಾಮೂಹಿಕವಾಗಿ ಎಚ್ಚೆತ್ತು ಮೈಕೊಡವಿಕೊಳ್ಳುತ್ತವೆ. ಅವು ನಮಗೆ ಮೈಮರೆಯದಂತೆ ಎಚ್ಚರವನ್ನೂ, ಎಚ್ಚೆತ್ತುಕೊಳ್ಳಲು ಪ್ರೇರಣೆಯನ್ನೂ ನೀಡಬೇಕು. ಹಾಗಾಗಿ, ಭಾರತಕ್ಕೆ ಹೋಲಿಸಿದಾಗ ಚಿಕ್ಕದಾದ, ಜನಸಂಖ್ಯೆಯಲ್ಲಿ ಪುಟಾಣಿಯಾದ ಹಂಗೆರಿ ದೇಶದ ಇತ್ತೀಚಿನ ವಿದ್ಯಮಾನಗಳನ್ನು ನೋಡಿ ನಾವು ಕಲಿಯಬಹುದಾದುದು ಏನು ಎಂಬುದನ್ನು ತಿಳಿಯೋಣ.
ಹಂಗೇರಿಯನ್ ಮತದಾರರು ಪ್ರಜಾಪ್ರಭುತ್ವದ ಸೋಗಿನ ಸರ್ವಾಧಿಕಾರಿ ವಿಕ್ತೋರ್ ಓರ್ಬನ್‌ನ 16 ವರ್ಷಗಳ ಅಧಿಕಾರವನ್ನು ಇತ್ತೀಚಿನ ಚುನಾವಣೆಗಳಲ್ಲಿ ಕೊನೆಗೊಳಿಸಿದ್ದಾರೆ. ಇದು ಎಪ್ರಿಲ್‌ನಲ್ಲಿ ಯುರೋಪಿನ ರಾಜಕೀಯ ವಲಯದಲ್ಲಿ ಭೂಕಂಪವನ್ನೇ ಉಂಟುಮಾಡಿತು, ಒಂದು ದೊಡ್ದ ಬದಲಾವಣೆಗೆ ಸಾಕ್ಷಿಯಾಯಿತು. ಜಾಗತಿಕ ಪ್ರಜಾಪ್ರಭುತ್ವದ ವೀಕ್ಷಕರಿಗೆ, ಈ ಬದಲಾವಣೆಯು ಕೇವಲ ನಾಯಕತ್ವದ ಬದಲಾವಣೆಗಿಂತ ಹೆಚ್ಚಿನದನ್ನು ಸಂಕೇತಿಸುತ್ತದೆ. ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವಾದ ಹಂಗೆರಿಯ ಈ ಬದಲಾವಣೆಯಿಂದ ರಷ್ಯಾ- ಯುಎಸ್ಎಯಂತ ದೊಡ್ಡ ದೇಶಗಳಿಗೆ ಆದ ಲಾಭನಷ್ಟದ ಬಗ್ಗೆ ಚರ್ಚಿಸುವ ಬದಲು, ಓರ್ಬನ್ ಮಾದರಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಡಿಯಲ್ಲಿ ಭಾರತದಲ್ಲಿರುವ ಮೋದಿ ಮಾದರಿಯಲ್ಲಿ ಇರುವ ಪ್ರಸ್ತುತ ರಾಜಕೀಯ ವಾತಾವರಣದ ನಡುವೆ ಸಮಾನಾಂತರಗಳನ್ನು ನೋಡೋಣ. ಇವು ಜಗತ್ತಿನಾದ್ಯಂತದ ಸರ್ವಾಧಿಕಾರಿಗಳು ಮತ್ತು ಅದರ ಆಕಾಂಕ್ಷಿಗಳು ಅನುಸರಿಸುತ್ತಾ ಬಂದಿರುವ ತಂತ್ರಗಳ ಒಂದು ಪರಿಚಯ ಅಷ್ಟೇ. ಈ ಹೋಲಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ- ಬರೇ ರಾಜಕೀಯ ವಾದಕ್ಕಾಗಿ ಅಲ್ಲ; ಬದಲಿಗೆ ಪ್ರಜಾಪ್ರಭುತ್ವದ ಸಂರಚನೆಯನ್ನು ವ್ಯವಸ್ಥಿತವಾಗಿ ಒಳಗಿನಿಂದ ಹೊಸಕಿಹಾಕಿದಾಗ ಹೊರಹೊಮ್ಮುವ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸಲು.
ಸಾರ್ವಜನಿಕ ವೇದಿಕೆಗಳ ಕಬ್ಜಾ!
ಈ ಆಡಳಿತ ಶೈಲಿಯ ಅತ್ಯಂತ ಸ್ಪಷ್ಟವಾದ ಲಕ್ಷಣವೆಂದರೆ, ಸ್ವತಂತ್ರ ಮಾಧ್ಯಮದ ವ್ಯವಸ್ಥಿತವಾದ ಕತ್ತು ಹಿಸುಕುವಿಕೆ. ಹಂಗೇರಿಯಲ್ಲಿ, ಓರ್ಬನ್‌ನ ಫಿಡೆಜ್ ಪಕ್ಷವು ಒಂದು ಸರಕಾರ ಪರ, ವ್ಯಕ್ತಿ ಕೇಂದ್ರಿತ ಮಾಧ್ಯಮ ಪರಿಸರ ಸೃಷ್ಟಿಸಿತು. ಅಲ್ಲಿ ಸರಕಾರ ಪ್ರಾಯೋಜಿತ ಮಾಧ್ಯಮಗಳು ಪ್ರಾಬಲ್ಯ ಸಾಧಿಸಿದವು. ಪರಿಣಾಮಕಾರಿಯಾಗಿ ಸರಕಾರದ ಪರ ಸುಳ್ಳು ನಿರೂಪಣೆಗಳು ಮತ್ತು ಕಥಾನಕಗಳ ಒಂದು ಜಾಲವನ್ನೇ ಬೀಸಲಾಯಿತು. ಸ್ವತಂತ್ರ ಪತ್ರಿಕೋದ್ಯಮವನ್ನು “ವಿದೇಶಿ-ಪ್ರಭಾವಿತ” ಅಥವಾ “ರಾಷ್ಟ್ರವಿರೋಧಿ” ಎಂದು ಬ್ರಾಂಡ್ ಮಾಡಲಾಯಿತು. ಇದು ಭಿನ್ನಾಭಿಪ್ರಾಯವನ್ನು ದಮನಿಸಿ, ಕಾನೂನುಬಾಹಿರಗೊಳಿಸಿ ಭಯದ ವಾತಾವರಣವನ್ನು ಉಂಟುಮಾಡಿತು. ಸ್ವತಂತ್ರ ಪತ್ರಕರ್ತರನ್ನು ಜೈಲಿಗೆ ತಳ್ಳಲಾಯಿತು.
ಭಾರತೀಯ ಮಾಧ್ಯಮದಲ್ಲಿ ನಾವು ಇದಕ್ಕೆ ಗಮನಾರ್ಹ ಸಮಾನಾಂತರಗಳನ್ನು ನೋಡುತ್ತೇವೆ. ಇದನ್ನು ಸಾಮಾನ್ಯವಾಗಿ “ಗೋದಿ ಮೀಡಿಯಾ” ಎಂದು ಕರೆಯಲಾಗುತ್ತದೆ. ಓದುಗರಿಗೆ ಇದು ಪರಿಚಿತವೇ ಆಗಿದೆ. ಅಕ್ರಮ ಕಾರ್ಪೊರೇಟ್ ಸಂಬಂಧಗಳು ಮತ್ತು ಸರಕಾರದ ಪ್ರಭಾವವನ್ನು ಬಳಸಿಕೊಳ್ಳುವ ಮೂಲಕ, ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಲಂಚ ನೀಡುವ ಮೂಲಕ ಜನರು ಏನು ತಿಳಿದುಕೊಳ್ಳಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಭಾರತದಲ್ಲಿ ಹೆಚ್ಚಿನ ಮಾಧ್ಯಮಗಳು ಅದಾನಿ, ಅಂಬಾನಿಗಳಂತವರ ಒಡೆತನದಲ್ಲಿ ಇರುವಾಗ, ಸರಕಾರವೇ ಅವರಿಗಾಗಿ ನಡೆಯುತ್ತಿರುವಾಗ, ಬಹುತೇಕ ಸಂಪಾದಕರು, ಸುದ್ದಿ ನಿರ್ವಾಹಕರು ಹಿಂದೂತ್ವ ಬೆಂಬಲಿಸುವ ಬ್ರಾಹ್ಮಣರಾಗಿರುವಾಗ, ನೀವು ಅವುಗಳಿಂದ ಯಾವ ಸತ್ಯವನ್ನು ನಿರೀಕ್ಷಿಸಲು ಸಾಧ್ಯ? ಯೋಚಿಸಿ ನೋಡಿ. ಮೋದಿ ಅಥವಾ ಬಿಜೆಪಿ ಆಡಳಿತದ ವಿರುದ್ಧ ವಿಮರ್ಶಾತ್ಮಕ ಟೀಕೆಯನ್ನು ಮತ್ತೆಮತ್ತೆ “ರಾಷ್ಟ್ರವಿರೋಧಿ” ಅಥವಾ “ನಗರ ನಕ್ಸಲ್” ಎಂದು ಲೇಬಲ್ ಮಾಡುವ ಪರಿಪಾಠವನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ ಎಂದು ನೀವು ನೋಡಿದ್ದೀರಿ.
ಬೇಟೆ ನಾಯಿಗಳಾಗಿ ತನಿಖಾ ಸಂಸ್ಥೆಗಳು
ಈ ಮಾದರಿಯ ಅತ್ಯಂತ ಅಪಾಯಕಾರಿ ಅಂಶವೆಂದರೆ, ಸರಕಾರಿ ಸಂಸ್ಥೆಗಳ ಪಾತ್ರವನ್ನು- ನಿಷ್ಪಕ್ಷಪಾತ ತನಿಖೆದಾರರು, ತೀರ್ಪುಗಾರರಿಂದ ರಾಜಕೀಯ ದ್ವೇಷ ಸಾಧನೆಯ, ಬೆದರಿಕೆ ಒಡ್ಡುವ ಬೇಟೆ ನಾಯಿಗಳಾಗಿ ಬದಲಿಸುವುದು. ವಿಕ್ತೊರ್ ಓರ್ಬನ್ ನೇತೃತ್ವದಲ್ಲಿ ಸರಕಾರಿ ತನಿಖಾ ಸಂಸ್ಥೆಗಳು ರಾಜಕೀಯ ಪ್ರತಿಸ್ಪರ್ಧಿಗಳು, ವಿರೋಧಿ ಉದ್ಯಮಿಗಳು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ವಿರುದ್ಧ ಅಸ್ತ್ರಗಳನ್ನು ಬಳಸಿದ ಆರೋಪ ವ್ಯಾಪಕವಾಗಿತ್ತು. ಇದು ಕಾನೂನನ್ನು ನಾಗರಿಕರಿಗೆ ಗುರಾಣಿಯಾಗಿ ಬಳಸುವ ಬದಲು ಭಿನ್ನಮತೀಯರ ವಿರುದ್ಧ ಕತ್ತಿಯಾಗಿ ಬಳಸಲಾಗುತ್ತಿದ್ದ ಭಯದ ಸಂಸ್ಕೃತಿಯನ್ನು ಸೃಷ್ಟಿಸಿತ್ತು.
ಭಾರತದಲ್ಲಿ, ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ಮತ್ತಿತರ ಸಂಸ್ಥೆಗಳ ನಡವಳಿಕೆಯು ಇದೇ ರೀತಿ ಇರುವುದನ್ನು ನಾವು ನೋಡುತ್ತಿದ್ದೇವೆ. ತನಿಖೆಗಳು, ದಾಳಿಗಳ ಸಮಯವು- ಚುನಾವಣಾ ವೇಳಾಪಟ್ಟಿ ಅಥವಾ ರಾಜಕೀಯ ಘರ್ಷಣೆಯೊಂದಿಗೆ ನಿರಂತರವಾಗಿ ಹೊಂದಿಕೆಯಾದಾಗ, ಅದು ಕಾನೂನಿನ ಆಳ್ವಿಕೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಸವಕಲುಗೊಳಿಸುತ್ತದೆ. ಇತ್ತೀಚಿನ ಉದಾಹರಣೆ ಎಂದರೆ, ರಾಘವ ಚಡ್ಡಾ ಸಹಿತ ಏಳು ಆಪ್ ಸಂಸದರ ಪಕ್ಷಾಂತರ. ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಸ್ಥಾನಕ್ಕೆ ಚಡ್ಡಾ ಬದಲು ನೇಮಿಸಲಾಗಿದ್ದ ಅಶೋಕ್ ಮಿತ್ತಲ್ ಅವರ ಸಂಸ್ಥೆಗಳಿಗೆ ಪಕ್ಷಾಂತರಕ್ಕೆ ಒಂದು ವಾರಕ್ಕೆ ಮೊದಲಷ್ಟೇ ಇ.ಡಿ. ದಾಳಿ ನಡೆದದ್ದು ಕಾಕತಾಳೀಯ ಎಂದು ನಂಬುವಷ್ಟು ಜನರು ಮೂರ್ಖರೆ?
”ನಾವು vs. ಅವರು” ನಿರೂಪಣೆ
ಸರ್ವಾಧಿಕಾರಿ ಆಕಾಂಕ್ಷೆಗಳು ಎಲ್ಲಾ ರೀತಿಯ ಧ್ರುವೀಕರಣದ ಮೇಲೆ ಬೆಳೆಯುತ್ತವೆ. ಸಮಾಜವನ್ನು “ನಿಜವಾದ ದೇಶಭಕ್ತರು” ಮತ್ತು “ರಾಷ್ಟ್ರದ ಶತ್ರುಗಳು” ಎಂದು ವಿಭಜಿಸುವ ಮೂಲಕ, ಈ ಆಡಳಿತಗಳು ಅಸಾಧಾರಣವಾದ ದಂಡನಾ ಕ್ರಮಗಳನ್ನು ಸಮರ್ಥಿಸುವಂತಾ ಶಾಶ್ವತ ಬಿಕ್ಕಟ್ಟಿನ ಸ್ಥಿತಿಯನ್ನು ಸೃಷ್ಟಿಸುತ್ತವೆ. ವಲಸಿಗರು ಮತ್ತು ಉದಾರವಾದಿ ಎನ್‌ಜಿಒಗಳ ಬಗ್ಗೆ ಓರ್ಬನ್ ಜನಮರುಳು ಭಾಷಣಗಳು ಮೋದಿಯಂತೆಯೇ ಸದಾ ಬಿಕ್ಕಟ್ಟನ್ನು, ಗುಪ್ತ ಭಯವನ್ನು ಶಾಶ್ವತವಾಗಿ ಜೀವಂತ ಇರಿಸುವಂತೆ ಸೂಕ್ಷ್ಮವಾಗಿ ಪ್ರಚೋದಕವಾಗಿದ್ದವು. (ಬಟ್ಟೆ ನೋಡಿ ಜನ ಯಾರೆಂದು ಗೊತ್ತಾಗುತ್ತದೆ!)
ಅದೇ ರೀತಿ, ಭಾರತದಲ್ಲಿನ ಪ್ರಸ್ತುತ ಬಿಜೆಪಿಯ ರಾಜಕೀಯ ಚರ್ಚೆಯು ಆಗಾಗ್ಗೆ ಬೈನರಿ ಚೌಕಟ್ಟುಗಳನ್ನು ಬಳಸುತ್ತದೆ. (ಅವರು-ನಾವು, ಹಿಂದೂಗಳು-ಮುಸ್ಲಿಮರು, ದೇಶಪ್ರೇಮ -ದೇಶದ್ರೋಹ, ಭಾರತ-ಪಾಕಿಸ್ತಾನ ಇತ್ಯಾದಿಗಳು ಪರಸ್ಪರ ಸ್ವಯಂಸಿದ್ಧ ಸಂಬಂಧ ಇರುವಂತವು ಎಂಬಂತೆ ಬಿಂಬಿಸುವುದು). ಧಾರ್ಮಿಕ ಗುರುತು, ರಾಷ್ಟ್ರೀಯ ಭದ್ರತೆ ಅಥವಾ ಐತಿಹಾಸಿಕ ಕುಂದುಕೊರತೆಗಳ ಸುತ್ತಲಿನ ಜನಮರುಳು ಮಾತುಗಳು, ಕೂಗಾಟಗಳು, ಕಟ್ಟುಕತೆಗಳು ಏನೇ ಇರಲಿ, ತಂತ್ರ ಮಾತ್ರ ಸ್ಥಿರವಾಗಿರುತ್ತದೆ: ಮುಸ್ಲಿಮರು ಹೊರಗಿನವರು, ಹಿಂದೂಗಳು ಅಪಾಯದಲ್ಲಿ, ಪಾಕಿಸ್ತಾನ, ಬಾಂಗ್ಲಾ , ವಲಸಿಗರು, ಭಾರತದ ಭವ್ಯತೆ, ರಾಮ, ದೂಮ, ಸನಾತನ ಸಂಸ್ಕೃತಿ, ಋಷಿ ಮುನಿಗಳು… ಎಂದು ಜನರ ಗಮನವನ್ನು ಬೇರೆಡೆ ತಿರುಗಿಸುವ ಮೂಲಕ- ಆರ್ಥಿಕ ಅಥವಾ ವ್ಯವಸ್ಥೆಯ ವೈಫಲ್ಯಗಳು, ವ್ಯವಸ್ಥಿತ ಭ್ರಷ್ಟಾಚಾರ, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ವೋಟ್ ಚೋರಿ ಮುಂತಾದ ನೈಜ ಸಮಸ್ಯೆಗಳನ್ನು ಅವರು ನೋಡದಂತೆ ಮಾಡುತ್ತದೆ. ಜನರನ್ನು ಭಾವನಾತ್ಮಕವಾಗಿ ಉದ್ರೇಕಿಸಿ ನಿಷ್ಟಾವಂತ ಮತದಾರರ ನೆಲೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಇದು ಹೊಂದಿದೆ. ನೀತಿ, ಧೋರಣೆಗಳ ಚರ್ಚೆಗಳು- ಮತ, ಧರ್ಮಗಳ ಗುರುತಿನ ಆಧಾರದಲ್ಲಿ ನಡೆಯುವ ಘರ್ಷಣೆಗಳಾಗಿ ಬದಲಾದಾಗ, ವಿವೇಕಯುತ ಆಡಳಿತ ಇಲ್ಲವಾಗುತ್ತವೆ. ವಿರೋಧವು ಹೆಚ್ಚಿದಾಗ, ಬಹುಸಂಖ್ಯಾತ ಸರ್ವಾಧಿಕಾರಕ್ಕೆ ಅವಕಾಶ ಹೆಚ್ಚಾಗುತ್ತದೆ.
ಸಾಂವಿಧಾನಿಕ ಚೌಕಟ್ಟನ್ನು ದುರ್ಬಲಗೊಳಿಸುವುದು
ಪ್ರಜಾಪ್ರಭುತ್ವದ ಹಿನ್ನಡೆಯು ರಾತ್ರೋರಾತ್ರಿ ದಂಗೆಯ ಮೂಲಕ ಸಂಭವಿಸುವುದು ದೊಡ್ಡ ದೇಶಗಳಲ್ಲಿ ಅಪರೂಪ. ಅದು ಸಾಮಾನ್ಯವಾಗಿ ನಿಧಾನವಾಗಿ ಸಂಭವಿಸುತ್ತದೆ- ಸಾಂವಿಧಾನಿಕ ರಕ್ಷಣೆಗಳನ್ನು ದುರ್ಬಲಗೊಳಿಸುವ “ಕಾನೂನು” ಬದಲಾವಣೆಗಳ ಸರಣಿಯ ಮೂಲಕ ನಡೆಯುತ್ತದೆ. ಹಂಗೇರಿಯಲ್ಲಿ ಚುನಾವಣಾ ಕ್ಷೇತ್ರಗಳ ಪುನರ್ ರಚನೆ, ನ್ಯಾಯಾಂಗದಲ್ಲಿ ತನ್ನ ಬೆಂಬಲಿಗರನ್ನು ತುಂಬಿಸುವುದು ಮತ್ತು ಓರ್ಬನ್‌ನ ಫಿಡೆಜ್ ಪಕ್ಷದ ಅಧಿಕಾರದ ಹಿಡಿತವನ್ನು ಬಲಪಡಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಮುಂತಾದವುಗಳ ಮೂಲಕ ಇದು ನಡೆದಿತ್ತು.
ಭಾರತದಲ್ಲಿ ಸಾಂಸ್ಥಿಕ ದುರ್ಬಲಗೊಳಿಸುವ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಅಂಧ ಭಕ್ತರ ಹೊರತು, ಎಳ್ಳಷ್ಟು ಬುದ್ಧಿ ಇರುವ ಯಾರಿಗಾದರೂ ತಿಳಿಯುತ್ತದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ದುರ್ಬಲಗೊಳಿಸುವುದರಿಂದ ಹಿಡಿದು- ಚುನಾವಣಾ ಆಯೋಗದಂತಾ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಿಗೆ ನೇಮಕಾತಿ ಪ್ರಕ್ರಿಯೆಗಳವರೆಗೆ, ಉನ್ನತ ನ್ಯಾಯಾಂಗ ಅಧಿಕಾರಿಗಳು ಬಹಿರಂಗವಾಗಿ ಮನುಸ್ಮೃತಿಯನ್ನು ಬೆಂಬಲಿಸುವ ವರೆಗೆ- ಬೇರೆ ಬೇರೆ ವಿದ್ಯಮಾನಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಇವುಗಳಲ್ಲಿ ಸದ್ಯದ ಅತ್ಯಂತ ಆತಂಕಕಾರಿ ವಿಷಯವೆಂದರೆ, ರಾಹುಲ್ ಗಾಂಧಿ ಹೇಳುತ್ತಿರುವ “ಬಹಿರಂಗ, ನಿರ್ಲಜ್ಜ ಓಟ್ ಚೋರಿ”. ದೇಶದ ಇತಿಹಾಸದಲ್ಲೇ ಈಗಿನ ಚುನಾವಣಾ ಆಯುಕ್ತರಷ್ಟು ಆರೋಪಕ್ಕೆ, ಟೀಕೆಗೆ, ನಿಂದನೆಗೆ ಗುರಿಯಾದ ಇನ್ನೊಬ್ಬನಿರಲಾರರು. ಭಾರತದಲ್ಲಿ ಕಳಂಕಿತ ಮತದಾರರ ತೀವ್ರ ಪರಿಷ್ಕರಣೆ, ಕ್ಷೇತ್ರಗಳ ಮರುವಿಂಗಡನೆ ಪ್ರಯತ್ನ ಇತ್ಯಾದಿ ಹಂಗೆರಿಯಂತೆ ಇಲ್ಲಿಯೂ ನಡೆಯುತ್ತಿದೆ.
ಹಂಗೇರಿಯ ಪಾಠ ಮತ್ತು ಎಚ್ಚರಿಕೆ!
ವಿಕ್ಟರ್ ಓರ್ಬನ್‌ನ ಸೋಲು ಅತ್ಯಂತ “ಬಾಳಿಕೆಯ” ಸರ್ವಾಧಿಕಾರಿ ವ್ಯವಸ್ಥೆಗಳು ಕೂಡಾ ಶಾಶ್ವತವಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಮತದಾರರು ಅಂತಿಮವಾಗಿ ಒಂದು ನಿರ್ಣಾಯಕ, ಸ್ಫೋಟಕ ಹಂತವನ್ನು ತಲಪಿಯೇ ತಲುಪುತ್ತಾರೆ. ಆರ್ಥಿಕ ಸ್ಥಾಗಿತ್ಯ, ಹಣದುಬ್ಬರ, ದಬ್ಬಾಳಿಕೆ , ಭ್ರಷ್ಟಾಚಾರ ಮತ್ತು ನಿರಂತರ ಸಾಮಾಜಿಕ ಘರ್ಷಣೆಯ ಸ್ಥಿತಿಯಲ್ಲಿ ಬದುಕುವ ಕಷ್ಟ ಅನುಭವಿಸಿದ ಹಂಗೇರಿಯನ್ ಜನರು ಒಬ್ಬ ಸ್ವಯಂಮೋಹಿ ಅಧಿಕಾರದಾಹಿಯನ್ನು ಒದ್ದೋಡಿಸಿದ್ದಾರೆ. ಹದಿನಾರು ವರ್ಷಗಳ ಪ್ರಜಾಪ್ರಭುತ್ವದ ಸಾಂಸ್ಥಿಕ ಅಪಹರಣವು ಆಳವಾದ ಗಾಯಗಳನ್ನು ಬಿಟ್ಟುಹೋಗಿದೆ. ಹೊಸ ಸರಕಾರವು ಇದನ್ನು ಗುಣಪಡಿಸಲು ದಶಕಗಳಲ್ಲದಿದ್ದರೂ, ವರ್ಷಗಳೇ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಓರ್ಬನ್‌ನ ಹಂಗೇರಿ ಮತ್ತು ಮೋದಿಯ ಭಾರತದ ನಡುವಿನ ಹೋಲಿಕೆಯು ಮುಂದಾಗಬಹುದಾದುದರ ಭವಿಷ್ಯವಾಣಿಯಲ್ಲ; ಬದಲಾಗಿ, ಇದು ಒಂದು ಎಚ್ಚರಿಕೆ. ಇಲ್ಲಿರುವ ನಡವಳಿಕೆಯಲ್ಲಿನ ಹೋಲಿಕೆಗಳು – ಮಾಧ್ಯಮ ನಿಯಂತ್ರಣದ ಗೀಳು, ಸರಕಾರಿ ಏಜೆನ್ಸಿಗಳ ದುರ್ಬಳಕೆ ಮತ್ತು ಉದ್ರೇಕಕಾರಿ ಕಥಾನಕಗಳು- ಇತ್ಯಾದಿ ಕಾಕತಾಳೀಯವಲ್ಲ. ಅವು ಉದ್ದೇಶಪೂರ್ವಕವೆಂಬುದು ಸ್ಪಷ್ಟ. ಯಾವುದೇ ಪ್ರಜಾಪ್ರಭುತ್ವಕ್ಕೆ, ಪಾಠ ಸ್ಪಷ್ಟವಾಗಿದೆ: ರಾಷ್ಟ್ರದ ಆರೋಗ್ಯವನ್ನು ಅದರ ಯಾವುದೇ ಸ್ವಯಂಘೋಷಿತ ದೊಣ್ಣೆನಾಯಕನ ಬಲದಿಂದ ಅಳೆಯಲಾಗುವುದಿಲ್ಲ; ಆದರೆ, ಅದರ ಪ್ರಜಾತಾಂತ್ರಿಕ ಸಂಸ್ಥೆಗಳ ದೃಢತೆ ಮತ್ತು ಅದರ ನಾಗರಿಕರು ಭಯವಿಲ್ಲದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹೊಂದಿರುವ ಸ್ವಾತಂತ್ರ್ಯದಿಂದ ಅಳೆಯಲಾಗುತ್ತದೆ. ಪ್ರಭುತ್ವವು ತನ್ನ ಸ್ವಂತ ನಾಗರಿಕರನ್ನು ತಾನು ಸೇವೆ ಸಲ್ಲಿಸಬೇಕಾದ ನಿಜವಾದ ಪ್ರಭುಗಳೆಂದು ನೋಡದೇ, ತನ್ನ ದುಷ್ಟ ಉದ್ದೇಶಕ್ಕೆ ಅಡೆತಡೆಗಳಾಗಿ, ಅಥವಾ ಸುಲಭವಾಗಿ ಮರುಳು ಮಾಡಬಹುದಾದ ಕುರಿಗಳಾಗಿ ನೋಡಲು ಪ್ರಾರಂಭಿಸಿದಾಗ, ನಿರಂಕುಶಾಧಿಕಾರದ ಕಡೆಗೆ ನಮ್ಮ ಜಾರುವಿಕೆಯು ಈಗಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ. ಅದಕ್ಕಾಗಿಯೇ ಹಂಗೆರಿಯ ವಿದ್ಯಮಾನಗಳು ನಮಗೊಂದು ಪಾಠ ಮಾತ್ರವಲ್ಲ; ಎಚ್ಚರಿಕೆಯೂ ಹೌದು! ಹಂಗೆರಿಯಲ್ಲಿ ಚುನಾವಣೆ ಮೂಲಕವೇ ಬದಲಾವಣೆ ನಡೆಯಿತು. ಚುನಾವಣೆಯಲ್ಲಿ ಮೋಸದ ಮೂಲಕ ಜನರ ಭಾವನೆಗಳನ್ನು ಅದುಮಿದರೆ ಅದು ಹಿಂಸಾತ್ಮಕವಾಗಿ ಸ್ಫೋಟಗೊಳ್ಳುವ ಅಪಾಯವಿದೆ.
