Home ರಾಜಕೀಯ ಮೊದಲು 8,000 ಕೋಟಿಯ ವಿಮಾನ ಮಾರಿ ಉಳಿತಾಯ ಮಾಡಿ: ಪ್ರಧಾನಿ ಮೋದಿಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಟಾಂಗ್‌

ಮೊದಲು 8,000 ಕೋಟಿಯ ವಿಮಾನ ಮಾರಿ ಉಳಿತಾಯ ಮಾಡಿ: ಪ್ರಧಾನಿ ಮೋದಿಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಟಾಂಗ್‌

0

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಇಂಧನ ಮತ್ತು ಸಂಪನ್ಮೂಲ ಉಳಿತಾಯದ ಕರೆಗೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕರಿಗೆ ಹಿತವಚನ ನೀಡುವ ಮೊದಲು ಆಡಳಿತಾರೂಢರು ತಮ್ಮಿಂದಲೇ ಉಳಿತಾಯದ ಕ್ರಮಗಳನ್ನು ಆರಂಭಿಸಲಿ ಎಂದು ಅವರು ಹರಿತವಾಗಿ ಹೇಳಿದ್ದಾರೆ.

ತಮ್ಮ ‘ಗೋವಿಷ್ಠ ಯಾತ್ರೆ’ಯ ಭಾಗವಾಗಿ ಉತ್ತರ ಪ್ರದೇಶದ ಸೋನ್‌ಭದ್ರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಖರ್ಚು ಕಡಿಮೆ ಮಾಡುವಂತೆ ಹೇಳುವ ಮೊದಲು ಸರ್ಕಾರವು ತನ್ನ ಬಳಿಯಿರುವ 8,000 ಕೋಟಿ ರೂಪಾಯಿ ಬೆಲೆಯ ವಿಮಾನವನ್ನು ಮಾರಾಟ ಮಾಡಲಿ ಎಂದು ಸಲಹೆ ನೀಡಿದರು. ಅತಿ ಹೆಚ್ಚು ಇಂಧನ ವ್ಯಯಿಸುವ ಇಂತಹ ಐಷಾರಾಮಿ ವಿಮಾನಗಳ ಬದಲಿಗೆ ಕಡಿಮೆ ಇಂಧನ ಬಳಸುವ ವಿಮಾನಗಳನ್ನು ಆಡಳಿತಗಾರರು ಬಳಸಲಿ ಎಂದು ಅವರು ಹಿತನುಡಿದರು.

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಬಂಗಾರ ಖರೀದಿ, ಪೆಟ್ರೋಲ್ ಬಳಕೆ ಮತ್ತು ವಿದೇಶಿ ಪ್ರವಾಸಗಳನ್ನು ನಿಯಂತ್ರಿಸುವಂತೆ ಪ್ರಧಾನಿ ಮೋದಿ ಮಾಡಿದ್ದ ಮನವಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿಯವರು, “ಧರ್ಮ ಎಂಬುದು ಮನೆಯಿಂದಲೇ ಆರಂಭವಾಗಬೇಕು. ಮೊದಲು 8,000 ಕೋಟಿ ರೂಪಾಯಿಯ ವಿಮಾನವನ್ನು ಮಾರಿ ಇಂಧನ ಉಳಿಸುವ ವಿಮಾನ ಬಳಸಿ,” ಎಂದು ತಿಳಿಸಿದರು. ಅಲ್ಲದೆ, ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 100ಕ್ಕೆ ಕುಸಿಯುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಅವರು ನೆನಪಿಸಿದರು.

ಇದೇ ಸಂದರ್ಭದಲ್ಲಿ ಗೋರಕ್ಷಣೆಯ ಕುರಿತು ಮಾತನಾಡಿದ ಶಂಕರಾಚಾರ್ಯರು, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಗೋವುಗಳ ಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗೋಹತ್ಯೆ ತಡೆಯುವಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಈಗ ಮತದಾರರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.

You cannot copy content of this page

Exit mobile version