ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಇಂಧನ ದರ ಏರಿಕೆಯ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿದೆ. ಚುನಾವಣೆಯ ಮುನ್ನ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಯಾವುದೇ ಕಾರಣಕ್ಕೂ ಏರಿಸುವುದಿಲ್ಲ ಎಂದು ಹೇಳಿದ್ದ ಬಿಜೆಪಿ ಸರ್ಕಾರ, ಈಗ ಉಲ್ಟಾ ಹೊಡೆದಿದೆ. ತೈಲ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎಂಬ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುವ ಮೂಲಕ ಬೆಲೆ ಏರಿಕೆಗೆ ಪೀಠಿಕೆ ಹಾಕಲಾಗುತ್ತಿದೆ.
ದೇಶದಲ್ಲಿ ತೈಲ ಪೂರೈಕೆಗೆ ಯಾವುದೇ ಕೊರತೆಯಿಲ್ಲ ಎಂದು ಹೇಳುತ್ತಲೇ, ದರ ಏರಿಕೆಯ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಒಂದೆಡೆ ಇಂಧನ ಉಳಿತಾಯಕ್ಕಾಗಿ ವಿದೇಶಿ ಪ್ರವಾಸ ಕೈಬಿಡಿ, ಬಂಗಾರ ಕೊಳ್ಳಬೇಡಿ ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸಿ ಎಂದು ಜನರಿಗೆ ಸಲಹೆ ನೀಡುತ್ತಿದ್ದರೆ, ಮತ್ತೊಂದೆಡೆ ಸಚಿವರು ಬೆಲೆ ಏರಿಕೆಯ ಸುಳಿವು ನೀಡಿದ್ದಾರೆ.
ಸಚಿವರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಾವು ತೈಲ ದರಗಳನ್ನು ಏರಿಸಿಲ್ಲ ಎಂದು ನೆನಪಿಸಿದ್ದಾರೆ. ಈಗ ಚುನಾವಣೆ ಮುಗಿದಿರುವುದರಿಂದ ಬೆಲೆ ಏರಿಸುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಬೆಲೆ ಏರಿಕೆಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಪ್ರಭಾವದಿಂದಾಗಿ ಇಂಧನ ಉಳಿತಾಯದ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿಯವರು ಕೋರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
