Home ರಾಜಕೀಯ ಸರ್ಕಾರಿ ಬಂಗಲೆ ವಿವಾದಕ್ಕೆ ಬೈರತಿ ಸುರೇಶ್ ತೆರೆ: ‘ಮಹದೇವಪ್ಪಣ್ಣ ಮುಂದುವರಿದರೂ ತಕರಾರಿಲ್ಲ’

ಸರ್ಕಾರಿ ಬಂಗಲೆ ವಿವಾದಕ್ಕೆ ಬೈರತಿ ಸುರೇಶ್ ತೆರೆ: ‘ಮಹದೇವಪ್ಪಣ್ಣ ಮುಂದುವರಿದರೂ ತಕರಾರಿಲ್ಲ’

0

ಬೆಂಗಳೂರು: ಸರ್ಕಾರಿ ನಿವಾಸ ಹಂಚಿಕೆ ವಿಚಾರವಾಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಗಲಾಟೆ ನಡೆದಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಿ ನಿವಾಸದ ವಿಚಾರದಲ್ಲಿ ತಮ್ಮ ಹಾಗೂ ಮಹದೇವಪ್ಪ ಅವರ ನಡುವೆ ಕಿತ್ತಾಟ ನಡೆಯುತ್ತಿದೆ ಎಂಬ ಮಾಹಿತಿ ಹೇಗೆ ಹರಡಿತು ಎಂಬುದೇ ತಿಳಿದಿಲ್ಲ. ಮನೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿದ್ದು, ಮನೆ ಖಾಲಿ ಇದ್ದ ಹಿನ್ನೆಲೆಯಲ್ಲಿ ಅದನ್ನು ತಮಗೆ ಹಂಚಿಕೆ ಮಾಡಲಾಗಿತ್ತು ಎಂದು ಹೇಳಿದರು.

ಮಹದೇವಪ್ಪ ಅವರೊಂದಿಗೆ ತಮ್ಮ ಬಾಂಧವ್ಯ ಉತ್ತಮವಾಗಿದೆ ಎಂದು ತಿಳಿಸಿದ ಸುರೇಶ್, “ನಾನು ಮಹದೇವಪ್ಪಣ್ಣ ಅವರ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ಅವರು ನನಗಿಂತ ಹಿರಿಯರು. ಅವರ ಮುಂದೆ ನಾನು ಮಗನ ಸಮಾನ” ಎಂದು ಹೇಳಿದರು.

ಮನೆಯ ಗೋಡೆ ಒಡೆದಿರುವ ವಿಚಾರಕ್ಕೂ ತಮ್ಮನ್ನು ಜೋಡಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅದು ತಮ್ಮ ಮನೆಯಲ್ಲ ಮತ್ತು ಗೋಡೆ ಒಡೆಸಿರುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಕ್ರಮವಾಗಿದೆ ಎಂದರು. ಕಳೆದ ತಿಂಗಳ 15ರಂದು ಮನೆ ಖಾಲಿ ಮಾಡುವಂತೆ ಪತ್ರ ಬಂದಿತ್ತು ಎಂದು ತಿಳಿಸಿದರು.

“ಮಹದೇವಪ್ಪಣ್ಣ ಅವರೇ ಆ ಮನೆಯಲ್ಲಿ ಮುಂದುವರಿಯುವುದಾದರೆ ನನಗೇನೂ ಅಭ್ಯಂತರವಿಲ್ಲ. ಮುಖ್ಯಮಂತ್ರಿ ಅವರು ಅವರನ್ನೇ ಮುಂದುವರಿಯಲು ಸೂಚಿಸಿದರೆ ಉಳಿದ ಒಂದೂವರೆ ವರ್ಷ ಅವರೇ ಇರಲಿ. ನನಗೆ ಯಾವುದೇ ತಕರಾರಿಲ್ಲ” ಎಂದು ಬೈರತಿ ಸುರೇಶ್ ಹೇಳಿದರು.

ತಮ್ಮ ಹಾಗೂ ಮಹದೇವಪ್ಪ ಅವರ ನಡುವೆ ವೈಯಕ್ತಿಕ ಅಥವಾ ರಾಜಕೀಯ ಸಂಘರ್ಷವಿಲ್ಲ ಎಂಬುದನ್ನು ಪುನರುಚ್ಚರಿಸಿದ ಅವರು, “ಅವರು ಅಂಬೇಡ್ಕರ್ ಅನುಯಾಯಿ, ನಾನೂ ಅಂಬೇಡ್ಕರ್ ಅನುಯಾಯಿ” ಎಂದು ಹೇಳುವ ಮೂಲಕ ಸರ್ಕಾರಿ ನಿವಾಸದ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

You cannot copy content of this page

Exit mobile version