Home ರಾಜ್ಯ ಬಳ್ಳಾರಿ ಮೊಹರಂ ಹಿನ್ನೆಲೆ ‘ಆಲಾಯಿ’ಗಾಗಿ ಹಸಿರು ಮರ ಕಡಿದರೆ ಕಠಿಣ ಕಾನೂನು ಕ್ರಮ: ಬಳ್ಳಾರಿ ಅರಣ್ಯ ಇಲಾಖೆ...

ಮೊಹರಂ ಹಿನ್ನೆಲೆ ‘ಆಲಾಯಿ’ಗಾಗಿ ಹಸಿರು ಮರ ಕಡಿದರೆ ಕಠಿಣ ಕಾನೂನು ಕ್ರಮ: ಬಳ್ಳಾರಿ ಅರಣ್ಯ ಇಲಾಖೆ ಕಡಕ್ ಎಚ್ಚರಿಕೆ!

0

ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಧಕ್ಕೆ ಬರದಂತೆ ಸಾರ್ವಜನಿಕರು ಕಡ್ಡಾಯವಾಗಿ ಸಹಕರಿಸಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಡಾ.ಕೆ.ಎನ್. ಬಸವರಾಜ ಅವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಆದರೆ, ಈ ಹಬ್ಬದ ಪ್ರಯುಕ್ತ ರಾತ್ರಿ ಸಮಯದಲ್ಲಿ ನಡೆಸಲಾಗುವ ಸಾಂಪ್ರದಾಯಿಕ ‘ಆಲಾಯಿ ಕುಣಿತ’ ಮತ್ತು ‘ಬೆಂಕಿ ಹಾಕುವ’ ಕಾರ್ಯಕ್ರಮಗಳಿಗಾಗಿ ಗ್ರಾಮೀಣ ಭಾಗಗಳಲ್ಲಿ ಹಸಿರು ಮರಗಳನ್ನು ವ್ಯಾಪಕವಾಗಿ ಕಡಿದು ಕುಣಿಗೆ (ಬೆಂಕಿಗೆ) ಹಾಕುವ ಪರಿಪಾಠವಿದೆ. ಸಾರ್ವಜನಿಕರ ಈ ಕ್ರಮದಿಂದಾಗಿ ಜಿಲ್ಲೆಯ ಪರಿಸರ ಸಂರಕ್ಷಣೆಗೆ ಭಾರಿ ಧಕ್ಕೆ ಉಂಟಾಗುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ಧಗೆ ಮತ್ತು ತಾಪಮಾನವು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇಂತಹ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಮರ-ಗಿಡಗಳನ್ನು ಕಟಾವು ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ನಿಯಮಗಳನ್ನು ಮೀರಿ ಹಸಿರು ಮರಗಳನ್ನು ಕಡಿಯುವುದು ‘ಕರ್ನಾಟಕ ಅರಣ್ಯ ಕಾಯ್ದೆ’ ಮತ್ತು ‘ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ’ಯ ನೇರ ಉಲ್ಲಂಘನೆಯಾಗಿದ್ದು, ಇದು ಕಾನೂನಿನಡಿಯಲ್ಲಿ ಗಂಭೀರ ಶಿಕ್ಷಾರ್ಹ ಅಪರಾಧವಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಇಂತಹ ಕಾನೂನುಬಾಹಿರ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.

ಹಬ್ಬದ ಆಚರಣೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ಹಸಿರು ಮರಗಳನ್ನು ಕಡಿಯದೇ, ಪರಿಸರಕ್ಕೆ ಹಾನಿ ಮಾಡದ ರೀತಿಯಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಪರಿಸರವನ್ನು ಜೀವಂತವಾಗಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಹೊಣೆಯಾಗಿದ್ದು, ಸಾರ್ವಜನಿಕರು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಸಂಪೂರ್ಣವಾಗಿ ಕೈಜೋಡಿಸಬೇಕು ಎಂದು ಅವರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

You cannot copy content of this page

Exit mobile version