ಬೆಂಗಳೂರು: ಅಜ್ಜ ಸ್ವತಃ ಸಂಪಾದಿಸಿದ ಆಸ್ತಿಯು ಕುಟುಂಬ ಹಂಚಿಕೆಯ ಬಳಿಕ ಮಗನ ಪಾಲಿಗೆ ಬಂದರೆ, ಅದು ಮಗನ ವೈಯಕ್ತಿಕ ಆಸ್ತಿಯಾಗುತ್ತದೆ. ಅಂತಹ ಆಸ್ತಿಯಲ್ಲಿ ಮೊಮ್ಮಕ್ಕಳು ಪಾಲು ಕೇಳಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಪ್ರಕಾರ, ಉಷಾ ಅವರ ಅಜ್ಜ ತಮ್ಮ ಜೀವಿತಾವಧಿಯಲ್ಲಿ ಸ್ವಂತವಾಗಿ ಸಂಪಾದಿಸಿದ್ದ ಆಸ್ತಿಗಳನ್ನು ಕೌಟುಂಬಿಕ ಒಪ್ಪಂದದ ಮೂಲಕ ತಮ್ಮ ಮಕ್ಕಳ ನಡುವೆ ಹಂಚಿಕೆ ಮಾಡಿದ್ದರು. ಈ ಹಂಚಿಕೆಯಲ್ಲಿ ಉಷಾ ಅವರ ತಂದೆಗೆ ಬಂದ ಆಸ್ತಿಯಲ್ಲಿ ತಮಗೂ ಪಾಲು ನೀಡಬೇಕೆಂದು ಉಷಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ತಂದೆಗೆ ಬಂದಿದ್ದ ಆಸ್ತಿಗಳು ಮೂಲತಃ ಪಿತ್ರಾರ್ಜಿತ ಹಾಗೂ ಜಂಟಿ ಕುಟುಂಬದ ಆಸ್ತಿಗಳಾಗಿದ್ದು, ಅವುಗಳಿಂದ ಬಂದ ಆದಾಯ ಮತ್ತು ಗಣಿಗಾರಿಕೆ ಲಾಭದ ಹಣದಿಂದ ಇತರ ಆಸ್ತಿಗಳು ಹಾಗೂ ಠೇವಣಿಗಳು ನಿರ್ಮಾಣಗೊಂಡಿವೆ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ತಮ್ಮ ಗಮನಕ್ಕೆ ಬಾರದೆ ಕುಟುಂಬದ ಕೆಲವು ಜಮೀನುಗಳನ್ನು ಮಾರಾಟ ಮಾಡಲಾಗಿದೆ ಎಂದು ದೂರಿದ್ದರು.
ಆದರೆ, ವಿಚಾರಣೆ ವೇಳೆ ಲಭ್ಯವಾದ ದಾಖಲೆಗಳ ಪರಿಶೀಲನೆಯ ನಂತರ, ವಿವಾದಿತ ಆಸ್ತಿಗಳು ಅಜ್ಜನ ಸ್ವಯಾರ್ಜಿತ ಆಸ್ತಿಗಳಾಗಿದ್ದವು ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಸ್ವಯಾರ್ಜಿತ ಆಸ್ತಿಯು ಹಂಚಿಕೆಯ ಮೂಲಕ ಮಗನ ಪಾಲಿಗೆ ಬಂದಾಗ ಅದು ಆತನ ವೈಯಕ್ತಿಕ ಆಸ್ತಿಯ ಸ್ವರೂಪವನ್ನು ಪಡೆಯುತ್ತದೆ. ಅದನ್ನು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ, ತಂದೆಗೆ ತನ್ನ ವೈಯಕ್ತಿಕ ಆಸ್ತಿಯನ್ನು ತನ್ನ ಇಚ್ಛೆಯಂತೆ ಮಾರಾಟ, ದಾನ ಅಥವಾ ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ಇರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿವಾದಿತ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಕೇವಲ ತಾತನಿಂದ ಬಂದ ಆಸ್ತಿ ಎಂಬ ಕಾರಣಕ್ಕೆ ಅದರಲ್ಲಿ ಮೊಮ್ಮಕ್ಕಳು ಪಾಲು ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ವಿವಾದಿತ ಆಸ್ತಿಗಳಲ್ಲಿ ಅವರಿಗೆ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಗಳ ನಡುವಿನ ವ್ಯತ್ಯಾಸದ ಕುರಿತು ಮಹತ್ವದ ಕಾನೂನು ಸ್ಪಷ್ಟತೆಯನ್ನು ನೀಡಿದೆ.
