ಶಾಲೆಗಳಲ್ಲಿ ಅಶ್ಲೀಲ ಹಾಡು-ನೃತ್ಯಗಳಿಗೆ ಬ್ರೇಕ್: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಶಾಲೆಗಳು ಮಕ್ಕಳಿಗೆ ಜ್ಞಾನ ದೇಗುಲಗಳಾಗಿದ್ದು, ವಿದ್ಯಾರ್ಥಿಗಳ ಸಂಸ್ಕಾರ, ನೈತಿಕ ಮೌಲ್ಯಗಳು, ವಿನಯತೆ ಹಾಗೂ ಒಳ್ಳೆಯ ನಡತೆಯ ಬೆಳವಣಿಗೆಗೆ ಮೂಲವಾಗಿವೆ. ಇಂತಹ ಪರಿಸರದಲ್ಲಿ ಕೆಲವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳು ಮತ್ತು ನೃತ್ಯಗಳು ಪ್ರದರ್ಶವಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಈ ರೀತಿಯ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಆರೋಗ್ಯ ಹಾಗೂ ನೈತಿಕ ಮೌಲ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಶಿಕ್ಷಣದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆದಲ್ಲಿ, ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಮೂಲಕ ಶಾಲೆಗಳಿಗೆ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ:

  • ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
  • ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ, ಸಕಾರಾತ್ಮಕತೆ ಹಾಗೂ ಸಂಸ್ಕಾರ ಬೆಳೆಸುವ ಹಾಡುಗಳಿಗೆ ಆದ್ಯತೆ ನೀಡಬೇಕು.
  • ಕನ್ನಡ ನಾಡಿನ ಹಿರಿಮೆ-ಗರಿಮೆ ಹಾಗೂ ಮೌಲ್ಯಾಧಾರಿತ ಹಾಡುಗಳನ್ನು ಆಯ್ಕೆ ಮಾಡಬೇಕು.
  • ಹಾಡು ಮತ್ತು ನೃತ್ಯಗಳ ಆಯ್ಕೆ ಕುರಿತು ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
  • ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಭ್ಯ ಉಡುಪುಗಳನ್ನು ಧರಿಸುವಂತೆ ಕ್ರಮ ಕೈಗೊಳ್ಳಬೇಕು.
  • ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು