ಮೈಸೂರು: ನನ್ನನ್ನು ಕನಕಪುರ ಬಂಡೆ ಅಂತಾರೆ. ಈ ಬಂಡೆ ಯಾವಾಗಲೂ ಸಿದ್ದರಾಮಯ್ಯನವರಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಂದುವರೆದು ಕಲ್ಲುಬಂಡೆ ಅಂದ್ರೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ವಿರುದ್ದ ನಿಂತುಕೊಂಡರೆ ನಾಶ” ಎಂದು ತಮ್ಮ ವಿರೋಧಿಗಳನ್ನು ಕುರಿತು ಮಾರ್ಮಿಕವಾಗಿ ನುಡಿದರು.
ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು “ಹಿಂದುಳಿದ ಸಮುದಾಯದ ಸಿದ್ದರಾಮಯ್ಯನವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಅವರನ್ನು ಮುಡಾ ಹಗರಣದಲ್ಲಿ ಸಿಕ್ಕಿ ಹಾಕಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮಾಡಿದ್ದಾರೆ. ಈ ಕನಕಪುರದ ಬಂಡೆ ಸಿಎಂ ಜೊತೆ ಸದಾ ಇರಲಿದೆ ಎಂಬುದನ್ನು ಮರೆಯದಿರಿ ಎಂದು ಎಚ್ಚರಿಕೆ ನೀಡಿದರು.
“ಮಾತಿಗಿಂತ ಕೃತಿ ಮೇಲು ಎಂದು ನಂಬಿದವರು ನಾವು. ನುಡಿದಂತೆ ನಡೆದಿದ್ದೇವೆ. ಬಡ ಜನರಿಗಾಗಿ ಶ್ರಮಿಸಿದ್ದೇವೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ಸಹಿಸಲಾಗದೆ ಸಿದ್ದರಾಮವ್ಯಕ್ಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಡಾ ಸೈಟ್ ಯಾರ ಆಡಳಿತಾವಧಿಯಲ್ಲಿ ನೀಡಲಾಗಿದೆ? ಬಿಜೆಪಿ ಅವಧಿಯಲ್ಲೇ ಆಗಿದೆ. ಆಗ ಎಲ್ಲಿಗೆ ಹೋಗಿತ್ತು ಹಗರಣ ವಿಚಾರ?” ಎಂದು ಡಿಸಿಎಂ ಪ್ರಶ್ನಿಸಿದರು.
ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ: “ಕುಮಾರಸ್ವಾಮಿ ನಂಬಿದವರನ್ನು ಮುಗಿಸುತ್ತಾರೆ. ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿದ್ದೇನೆ, ಮುಂದೆ ಮಾಡುತ್ತೇನೆ. ವಿಜಯೇಂದ್ರ ಕೊರೋನಾ ಸಮಯದಲ್ಲಿ ಬಡವರ ಹಣ ತಿಂದಿದ್ದಾರೆ. ಇಂತಹ ಭ್ರಷ್ಟರನ್ನು ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಸಬೇಕಾ? ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ” ಎಂದು ಆರೋಪಿಸಿದರು.
ನಮ್ಮ ಸರ್ಕಾರವನ್ನು ಉರುಳಿಸುವ, ನಾವು ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ರಕ್ಷಣೆಗೋಸ್ಕರ ಈ ಜನಾಂದೋಲನ ಆಯೋಜಿಸಿದ್ದೇವೆ” ಎಂದು ಹೇಳಿದರು.
“ಮಿಸ್ಟರ್ ಕುಮಾರಸ್ವಾಮಿ..ಮಿಸ್ಟರ್ ಆಶೋಕಾ..ಮಿಸ್ಟರ್ ವಿಜಯೇಂದ್ರ..ನೀವು ಆಪರೇಶನ್ ಮಾಡಿ ಅನೇಕ ಸರ್ಕಾರಗಳನ್ನು ತೆಗೆದು ಹಾಕಿದ್ದೀರಿ. ಕುಮಾರಸ್ವಾಮಿ ನಿಮ್ಮ ಮುಖಂಡತ್ವದಲ್ಲಿ 19 ಸೀಟ್ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಈ ಡಿ.ಕೆ ಶಿವಕುಮಾರ್ ಮುಖಂಡತ್ವದಲ್ಲಿ 136 ಸೀಟ್ ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದ್ರೂ ಕೂಡ ಕಾಂಗ್ರೆಸ್ ತೆಗೆದು ಹಾಕಲು ಆಗಿಲ್ಲ. ನಿಮ್ಮಿಂದ ರಾಜಿನಾಮೆ ಪಡೆಯಲು ಸಾಧ್ಯವೇ ಎಂದು ಆಕ್ರೋಶವ್ಯಕ್ತಪಡಿಸಿದರು.