ಬೆಂಗಳೂರು: ರಿಕ್ಷಾ ಚಾಲಕ ಹಾಗೂ ಹಿಂದಿ ಯುವತಿಯ ನಡುವಿನ ಜಗಳ ಇಂದು ಆ ರಿಕ್ಷಾ ಚಾಲಕನ ಹೊಟ್ಟೆಪಾಡಿನ ಮೇಲೆಯೇ ದೊಡ್ಡ ಹೊಡೆತವನ್ನು ನೀಡಿದೆ.
ಕಳೆದ ಎರಡು ದಿನಗಳ ಕೆಳಗೆ ರಿಕ್ಷಾ ಚಾಲಕ ಮುತ್ತುರಾಜ ಹಾಗೂ ಉತ್ತರ ಭಾರತ ಮೂಲದ ಯುವತಿಯ ನಡುವೆ ಬಾಡಿಗೆಯೊಂದನ್ನು ರದ್ದುಗೊಳಿಸಿದ ವಿಚಾರವಾಗಿ ಮಾತಿನ ಚಕಮಕಿ ನಡೆದು ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಮುತ್ತುರಾಜ್ ಯುವತಿಯ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈಗ ಅವರು ಕೆಲವು ಕ್ಷಣಗಳ ಕಾಲ ತಾಳ್ಮೆ ಕಳೆದುಕೊಂಡಿದ್ದಕ್ಕೆ ದೊಡ್ಡ ಬೆಲೆಯನ್ನೇ ತೆರುತ್ತಿದ್ದಾರೆ. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಮುತ್ತುರಾಜ್ ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ಅವರು ಜಾಮೀನಿಗೆ 30 ಸಾವಿರ ರೂಪಾಯಿಗಳನ್ನು ಹೊಂದಿಸಿಕೊಳ್ಳಬೇಕಿದೆ. ಜೊತೆಗೆ ಸಾರಿಗೆ ಇಲಾಖೆ ಅವರ ಡ್ರೈವಿಂಗ್ ಲೈಸೆನ್ಸ್ ಹಾಗೂ ಆಟೋ ರಿಕ್ಷಾ ಪರ್ಮಿಟ್ ಎರಡನ್ನೂ ರದ್ದುಗೊಳಿಸುವ ಯೋಚನೆಯಲ್ಲಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಇಂತಹ ನೂರಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಘಟನೆ ಒಂದಷ್ಟು ಹೆಚ್ಚು ಫೋಕಸ್ ಪಡೆದ ಕಾರಣ ಈಗ ಸರ್ಕಾರ ಒಂದಷ್ಟು ಹೆಚ್ಚೇ ಕಠಿಣ ಕ್ರಮಗಳನ್ನು ಈ ಆಟೋ ಚಾಲಕನ ಮೇಲೆ ಕೈಗೊಳ್ಳುತ್ತಿದೆ ಎಂದು ಕನ್ನಡಿಗರು ಅಭಿಪ್ರಾಯ ಪಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಚಲನಚಿತ್ರ ನಿರ್ದೇಶಕ ಹಾಗೂ ಗೀತ ರಚನೆಕಾರ ಕವಿರಾಜ್ ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದು, “ಅವನು ತನ್ನ ಕುಟುಂಬದ ಅಂದಿನ ಅನ್ನ ಗಳಿಸಲು ರೋಡಿಗಿಳಿದವನು . ಆ ಮೇಡಂ ತನ್ನ ಅನುಕೂಲಕ್ಕೆ ಎರಡು ಆಟೋ ಒಟ್ಟಿಗೆ ಬುಕ್ ಮಾಡಿ ಸ್ಥಳಕ್ಕೆ ಬಂದ ಮೇಲೆ ಕ್ಯಾನ್ಸಲ್ ಮಾಡಿ ಅವನ ದುಡಿಮೆಗೆ ಕಲ್ಲು ಹಾಕುತ್ತಾರೆ . ಖಂಡಿತಾ ಬಡವನ ಹೊಟ್ಟೆ ಮೇಲೆ ಹೊಡೆದರೆ ಅವನಿಗೆ ಹತಾಶೆ,ಕೋಪ ಬಂದೇ ಬರುತ್ತೆ . ಆಗ ಆ ಮೇಡಂ ವಿನಮ್ರವಾಗಿ ಸಮಜಾಯಿಷಿ ನೀಡಿ ಕ್ಷಮೆ ಕೇಳಬೇಕಿತ್ತು . ಅದರ ಬದಲು ‘ಏನೀಗ’ ಅನ್ನೊ ಧಾಟಿಯಲ್ಲೇ ಮಾತಾಡಿದ್ದಾರೆ . ಅದು ಖಂಡಿತಾ ಆಟೋ ಡ್ರೈವರನ್ನು ಇನ್ನಷ್ಟು ಕೆರಳಿಸಿರುತ್ತೆ . ಆದರೂ ಆಮೇಲೆ ಅವರಾಡಿದ ಮಾತುಗಳು , ವರ್ತನೆ ಖಂಡಿತ ತಪ್ಪೇ . ಅದನ್ನು ಸಮರ್ಥಿಸಲಾಗದು” ಎಂದಿದ್ದಾರೆ.
ಮುಂದುವರೆದು, “ಆದರೆ ಅವರ ತಪ್ಪಿಗೆ ಈಗ ಕೊಟ್ಟಿರುವ ಶಿಕ್ಷೆ ತೀರಾ ಅಸಮಾನತೆಯದ್ದು . ಬಡವರ ಮೇಲೆ ಸೋ ಕಾಲ್ಡ್ ಎಲೈಟ್ ಕ್ಲಾಸ್ ಜನಗಳು ಕೊಡುವ ದೂರುಗಳಿಗೆ ಪ್ರತಿಕ್ರಿಯಿಸುವಾಗ ನಮ್ಮ ಆಡಳಿತ ವ್ಯವಸ್ಥೆಗೆ ಎಲ್ಲಿಲ್ಲದ ಉಮೇದು ಬಂದುಬಿಡುತ್ತೆ” ಎಂದು ಹೇಳಿದ್ದಾರೆ. ಅವರ ಟ್ವೀಟ್‌ನ ಪೂರ್ಣಪಾಠದ ಕೊಂಡಿಯನ್ನು ಕೆಳಗೆ ನೀಡಲಾಗಿದೆ.
ಇನ್ನೂ ಕವಿರಾಜ್ ಅವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಇನ್ನೋರ್ವ ಖ್ಯಾತ ನಿರ್ದೇಶಕ ಮಂಸೋರೆಯವರು, “ಆಟೋ ಡ್ರೈವರ್ ವರ್ತನೆ ತಪ್ಪು, ಆದರೆ, ಆದ ನಷ್ಟದಿಂದ ಬಂದ ಕೋಪ ಸ್ವಾಭಾವಿಕ, ಆ ತಪ್ಪಿಗೆ ಈಗ ಕೊಟ್ಟಿರುವ ಶಿಕ್ಷೆ ಅಮಾನವೀಯ. ಕರೆಸಿ ಎಚ್ಚರಿಕೆ ಕೊಟ್ಟು, ತಪ್ಪೊಪ್ಪಿಗೆ ಬರೆಸಿಕೊಂಡು ಕಳಿಸುವುದನ್ನು ಬಿಟ್ಟು, ಡಿ ಎಲ್ ರದ್ದು ಮಾಡಿ, ಎಫ್ ಐ ಆರ್ ಮಾಡಿರುವುದು ಆ ವೃತ್ತಿಯನ್ನೇ ನಂಬಿರುವ ಕುಟುಂಬಕ್ಕೆ ನೀಡಿದ ಬಹುದೊಡ್ಡ ಶಿಕ್ಷೆ” ಎಂದು ಹೇಳಿದ್ದಾರೆ.
ಈ ನಡುವೆ ಆಟೋ ಚಾಲಕನ ಪರವಾಗಿ ಸಹಾನುಭೂತಿಯ ಸುರಿಮಳೆಯೇ ಆಗುತ್ತಿದ್ದು ಕೆಲವರು ಧನಸಹಾಯಕ್ಕೂ ಮುಂದಾಗಿದ್ದಾರೆ. ಆದರೆ ಅವರ ಸಂಪರ್ಕ ವಿವರಗಳು ಸಿಗದ ಕಾರಣ ಅವರೆಲ್ಲ ಅಸಹಾಯಕರಾಗಿದ್ದಾರೆ.
ಕನ್ನಡಪರ ಹೋರಾಟಗಾರ್ತಿ, ಸಾಫ್ಟ್‌ವೇರ್ ವೃತ್ತಿಪರರಾದ ಶೃತಿ ಮರುಳಪ್ಪ ಅವರು ಈ ಕುರಿತು ಪ್ರತಿಕ್ರಿಯಿಸಿ “ಆಟೋ ಚಾಲಕನ ಸಹಾಯಕ್ಕೆ ಯಾರೂ ಇಲ್ಲ ಯಾರು ಬರುವುದೂ ಇಲ್ಲ ಎಂದು ತಿಳಿದೇ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲ ಕನ್ನಡಿಗರಿಗೆ ಒಂದು ಸಂದೇಶ ರವಾನಿಸಲು ಈ ಅವಕಾಶ ಬಳಸಿಕೊಳ್ಳಲಾಗಿದೆ. ತಪ್ಪಿಗೆ ಕೋರ್ಟು ಶಿಕ್ಷೆ ವಿಧಿಸಲಿ, ಪೋಲಿಸರಲ್ಲ. ಒಂದು ಕನ್ನಡದ ಕುಟುಂಬ ಬೀದಿಗೆ ಬರದಂತೆ ನಾವು ಕನ್ನಡಪರರೆಲ್ಲರೂ ಈ ಸಂದರ್ಭದಲ್ಲಿ ಜೊತೆ ನಿಲ್ಲಬೇಕು” ಎಂದು ಹೇಳಿದ್ದಾರೆ.
ಒಟ್ಟಾರೆ ಒಂದು ಕಾಲದಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗಳಾದ ಬಿಎಮ್‌ಟಿಸಿ, ಆಟೋರಿಕ್ಷಾಗಳ ಚಾಲಕರಿಗೆ ತೊಂದರೆಯೆಂದರೆ ಇಡೀ ಬೆಂಗಳೂರಿನ ರಿಕ್ಷಾ ಹಾಗೂ ಬಸ್ ಚಾಲಕರು ಒಗ್ಗಟ್ಟಾಗಿ ರಸ್ತೆಗಿಳಿಯುತ್ತಿದ್ದರು. ಆದರೆ ಈಗ ಅಂತಹ ಒಗ್ಗಟ್ಟು ಕಾಣುತ್ತಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.