Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಿವಿಲ್‌ ಡ್ರೆಸ್‌ನಲ್ಲಿದ್ದ ಪೊಲೀಸ್‌ ಅಧಿಕಾರಿಯಿಂದ ಹಲ್ಲೆ – ಕ್ರಮಕ್ಕೆ ನಿವಾಸಿಗಳ ಆಗ್ರಹ | ವಿಡಿಯೋ

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿರುವ ಗಂಗಾಧರ್‌ ಎಂಬುವವರು ತಾವು ವಾಸವಾಗಿರುವ ಮಹಾವೀರ್ ಆರ್ಚಿಡ್ ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಅಪಾರ್ಟ್‌ಮೆಂಟ್‌ ಆವರಣದೊಳಗೆ ದೈಹಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ ತಾಲ್ಲೂಕಿನ ರಾಜಸಂದ್ರದಲ್ಲಿ ನಡೆದಿದೆ. ಮಹಾವೀರ್‌ ಆರ್ಚಿಡ್ ಅಪಾರ್ಟ್‌ಮೆಂಟ್‌ನ ಮಾಲೀಕರು ಈ ಕುರಿತು ಪರಪ್ಪನ ಅಗ್ರಹಾರ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರಿಗೆ ಮನವಿ ಸಲ್ಲಿಸಿ ಪೊಲೀಸ್‌ ಅಧಿಕಾರಿ ಗಂಗಾಧರ್‌ ಅವರನ್ನು ಕೂಡಲೇ ಅಪಾರ್ಟ್‌ಮೆಂಟ್‌ ಸೊಸೈಟಿಯಿಂದ ತೆಗೆದುಹಾಕಿ ಅವರ ಮೇಲೆ ಆಂತರಿಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಘಟನೆಯ ಹಿನ್ನೆಲೆ:

ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ರಾಜಾಸಂದ್ರದಲ್ಲಿರುವ ಮಹಾವೀರ್‌ ಆರ್ಚಿಡ್‌ ನಲ್ಲಿ ಆರು ತಿಂಗಳಿಂದ ಯಾವುದೇ ನಿರ್ವಹಣಾ ಶುಲ್ಕ ನೀಡದವರಿಗೆ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಇದರಂತೆ ಅಪಾರ್ಟ್‌ಮೆಂಟ್‌ ನಿವಾಸಿಯಾಗಿರುವ ಎಸ್‌ ಐ ಗಂಗಾಧರ ಅವರೂ ಡಿಫಾಲ್ಟರ್‌ ಆಗಿದ್ದರು. ಇದಕ್ಕೂ ಮುನ್ನ ಅಪಾರ್ಟ್‌ಮೆಂಟಿನ ಸೆಕ್ಯುರಿಟಿ ಸೂಪರ್ವೈಸರ್‌ ಶ್ರೀನಿವಾಸ್‌ ಮತ್ತು ಮ್ಯಾನೇಜರ್‌ ರಾಮು ಅವರನ್ನು ಹೊಯ್ಸಳದಲ್ಲಿ ಬಂದಿದ್ದ ಪೊಲೀಸರು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ಅದನ್ನು ನಿವಾಸಿಗಳು ಪ್ರಶ್ನಿಸಿದರು. ಆ ಸಂದರ್ಭದಲ್ಲಿ ಯಾಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವಿಚಾರಿಸುತ್ತಿದ್ದಂತೆ ಎಸ್‌ಐ ಗಂಗಾಧರ್‌ ಅವರು ಸಹನಿವಾಸಿಗಳಾದ ಅಮಿತ್‌ ಹಾಗೂ ವಿಮಲ್‌ ಎಂಬುವವರ ಮೇಲೆ ಎಗರಿ ಹೋಗಿ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆಸಿರುವ ದೃಶ್ಯ ಮೊಬೈಲುಗಳಲ್ಲಿ ರೆಕಾರ್ಡ್‌ ಆಗಿದ್ದು ಅವನ್ನು ಪೊಲೀಸ್‌ ಠಾಣೆಗೆ ಸಲ್ಲಿಸಲಾಗಿದೆ.

ಎಸ್‌ ಐ ಗಂಗಾಧರ್‌ ಅಪಾರ್ಟ್‌ಮೆಂಟ್‌ ಸಹನಿವಾಸಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ.

ಈ ಕುರಿತು ಪೀಪಲ್‌ ಮೀಡಿಯಾದೊಂದಿಗೆ ಮಾತನಾಡಿದ ನಿವಾಸಿಯೊಬ್ಬರು ʼಹೀಗೆ ಪೊಲೀಸ್‌ ಅಧಿಕಾರಿಯಾಗಿರುವವರು ಅನಾಗರಿಕವಾಗಿ ವರ್ತಿಸುವುದು ಎಷ್ಟು ನ್ಯಾಯ? ನ್ಯಾಯಪಾಲಕರೇ ದೈಹಿಕ ಹಲ್ಲೆಗಿಳಿದರೆ ಯಾರ ಬಳಿ ನ್ಯಾಯ ಕೇಳುವುದು? ಎಂದು ನೋವು ತೋಡಿಕೊಂಡರುʼ

ʼಎಸ್‌ ಐ ಗಂಗಾಧರ್‌ ಅವರು ಒಬ್ಬ ಪೊಲೀಸ್‌ ಆಗಲಿಕ್ಕೇ ಲಾಯಕ್ಕಿಲ್ಲದ ವ್ಯಕ್ತಿ. ಇಂಥವರು ಸೊಸೈಟಿಯಲ್ಲಿ ಯಾವ ಕಾರಣಕ್ಕೂ ಇರಕೂಡದು. ಈಗ ಹಲ್ಲೆ ನಡೆಸಿರುವುದಕ್ಕೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕುʼ ಎಂದು ನಿವಾಸಿಗಳು ಒಕ್ಕೊರಲಿನಿಂದ ಓತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು