Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಂಜಾರರ ಪ್ರತಿರೋಧಕ್ಕೆ ಮಣಿದ ಆರ್‌ ಎಸ್‌ ಎಸ್, ಭಾಯಾಗಡ್‌ ಶಿಬಿರ ರದ್ದು, ಹಿರೇಕಲ್‌ ಮಠಕ್ಕೆ ವರ್ಗಾವಣೆ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್‌ ಅವರ ಜನ್ಮಸ್ಥಳ ಭಾಯಾಗಡ್‌ ನಲ್ಲಿ ನಡೆಸಲು ಉದ್ದೇಶಿಸಿದ ಶಿಬಿರವನ್ನು ಬಂಜಾರ ಸಮುದಾಯದ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಆರ್‌ ಎಸ್‌ ಎಸ್‌ ರದ್ದುಗೊಳಿಸಿದ್ದು, ಹೊನ್ನಾಳಿಯ ಹಿರೇಕಲ್‌ ಮಠಕ್ಕೆ ಸ್ಥಳಾಂತರಗೊಳಿಸಿದೆ.

ಈ ಕುರಿತು ಶಾಸಕ ರಾಜೀವ್‌ ಕುಡಚಿ ಸಮುದಾಯದ ವಾಟ್ಸಾಪ್‌ ಗುಂಪುಗಳಲ್ಲಿ ಸಂದೇಶವೊಂದನ್ನು ಹರಿಬಿಟ್ಟಿದ್ದು, ಸಮಾಜದಲ್ಲಿ ಪ್ರಕ್ಷುಬ್ದತೆ ಉಂಟಾಗುವ ಸಾಧ್ಯತೆ ಇರುವುದರಿಂದ ಭಾಯಾಗಡ್‌ ನಲ್ಲಿ ಶಿಬಿರ ಆಯೋಜಿಸಿರುವುದರಿಂದ ಹಿಂದೆ ಸರಿದಿರುವುದಾಗಿ ಆರ್‌ ಎಸ್‌ಎಸ್‌ ಮುಖಂಡರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ ೧೦-೧೧ರಂದು ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಭಾಯಾಗಡ್‌ ನಲ್ಲಿ ಆರ್‌ ಎಸ್‌ ಎಸ್‌ ಶಿಬಿರ ನಡೆಸುವುದಾಗಿ ಕರಪತ್ರ ಹಂಚಿತ್ತು. ಬಂಜಾರರ ಗುರುಪೀಠವಾಗಿರುವ ಮಹಾಮಠದ ಅನುಮತಿ ಇಲ್ಲದೆ, ಸಮುದಾಯದ ಮುಖಂಡರಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡದೇ ಶಿಬಿರ ಆಯೋಜಿಸುತ್ತಿರುವ ಕುರಿತು ತೀವ್ರ ಅಸಮಾಧಾನ ಉಂಟಾಗಿತ್ತಲ್ಲದೆ, ರಾಜ್ಯದ ಎಲ್ಲ ಭಾಗಗಳಲ್ಲಿ ಬಂಜಾರ ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಬಂಜಾರರಿಗೆ ತಮ್ಮದೇ ಆದ ನುಡಿ, ಸಂಸ್ಕೃತಿ, ಪರಂಪರೆ, ದೇವರು, ಆಚರಣೆಗಳು ಇವೆ. ಅವುಗಳ ಮೇಲೆ ಆಕ್ರಮಣ ಆಗುವುದನ್ನು ಸಹಿಸುವುದಿಲ್ಲ. ಆರ್‌ ಎಸ್‌ ಎಸ್‌ ಈ ದೇಶದ ಬಹುತ್ವವನ್ನು ಒಪ್ಪುವುದಿಲ್ಲ, ಗೌರವಿಸುವುದಿಲ್ಲ. ಹೀಗಾಗಿ ನಾವು ಶಿಬಿರಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಂಜಾರ ಸಮುದಾಯದ ಮುಖಂಡರು ಪ್ರತಿಪಾದಿಸಿದ್ದರು.

ಈಗ ಕೊನೆಗೂ ಬಂಜಾರ ಮುಖಂಡರ ಒತ್ತಡಕ್ಕೆ ಆರ್‌ ಎಸ್‌ ಎಸ್‌ ಮಣಿದಿದ್ದು, ಶಿಬಿರವನ್ನು ಹೊನ್ನಾಳಿಯ ವೀರಶೈವ ಮಠವಾದ ಹಿರೇಕಲ್‌ ಮಠಕ್ಕೆ ಸ್ಥಳಾಂತರಿಸಿದೆ.

Related Articles

ಇತ್ತೀಚಿನ ಸುದ್ದಿಗಳು