Home ದೇಶ 2023-24 ರ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಿಂದ 1.7 ಟ್ರಿಲಿಯನ್ ಸಾಲ ವಜಾ!

2023-24 ರ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಿಂದ 1.7 ಟ್ರಿಲಿಯನ್ ಸಾಲ ವಜಾ!

0
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಇದು ಕಳೆದ ಐದು ವರ್ಷಗಳಲ್ಲಿ ಕಂಡ ಅತ್ಯಂತ ಕಡಿಮೆ ರೈಟ್-ಆಫ್ ಮಟ್ಟ ಎಂದು ಹೇಳಿದ್ದಾರೆ

ಬೆಂಗಳೂರು: 2023-24ರ ಹಣಕಾಸು ವರ್ಷದಲ್ಲಿ (FY24) 1.7 ಟ್ರಿಲಿಯನ್ ಮೌಲ್ಯದ ಸಾಲವನ್ನು ಬ್ಯಾಂಕ್‌ಗಳು ವಜಾಗೊಳಿಸಿವೆ, ಆದರೂ ಇದು FY23 ರಲ್ಲಿ ಇದ್ದ 2.08-ಟ್ರಿಲಿಯನ್ ರುಪಾಯಿಯ ರೈಟ್-ಆಫ್‌ನಿಂದ ಕಡಿಮೆಯಾಗಿದೆ.

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಇದು ಕಳೆದ ಐದು ವರ್ಷಗಳಲ್ಲಿ ಕಂಡ ಅತ್ಯಂತ ಕಡಿಮೆ ರೈಟ್-ಆಫ್ ಮಟ್ಟ ಎಂದು ಹೇಳಿದ್ದಾರೆ.

ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, FY20 ರಲ್ಲಿ 2.34 ಟ್ರಿಲಿಯನ್‌ಗಳಷ್ಟು ಸಾಲ ವಜಾಗಳು ಗರಿಷ್ಠ ಮಟ್ಟಕ್ಕೆ ತಲುಪಿದವು, ನಂತರ FY21 ರಲ್ಲಿ 2.03 ಟ್ರಿಲಿಯನ್ ಮತ್ತು FY22 ರಲ್ಲಿ 1.75 ಟ್ರಿಲಿಯನ್‌ ಸಾಲ ವಜಾಗೊಳಿಸಲಾಯಿತು. FY24 ರವರೆಗೂ ಮುಂದುವರಿದಿರುವ ಈ ಕುಸಿತವು ಆಸ್ತಿ ಗುಣಮಟ್ಟದಲ್ಲಿ ಸಂಭಾವ್ಯ ಸುಧಾರಣೆ ಅಥವಾ ಬ್ಯಾಂಕುಗಳು ಹಾಕಿರುವ ಬಿಗಿಯಾದ ನಿಬಂಧನೆ ಕ್ರಮಗಳ ಪರಿಣಾಮವಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಟ್ಟು 18,317 ಕೋಟಿ ರುಪಾಯಿಯ ಅತಿ ಹೆಚ್ಚು ರೈಟ್-ಆಫ್‌ಗಳನ್ನು ಹೊಂದಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 18,264 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 16,161 ಕೋಟಿ ರೈಟ್-ಆಫ್‌ ಹೊಂದಿವೆ.

ಖಾಸಗಿ ವಲಯದ ಬ್ಯಾಂಕ್‌ಗಳು ಕೂಡ ಗಣನೀಯ ಪ್ರಮಾಣದಲ್ಲಿ ಸಾಲ ವಜಾ ಮಾಡಿವೆ. HDFC ಬ್ಯಾಂಕ್ 11,030 ಕೋಟಿ ರುಪಾಯಿ ಸಾಲ ಮನ್ನಾ ಮಾಡುವುದರೊಂದಿಗೆ ಮುನ್ನಡೆ ಸಾಧಿಸಿದ್ದು, ಆಕ್ಸಿಸ್ ಬ್ಯಾಂಕ್ 8,346 ಕೋಟಿ ಮತ್ತು ICICI ಬ್ಯಾಂಕ್ 6,198 ಕೋಟಿ ರುಪಾಯಿ ಸಾಲ ಮನ್ನಾ ಮಾಡಿವೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ  ವರದಿಯ ಪ್ರಕಾರ, ಎಫ್‌ವೈ 24 ರಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳ ಸಾಲ ವಜಾಗಳು 18.2% ರಷ್ಟು ಕಡಿಮೆಯಾದರೂ, ಐದನೇ ಒಂದು ಭಾಗದಷ್ಟು ಬ್ಯಾಂಕ್‌ಗಳು ಮಾರ್ಚ್ 2024 ರಲ್ಲಿ ಕೊನೆಗೊಂಡ ವರ್ಷದಲ್ಲಿ ಸಾಲಗಳನ್ನು ವಜಾಗೊಳಿಸಿದ ಮೊತ್ತದಲ್ಲಿ ಹೆಚ್ಚಳವನ್ನು ಕಂಡಿವೆ.

ಈ ಸಾಲ ವಜಾಗೊಳಿಸುವುದನ್ನು ಸಾಲ ನೀಡಿದವನು ನಷ್ಟವೆಂದು ಪರಿಗಣಿಸುತ್ತಾನೆ, ಆದರೆ ಅದು ಮರುಪಾವತಿಯಾಗುವುದಿಲ್ಲ ಎಂದು ಅರ್ಥವಲ್ಲ. ಈ ರೈಟ್-ಆಫ್‌ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳು ಮತ್ತು ಬ್ಯಾಂಕ್ ಬೋರ್ಡ್‌ಗಳು ಅನುಮೋದಿಸಿದ ನೀತಿಗಳಿಗೆ ಅನುಸಾರವಾಗಿ ಕೈಗೊಳ್ಳಲಾಗುತ್ತದೆ.

ಪ್ರಕ್ರಿಯೆಯನ್ನು ವಿವರಿಸಿದ ಸಚಿವ ಚೌಧರಿ, ಈ ರೈಟ್-ಆಫ್‌ಗಳು ಸಾಲಗಾರರನ್ನು ಅವರ ಹೊಣೆಗಾರಿಕೆಗಳಿಂದ ಮುಕ್ತಗೊಳಿಸುವುದಿಲ್ಲ ಎಂದು ಹೇಳಿದರು.

“ಇಂತಹ ರೈಟ್-ಆಫ್‌ಗಳು ಸಾಲಗಾರರ ಹೊಣೆಗಾರಿಕೆಗಳ ಮನ್ನಾಕ್ಕೆ ಕಾರಣವಾಗುವುದಿಲ್ಲ ಮತ್ತು ಆದ್ದರಿಂದ, ರೈಟ್-ಆಫ್‌ಗಳು ಸಾಲಗಾರನಿಗೆ ಪ್ರಯೋಜನವನ್ನು ನೀಡುವುದಿಲ್ಲ. ಸಾಲಗಾರರು ಮರುಪಾವತಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಬ್ಯಾಂಕ್‌ಗಳು ಈ ಖಾತೆಗಳಲ್ಲಿ ಪ್ರಾರಂಭಿಸಿದ ಸಾಲ ವಸೂಲು ಕ್ರಮಗಳನ್ನು ಮುಂದುವರಿಸುತ್ತವೆ, ”ಎಂದು ಅವರು ಹೇಳಿದರು.

ಅನುತ್ಪಾದಕ ಆಸ್ತಿಗಳನ್ನು (non-performing assets – NPA) ತೆಗೆದುಹಾಕುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು ಸಾಲದ ರೈಟ್-ಆಫ್‌ಗಳನ್ನು ಸಾಮಾನ್ಯವಾಗಿ ಕೈಗೊಳ್ಳಲಾಗುತ್ತದೆ. ಹಾಗಿದ್ದು ಕೂಡ, ಕಾನೂನು ಮತ್ತು ವಸೂಲಾತಿ ಕಾರ್ಯವಿಧಾನಗಳ ಮೂಲಕ ಸಾಲಗಾರರಿಂದ ಬಾಕಿ ಉಳಿದಿರುವ ಬಾಕಿಗಳನ್ನು ವಸೂಲಿ ಮಾಡುವ ಹಕ್ಕನ್ನು ಬ್ಯಾಂಕುಗಳು ಉಳಿಸಿಕೊಳ್ಳುತ್ತವೆ.

ಕಳೆದ ಐದು ವರ್ಷಗಳಲ್ಲಿ ಹಲವಾರು ವಸೂಲಾತಿ ಕ್ರಮಗಳನ್ನು ಬಳಸಿದ್ದರೂ ಕೂಡ 81.30% ಸಾಲವನ್ನು ವಸೂಲಿ ಮಾಡಲು ಬ್ಯಾಂಕ್‌ಗಳು ವಿಫಲವಾಗಿವೆ ಎಂದು ಈ ವರ್ಷದ ಆಗಸ್ಟ್‌ನಲ್ಲಿ ಆರ್‌ಟಿಐ ಅರ್ಜಿಗೆ ಸಿಕ್ಕಿದ ಮಾಹಿತಿಯಿಂದ ಬಹಿರಂಗವಾಗಿದೆ.

You cannot copy content of this page

Exit mobile version