Home ರಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಗೋಹತ್ಯೆ ಆರೋಪಿಯ ಮನೆ, ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿದ ಬಂಟ್ವಾಳ...

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಗೋಹತ್ಯೆ ಆರೋಪಿಯ ಮನೆ, ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿದ ಬಂಟ್ವಾಳ ಪೊಲೀಸರು

0

ಬಂಟ್ವಾಳ: ಗೋಕಳ್ಳತನ (Cattle Theft) ಮತ್ತು ಗೋಹತ್ಯೆ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಆರೋಪಿಯೊಬ್ಬನ ಮನೆ ಹಾಗೂ ಆತ ನಿರ್ಮಿಸಿದ್ದ ಅಕ್ರಮ ಕಸಾಯಿಖಾನೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕ್ರಮವು ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿಯೇ ಮೊದಲ ಪ್ರಕರಣವಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂಗಳ ಅಡಿಯಲ್ಲಿ ಆಸ್ತಿ ಅಥವಾ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಂಡ ಮೊದಲ ನಿದರ್ಶನ ಇದಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಪುದು ಗ್ರಾಮದ ಮಾರಿಪಳ್ಳ ನಿವಾಸಿ ಹಸನಬ್ಬ ಎಂಬಾತ ಈ ಪ್ರಕರಣಗಳ ಆರೋಪಿಯಾಗಿದ್ದಾನೆ.

ಈತನ ವಿರುದ್ಧ ಈ ಹಿಂದೆಯೂ 2017 ಮತ್ತು 2018ರಲ್ಲಿ ಗೋಕಳ್ಳತನ ಮತ್ತು ಗೋಹತ್ಯೆ ನಿಷೇಧ ಕಾಯಿದೆಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಹಸನಬ್ಬ ಕಳವು ಮಾಡಿದ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ, ತನ್ನ ಮನೆಯಲ್ಲಿಯೇ ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಯ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ, ಆತ ಅಕ್ರಮವಾಗಿ ನಿರ್ಮಿಸಿದ್ದ ಈ ಕಸಾಯಿಖಾನೆಯನ್ನು ಮುಟ್ಟುಗೋಲು (Seizure) ಹಾಕಿಕೊಳ್ಳುವಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ವರದಿಯನ್ನು ಪರಿಗಣಿಸಿದ ಸಹಾಯಕ ಆಯುಕ್ತರು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8(4) ಮತ್ತು 8(5)ರ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

ಸೆಪ್ಟೆಂಬರ್ 25 ರಂದು, ಆರೋಪಿ ಹಸನಬ್ಬನ ವಶದಲ್ಲಿದ್ದ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿಯ ಮನೆ ಸಂಖ್ಯೆ 6-54 ಮತ್ತು 6-54(1)ರ ಮನೆ ಹಾಗೂ ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿ, ಸರ್ಕಾರಿ ವಶಕ್ಕೆ ಪಡೆಯಲಾಗಿದೆ. ಸದ್ಯ ಹಸನಬ್ಬನ ವಿರುದ್ಧ ಗೋ ಸಂರಕ್ಷಣಾ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯಿದೆಗಳ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿ ದಸ್ತಗಿರಿ (arrest) ಮಾಡಲಾಗಿದೆ.

You cannot copy content of this page

Exit mobile version