ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಕೋರ್ಟ್ ತೀರ್ಮಾನಿಸಲಿ, ಆದರೆ ಈ ಹಿಂದೆ ಸಾಹಿತಿ ನಿಸ್ಸಾರ್ ಅಹ್ಮದ್ ಅವರು ಉದ್ಘಾಟಿಸುವುದನ್ನು ಯಾರು ವಿರೋಧಿಸಿರಲಿಲ್ಲ.
ಟಿಪ್ಪು ಸುಲ್ತಾನ್ , ಮಿರ್ಜಾ ಇಸ್ಮಾಯಿಲ್ ಮೆರವಣಿಗೆಗಳನ್ನು ಏಕೆ ವಿರೋಧಿಸಲಿಲ್ಲ. ಬಿಜೆಪಿಯವರು ಬಾನು ಮುಷ್ತಾಕ್ ರವರು ರಾಜಕೀಯ ದುರುದ್ದೇಶದಿಂದ ನಾಡಹಬ್ಬ ಉದ್ಘಾಟಿಸುವುದನ್ನು ವಿರೋಧಿಸುತ್ತಿದ್ದು, ಸರ್ಕಾರ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ. ಬಾನು ಮುಷ್ತಾಕ್ ರವರು ಕನ್ನಡಾಂಬೆಯ ಬಗ್ಗೆ ಹೀಗಳೆದು ಮಾತನಾಡಿರುವ ಬಗ್ಗೆ ಯಾವ ಪುರಾವೆಯಿಲ್ಲ.
ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಬುಕರ್ ಪ್ರಶಸ್ತಿ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಸಾಹಿತಿಗಳಾದ ಬಾನು ಮುಷ್ತಾಕ್ ಹಾಗು ಅನುವಾದಿಸಿದ ದೀಪಾ ಬಸ್ತಿಯವರಿಗೆ ಸನ್ಮಾನಿಸಲಾಗಿದೆ. ಬಾನು ಮುಷ್ತಾಕ್ ರವರು ಕನ್ನಡ ಸಾಹಿತಿಯಾಗಿರುವ ಕಾರಣ ಅವರಿಂದ ದಸರಾವನ್ನು ಉದ್ಘಾಟಿಸಲಾಗುತ್ತಿದೆ ಎಂದರು.
ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ
ಬಾಗಲಕೋಟೆಯ ಮಲ್ಲಪ್ರಭಾ ನದಿ ಹಾಗೂ ವಿಜಯಪುರ ಜಿಲ್ಲೆಯ ಡೋಣಿ ನದಿ ಪ್ರವಾಹಕ್ಕೀಡಾಗಿ ರೈತರಿಗೆ ಹಾನಿಯುಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಒತ್ತಾಯ
ಯುಕೆಪಿ ಹಂತ 3 ಕ್ಕೆ ಸಂಬಂಧಿಸಿದಂತೆ ಕೇಂದ್ರದ ಅಧಿಸೂಚನೆಗೆ ಸಂಬಂಧಪಟ್ಟ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅಧಿಸೂಚನೆಯನ್ನು ಆದಷ್ಟು ಜಾಗೃತೆಯಾಗಿ ಹೊರಡಿಸಲು ಕೇಂದ್ರದ ಮೇಲೆ ಹಲವು ಬಾರಿ ಒತ್ತಡ ಹೇರಲಾಗಿದೆ. ಅಧಿಸೂಚನೆ ಹೊರಡಿಸಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಶಿಫಾರಸ್ಸು
ಇವಿಎಂ ನ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮತದಾನವನ್ನು ತಿರುಚಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಇವಿಎಂ ನ ಗೊಂದಲ ಹಾಗೂ ತಕರಾರುಗಳಿಗೆ ಆಸ್ಪದ ನೀಡದಿರಲು,ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು. ಪ್ರಪಂಚದ ವಿವಿಧ ದೇಶಗಳಲ್ಲಿ ಇವಿಎಂ ವ್ಯವಸ್ಥೆಯನ್ನು ತೊರೆದು, ಪುನ: ಮತಪತ್ರಗಳಿಗೆ ಮೊರೆ ಹೋಗಿವೆ ಎಂದು ತಿಳಿಸಿದರು.