Home ಬೆಂಗಳೂರು BBK12: ಎರಡೇ ವಾರಕ್ಕೆ ‘ಬಿಗ್ ಬಾಸ್’ ಮನೆಗೆ ಬೀಗ; ಸ್ಟುಡಿಯೋ ಸೀಜ್ ಮಾಡಿದ ಅಧಿಕಾರಿಗಳು

BBK12: ಎರಡೇ ವಾರಕ್ಕೆ ‘ಬಿಗ್ ಬಾಸ್’ ಮನೆಗೆ ಬೀಗ; ಸ್ಟುಡಿಯೋ ಸೀಜ್ ಮಾಡಿದ ಅಧಿಕಾರಿಗಳು

0

ಬೆಂಗಳೂರು/ರಾಮನಗರ: ನಟ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ಕಂಟಕ ಇನ್ನೂ ಮುಗಿದಿಲ್ಲ. ಪ್ರಸಾರ ಆರಂಭವಾಗಿ ಕೇವಲ ಎರಡು ವಾರ ಕಳೆಯುವಷ್ಟರಲ್ಲಿ, ಬಿದದಿಯಲ್ಲಿರುವ ಬಿಗ್ ಬಾಸ್ ಸ್ಟುಡಿಯೋ ಆವರಣಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಆದೇಶದ ಮೇರೆಗೆ ಬೀಗ ಜಡಿಯಲಾಗಿದೆ.

‘ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್’ (Jollywood Studios) ಆವರಣದಲ್ಲಿ ಪರಿಸರ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರನ್ನು ಬಳಸುತ್ತಿದ್ದರೂ, ನಿಯಮದ ಪ್ರಕಾರ ಅಗತ್ಯವಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (STP) ನಿರ್ಮಿಸಿಲ್ಲ. ಈ ಕಾರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಟುಡಿಯೋಗೆ ನೋಟಿಸ್ ಕಳುಹಿಸಿತ್ತು.

ನೋಟಿಸ್ ಜಾರಿಯಾದ ಬೆನ್ನಲ್ಲೇ, ಸ್ಟುಡಿಯೋ ಆವರಣದ ಬೆಸ್ಕಾಂ (ವಿದ್ಯುತ್) ಮತ್ತು ನೀರಿನ ಸಂಪರ್ಕಗಳನ್ನು ಸೀಜ್ ಮಾಡಲಾಗಿದೆ ಎನ್ನಲಾಗಿದೆ. ಸ್ಟುಡಿಯೋ ಮಾಲಿಕರು ಮಂಡಳಿಯಿಂದ ಅನುಮತಿಯನ್ನೇ ಪಡೆದಿಲ್ಲ ಎಂಬ ದೂರು ಕೇಳಿಬಂದಿದೆ.

ನೋಟಿಸ್ ಸ್ವೀಕರಿಸಲು ಹಿಂದೇಟು, ನಂತರ ಸೀಜ್

ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ ಸ್ವೀಕರಿಸಲು ಜಾಲಿವುಡ್ ಸ್ಟುಡಿಯೋಸ್‌ನ ಸಿಬ್ಬಂದಿ ಹಿಂದೇಟು ಹಾಕಿದ್ದರು. ಇದರಿಂದಾಗಿ, ತಹಶೀಲ್ದಾರ್ ತೇಜಸ್ವಿನಿ ಸಹಿತ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಶೋ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ತಹಶೀಲ್ದಾರ್ ಅವರು, ಸಂಜೆ 7:30 ರವರೆಗೆ ಸಮಯ ನೀಡಿ, ಆವರಣದಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿ ನಂತರ ಮನೆಯನ್ನು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಎಚ್ಚರಿಕೆಯ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಬಿಗ್ ಬಾಸ್ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಇತ್ತ, ಕಾರ್ಯಕ್ರಮವನ್ನು ನಿಲ್ಲಿಸುವಂತೆ ಒತ್ತಾಯಿಸಿ ಕೆಲವು ಕನ್ನಡಪರ ಸಂಘಟನೆಗಳು, ನಿರ್ದಿಷ್ಟವಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸ್ಟುಡಿಯೋ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಭವಿಷ್ಯದ ಕುರಿತು ಮುಂದಿನ ಕ್ರಮಗಳೇನು ಮತ್ತು ಸ್ಟುಡಿಯೋ ಈ ಬಿಕ್ಕಟ್ಟಿನಿಂದ ಹೇಗೆ ಹೊರಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

You cannot copy content of this page

Exit mobile version