Wednesday, June 19, 2024

ಸತ್ಯ | ನ್ಯಾಯ |ಧರ್ಮ

ಆ ಅಪಪ್ರಚಾರಗಳಿಗೆ ಆಘಾತಗೊಳ್ಳುವ ಮುನ್ನ..

ಬಿಜೆಪಿ ಮೈಂಡ್‌ಸೆಟ್ಟಿನ ಫಲಾನುಭವಿಗಳ ವೀಡಿಯೊಗಳಿಂದ ನಾವು ಹೆಚ್ಚು ಭ್ರಮನಿರಸನಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. Its all in the game!!  ನಾಳೆ ಅನ್ನಭಾಗ್ಯದ ಅಕ್ಕಿಯಲ್ಲಿ ಕಲ್ಲನ್ನೋ, ಮಣ್ಣನ್ನೋ, ಕಳಪೆ ಗುಣಮಟ್ಟವನ್ನೋ ಹುಡುಕುತ್ತಾರೆ; ಉಚಿತ ಕರೆಂಟ್ ಯೋಜನೆಯಲ್ಲಿ ಲೋಡ್‌ಶೆಡ್ಡಿಂಗ್, ಲೋ-ಓಲ್ಟೇಜ್‌ನ ಅನಾನುಕೂಲ ಕಾಣುತ್ತಾರೆ…ಗಿರೀಶ್ ತಾಳಿಕಟ್ಟೆ, ಪತ್ರಕರ್ತರು

ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಗಳ ಪೈಕಿ ಈಗಾಗಲೇ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ನೂಕುನುಗ್ಗಲಾಗುತ್ತಿರುವುದನ್ನೇ ಕೆಲವರು ಈ ಯೋಜನೆಯ ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ಲೇವಡಿ ಮಾಡುತ್ತಿದ್ದಾರೆ. ಅದು ಅವರ ಉದರ ಸಂಕಟಕ್ಕೆ ತಾವೇ ಕಂಡುಕೊಂಡ ತಾತ್ಕಾಲಿಕ ಕೈಮದ್ದು ಅಷ್ಟೇ! ಹೊಸದಾಗಿ ಬಿಡುಗಡೆಯಾದ ಸಿನಿಮಾದ ಥಿಯೇಟರ್ ಮುಂದೆ ಜನಜಂಗುಳಿ ಏರ್ಪಟ್ಟು, ನೂಕುನುಗ್ಗುಲಾದರೆ ಅದನ್ನು ಆ ಸಿನಿಮಾದ ಯಶಸ್ಸು ಅಂತ ಪರಿಗಣಿಸುತ್ತೇವೆಯೇ ವಿನಾ ಸೋಲೆಂದು ಯಾರೂ ವ್ಯಾಖ್ಯಾನಿಸುವುದಿಲ್ಲ. ಈ ಅರ್ಥದಲ್ಲಿ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಗಳಿಸಿದೆ. ಆ ಯಶಸ್ಸಿನ ಬೇನೆ ತಾಳದವರು ಮೊಸರಲ್ಲಿ ಕಲ್ಲು ಹುಡುಕಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. 

ಇಂತಹ ಲೇವಡಿಶೂರರು, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಫಲಾನುಭವಿ ಮಹಿಳೆಯರೇ ತಮಗೆ ಸೀಟು ಸಿಗದಿದ್ದಕ್ಕೋ, ಬಸ್‌ನಲ್ಲಿ ಜಾಗ ಸಿಗದಿದ್ದಕ್ಕೋ, ಅಥವಾ ಏನೋ ಒಂದು ಅನ್‌ಕಂಫರ್ಟಬಲಿಟಿಯ ಸಲುವಾಗಿಯೋ (ಪಕ್ಕದವರ ಬೆವರು ವಾಸನೆ ಸಹಿಸಿಕೊಳ್ಳದೆಯೂ!!) ಅಥವಾ ದುರುದ್ದೇಶದ ಪ್ರಚೋದನೆಗಳಿಗೆ ಒಳಗಾಗಿಯೋ  ಕಾಂಗ್ರೆಸ್ ಸರ್ಕಾರವನ್ನು ಅಥವಾ ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುತ್ತಿರುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಅದು ದೊಡ್ಡ ಮುಖಭಂಗ ಎನ್ನುವಂತೆ ಒಕ್ಕಣೆ ಬರೆಯುತ್ತಿದ್ದಾರೆ. ಅದನ್ನು ನೋಡಿದ ಕೆಲವು ಜಾತ್ಯತೀತ, ಪ್ರಗತಿಪರ, ಕೋಮುವಾದ ವಿರೋಧಿ ಒಡನಾಡಿಗಳು “ಈ ಜನಕ್ಕೆ ಸರಿ ಯಾವ್ದು ತಪ್ಪು ಯಾವ್ದು ಅಂತ ಗೊತ್ತಾಗ್ತಾ ಇಲ್ಲವಾ? ಮನೆಹಾಳರ ಪ್ರಚೋದನೆಗೆ ಬಲಿಯಾಗಿ ಉಪಕಾರ ಮಾಡಿದವರನ್ನೇ ನಿಂದಿಸುತ್ತಾರಲ್ಲ,” ಎಂದು ಭ್ರಮನಿರಸನಕ್ಕೆ ಒಳಗಾಗುತ್ತಿದ್ದಾರೆ. 

ವಾಸ್ತವದಲ್ಲಿ ಫಲಾನುಭವಿಗಳೆನಿಸಿಕೊಂಡವರಿಂದ ಬರುವ ಇಂತಹ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಜರೂರತ್ತಿಲ್ಲ. ಒಂದು ಸಣ್ಣ ಅಂಕಿಅಂಶದ ಲೆಕ್ಕಾಚಾರ ಗಮನಿಸೋಣ. ಈ ಸಲದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಕಾಂಗ್ರೆಸ್ 1 ಕೋಟಿ 60 ಲಕ್ಷ ಮತ ಗಳಿಸಿದ್ದರೆ, ಬಿಜೆಪಿ 1 ಕೋಟಿ 40 ಲಕ್ಷ ಮತ ಗಳಿಸಿದೆ. ಅಷ್ಟೆಲ್ಲಾ ಭ್ರಷ್ಟಾಚಾರ, ದುರಾಡಳಿತ, ಅವ್ಯವಸ್ಥೆ, ಅರಾಜಕತೆಯ ಹೊರತಾಗಿಯೂ ಬಿಜೆಪಿಗೆ ಮತ ಹಾಕಿದ 1 ಕೋಟಿ 40 ಲಕ್ಷ ಮತದಾರರಿದ್ದಾರಲ್ಲ ಅವರು ಬಿಜೆಪಿಗೆ ಕೇವಲ ತಮ್ಮ ಮತ ಹಾಕಿಲ್ಲ, ಆ ಪಕ್ಷದ ಸಿದ್ಧಾಂತದೊಟ್ಟಿಗೂ ತಮ್ಮ ಮನಸ್ಥಿತಿಯನ್ನು ಸಮೀಕರಿಸಿಕೊಂಡೇ ಓಟು ಮಾಡಿದಂತವರು (ಪ್ರೇರಣೆ ಬೇರೆಬೇರೆ ಇರಬಹುದು). ಇಂತವರು ತಾವು ಹಾಕಿದ ಮತವನ್ನು ಸಮರ್ಥಿಸಿಕೊಳ್ಳಲಿಕ್ಕಾದರೂ ಕಾಂಗ್ರೆಸ್ ಅನ್ನು ವಿರೋಧಿಸುತ್ತಾರೆ, ಅದು ಜಾರಿಗೆ ತರುವ ಯೋಜನೆಗಳನ್ನು ಬಿಜೆಪಿಯ ನಾಯಕರ ನೋಟದ ಮೂಲಕವೇ ಸ್ವೀಕರಿಸುತ್ತಾರೆ. ಅಂತಹ ನೋಟವನ್ನು ಅವರ ತಲೆಗೆ ತುಂಬಲು ಹೇಗೂ ನಮ್ಮ ಮೀಡಿಯಾಗಳು, ಸೋಶಿಯಲ್ ಮೀಡಿಯಾ ಅಣಿಯಾಗಿ ಕೂತಿದೆ. ಅಂತವರು ಸಹಜವಾಗಿಯೇ ಫಲಾನುಭವಿಗಳ ಸೋಗಿನಲ್ಲಿ, ಕಾಂಗ್ರೆಸ್ ಅನ್ನು ಅಥವಾ ಸಿಎಂ ಸಿದ್ದರಾಮಯ್ಯನವರನ್ನು ಅಥವಾ ರಾಹುಲ್, ಡಿಕೇಶಿ, ಖರ್ಗೆಯವರನ್ನೂ ಟೀಕಿಸುತ್ತಾರೆ. ಅಷ್ಟೆ!

ಅದರಾಚೆಗೆ, ಅಂತಹ ಬಿಜೆಪಿ ಮೈಂಡ್‌ಸೆಟ್ಟಿನ ಫಲಾನುಭವಿಗಳ ವೀಡಿಯೊಗಳಿಂದ ನಾವು ಹೆಚ್ಚು ಭ್ರಮನಿರಸನಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. Its all in the game!!  ನಾಳೆ ಅನ್ನಭಾಗ್ಯದ ಅಕ್ಕಿಯಲ್ಲಿ ಕಲ್ಲನ್ನೋ, ಮಣ್ಣನ್ನೋ, ಕಳಪೆ ಗುಣಮಟ್ಟವನ್ನೋ ಹುಡುಕುತ್ತಾರೆ; ಉಚಿತ ಕರೆಂಟ್ ಯೋಜನೆಯಲ್ಲಿ ಲೋಡ್‌ಶೆಡ್ಡಿಂಗ್, ಲೋ-ಓಲ್ಟೇಜ್‌ನ ಅನಾನುಕೂಲ ಕಾಣುತ್ತಾರೆ… ಹೀಗೆ ಸಾಗುತ್ತಲೇ ಇರುತ್ತದೆ.

ಅಂದಹಾಗೆ, ಹೀಗೆ ಟೀಕಿಸುವವರಾರೂ ‘ನಮಗೆ ಈ ಯೋಜನೆಗಳು ಬೇಡ’ ಅಂತ ತಿರಸ್ಕರಿಸುವುದಿಲ್ಲ, they will be the first line benefeciaries!

ಅದಕ್ಕೂ ಅವರು ಕೊಡುವ ಸಮಜಾಯಿಷಿ ಹೇಗಿರುತ್ತೆ ಗೊತ್ತಾ? “ಸಿದ್ರಾಮಯ್ಯ ಏನು ಅವನ ಮನೆಯಿಂದ ತಂದು ಕೊಡ್ತಾನಾ, ಇದು ನಮ್ಮದೇ ತೆರಿಗೆ ದುಡ್ಡು, ನಾವ್ಯಾಕೆ ಬೇಡ ಅನ್ನಬೇಕು!!”  

ನಮ್ಮ ಜನ ಅಂದ್ರೆ ಸುಮ್ನೇನಾ….

ಹಾಗೊಂದು ವೇಳೆ ನಾವು ಆಘಾತಗೊಳ್ಳಲೇಬೇಕಿದ್ದರೆ, ಅದು ಇಂಥಾ ವಿಚಾರಗಳಿಗಲ್ಲ, ಬದಲಿಗೆ ಈಗ ಸ್ಪೀಕರ್ ಯು.ಟಿ. ಖಾದರ್  ಮಾಡಿಕೊಂಡಿರುವ ಯಡವಟ್ಟುಗಳಂತಹ ವಿಚಾರಗಳಿಗೆ…..

ಗಿರೀಶ್ ತಾಳಿಕಟ್ಟೆ

ಪತ್ರಕರ್ತರು

ಇದನ್ನೂ ಓದಿ ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

Related Articles

ಇತ್ತೀಚಿನ ಸುದ್ದಿಗಳು