Tuesday, May 7, 2024

ಸತ್ಯ | ನ್ಯಾಯ |ಧರ್ಮ

ಆ ಇಸ್ರೋ ತಂತ್ರಜ್ಞರನ್ನು ದೂಷಿಸುವ ಮುನ್ನ..

ಇವತ್ತು ಶಿಕ್ಷಣವನ್ನು ನಾವು ಕ್ಯಾಪಿಟಲೈಸ್ಡ್ ಉದ್ಯಮವಾಗಿ ರೂಪಾಂತರಿಸಿರುವುದರಿಂದ ಇಡೀ ಶಿಕ್ಷಣ ವ್ಯವಸ್ಥೆ ಅಕ್ಷರಗಳನ್ನು ಕಲಿಸುವ, ಮಾರ್ಕ್ಸುಗಳನ್ನು ಉತ್ಪಾದಿಸುವ, ಡಿಗ್ರಿ ಸರ್ಟಿಫಿಕೇಟುಗಳನ್ನು ಹೊರಚೆಲ್ಲುವ ಯಾಂತ್ರಿಕ ಡ್ರೈನೇಜ್‌ನಂತಾಗಿದೆಯೇ ಹೊರತು ಅಲ್ಲಿ ಜ್ಞಾನದ ವಾಹಿನಿ ಕಾಣಿಸುತ್ತಿಲ್ಲ. ಇಂಥಾ ಶಿಕ್ಷಣ ವ್ಯವಸ್ಥೆಯಿಂದ ಹೊರಬರುವ ತಂತ್ರಜ್ಞಾನಿಗಳ ತಲೆಯಲ್ಲಿ ಸೈನ್ಸ್ ಇರುತ್ತದೆಯೇ ಹೊರತು ಸೆನ್ಸ್ ಇರುವುದಿಲ್ಲ – ಗಿರೀಶ್ ತಾಳಿಕಟ್ಟೆ, ಪತ್ರಕರ್ತರು.

ಚಂದ್ರಯಾನ-3 ಉಡ್ಡಯನ ಕೈಗೊಳ್ಳುವ ಮುನ್ನ ಒಂದಷ್ಟು ಇಸ್ರೋ ವೈದಿಕರು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದನ್ನು ನಮ್ಮ ಪ್ರಗತಿಪರ ವಲಯ ತೀಕ್ಷ್ಣವಾಗಿ ಟೀಕಿಸುತ್ತಿದೆ. ’ವಿಜ್ಞಾನಿಗಳು ಹೀಗೆ ವರ್ತಿಸಬಹುದೇ?’ ಎಂಬುದು ಅವರ ಆಘಾತಕ್ಕೆ ಮೂಲ ಕಾರಣ. ಹಾಗಾದರೆ, ಪಾಪ ನಮ್ಮ ವಿಜ್ಞಾನಿಗಳಿಗೆ ಮುಠ್ಠಾಳರಾಗುವ ಅರ್ಹತೆಯಿಲ್ಲವೇ? ಅಥವಾ ಅಷ್ಟೊಂದು ಅವಕಾಶವಂಚಿತರೇ? ನಾವು ವಿಜ್ಞಾನದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹೊಂದಿದ್ದೇವೆ. ಹಾಗಾಗಿ ವಿಜ್ಞಾನಿಗಳ ಪೂಜೆ ಪುನಸ್ಕಾರಗಳು ನಮ್ಮನ್ನು ಆಘಾತಕ್ಕೆ ತಳ್ಳುತ್ತಿವೆ.

ವಿಜ್ಞಾನವು ನಮಗೆ ತಾಂತ್ರಿಕತೆಯನ್ನು ಕಲಿಸುತ್ತದೆಯೇ ವಿನಾಃ ವಿಚಾರವಂತಿಕೆಯನ್ನಲ್ಲ. ವೈಚಾರಿಕತೆಯನ್ನು ಕಲಿಸುವುದು ಒಟ್ಟಾರೆ ಶಿಕ್ಷಣ. ಆ ಶಿಕ್ಷಣದಲ್ಲಿ ವಿಜ್ಞಾನವೂ ಒಂದು ಭಾಗವಷ್ಟೆ. ಆದರೆ ಇವತ್ತು ಶಿಕ್ಷಣವನ್ನು ನಾವು ಕ್ಯಾಪಿಟಲೈಸ್ಡ್ ಉದ್ಯಮವಾಗಿ ರೂಪಾಂತರಿಸಿರುವುದರಿಂದ ಇಡೀ ಶಿಕ್ಷಣ ವ್ಯವಸ್ಥೆ ಅಕ್ಷರಗಳನ್ನು ಕಲಿಸುವ, ಮಾರ್ಕ್ಸುಗಳನ್ನು ಉತ್ಪಾದಿಸುವ, ಡಿಗ್ರಿ ಸರ್ಟಿಫಿಕೇಟುಗಳನ್ನು ಹೊರಚೆಲ್ಲುವ ಯಾಂತ್ರಿಕ ಡ್ರೈನೇಜ್‌ನಂತಾಗಿದೆಯೇ ಹೊರತು ಅಲ್ಲಿ ಜ್ಞಾನದ ವಾಹಿನಿ ಕಾಣಿಸುತ್ತಿಲ್ಲ. ಇಂಥಾ ಶಿಕ್ಷಣ ವ್ಯವಸ್ಥೆಯಿಂದ ಹೊರಬರುವ ತಂತ್ರಜ್ಞಾನಿಗಳ ತಲೆಯಲ್ಲಿ ಸೈನ್ಸ್ ಇರುತ್ತದೆಯೇ ಹೊರತು ಸೆನ್ಸ್ ಇರುವುದಿಲ್ಲ. 

ಇಸ್ರೋ ವಿಜ್ಞಾನಿಗಳ ದೇವಸ್ಥಾನ ಭೇಟಿ

ನಮಗೆ ಸಿಕ್ಕ ಅಕ್ಷರತೆಯನ್ನು ಜ್ಞಾನವಾಗಿ ಪರಿವರ್ತಿಸಿಕೊಂಡವರಲ್ಲಿ ನಾವು ವೈಚಾರಿಕತೆಯನ್ನು ಕಾಣಬಹುದು. ಅದು ಕೇವಲ ವಿಜ್ಞಾನದ ಶಾಖೆಯಿಂದ ಮಾತ್ರವಲ್ಲ, ಶಿಕ್ಷಣದ ಯಾವುದೇ ಶಾಖೆಯಿಂದ ಅಕ್ಷರತೆಯನ್ನು ಸಂಪಾದಿಸಿಕೊಂಡವರಿಗೂ ಸಾಧ್ಯ. ಇಲ್ಲವೆಂದಾದರೆ ವಿಜ್ಞಾನ ಶಾಖೆಯವರನ್ನು ಹೊರತುಪಡಿಸಿ ಬೇರಾರಲ್ಲೂ ವಿಚಾರವಂತಿಕೆಯೇ ಇರಲು ಸಾಧ್ಯವಿರಲಿಲ್ಲ. ವಿಚಾರವಂತಿಕೆಯೆನ್ನುವುದು  acquired knowledge! Academic knowledge ಅಲ್ಲ. ಇದು ಕೇವಲ ಇಸ್ರೋ ತಂತ್ರಜ್ಞರಿಗಷ್ಟೇ ಅಲ್ಲ, ನಮ್ಮ ದೇಹವನ್ನು ಹೊಕ್ಕು ಹೊರಬರುವ ವೈದ್ಯಕೀಯ ಕ್ಷೇತ್ರದವರಿಗೂ ಅನ್ವಯಿಸುತ್ತದೆ. ಪ್ರತಿ ಆಸ್ಪತ್ರೆಯ ರಿಸೆಪ್ಶ ನಿಸ್ಟ್ ಅಂಗಳದಲ್ಲಿ ಆಯಾ ಧರ್ಮಕ್ಕೆ ಸಂಬಂಧಿಸಿದ ಒಂದು ದೇವರ ಆವರಣವಿರುತ್ತದೆ. ಅಲ್ಲಿ ನಿಯಮಿತವಾಗಿ ಪೂಜೆಗಳೂ ನಡೆಯುತ್ತಿರುತ್ತವೆ. ಅದನ್ನೆಲ್ಲ ನೋಡಿ ಅರಗಿಸಿಕೊಂಡ ನಾವು, ಪಾಪಾ ಈ ಇಸ್ರೋ ವೈದಿಕರ ಅವಾಂತರಕ್ಕೆ ದಂಗು ಬಡಿಯುವ ಅವಶ್ಯಕತೆಯಾದರೂ ಯಾಕೆ?

ಶಿಕ್ಷಣದ ಒಂದು ಶಾಖೆಯಾದ ವಿಜ್ಞಾನಕ್ಕೂ ವೈಚಾರಿಕತೆಗೂ ಹತ್ತಿರದ ನಂಟು ಇರಬಹುದಾದರೂ, ಅವುಗಳನ್ನು ಒಂದಕ್ಕೊಂದು ಅನ್ವರ್ಥದಂತೆ ಪರಿಭಾವಿಸುವುದೇ ತಪ್ಪು. ಜಗತ್ತಿಗೆ ಚಲನೆಯ ನಿಯಮಗಳನ್ನು ಕೊಟ್ಟಂತಹ ಸರ್ ಐಸಾಕ್ ನ್ಯೂಟನ್‌ನಂತಹ ವಿಜ್ಞಾನಿಯೇ “ಸೂರ್ಯ, ಗ್ರಹಗಳು ಮತ್ತು ಉಲ್ಕೆಗಳನ್ನು ಒಳಗೊಂಡ ಈ ಸುಂದರ ವ್ಯವಸ್ಥೆಯನ್ನು, ಒಂದು ಬುದ್ಧಿವಂತ ಹಾಗೂ ಶಕ್ತಿಶಾಲಿಯಾದ ಅಸ್ತಿತ್ವ ಮಾತ್ರ ನಿಭಾಯಿಸಿ, ನಿರ್ವಹಿಸಿ ಮುಂದುವರೆಸಿಕೊಂಡು ಹೋಗಲು ಸಾಧ್ಯ ಎಂದು ತನ್ನ `Philosophiæ Naturalis Principia Mathematica’  ಕೃತಿಯಲ್ಲಿ ಹೇಳಿದ್ದಾನೆ. ನಮ್ಮ ಜನ ಸಹಜಭಾಷೆಯಲ್ಲಿ ’ಕಾಣದ ಒಂದು ಶಕ್ತಿ ಈ ಜಗತ್ತನ್ನು ಕಾಯುತ್ತಿದೆ’ ಎಂದು ಹೇಳುವುದನ್ನೇ ಆತ ಸೂರ್ಯ, ಗ್ರಹ, ಉಲ್ಕೆ ಎಂಬ ತನ್ನ ವಿಜ್ಞಾನದ ಪರಿಕರಗಳನ್ನು ಬಳಸಿಕೊಂಡು ಹೇಳಿದ್ದಾನೆ ಅಷ್ಟೆ. 

ವಿಜ್ಞಾನವು ಸತ್ಯವನ್ನು ಹುಡುಕುತ್ತಾ ಹೋಗುತ್ತದೆ. ಮುಂದಕ್ಕೆ ಸತ್ಯಶೋಧನೆ ಸಾಧ್ಯವಿಲ್ಲ ಎಂಬ ತಾತ್ಕಾಲಿಕ ನಿಲುಗಡೆಗೆ ಬಂದು ನಿಂತಾಗ, nothing ಅನ್ನು ನಂಬದ ವಿಜ್ಞಾನಿಗಳು something ಸಿದ್ಧಾಂತದತ್ತ ಸರಿಯುತ್ತಾರೆ. ನಾನಿಲ್ಲಿ ಹೇಳುತ್ತಿರುವುದು ವಿಜ್ಞಾನ ಕಲಿಸುವ ಭೌತಿಕವಾದದತ್ತ ಕುತೂಹಲಭರಿತರಾಗಿ ಆಳವಾದ ಸಂಶೋಧನೆಯಲ್ಲಿ ತೊಡಗಿಕೊಂಡ ವಿಜ್ಞಾನಿಗಳ ವಿಚಾರ. ಅಂತವರೇ ಕಟ್ಟಕಡೆಗೆ something ಸಿದ್ಧಾಂತಕ್ಕೆ ಬಂದು ನಿಲ್ಲುವಾಗ, ಅಂಕಿ-ಅಂಶ-ತಂತ್ರ-ಯಂತ್ರ-ಸಮೀಕರಣ-ಸೂತ್ರ ಎಂಬ ತಂತುಗಳಿಗಷ್ಟೇ ಜೋತುಬಿದ್ದ ಲಕ್ಷಾಂತರ ಸಂಬಳದ career ರೂಪಿಸಿಕೊಂಡ ಇಂಥಾ ಗೊಂದಲೇಶ್ವರರು ತಿರುಪತಿ ತಿಮ್ಮಪ್ಪನಿಗೂ ಅಡ್ಡಬೀಳುತ್ತಾರೆ, ಓಣಿಯ ಚೌಡವ್ವನಿಗೂ ಬಲಿ ಕೊಡುತ್ತಾರೆ! 

ಇಂಥಾ ತಂತ್ರಜ್ಞರು ರಾಕೆಟ್ ಒಂದು, ಭೂಮಿಯ ಗುರುತ್ವ ಸೆಳೆತವನ್ನು ಬಿಡಿಸಿಕೊಂಡು ನಭಕ್ಕೆ ಚಿಮ್ಮಲು ಬೇಕಾದ escape velocityಯನ್ನು ನಿರೂಪಿಸಬಲ್ಲರೇ ವಿನಾ, ತನ್ನ ಸುತ್ತಲಿನ ವಾತಾವರಣದಲ್ಲಿ ದಟ್ಟೈಸಿರುವ ಮೌಢ್ಯ ಮತ್ತು ಹುನ್ನಾರಗಳಿಂದ ತಮ್ಮನ್ನು ತಾವು escape ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ. ಯಾಕೆಂದರೆ ಅವುಗಳಿಂದ  ನಾವು escape ಆಗಬೇಕಾದರೆ, ನಮ್ಮಲ್ಲಿ ವಿಚಾರವಂತಿಕೆಯಿರಬೇಕು. ಇವತ್ತಿನ ಮೌಲ್ಯರಹಿತ ಶಿಕ್ಷಣವ್ಯವಸ್ಥೆ ಲಕ್ಷಾಂತರ ಸಂಬಳ ತರುವ career ರೂಪಿಸಿಕೊಳ್ಳಲು ಬೇಕಾದ requirementಗಳನ್ನು ಕಲಿಸುತ್ತಿದೆಯೇ ಹೊರತು ವಿಚಾರವಂತಿಕೆಯನ್ನು ರೂಢಿಸಿಕೊಳ್ಳಲು ಬೇಕಾದ ಚಿಂತನೆಯ ಜ್ಞಾನವನ್ನಲ್ಲ.

ವಿಜ್ಞಾನದ ಶಾಖೆಯಿಂದ ಹೊರಬರುವ ಈ ತಂತ್ರಜ್ಞರು ಅತಿಮಾನವರು ಎಂಬ ಭ್ರಮೆಯನ್ನು ನಾವು ತೊರೆದಾಗ ಹಾಗೂ ಅವರು ಕೂಡಾ ನಮ್ಮಂತೆಯೇ ಈ ಮೌಲ್ಯರಹಿತ ಶಿಕ್ಷಣ ವ್ಯವಸ್ಥೆಯಿಂದಲೇ ಹೊರಬಂದವರು ಎಂಬ ವಾಸ್ತವ ಅರಿತಾಗ, ಅನವಶ್ಯಕವಾಗಿ ಹೀಗೆ ಆಘಾತಗೊಳ್ಳುವ ಸಂಭವಗಳಾದರೂ ಕಮ್ಮಿಯಾಗುತ್ತವೆ. ಯಾಕೆಂದರೆ, ನಾವು ನಿಜಕ್ಕೂ ಆಘಾತಗೊಳ್ಳಬೇಕಾದ ಸಂಗತಿಗಳು ಬೇರೆಯದೇ ಬಹಳಷ್ಟಿವೆ….

ಗಿರೀಶ್ ತಾಳಿಕಟ್ಟೆ

ಪತ್ರಕರ್ತರು

ಇದನ್ನೂ ಓದಿ- 2023-24 ಬಜೆಟ್‍ | ಐದು ಗ್ಯಾರಂಟಿಗಳನ್ನು ಗ್ಯಾರಂಟಿಗೊಳಿಸುವ ಬಜೆಟ್

Related Articles

ಇತ್ತೀಚಿನ ಸುದ್ದಿಗಳು