ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಬುಧವಾರ ಮಧ್ಯಾಹ್ನ ನಿವೃತ್ತ ಸೈನಿಕ ಹಾಗೂ ಅವರ ಮಗಳನ್ನು ಮಚ್ಚು ಮತ್ತು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿವೃತ್ತ ಸೈನಿಕ ರುದ್ರಪ್ಪ ಕುಂದರಗಿ (67) ಮತ್ತು ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದ ದುರ್ದೈವಿಗಳು.
ಪೊಲೀಸರ ಮಾಹಿತಿ ಪ್ರಕಾರ, ಪೂರ್ವಜರ ಆಸ್ತಿ ಭಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ರುದ್ರಪ್ಪ ಅವರು ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಅವರಾದಿ ಗ್ರಾಮ ಪಂಚಾಯತ್ ಕಚೇರಿಗೆ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಬಸಪ್ಪನ ಮಗ ಮಡಿವಾಳಪ್ಪ ಮಾರಕಾಸ್ತ್ರಗಳೊಂದಿಗೆ ಪಂಚಾಯತ್ ಕಚೇರಿಗೆ ನುಗ್ಗಿದ್ದಾರೆ.
ಅಧಿಕಾರಿಗಳ ಸಮ್ಮುಖದಲ್ಲೇ ರುದ್ರಪ್ಪ ಅವರ ಮೇಲೆ ಕೊಡಲಿ ಮತ್ತು ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಮಗಳು ಶಶಿಕಲಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಕಾರು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬದಲ್ಲಿ 38 ಗುಂಟೆ ಜಮೀನಿನ ವಿಚಾರವಾಗಿ ದೀರ್ಘಕಾಲದಿಂದ ವ್ಯಾಜ್ಯವಿತ್ತು. ನ್ಯಾಯಾಲಯವು ಮೂವರು ಸಹೋದರರಿಗೆ ಸಮಾನವಾಗಿ ಜಮೀನು ಹಂಚಿಕೆ ಮಾಡಲು ಆದೇಶಿಸಿತ್ತಾದರೂ, ರುದ್ರಪ್ಪ ಅವರು ಈಗಾಗಲೇ ತಮ್ಮ ಪಾಲಿನ ಜಮೀನನ್ನು ಮಾರಾಟ ಮಾಡಿದ್ದು, ಉಳಿದ ಜಮೀನಿನಲ್ಲೂ ಪಾಲು ಕೇಳುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಘ
ಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಆಸ್ತಿ ಕಲಹದ ಹಿನ್ನೆಲೆಯಲ್ಲಿ ಸಹೋದರರು ಮತ್ತು ಸೋದರಳಿಯನೇ ಸೇರಿ ಈ ಜೋಡಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
