Home ಅಪಘಾತ ಬೆಳಗಾವಿ: ಹಳೇ ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ,...

ಬೆಳಗಾವಿ: ಹಳೇ ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ, ಇಬ್ಬರಿಗೆ ಗಂಭೀರ ಗಾಯ

0

ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಚಾವಟ್ ಗಲ್ಲಿಯ ಹಳೆಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ರೆಫ್ರಿಜರೇಟರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ನಗರದಲ್ಲಿ ಗಣೇಶ ಚತುರ್ಥಿ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಸ್ಫೋಟದ ಸದ್ದು ಕೇಳಿ ಸ್ಥಳೀಯರು ಮೊದಲು ಪಟಾಕಿ ಸಿಡಿತ ಇರಬಹುದೆಂದು ಭಾವಿಸಿದ್ದರು. ರೆಫ್ರಿಜರೇಟರ್ ಸ್ಫೋಟಗೊಂಡ ತಕ್ಷಣ ಹಳೆಯ ಮನೆಗೆ ಬೆಂಕಿ ಆವರಿಸಿಕೊಂಡಿದ್ದರಿಂದ ಕುಟುಂಬದ ಸದಸ್ಯರು ಮನೆಯೊಳಗೆ ಸಿಲುಕಿಕೊಂಡರು. ಬೆಂಕಿಯ ಜ್ವಾಲೆಗೆ ಸಿಲುಕಿ ನಾಲ್ವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಮೃತರನ್ನು ಗಜಾನನ ಧಮೋನೆ (65), ರೋಷನ್ ಧಮೋನೆ (21), ಶಾರದಾ ಧಮೋನೆ (45) ಮತ್ತು ಭಾರತಿ ಧಮೋನೆ (45) ಎಂದು ಗುರುತಿಸಲಾಗಿದೆ. ಪ್ರಿಯಾ ಧಮೋನೆ ಮತ್ತು ಗಂಗಾ ಧಮೋನೆ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಧಮೋನೆ ಕುಟುಂಬವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ರೆಫ್ರಿಜರೇಟರ್ ಸ್ಫೋಟಗೊಂಡ ಸಂದರ್ಭದಲ್ಲಿ ಕುಟುಂಬದ ಆರೂ ಸದಸ್ಯರು ಮನೆಯಲ್ಲೇ ಇದ್ದರು.

ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version