ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರೊಫೆಸರ್ ಒಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ವಿಡಿಯೋವನ್ನು ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಈ ವಿಷಯದಲ್ಲಿ 3 ದಿನಗಳ ಒಳಗೆ ಸಮಗ್ರ ವರದಿ ನೀಡುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಆಯೋಗ ಸೂಚಿಸಿದೆ ಎಂದು ಆಯೋಗದ ಅಧ್ಯಕ್ಷೆ ಲತಾ ಗುಪ್ತಾ ಮಾಹಿತಿ ನೀಡಿದ್ದಾರೆ.
ದೆಹಲಿ ಮಹಿಳಾ ಆಯೋಗ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೆಎನ್‌ಯುನ 10–11 ವಿದ್ಯಾರ್ಥಿನಿಯರು ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರೂ, ಈವರೆಗೆ ಅವರ ದೂರಿನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಯೊಬ್ಬರು ವಿಡಿಯೋ ಮಾಡಿ ಆರೋಪಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಸೂಕ್ತ ಕ್ರಮ ಕೈಗೊಳ್ಳುವ ಬದಲು ಪ್ರೊಫೆಸರ್ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಆ ವಿದ್ಯಾರ್ಥಿ ದೂರಿದ್ದಾರೆ.
ವಿದ್ಯಾರ್ಥಿನಿಯ ಪ್ರಕಾರ, ಈ ವಿಷಯವು ಮೇ ತಿಂಗಳಲ್ಲೇ ಬೆಳಕಿಗೆ ಬಂದಿದ್ದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಈ ಆರೋಪಗಳನ್ನು ಗಮನಿಸಿರುವ ಆಯೋಗ, ಇವುಗಳನ್ನು ಅಂತಿಮ ಸತ್ಯವೆಂದು ಪರಿಗಣಿಸದೆ, ವಾಸ್ತವ ತಿಳಿಯಲು ಜೆಎನ್‌ಯು ಆಡಳಿತದಿಂದ ವಾಸ್ತವಾಂಶ ವರದಿ ಕೇಳಿದೆ.
ಜೆಎನ್‌ಯು ಉಪಕುಲಪತಿಗಳಿಗೆ ನೋಟಿಸ್ ಜಾರಿ ಮಾಡಿರುವ ಆಯೋಗವು, ವಿದ್ಯಾರ್ಥಿಗಳು ಉಲ್ಲೇಖಿಸಿರುವ ದೂರಿನ ಮೇಲೆ ಕೈಗೊಂಡ ಕ್ರಮಗಳ ವಿವರಗಳನ್ನು ಕೋರಿದೆ. ಈ ದೂರನ್ನು ‘ಪೋಶ್’ (POSH) ಕಾಯ್ದೆಯಡಿ ರಚಿಸಲಾದ ಆಂತರಿಕ ದೂರುಗಳ ಸಮಿತಿಗೆ (ICC) ರವಾನಿಸಲಾಗಿದೆಯೇ ಮತ್ತು ಹಾಗಿದ್ದಲ್ಲಿ ಸಮಿತಿಯು ತೆಗೆದುಕೊಂಡ ಕ್ರಮಗಳೇನು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವಂತೆ ಸೂಚಿಸಿದೆ.
ಇದರೊಂದಿಗೆ ತನಿಖೆಯ ಪ್ರಸ್ತುತ ಸ್ಥಿತಿಗತಿ ಹಾಗೂ ವಿಶ್ವವಿದ್ಯಾಲಯ ಅಥವಾ ಐಸಿಸಿ ಕೈಗೊಂಡ ಕ್ರಮಗಳ ವಿವರಗಳನ್ನು ಕೋರಲಾಗಿದೆ. ಅಗತ್ಯ ಮಾಹಿತಿಗಳೊಂದಿಗೆ ಕ್ರಿಯಾ ವರದಿ ಸಲ್ಲಿಸುವಂತೆ ಜೆಎನ್‌ಯುಗೆ ನಿರ್ದೇಶನ ನೀಡಲಾಗಿದ್ದು, ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ಸ್ಪಷ್ಟಪಡಿಸುವಂತೆ ತಿಳಿಸಲಾಗಿದೆ. ಮುಂದಿನ ಮೂರು ದಿನಗಳ ಒಳಗೆ ಈ ಕ್ರಿಯಾ ವರದಿಯನ್ನು ಸಲ್ಲಿಸುವಂತೆ ಆಯೋಗವು ಜೆಎನ್‌ಯು ಆಡಳಿತಕ್ಕೆ ಗಡುವು ವಿಧಿಸಿದೆ.
