ಚಾಟ್‌ಜಿಪಿಟಿಯ ವೈರಲ್ ‘80ರ ದಶಕದ ಎಐ ಚಿತ್ರ ಮತ್ತು ವಿಡಿಯೋ ಟ್ರೆಂಡ್’ ಇದೀಗ ಭಾರತದ ರಾಜಕೀಯದಲ್ಲಿ ಪರಸ್ಪರ ಕೆಸರೆರಚಾಟದ ಅಸ್ತ್ರವಾಗಿ ಮಾರ್ಪಟ್ಟಿದೆ. ಹಳೆಯ ನೆನಪುಗಳನ್ನು ಮೆಲಕು ಹಾಕುವ ನಿರುಪದ್ರವಿ ಟ್ರೆಂಡ್ ಆಗಿ ಆರಂಭವಾದ ಈ ಬೆಳವಣಿಗೆ, ಲಿಂಗಾಧಾರಿತ ಪ್ರಾದೇಶಿಕ ಪೂರ್ವಾಗ್ರಹಗಳು ಮತ್ತು ಮಹಿಳೆಯರ ಮೇಲಿನ ವೈಯಕ್ತಿಕ ತೇಜೋವಧೆಗೆ ದಾರಿಯಾಗಿ ವಿಕೋಪಕ್ಕೆ ತಿರುಗಿದೆ. ಆಧುನಿಕ ಸೆಲ್ಫಿಗಳನ್ನು 1980ರ ದಶಕದ ಫಿಲ್ಮ್ ಕ್ಯಾಮೆರಾ ಶೈಲಿಯ ಫೋಟೋಗಳನ್ನಾಗಿ ಬದಲಾಯಿಸುವ ಈ ಆನ್‌ಲೈನ್ ಟ್ರೆಂಡ್ ಅನ್ನು ರಾಜಕೀಯ ಪಕ್ಷಗಳು ತಮ್ಮ ಬದ್ಧವೈರಿಗಳ ವಿರುದ್ಧ ಅಣಕ ಮತ್ತು ಚಾರಿತ್ರ್ಯಹನನದ ಹಂತಕ್ಕೆ ದುರುಪಯೋಗಪಡಿಸಿಕೊಂಡಿವೆ.
ಈ ಮೀಮ್ ಸಮರದಲ್ಲಿ ಮೊದಲು ಹೆಜ್ಜೆಯಿಟ್ಟ ಕಾಂಗ್ರೆಸ್ ಕೇರಳ ಸಾಮಾಜಿಕ ಮಾಧ್ಯಮ ಘಟಕ, ಹಿರಿಯ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿತ್ತು. ಒಂದು ಪೋಸ್ಟ್‌ನಲ್ಲಿ, ಬಾಲಿವುಡ್‌ನ ಖಳನಾಯಕ ‘ತೂತಿ ಶಾ’ ಮಾರುತಿ ಸುಜುಕಿ ಓಮ್ನಿ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ಕಿಟಕಿಯ ಹೊರಗೆ ಭಯಾನಕವಾಗಿ ನೋಡುತ್ತಿರುವಂತೆ ಎಐ ಚಿತ್ರವನ್ನು ಸೃಷ್ಟಿಸಿ, “80ರ ದಶಕದ ಗುಜರಾತ್ ರಸ್ತೆ” ಎಂಬ ಶೀರ್ಷಿಕೆ ನೀಡಿತ್ತು. ಮತ್ತೊಂದೆಡೆ, ತೆಲಂಗಾಣ ಕಾಂಗ್ರೆಸ್ ಘಟಕವು ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಊರಾದ ವಡ್‌ನಗರದ ರೈಲ್ವೆ ನಿಲ್ದಾಣದ ಟೀ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ಒಳಉಡುಪಿನಲ್ಲಿ ಜೇಬುಗಳ್ಳನಂತೆ ನಿಂತಿರುವ ಎಐ ಚಿತ್ರವನ್ನು ಹಂಚಿಕೊಂಡು ವ್ಯಂಗ್ಯವಾಡಿತ್ತು.
ಇದಕ್ಕೆ ತೀಕ್ಷ್ಣವಾಗಿ ಹಾಗೂ ವೈಯಕ್ತಿಕ ದಾಳಿಯ ರೂಪದಲ್ಲಿ ತಿರುಗೇಟು ನೀಡಿದ ಬಿಜೆಪಿ ಹ್ಯಾಂಡಲ್‌ಗಳು, ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡವು. ತೆಲಂಗಾಣ ಬಿಜೆಪಿ ಘಟಕವು ಮದ್ಯದ ಬಾಟಲಿಗಳಿರುವ ಬಾರ್‌ನಲ್ಲಿ ಟೇಬಲ್ ಮೇಲೆ ಮಹಿಳೆಯೊಬ್ಬರು ಸಣ್ಣ ಕೆಂಪು ಉಡುಪಿನಲ್ಲಿ ನೃತ್ಯ ಮಾಡುತ್ತಿರುವ ಎಐ ಚಿತ್ರವನ್ನು ಹಂಚಿಕೊಂಡು, ಸೋನಿಯಾ ಗಾಂಧಿ ಹುಟ್ಟಿ ಬೆಳೆದ ಊರನ್ನು ಉಲ್ಲೇಖಿಸಿ “ಲುಸಿಯಾನಾ, ಇಟಲಿ. ಸುಮಾರು 1970ರ ದಶಕ” ಎಂಬ ಶೀರ್ಷಿಕೆ ನೀಡಿತು.
ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಗುಜರಾತ್ ಬಿಜೆಪಿ ಘಟಕ, ವಿದೇಶಿಯರ ಮಧ್ಯೆ ಬಾರ್‌ನಂತಹ ವಾತಾವರಣದಲ್ಲಿ ಮದ್ಯದ ಗ್ಲಾಸ್ ಹಿಡಿದಿರುವ ಸೋನಿಯಾ ಗಾಂಧಿ ಅವರ ಅಸಭ್ಯ ಎಐ ಚಿತ್ರವನ್ನು ಹಂಚಿಕೊಂಡಿತು. ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
ಬಿಜೆಪಿಯ ಈ ಪೋಸ್ಟ್‌ಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇವುಗಳನ್ನು “ಅಶ್ಲೀಲ ಮತ್ತು ಮಹಿಳಾದ್ವೇಷಿ” ಎಂದು ಖಂಡಿಸಿದ್ದಾರೆ. ವಿರೋಧ ಪಕ್ಷಗಳ ಮಹಿಳಾ ನಾಯಕಿಯರನ್ನು ರಾಜಕೀಯವಾಗಿ ಎದುರಿಸುವ ಬದಲು, ಅವರ ಚಾರಿತ್ರ್ಯಹನನ ನಡೆಸುವುದು ಹಾಗೂ ಅಸಭ್ಯ ಲೇಬಲ್‌ಗಳನ್ನು ಅಂಟಿಸುವುದು ಬಿಜೆಪಿಯ ಹಳೆಯ ಚಾಳಿ ಎಂದು ನೆಟ್ಟಿಗರು ಮತ್ತು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಕಾಂಗ್ರೆಸ್ ಯೂತ್ ವಿಭಾಗವು ಪ್ರಧಾನಿ ಮೋದಿಯವರ ಹಳೆಯ ಹೇಳಿಕೆಗಳನ್ನು ಪ್ರಸ್ತಾಪಿಸಿ, ಒಂದು ಕಡೆ ತಮ್ಮ ತಾಯಿಗೆ ಆದ ಅವಮಾನದ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ಪ್ರಧಾನಿಯವರ ಪಕ್ಷದ ಅಧಿಕೃತ ಹ್ಯಾಂಡಲ್‌ಗಳು, ಇನ್ನೊಂದೆಡೆ ಹಿರಿಯ ಮಹಿಳಾ ನಾಯಕಿಯ ಘನತೆಗೆ ಧಕ್ಕೆ ತರುವಂತಹ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ. ನೈತಿಕ ರಾಜಕೀಯ ಪ್ರತಿಭಟನೆಯ ಬದಲು ಕೀಳುಮಟ್ಟದ ವೈಯಕ್ತಿಕ ನಿಂದನೆಗೆ ಇಳಿದಿರುವ ಈ ಎಐ ರಾಜಕೀಯ ಸಮರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
