ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೋಲ್ಕತ್ತಾ ಹತ್ಯೆ ಘಟನೆಯನ್ನು ವಿರೋಧಿಸಿ ಕಳೆದ 42 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರು ಕೊನೆಗೂ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಮಮತಾ ಬ್ಯಾನರ್ಜಿ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಭಾಗಶಃ ಹಿಂಪಡೆಯುವುದಾಗಿ ವೈದ್ಯರು ಗುರುವಾರ ರಾತ್ರಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತಮ್ಮ ಕರ್ತವ್ಯಕ್ಕೆ ಸೇರ್ಪಡೆಗೊಂಡರು.
ಬೆಳಗ್ಗೆ, ಕಿರಿಯ ವೈದ್ಯರು ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ಕರ್ತವ್ಯವನ್ನು ಭಾಗಶಃ ಪುನರಾರಂಭಿಸಿದರು. ಆದರೆ ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಹಾಜರಾಗಿದ್ದರು. ಹೊರ ರೋಗಿಗಳ ವಿಭಾಗದಲ್ಲಿ (ಒಪಿಡಿ) ಕರ್ತವ್ಯದಿಂದ ದೂರ ಉಳಿದಿದ್ದಾರೆ. ‘ನಾವು ಇಂದು ನಮ್ಮ ಡ್ಯೂಟಿಗೆ ಭಾಗಶಃ ಮರಳಿದ್ದೇವೆ. “ನಮ್ಮ ಸಹೋದ್ಯೋಗಿಗಳು ಇಂದು ಬೆಳಿಗ್ಗೆಯಿಂದ ತುರ್ತು ಸೇವೆಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ” ಎಂದು ವೈದ್ಯರು ಹೇಳಿದರು. ಹತ್ಯೆ ಪ್ರಕರಣದ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ವೈದ್ಯೆಯ ಹತ್ಯೆಯನ್ನು ವಿರೋಧಿಸಿ ಕೋಲ್ಕತ್ತಾ ವೈದ್ಯರು 40 ದಿನಗಳಿಗೂ ಹೆಚ್ಚು ಕಾಲ ಮುಷ್ಕರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈದ್ಯಕೀಯ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ಚರ್ಚೆಗೆ ಕರೆದಿತ್ತು. ವೈದ್ಯರು ಮತ್ತು ಸರ್ಕಾರದ ನಡುವೆ ಎರಡು ಸುತ್ತಿನ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ವೈದ್ಯರ ಬೇಡಿಕೆಗಳನ್ನು ಬಗೆಹರಿಸಲು ಸಿಎಂ ಮತ್ಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದರು.
ಇದರ ಭಾಗವಾಗಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ಆಗಿದ್ದ ವಿನೀತ್ ಗೋಯಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ನೂತನ ಆಯುಕ್ತರಾಗಿ ಇದೀಗ ಮನೋಜ್ ಕುಮಾರ್ ವರ್ಮಾ ನೇಮಕಗೊಂಡಿದ್ದಾರೆ. ಅದೇ ರೀತಿ ವೈದ್ಯಕೀಯ ಶಿಕ್ಷಣ ನಿರ್ದೇಶಕ ಕೌಸ್ತವ್ ನಾಯ್ಕ್ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ದೇವಾಶಿಶ್ ಹಲ್ದರ್ ಕೂಡ ವೈದ್ಯರ ಕೋಪಕ್ಕೆ ಗುರಿಯಾಗಿದ್ದರು. ಆ ಬಳಿಕ ಬುಧವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರೊಂದಿಗೆ ವೈದ್ಯರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯರು ಆತಂಕ ದೂರವಾಗಿದೆ ಎಂದು ಘೋಷಿಸಿದರು. ಗುರುವಾರ ರಾತ್ರಿ ಭಾಗಶಃ ಮುಷ್ಕರವನ್ನು ಹಿಂಪಡೆದಿರುವುದಾಗಿ ಘೋಷಿಸಲಾಯಿತು.